ದೆಹಲಿ ಚಲೋ ಹಿನ್ನೆಲೆ.. ಚಳಿಗೆ ದೆಹಲಿ ಗಢಗಢ, ಆದ್ರೆ ಅವಡುಗಚ್ಚಿ ಅಚಲವಾಗಿ ಕುಳಿತ ಪಂಜಾಬ್ ರೈತರು!
ವಾಡಿಕೆಗಿಂತ ಹೆಚ್ಚು ಚಳಿ ದೆಹಲಿಯನ್ನು ಗಡಗಡ ನಡುಗಿಸುತ್ತಿದೆ. ಆದರೆ, ಪಂಜಾಬ್ ರೈತರು ಪ್ರತಿಭಟನೆಯ ಕಾವಿನಲ್ಲಿ ರಸ್ತೆ ಬದಿಯಲ್ಲೇ ಎಂಟು ದಿನ ಕಳೆದಿದ್ದಾರೆ. ಚಳಿಗೂ ಹೆದರದ ರೈತರ ಊಟ, ವಸತಿ ಎಲ್ಲವೂ ರಸ್ತೆಗಳ ಪಕ್ಕದಲ್ಲೇ ನಡೆಯುತ್ತಿವೆ.
ದೆಹಲಿ: ಪ್ರತಿ ಬಾರಿಗಿಂತ ಹೆಚ್ಚು ಚಳಿ ಕಂಡ ದೆಹಲಿ ಗಢಗಢ ನಡುಗುತ್ತಿದೆ. ಪಂಜಾಬ್ ರೈತರು ಪ್ರತಿಭಟನೆಯ ಕಾವಿನಲ್ಲಿ ಎಂಟು ದಿನದಿಂದ ರಸ್ತೆ ಬದಿಯಲ್ಲೇ ಕಳೆಯುತ್ತಿದ್ದಾರೆ. ಚಳಿಗೂ ಹೆದರದ ರೈತರ ಊಟ, ವಸತಿ ಎಲ್ಲವೂ ರಸ್ತೆಗಳ ಪಕ್ಕದಲ್ಲೇ ನಡೆಯುತ್ತಿವೆ.
ಕಳೆದ ವರ್ಷಕ್ಕಿಂತ ಈ ಸಲ ದೆಹಲಿಯಲ್ಲಿ ಚಳಿ ಹೆಚ್ಚಿರಲಿದೆ ಎಂದು ವರದಿಗಳು ತಿಳಿಸಿದ್ದವು. ಆದರೂ ಲೆಕ್ಕಿಸದ ರೈತರು ರಾಷ್ಟ್ರ ರಾಜಧಾನಿಗೆ ಮುತ್ತಿಗೆ ಹಾಕಿದರು. ನವೆಂಬರ್ ಅಂತ್ಯದ ವೇಳೆಗೆ ದಾಖಲಾದ 7.5 ಡಿಗ್ರಿ ಸೆಲ್ಸಿಯಸ್, 14 ವರ್ಷಗಳಲ್ಲಿ ಅತಿ ಕಡಿಮೆ ಉಷ್ಣಾಂಶವಾಗಿತ್ತು. ಈ ದಾಖಲೆಯ ಚಳಿಯನ್ನೂ ಮೀರಿ ದೆಹಲಿ ಹರ್ಯಾಣ ಗಡಿಯಲ್ಲಿ ರೈತರ ಪ್ರತಿಭಟನೆ ಸಾಗುತ್ತಲೇ ಇದೆ.
ಇನ್ನೂ ಹೆಚ್ಚಲಿದೆ ಚಳಿ.. ಮುಂದಿನ ಕೆಲ ದಿನಗಳಲ್ಲಿ ಉಷ್ಣಾಂಶ ಇನ್ನಷ್ಟು ಕುಸಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕನಿಷ್ಠ ಉಷ್ಣಾಂಶ 4.5 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆಯಾಗಲಿದೆ. ಅಲ್ಲಿಯವರೆಗೂ ರೈತರ ಪ್ರತಿಭಟನೆ ಮುಂದುವರೆದರೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗಲಿದೆ.
ಆಹಾರ ತಯಾರಿ ಎಲ್ಲಿ? ಪಂಜಾಬ್ ರೈತರು ಎಲ್ಲಿ ಉಳಿದಿದ್ದಾರೆ? ಹೇಗೆ ಆಹಾರ ತಯಾರಿಸುತ್ತಾರೆ? ಎಂಬ ಪ್ರಶ್ನೆಗಳು ಯಾರನ್ನಾದರೂ ಕಾಡದಿರದು. ಕೇಂದ್ರದ ಯಾವ ಪಟ್ಟಿಗೂ ಬಗ್ಗದ ರೈತರು ಅಗತ್ಯ ವಸ್ತುಗಳೊಂದಿಗೇ ದೆಹಲಿ ಪ್ರವೇಶಿಸಿದ್ದಾರೆ. ರಸ್ತೆ ಪಕ್ಕವೇ ಚಿಕ್ಕ ಚಿಕ್ಕ ಟೆಂಟ್ಗಳನ್ನು ಹೂಡಿರುವ ರೈತರು ಅಲ್ಲೇ ಆಹಾರ ತಯಾರಿಸುತ್ತಿದ್ದಾರೆ. 20 ಜನರು ಕೂರಬಹುದಾದ 700 ಟ್ರಾಲಿಗಳು ರಾಜಧಾನಿ ಪ್ರವೇಶಿಸಿವೆ.
ರಸ್ತೆ ಪಕ್ಕವೇ ಊಟ.. ರಸ್ತೆ ಪಕ್ಕವೇ ವಸತಿ ರೈತರು 5,000 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್, ತರಕಾರಿಗಳು. ಗ್ಯಾಸ್ ಸ್ಟೋವ್, ಹಾಸಿಗೆ ಮುಂತಾದ ವಸ್ತುಗಳನ್ನು ಹೊತ್ತೇ ದೆಹಲಿ ಪ್ರವೇಶಿಸಿದ್ದಾರೆ. ಬೆಂಬಲ ನೀಡಿರುವ ಕೆಲವು ಸಂಘಟನೆಗಳು ದಿನಸಿ ಸಾಮಾಗ್ರಿಗಳನ್ನು ಪೂರೈಸುತ್ತಿವೆ. ಆದರೆ ‘ಆರು ತಿಂಗಳಿಗೆ ಅಗತ್ಯವಿರುವ ದಿನಸಿ ಸಾಮಾಗ್ರಿಗಳ ಜೊತೆ ಪ್ರತಿಭಟನೆಗೆ ಆಗಮಿಸಿದ್ದೇವೆ’ ಎಂದು ಸ್ವತಃ ರೈತರೇ ಹೇಳಿಕೆ ನೀಡಿದ್ದಾರೆ. ರಾತ್ರಿಯ ವೇಳೆ ಸಾಂಪ್ರದಾಯಿಕ ಹಾಡುಗಳನ್ನು ಹಾಡುವ ಮೂಲಕ ಮನೋಧೈರ್ಯವನ್ನೂ ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಬೆಂಬಲ ನೀಡಲು ಟ್ರ್ಯಾಕ್ಟರಲ್ಲಿ ಆಗಮಿಸಿದ ಮದುಮಗ! ರೈತರಿಗೆ ಬೆಂಬಲ ನೀಡಲು ಐಷಾರಾಮಿ ಕಾರನ್ನು ತ್ಯಜಿಸಿದ ಮದುಮಗನೊಬ್ಬ ಟ್ರ್ಯಾಕ್ಟರ್ ಏರಿ ಮದುವೆ ಮಂಟಪಕ್ಕೆ ಆಗಮಿಸಿದ್ದಾನೆ. ದೆಹಲಿ ಚಲೋಗೆ ಬೆಂಬಲ ನೀಡಲು ಟ್ರ್ಯಾಕ್ಟರ್ ಏರಿದ್ದಾಗಿ ತಿಳಿಸಿದ್ದಾನೆ.
Published On - 3:53 pm, Fri, 4 December 20