ರಾಹುಲ್ ಗಾಂಧಿ ಹೋರಾಟ ಬಿಜೆಪಿ ವಿರುದ್ಧವೇ ಅಥವಾ ಭಾರತದ ವಿರುದ್ಧವೇ? ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಆಕ್ರೋಶ
ನಿಮ್ಮ (ರಾಹುಲ್ ಗಾಂಧಿ) ಹೋರಾಟ ಬಿಜೆಪಿಯ ವಿರುದ್ಧ ಆಗಿದ್ದರೆ, ದೇಶದೊಳಗೆ ಇರುವ ವೇದಿಕೆಗಳಲ್ಲಿ ಸಾಕಷ್ಟು ಹೋರಾಡಿ. ಆದರೆ ವಿದೇಶಗಳಲ್ಲಿ ದೇಶವನ್ನು ಮತ್ತೆ ಮತ್ತೆ ಅವಮಾನಿಸುವುದನ್ನು ನಿಲ್ಲಿಸಿ. ರಾಹುಲ್ ಗಾಂಧಿ ತಮ್ಮ ಹೇಳಿಕೆಗೆ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಧರ್ಮೇಂದ್ರ ಪ್ರಧಾನ್ ಆಗ್ರಹಿಸಿದ್ದಾರೆ.
ನವದೆಹಲಿ: ರಾಹುಲ್ ಗಾಂಧಿ (Rahul Gandhi) ಅವರು ಅಮೆರಿಕದಲ್ಲಿ ದೇಶದ ಪ್ರಜಾಪ್ರಭುತ್ವದ (Indian Democracy) ಕುರಿತು ನೀಡಿರುವ ನಕಾರಾತ್ಮಕ ಹೇಳಿಕೆಗೆ ಕೇಂದ್ರ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ತಿರುಗೇಟು ನೀಡಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿದ ಅವರು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ತಮ್ಮ ಹೋರಾಟ ಬಿಜೆಪಿ ವಿರುದ್ಧವೇ ಅಥವಾ ಭಾರತ ವಿರುದ್ಧವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತೀಯ ಪ್ರಜಾಪ್ರಭುತ್ವವು ಜಾಗತಿಕ ಒಳಿತಿಗೆ ಪೂರಕವಾದದ್ದಾಗಿದೆ. ಆದರೆ ಅದರ ಕುಸಿತವು ಪ್ರಪಂಚದ ಮೇಲೆ ಪರಿಣಾಮ ಬೀರಲಿದೆ. ಇದನ್ನು ನಾವು ಅರ್ಥಮಾಡಿಕೊಂಡು, ಸ್ವೀಕರಿಸಬೇಕಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡುವುದು ನಮ್ಮ ಕೆಲಸ ಎಂದು ಹೇಳಿದ್ದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಧರ್ಮೇಂದ್ರ ಪ್ರಧಾನ್, ನಿಮ್ಮ (ರಾಹುಲ್ ಗಾಂಧಿ) ಹೋರಾಟ ಬಿಜೆಪಿಯ ವಿರುದ್ಧ ಆಗಿದ್ದರೆ, ದೇಶದೊಳಗೆ ಇರುವ ವೇದಿಕೆಗಳಲ್ಲಿ ಸಾಕಷ್ಟು ಹೋರಾಡಿ. ಆದರೆ ವಿದೇಶಗಳಲ್ಲಿ ದೇಶವನ್ನು ಮತ್ತೆ ಮತ್ತೆ ಅವಮಾನಿಸುವುದನ್ನು ನಿಲ್ಲಿಸಿ. ರಾಹುಲ್ ಗಾಂಧಿ ತಮ್ಮ ಹೇಳಿಕೆಗೆ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಉಲ್ಲೇಖಿಸಿದ್ದಾರೆ.
ವಿದೇಶಗಳಲ್ಲಿ ದೇಶವನ್ನು ಅವಮಾನಿಸುವುದು ರಾಹುಲ್ ಗಾಂಧಿಗೆ ಅಭ್ಯಾಸವಾಗಿ ಹೋಗಿದೆ. ಅವರು ವಿದೇಶಕ್ಕೆ ಹೋದಾಗಲೆಲ್ಲಾ ಭಾರತ ಮತ್ತು ಅದರ ಪ್ರಜಾಪ್ರಭುತ್ವದ ಬಗ್ಗೆ ಕೀಳಾಗಿ ಹೇಳಿಕೆಗಳನ್ನು ನೀಡುತ್ತಾರೆ ಎಂದು ಪ್ರಧಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
देश के बाहर देश का अपमान करना राहुल गांधी की आदत बन चुकी है। जब-जब वे विदेश जाते हैं तब-तब भारत और यहाँ के लोकतंत्र को नीचा दिखाने वाला बयान देते हैं।
आज जब पूरी दुनिया में भारत की साख नई ऊँचाइयों को छू रही है, दुनिया भारत की तरफ आशाओं से देख रही है, ऐसे समय में राहुल गांधी का…
— Dharmendra Pradhan (@dpradhanbjp) June 2, 2023
ಇಂದು ಇಡೀ ವಿಶ್ವದಲ್ಲಿ ಭಾರತದ ವಿಶ್ವಾಸಾರ್ಹತೆ ಹೊಸ ಉತ್ತುಂಗಕ್ಕೇರುತ್ತಿದೆ. ಜಗತ್ತು ಭಾರತದತ್ತ ಭರವಸೆಯಿಂದ ನೋಡುತ್ತಿದೆ. ಇಂತಹ ಸಮಯದಲ್ಲಿ ಭಾರತವನ್ನು ವಿದೇಶಿ ನೆಲಕ್ಕಿಂತ ಕೀಳು ಎಂಬಂತೆ ಬಿಂಬಿಸುವ ರಾಹುಲ್ ಗಾಂಧಿ ಹೇಳಿಕೆಗಳು ಅತ್ಯಂತ ದುರದೃಷ್ಟಕರ ಎಂದು ಪ್ರಧಾನ್ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಲೀಗ್ ಅನ್ನು ಜಾತ್ಯಾತೀತ ಪಕ್ಷ ಎಂದ ರಾಹುಲ್ ಗಾಂಧಿ; ಇದು ಅತ್ಯಂತ ದುರದೃಷ್ಟಕರ ಎಂದು ಬಿಜೆಪಿ ಟೀಕೆ
ಈ ಮಧ್ಯೆ, ಇಂಡಿಯನ್ ಯೂನಿಯನ್ ಆಫ್ ಮುಸ್ಲಿಂ ಲೀಗ್ (IUML) ಅನ್ನು ಜಾತ್ಯತೀತ ಪಕ್ಷ ಎಂದೂ ರಾಹುಲ್ ಗಾಂಧಿ ಹೇಳಿದ್ದಾರೆ. ಇದಕ್ಕೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಹುಲ್ ಗಾಂಧಿ ಹೇಳಿಕೆಯನ್ನು ಅತ್ಯಂತ ದುರದೃಷ್ಟಕರ ಎಂದು ಹೇಳಿದ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಕಿರಣ್ ರಿಜಿಜು, ಜಿನ್ನಾರ ಮುಸ್ಲಿಂ ಲೀಗ್ ಜಾತ್ಯತೀತ ಪಕ್ಷವೇ? ಧಾರ್ಮಿಕ ನೆಲೆಯಲ್ಲಿ ಭಾರತದ ವಿಭಜನೆಗೆ ಕಾರಣವಾದ ಪಕ್ಷವು ಜಾತ್ಯತೀತ ಪಕ್ಷವಾಗಿದ್ದು, ಮುಸ್ಲಿಂ ಲೀಗ್ ಅನ್ನು ಬೆಂಬಲಿಸುವ ವ್ಯಕ್ತಿಯನ್ನು ಇನ್ನೂ ಕೆಲವು ಜನರು ಸೆಕ್ಯುಲರ್ ಎಂದು ಪರಿಗಣಿಸುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ಹೇಳಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ