ನವದೆಹಲಿ: ಕಳೆದ ವರ್ಷ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ದೆಹಲಿ ಮಾರಣಾಂತಿಕ ದಂಗೆಯ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯತ್ತ ಬಂದೂಕು ತೋರಿಸಿದ ಶಾರುಖ್ ಪಠಾಣ್ ವಿರುದ್ಧ ದೆಹಲಿ ನ್ಯಾಯಾಲಯವು ದೋಷಾರೋಪ ಹೊರಿಸಿದ್ದು, ಇದು ಓರ್ವ ವ್ಯಕ್ತಿ ಅಥವಾ ಗುಂಪು ಮಾಡುವ ಸಾಮಾನ್ಯ ಕೃತ್ಯವಲ್ಲ ಎಂದು ಹೇಳಿದೆ. ದೆಹಲಿ ದಂಗೆಯ ವೇಳೆ ದೆಹಲಿ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ದೀಪಕ್ ದಹಿಯಾ ಅವರತ್ತ ಶಾರುಖ್ ಪಠಾಣ್ ಬಂದೂಕು ತೋರಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಈ ಪ್ರಕರಣದಲ್ಲಿ ಆತನನ್ನು 2020ರ ಮಾರ್ಚ್ 3ರಂದು ಬಂಧಿಸಲಾಗಿತ್ತು. ಆತನನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು.
ಮಂಗಳವಾರ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಪಠಾಣ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಶಸ್ತ್ರಾಸ್ತ್ರ ಕಾಯಿದೆಯಡಿಯಲ್ಲಿ ಸಾರ್ವಜನಿಕ ಸೇವಕರನ್ನು ಹತ್ಯೆ ಮಾಡಲು, ಹಲ್ಲೆ ಮಾಡಲು ಮತ್ತು ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ, ದೋಷಾರೋಪ ಹೊರಿಸಿದ್ದಾರೆ.
1984ರಲ್ಲಿ ನಡೆದ ಮಾರಣಾಂತಿಕ ಸಿಖ್ ದಂಗೆಗಳ ನಂತರ ಈ ರೀತಿಯ ಗಲಭೆಗಳಿಗೆ ಸಾಕ್ಷಿಯಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ. ಡಿಸಿಪಿ (ಈಶಾನ್ಯ) ಹೊರಡಿಸಿದ ಸಿಆರ್‌ಪಿಸಿಯ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಿತ ಆದೇಶವಿದೆ. ಐಪಿಸಿಯ ಸೆಕ್ಷನ್ 188ರ ಉಲ್ಲಂಘನೆಯೂ ಇದೆ ಎಂದು ನ್ಯಾಯಾಲಯ ಗಮನಿಸಿರುವುದಾಗಿ ತಿಳಿಸಿದೆ.
ಶಾರುಖ್ ಪಠಾಣ್ ಜೊತೆಗೆ ಸಹ-ಆರೋಪಿಗಳಾದ ಶಮೀಮ್ ಮತ್ತು ಅಬ್ದುಲ್ ಶೆಹಜಾದ್ ವಿರುದ್ಧ ನ್ಯಾಯಾಲಯವು ಆರೋಪಗಳನ್ನು ಮಾಡಿದೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸಾಕ್ಷಿಗಳ ಮೂಲಕ ಇಬ್ಬರೂ ಆರೋಪಿಗಳನ್ನು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ಇಶ್ತಿಯಾಕ್ ಮಲಿಕ್ ವಿರುದ್ಧವೂ ನ್ಯಾಯಾಲಯ ಆರೋಪ ಹೊರಿಸಿದ್ದು, ಆತ ಗಲಭೆ ಮಾಡುತ್ತಿರುವ ದೃಶ್ಯಾವಳಿ ಇಲ್ಲದಿದ್ದರೂ ಅಪರಾಧದಿಂದ ಮುಕ್ತನಾಗಲು ಸಾಧ್ಯವಿಲ್ಲ ಎಂದು ಹೇಳಿದೆ.
ಪೌರತ್ವ (ತಿದ್ದುಪಡಿ) ಕಾಯಿದೆಯ ಬೆಂಬಲಿಗರು ಮತ್ತು ಅದರ ವಿರೋಧಿಗಳ ನಡುವಿನ ಉದ್ವಿಗ್ನ ಘರ್ಷಣೆಯಿಂದ 2020ರ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ಕೋಮು ಘರ್ಷಣೆಗಳು ಸಂಭವಿಸಿದವು. ಈ ಘಟನೆಯಲ್ಲಿ ಕನಿಷ್ಠ 53 ಜನರು ಸಾವನ್ನಪ್ಪಿದ್ದರು ಮತ್ತು 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಇದನ್ನೂ ಓದಿ: ದೆಹಲಿ ದಂಗೆ: ವಿದ್ಯಾರ್ಥಿ ಹೋರಾಟಗಾರಿಗೆ ನೀಡಿದ ಜಾಮೀನು ವಿರುದ್ಧ ದೆಹಲಿ ಪೊಲೀಸ್ ಮೇಲ್ಮನವಿಗೆ ಸುಪ್ರೀಂಕೋರ್ಟ್ ನೋಟಿಸ್
ಮೂರು ಸ್ಥಳಗಳಲ್ಲಿ ಧರಣಿನಿರತ ರೈತರ ತೆರವುಗೊಳಿಸಿದ ಯೋಗಿ ಸರ್ಕಾರ; ದೆಹಲಿ ಹಿಂಸಾಚಾರದ ಬೆನ್ನಲ್ಲೇ ಕ್ರಮ