ಛಿಂದ್ವಾರಾ: ನೀವು ನಿಮ್ಮ “ಸುತ್ತಲೂ ನೋಡಿಕೊಂಡು” ಯಾವ ಪಕ್ಷಕ್ಕೆ ಮತ ಹಾಕಬೇಕೆಂದು ನಿರ್ಧರಿಸಬೇಕು ಎಂದು ಬಿಜೆಪಿ (BJP) ಬೆಂಬಲಿಗರಿಗೆ ಹೇಳಿದ್ದ ಬಿಜೆಪಿಯ ಹಿರಿಯ ನಾಯಕಿ ಉಮಾಭಾರತಿ(Uma Bharti) ಈಗ ಮತ್ತೊಂದು ಹೇಳಿಕೆ ಮೂಲಕ ಸುದ್ದಿಯಾಗಿದ್ದಾರೆ. ಭಗವಾನ್ ರಾಮ ಮತ್ತು ಹನುಮಾನ್ ಮೇಲಿನ ಭಕ್ತಿ ಬಿಜೆಪಿಯ ಕಾಪಿರೈಟ್ ಅಲ್ಲ ಎಂದು ಉಮಾಭಾರತಿ ಹೇಳಿದ್ದಾರೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ (Kamal Nath) ಅವರು ರಾಜ್ಯದಲ್ಲಿ ಹನುಮಾನ್ ಮಂದಿರವನ್ನು ನಿರ್ಮಿಸುವ ಕುರಿತು ಕೇಳಿದ ಪ್ರಶ್ನೆಗೆ ಬಿಜೆಪಿ ನಾಯಕಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿ ಮದ್ಯದಂಗಡಿಗೆ ಕಲ್ಲು ತೂರಾಟ ನಡೆಸಿ ಉಮಾ ಭಾರತಿ ಸುದ್ದಿಯಾಗಿದ್ದರು. ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಪಕ್ಷದ ಉನ್ನತ ನಾಯಕರಲ್ಲಿ ಒಬ್ಬರಾಗಿರುವ ಉಮಾಭಾರತಿಯವರನ್ನು ಬದಿಗಿಟ್ಟಿದ್ದಕ್ಕಾಗಿ ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಹಿಂದೂಗಳು ಮನೆಯಲ್ಲಿ ಆಯುಧಗಳನ್ನು ಇಟ್ಟುಕೊಳ್ಳಬೇಕು ಎಂಬ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರ ವಿವಾದಾತ್ಮಕ ಹೇಳಿಕೆಯನ್ನು ಕೂಡಾ ಅವರು ಬೆಂಬಲಿಸಿದ್ದರು. ಭಗವಾನ್ ರಾಮನು ಕೂಡ ತನ್ನ ವನವಾಸದ ಸಮಯದಲ್ಲಿ ಆಯುಧಗಳನ್ನು ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದನು” ಎಂದು ಅವರು ಹೇಳಿದರು, ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವುದು ತಪ್ಪಲ್ಲ, ಆದರೆ ಹಿಂಸಾತ್ಮಕ ಆಲೋಚನೆಗಳನ್ನು ಹೊಂದಿರುವುದು ತಪ್ಪು ಎಂದಿದ್ದಾರೆ ಉಮಾ ಭಾರತಿ.
ಪ್ರಜ್ಞಾ ಠಾಕೂರ್ ಅವರು ತಮ್ಮ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದ ಛಿಂದ್ವಾರಾದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಉಮಾಭಾರತಿ ಬಂದಿದ್ದರು.
ಇದನ್ನೂ ಓದಿ: ರಾಜಸ್ಥಾನದಲ್ಲಿ 2 ಗಂಟೆಯೊಳಗೆ 40 ಜನರಿಗೆ ಕಚ್ಚಿದ ಬೀದಿನಾಯಿ; ಆಸ್ಪತ್ರೆ ವಾರ್ಡ್ಗಳು ಫುಲ್!
‘ಪಠಾಣ್’ ಚಿತ್ರದ ವಿರುದ್ಧ ಪ್ರತಿಭಟನೆಯ ಅಗತ್ಯವೇನು ಎಂದು ಕೇಳಿದ ಉಮಾಭಾರತಿ, ಬಿಜೆಪಿ ಸರ್ಕಾರದ ಸೆನ್ಸಾರ್ ಮಂಡಳಿ ಕೂಡಲೇ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದು ಹಾಕಬೇಕು. ಇದರಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ. ಯಾರೇ ಆಗಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ದೃಶ್ಯಗಳನ್ನು ತೆಗೆದು ಹಾಕಬೇಕು.ಯಾವುದೇ ಬಣ್ಣದ ಅವಹೇಳನವನ್ನು ಭಾರತ ಸಹಿಸುವುದಿಲ್ಲ, ಕೇಸರಿ ಭಾರತೀಯ ಸಂಸ್ಕೃತಿಯ ಅಸ್ಮಿತೆ, ಸೆನ್ಸಾರ್ ಮಂಡಳಿ ಕೂಡಲೇ ಈ ದೃಶ್ಯಗಳನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು ಇತ್ತೀಚೆಗೆ ‘ಭಾರತ್ ಜೋಡೋ ಯಾತ್ರೆ’ಯನ್ನು ಮಹಾಕಾವ್ಯ ರಾಮಾಯಣಕ್ಕೆ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿಯನ್ನು ರಾಮನಿಗೆ ಹೋಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಾಯಕಿ, ಬ್ರಹ್ಮಾಂಡದ ಅಧಿಪತಿ ಶ್ರೀರಾಮನನ್ನು ರಾಹುಲ್ ಗಾಂಧಿಗೆ ಹೋಲಿಸುವುದು ತಪ್ಪು. ಅವರು ತಮ್ಮನ್ನು ಅಪಹಾಸ್ಯಕ್ಕೆ ಒಳಪಡಿಸುತ್ತಿದ್ದಾರೆ. ಭಾರತದಲ್ಲಿ ಯಾವುದೇ ‘ಜೋಡೋ ಯಾತ್ರೆ’ ಅಗತ್ಯವಿಲ್ಲ. ಕಾಂಗ್ರೆಸ್‌ನಲ್ಲಿಯೇ ವಿಭಜನೆ ಹೆಚ್ಚು ಗೋಚರಿಸುತ್ತದೆ. ಸಲ್ಮಾನ್ ಖುರ್ಷಿದ್ ಅವರನ್ನು ತರಾಟೆಗೆ ತೆಗೆದುಕೊಂಡ ನಾಯಕಿ, ಅವರನ್ನು ಮೊಹೆಂಜೊ-ದಾರೋ ನಾಗರಿಕತೆಯಿಂದ ಅಗೆದು ಹೊರತೆಗೆದಿದ್ದಾರೆ ಎಂದು ನಾನು ಅಂದುಕೊಂಡೆ ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ