Corona 3rd Wave: ಕೇರಳಕ್ಕೆ ಆಘಾತ ನೀಡುತ್ತಿದೆ ಕೊರೊನಾ; ಎರಡು ಡೋಸ್​ ನಡುವಿನ ಅಂತರದಲ್ಲಿ ಬದಲಾವಣೆಯೇ ಪರಿಹಾರ?

| Updated By: Skanda

Updated on: Aug 11, 2021 | 12:39 PM

ದೇಶದಲ್ಲಿ ಕನಿಷ್ಟ ಒಂದು ಡೋಸ್​ ಕೊರೊನಾ ಲಸಿಕೆ ತೆಗೆದುಕೊಂಡವರ ಪ್ರಮಾಣವೂ ಕೇರಳದಲ್ಲೇ ಹೆಚ್ಚಿದೆ. ಈವರೆಗೆ ಕೇರಳದಲ್ಲಿ ಸುಮಾರು ಶೇ.54ಕ್ಕೂ ಹೆಚ್ಚು ಮಂದಿ ಒಂದು ಡೋಸ್​ ಲಸಿಕೆಯನ್ನು ತೆಗೆದುಕೊಂಡಿದ್ದಾರೆ. ಶೇ.23ರಷ್ಟು ಜನ ಎರಡೂ ಡೋಸ್​ ಲಸಿಕೆಯನ್ನು ಪಡೆದಿದ್ದಾರೆ.

Corona 3rd Wave: ಕೇರಳಕ್ಕೆ ಆಘಾತ ನೀಡುತ್ತಿದೆ ಕೊರೊನಾ; ಎರಡು ಡೋಸ್​ ನಡುವಿನ ಅಂತರದಲ್ಲಿ ಬದಲಾವಣೆಯೇ ಪರಿಹಾರ?
ಪ್ರಾತಿನಿಧಿಕ ಚಿತ್ರ
Follow us on

ಕರ್ನಾಟಕದ ನೆರೆಯ ರಾಜ್ಯ ಕೇರಳದಲ್ಲಿ (Kerala) ಕೊರೊನಾ ಸೋಂಕು (Covid 19) ಮತ್ತೆ ಉಲ್ಬಣಗೊಂಡು ಆತಂಕ ಸೃಷ್ಟಿಸಿದ ಬೆನ್ನಲ್ಲೇ ಎರಡು ಡೋಸ್ ಲಸಿಕೆಗಳ (Corona Vaccine) ನಡುವಿನ ಅಂತರವನ್ನು ತಗ್ಗಿಸುವ ಅವಶ್ಯಕತೆ ಇದೆಯೇ ಎಂದು ಅಧ್ಯಯನ ನಡೆಸಲು ಭಾರತ ಸರ್ಕಾರ ಕೇರಳ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಕೇರಳದಲ್ಲಿ ಮೊದಲ ಡೋಸ್​ ಕೊರೊನಾ ಲಸಿಕೆ ತೆಗೆದುಕೊಂಡವರಲ್ಲಿಯೂ ಸೋಂಕು ಅತ್ಯಧಿಕ ಪ್ರಮಾಣದಲ್ಲಿ ಕಾಣಿಸಿಕೊಂಡಿರುವುದರಿಂದ ಎರಡನೇ ಡೋಸ್​ ಲಸಿಕೆಯನ್ನು ತುಸು ಬೇಗ ಕೊಡಿಸುವುದು ಪರಿಹಾರವಾಗಬಲ್ಲದೇ ಎಂದು ಪರಾಮರ್ಶಿಸಬೇಕಾದ ಪರಿಸ್ಥಿತಿ ಎದುರಾಗಿದ್ದು, ಕೇಂದ್ರದಿಂದ ತಜ್ಞರ ತಂಡವೂ ಅಲ್ಲಿಗೆ ಭೇಟಿ ನೀಡಿದೆ.

ಕೇರಳ ರಾಜ್ಯದಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿನೋಮ್​ ಸೀಕ್ವೆನ್ಸಿಂಗ್​ ಕೂಡಾ ನಡೆಸಲಾಗುತ್ತಿದ್ದು, ಅಷ್ಟೊಂದು ಅಧಿಕ ಪ್ರಮಾಣದಲ್ಲಿ ಸೋಂಕು ಏಕಾಏಕಿ ಏರಿಕೆಯಾಗಲು ಕಾರಣವೇನು ಎಂದು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ. ಎರಡನೇ ಅಲೆಯ ಹೊಡೆತದಿಂದ ತತ್ತರಿಸಿದ್ದ ಭಾರತಕ್ಕೆ ಈಗ ಕೇರಳವೇ ಅಪಾಯಕಾರಿಯಾಗಿ ಕಾಣುತ್ತಿರುವುದಕ್ಕೆ ಕಾರಣವೆಂದರೆ ಕೆಲ ವಾರದ ಹಿಂದೆಯಷ್ಟೇ ದೇಶದಲ್ಲಿ ದಿನವೊಂದರಲ್ಲಿ ಪತ್ತೆಯಾದ ಒಟ್ಟಾರೆ ಕೊರೊನಾ ಪ್ರಕರಣಗಳ ಶೇ.50ಕ್ಕಿಂತಲೂ ಅಧಿಕ ಅಂದರೆ ಅರ್ಧಕ್ಕಿಂತಲೂ ಹೆಚ್ಚು ಪಾಲು ಕೇರಳದಲ್ಲಿ ಕಾಣಿಸಿಕೊಂಡಿದೆ.

ಹಾಗೆ ನೋಡಿದರೆ ದೇಶದಲ್ಲಿ ಕನಿಷ್ಟ ಒಂದು ಡೋಸ್​ ಕೊರೊನಾ ಲಸಿಕೆ ತೆಗೆದುಕೊಂಡವರ ಪ್ರಮಾಣವೂ ಕೇರಳದಲ್ಲೇ ಹೆಚ್ಚಿದೆ. ಈವರೆಗೆ ಕೇರಳದಲ್ಲಿ ಸುಮಾರು ಶೇ.54ಕ್ಕೂ ಹೆಚ್ಚು ಮಂದಿ ಒಂದು ಡೋಸ್​ ಲಸಿಕೆಯನ್ನು ತೆಗೆದುಕೊಂಡಿದ್ದಾರೆ. ಶೇ.23ರಷ್ಟು ಜನ ಎರಡೂ ಡೋಸ್​ ಲಸಿಕೆಯನ್ನು ಪಡೆದಿದ್ದಾರೆ. ಇಷ್ಟಾದ ನಂತರವೂ ಬೇರೆಡೆಗೆ ಹೋಲಿಸಿದರೆ ಕೇರಳದಲ್ಲೇ ಸೋಂಕು ಹಬ್ಬುವಿಕೆ ಹೆಚ್ಚಾಗಿರುವುದು ನಿಜಕ್ಕೂ ತಜ್ಞರ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದಂತಾಗಿದೆ.

ಸದ್ಯ ಕೇಂದ್ರದಿಂದ ಭೇಟಿ ನೀಡಿದ ಆರು ಜನ ತಜ್ಞರನ್ನು ಒಳಗೊಂಡ ತಂಡವು, ಕೇರಳದಲ್ಲಿ ಸೋಂಕು ಈ ಪ್ರಮಾಣದಲ್ಲಿ ಏರಿಕೆಯಾಗಲು ಪ್ರಮುಖ ಕಾರಣ ಕಂಟೈನ್ಮೆಂಟ್​ ಜೋನ್​ ಮಾಡುವುದರಲ್ಲಿ ಕಟ್ಟುನಿಟ್ಟಿನ ಕ್ರಮ ಅಳವಡಿಸಿಕೊಳ್ಳದೇ ಇರುವುದು ಎಂದು ಅಭಿಪ್ರಾಯಪಟ್ಟಿದೆ. ಕೇಂದ್ರ ಆರೋಗ್ಸ ಸಚಿವಾಲಯದ ನಿರ್ದೇಶನದಂತೆ ಅದನ್ನು ಪಾಲಿಸಿಲ್ಲ. ಜತೆಗೆ, ಪರೀಕ್ಷೆಯ ಪ್ರಮಾಣವೂ ಕಡಿಮೆ ಇದೆ ಎಂದು ತಜ್ಞರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

(Despite high inoculation rate Kerala state sees more reinfection hence centre thinking on reducing gap between corona vaccine doses)

ಇದನ್ನೂ ಓದಿ:
Corona 3rd Wave: ಬೆಂಗಳೂರಿನಲ್ಲಿ ಶುರುವಾಯ್ತು ಕೊರೊನಾ 3ನೇ ಅಲೆ ಭೀತಿ, ದಿನಕ್ಕೆ 50-60 ಪಾಸಿಟಿವ್ ಮಕ್ಕಳು ಪತ್ತೆ 

ಹಾಸನ: ಕೇರಳ ಮೂಲದ 102 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ ದೃಢ