ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೀತಮಾರುತ (Delhi Cold Wave) ಸತತ 5ನೇ ದಿನವೂ ಬೀಸುತ್ತಿದ್ದು, ಉಷ್ಣಾಂಶ ತೀವ್ರವಾಗಿ ಕುಸಿದಿದೆ. ದಟ್ಟ ಮಂಜು ಕವಿದಿದ್ದು, ಚಳಿ ಹೆಚ್ಚಾಗಿದೆ. ಮಂಜು (Fog) ದಟ್ಟೈಸಿದ ಕಾರಣ ರನ್ವೇಗಳು ಪೈಲಟ್ಗಳಿಗೆ ಸರಿಯಾಗಿ ಕಾಣಿಸುತ್ತಿಲ್ಲ. ಹೀಗಾಗಿ ದೆಹಲಿಯಲ್ಲಿ ವಿವಿಧೆಡೆ ತೆರಳಬೇಕಾದ ಹಾಗೂ ದೆಹಲಿಯಲ್ಲಿ ಇಳಿಯಬೇಕಾದ ಹಲವು ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ (Flight Disruption). ದೆಹಲಿಯಿಂದ ನೇಪಾಳಕ್ಕೆ ತೆರಳಬೇಕಿದ್ದ ವಿಮಾನ, ಜೈಪುರ, ಶಿಮ್ಲಾ, ಚಂಡೀಗಡ, ಕುಲು, ಡೆಹ್ರಾಡೂನ್ ಸೇರಿದಂತೆ ಹಲವು ನಗರಗಳಿಗೆ ತೆರಳಬೇಕಿದ್ದ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.
ದೆಹಲಿ ಮತ್ತು ಉತ್ತರ ಭಾರತದ ಹಲವು ನಗರಗಳಲ್ಲಿ ಮಂಜು ದಟ್ಟೈಸಿರುವುದರಿಂದ 150ಕ್ಕೂ ಹೆಚ್ಚು ದೇಶೀಯ ವಿಮಾನಗಳ ಸಂಚಾರ ರದ್ದಾಗಿದೆ. ಸುಮಾರು 250 ರೈಲುಗಳ ಸಂಚಾರ ರದ್ದಾಗಿದೆ. ಸತತ 5ನೇ ದಿನವೂ ಶೀತಮಾರುತ ಬೀಸುತ್ತಿದ್ದು, ಉಷ್ಣಾಂಶ ಕುಸಿದಿದೆ. ದಟ್ಟ ಮಂಜಿನಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಗೋಚರಿಸುವ ಪ್ರಮಾಣವು ಕೇವಲ 25 ಮೀಟರ್ಗಳಿಗೆ ಕುಸಿದಿದೆ. ವಾಹನಗಳು ಹೆಡ್ಲೈಟ್ಗಳೊಂದಿಗೆ ನಿಧಾನವಾಗಿ ಸಂಚರಿಸುತ್ತಿವೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಫಾಗ್ ಅಲರ್ಟ್ ಘೋಷಿಸಲಾಗಿದೆ. ನಿನ್ನೆಯೂ ಇದೇ ರೀತಿಯ ಅಲರ್ಟ್ ಘೋಷಿಸಲಾಗಿತ್ತು. ಕೆಲವು ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಹಳಿಗಳು ಮತ್ತು ಸಿಗ್ನಲ್ ಸರಿಯಾಗಿ ಗೋಚರಿಸುತ್ತಿಲ್ಲವಾದ ಕಾರಣ ರೈಲುಗಳ ಸಂಚಾರದಲ್ಲಿಯೂ ವ್ಯತ್ಯಯ ಉಂಟಾಗಿದೆ. 267 ರೈಲುಗಳ ಸಂಚಾರ ರದ್ದಾಗಿದ್ದಾರೆ, 170 ರೈಲುಗಳು ನಿಧಾನವಾಗಿ ಸಂಚರಿಸುತ್ತಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ದೆಹಲಿಯ ಸಫ್ದಾರ್ಜಂಗ್ ಹವಾಮಾನ ವೀಕ್ಷಣಾ ಕೇಂದ್ರದಲ್ಲಿ ಕನಿಷ್ಠ ತಾಪಮಾನವು 3.8 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ. ಲೋಧಿ ರಸ್ತೆ, ಅಯನಗರ್ ಮತ್ತು ರಿಡ್ಜ್ ಹವಾಮಾನ ಕೇಂದ್ರಗಳಲ್ಲಿ ಸರಾಸರಿ 3.2 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದೆ.
All private schools of Delhi are advised to remain closed till 15th January 2023 in wake of cold wave prevailing in Delhi: Directorate of Education, Government of Delhi pic.twitter.com/1Jd4qrkris
— ANI (@ANI) January 8, 2023
ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿದಿದೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಗಿರಿಧಾಮಗಳಿಗಿಂತಲೂ ಕಡಿಮೆ ಪ್ರಮಾಣದ ಉಷ್ಣಾಂಶ ದೆಹಲಿಯಲ್ಲಿ ದಾಖಲಾಗಿದೆ. ದೆಹಲಿಗೆ ಪಶ್ಚಿಮ ಭಾಗದಲ್ಲಿರುವ ಪರ್ವತ ಪ್ರದೇಶಗಳಿಂದ ಹಿಮಗಾಳಿ ಬೀಸುತ್ತಿರುವುದು ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಉಷ್ಣಾಂಶ ಕುಸಿಯಲು ಮುಖ್ಯ ಕಾರಣ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಚಳಿಗಾಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನವರಿ 15ರವರೆಗೆ ಶಾಲೆಗಳಿಗೆ ರಜೆ ಘೋಷಿಸುವಂತೆ ದೆಹಲಿ ಸರ್ಕಾರ ಸೂಚನೆ ನೀಡಿದೆ. 1997 ಮತ್ತು 1998ರಲ್ಲಿ ದೆಹಲಿಯಲ್ಲಿ ಸತತ 7 ದಿನಗಳ ಶೀತಗಾಳಿ ಬೀಸಿತ್ತು. 2003, 2013 ಮತ್ತು 2021ರಲ್ಲಿ 6 ದಿನಗಳ ಶೀತಮಾರುತ ಕಾಣಿಸಿಕೊಂಡಿತ್ತು. 1992 ಮತ್ತು 2008ರಲ್ಲಿ ದಾಖಲೆಯ 12 ದಿನಗಳ ಶೀತಮಾರುತ ಬೀಸಿತ್ತು. ಈ ಬಾರಿ ಶೀತಮಾರುತವು ಸತತ 5ನೇ ದಿನ ಬೀಸುತ್ತಿದ್ದು, ಇದು ಹೊಸ ದಾಖಲೆ ಬರೆಯಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: Delhi Cold Wave ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀಕರ ಚಳಿ, ಜ.15ರವರೆಗೆ ಶಾಲೆಗಳಿಗೆ ರಜೆ ಘೋಷಣೆ
ಮತ್ತಷ್ಟು ರಾಷ್ಟ್ರೀಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:46 am, Tue, 10 January 23