ದೆಹಲಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: ವಿಮಾನ ಸಂಚಾರ ವ್ಯತ್ಯಯ

ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಗುಡುಗು, ಸಿಡಿಲು ಸಹಿತ ಸಾಧಾರಣ ಮಳೆಯು ಇನ್ನೂ ಒಂದೆರೆಡು ದಿನಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ದೆಹಲಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: ವಿಮಾನ ಸಂಚಾರ ವ್ಯತ್ಯಯ
ದೆಹಲಿಯಲ್ಲಿ ಸೋಮವಾರ ನಸುಕಿನಿಂದ ಮಳೆ ಆರಂಭವಾಗಿದೆ.
Edited By:

Updated on: May 23, 2022 | 8:16 AM

ದೆಹಲಿ: ರಾಷ್ಟ್ರ ರಾಜಧಾನಿಯ ವಿವಿಧೆಡೆ ಸೋಮವಾರ (ಮೇ 23) ಮುಂಜಾನೆಯಿಂದ ಬಿರುಗಾಳಿ ಸಹಿತ ಮಳೆ ಆರಂಭವಾಗಿದ್ದು, ಕೆಟ್ಟ ಹವಾಮಾನದ ಹಿನ್ನೆಲೆಯಲ್ಲಿ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ಮತ್ತು ಅಲ್ಲಿಂದ ತೆರಳಬೇಕಿದ್ದ ಹಲವು ವಿಮಾನಗಳನ್ನು ರದ್ದುಪಡಿಸಲಾಗಿದೆ. ವಿಮಾ ನಿಲ್ದಾಣಕ್ಕೆ ಬರುವ ಮೊದಲು ವಿಮಾನ ಯಾನ ಸಂಸ್ಥೆಗಳೊಂದಿಗೆ ಮಾಹಿತಿ ಖಚಿತಪಡಿಸಿಕೊಳ್ಳುವಂತೆ ಪ್ರಯಾಣಿಕರಿಗೆ ದೆಹಲಿ ಸರ್ಕಾರವು ಸೂಚನೆ ನೀಡಿದೆ. ಬಿರುಗಾಳಿಯಿಂದಾಗಿ ಮರಗಳು ಬೇರು ಸಹಿತ ಉರುಳಿದ್ದು, ವಿದ್ಯುತ್ ಕಂಬಗಳು ಧರೆಗುರುಳಿವೆ. ವಿದ್ಯುತ್ ಪೂರೈಕೆ ಕಡಿತಗೊಂಡಿದೆ.

ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಗುಡುಗು, ಸಿಡಿಲು ಸಹಿತ ಸಾಧಾರಣ ಮಳೆಯು ಇನ್ನೂ ಒಂದೆರೆಡು ದಿನಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ವಿಮಾನಯಾನ ಕಂಪನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ವಿಮಾನ ನಿಲ್ದಾಣ ಪ್ರಾಧಿಕಾರವು ಪ್ರಯಾಣಿಕರನ್ನು ಎಚ್ಚರಿಸಿವೆ.

‘ದೆಹಲಿಯಲ್ಲಿ ಕೆಟ್ಟ ಹವಾಮಾನ ಇರುವ ಕಾರಣ ವಿಮಾನಗಳ ಆಗಮನ ಮತ್ತು ನಿರ್ಗಮನ ಸಮಯದಲ್ಲಿ ವ್ಯತ್ಯಯವಾಗಬಹುದು. ಪ್ರಯಾಣಿಕರು ತಮ್ಮ ವಿಮಾನಗಳ ಮಾಹಿತಿಯನ್ನು ನಿರಂತರ ಪರಿಶೀಲಿಸುತ್ತಿರಬೇಕು’ ಎಂದು ಸ್ಪೈಸ್ ಜೆಟ್​ ಟ್ವೀಟ್ ಮಾಡಿದೆ. ಬಿರುಗಾಳಿಯ ಕಾರಣದಿಂದ ಗುಡಿಸಲುಗಳು ಮತ್ತು ಕಚ್ಚಾ ಮನೆಗಳಿಗೆ ಹಾನಿಯಾಗಬಹುದು. ಟ್ರಾಫಿಕ್ ವ್ಯತ್ಯಯ ಉಂಟಾಗಬಹುದು ಎಂದು ಹವಾಮಾನ ಇಲಾಖೆಯು ಟ್ವೀಟ್​ ಒಂದರಲ್ಲಿ ಎಚ್ಚರಿಸಿತ್ತು.

ಗುಡುಗು ಸಿಡಿಲುಗಳೊಂದಿಗೆ ಸುರಿಯುವ ಮಳೆಯ ಜೊತೆಗೆ ಗಂಟೆಗೆ 60ರಿಂದ 90 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ದೆಹಲಿ ಮತ್ತು ರಾಷ್ಟ್ರ ರಾಜಧಾನಿ ವಲಯ ಪ್ರದೇಶದ ಸುತ್ತಮುತ್ತಲೂ ಇಂಥದ್ದೇ ವಾತಾವರಣ ಇರಲಿದೆ ಎಂದು ಹೇಳಿದೆ. ಬಿರುಗಾಳಿಯಿಂದಾಗಿ ಮರಗಳು ಬೇರು ಸಹಿತ ರಸ್ತೆಗಳ ಮೇಲೆ ಉರುಳಿವೆ. ಹೀಗಾಗಿ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ ಉಟಾಗಿದೆ. ನಗರ ಪ್ರದೇಶದಲ್ಲಿರುವ ಜನರು ಮನೆಗಳಲ್ಲಿಯೇ ಇರುವುದು ಕ್ಷೇಮ. ಸಾಧ್ಯವಾದ ಮಟ್ಟಿಗೂ ಪ್ರಯಾಣ ಹೊರಡಬೇಡಿ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಟ್ವಿಟರ್​ನಲ್ಲಿ ಸಾಕಷ್ಟು ಜನರು ತಮ್ಮ ಅನುಭವಗಳು ಮತ್ತು ಮಳೆಯಿಂದ ಆಗಿರುವ ಹಾನಿಯ ವಿವರಗಳನ್ನು ಟ್ವೀಟ್ ಮಾಡಿದ್ದಾರೆ.