ಡಿಎಚ್‌ಎಫ್‌ಎಲ್ ಹಗರಣಕ್ಕೆ ಸಂಬಂಧಿಸಿದಂತೆ ಪುಣೆ ಮೂಲದ ಉದ್ಯಮಿ ಅವಿನಾಶ್ ಭೋಸಲೆಗೆ ಸೇರಿದ ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಅನ್ನು ಸಿಬಿಐ ವಶಪಡಿಸಿಕೊಂಡಿದೆ. 34,614 ಕೋಟಿ ರೂ ಬ್ಯಾಂಕ್ ಹಗರಣದಲ್ಲಿ ಈ ಹೆಲಿಕಾಪ್ಟರ್ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಹಗರಣ ಸಂಬಂಧ ಆಸ್ತಿ ವಶಕ್ಕೆ ಪಡೆಯಲು ಸಿಬಿಐ ಅಧಿಕಾರಿಗಳು ಅವಿನಾಶ್ಗೆ ಸಂಬಂಧಿಸಿದ ಸಂಸ್ಥೆ ಹಾಗೂ ಆಸ್ತಿಗಳ ಮೇಲೆ ದಾಳಿ ನಡೆಸಿದ್ದರು.
ಈ ವೇಳೆ ಹೆಲಿಕಾಪ್ಟರ್ ಪತ್ತೆಯಾಗಿದ್ದು, ಅದನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ ಇತ್ತೀಚೆಗಷ್ಟೇ ಅವಿನಾಶ್ ಅಗಸ್ಟಾ ವೆಸ್ಟ್ಲ್ಯಾಂಡ್ ನಿರ್ಮಾಣದ ಹೆಲಿಕಾಪ್ಟರ್ ಖರೀದಿಸಿದ್ದರು ಎಂದು ತಿಳಿದುಬಂದಿದೆ. ಜೂನ್ 20 ರಂದು ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಮಾಜಿ ಡಿಎಚ್‌ಎಫ್‌ಎಲ್ ಅಧಿಕಾರಿಗಳಾದ ಕಪಿಲ್ ವಾಧವನ್, ದೀಪಕ್ ವಾಧವನ್ ಮತ್ತು ಇತರರ ವಿರುದ್ಧ ಸಿಬಿಐ ಆರೋಪ ಹೊರಿಸಿತ್ತು.
ಸಿಬಿಐ ಪ್ರಕಾರ, ಅವರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ 17 ಬ್ಯಾಂಕ್‌ಗಳ ಒಕ್ಕೂಟಕ್ಕೆ ಡಿಎಚ್‌ಎಫ್‌ಎಲ್‌ನ ಬೋಗಸ್ ಲೆಡ್ಜರ್‌ಗಳಲ್ಲಿ 34,615 ಕೋಟಿ ಬ್ಯಾಂಕ್ ಸಾಲಗಳನ್ನು ನೀಡುವ ಮೂಲಕ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕೋಟಿಗಟ್ಟಲೆ ಮೌಲ್ಯದ ಪೇಂಟಿಂಗ್‌ಗಳು, ವಾಚ್‌ಗಳು ಮತ್ತು ಆಭರಣಗಳು ಸಿಬಿಐ ಈಗಾಗಲೇ ವಶಪಡಿಸಿಕೊಂಡಿದೆ. ಕೆಲವು ದಿನಗಳ ಹಿಂದೆ, DHFL ಒಳಗೊಂಡಿರುವ ದೇಶದ ಅತಿದೊಡ್ಡ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತಷ್ಟು ಹುಡುಕಾಟ ನಡೆಸಿತ್ತು.
ಈ ದಾಳಿಯ ವೇಳೆ ಕೇಂದ್ರ ಸಂಸ್ಥೆಯು ಜಾಕೋಬ್ ಆ್ಯಂಡ್ ಕಂ ಮತ್ತು ಫ್ರಾಂಕ್ ಮುಲ್ಲರ್ ಜಿನೀವಾ ಅವರ ಎರಡು ಸೂಪರ್ ಐಷಾರಾಮಿ ವಾಚ್‌ಗಳನ್ನು ವಶಪಡಿಸಿಕೊಂಡಿದ್ದು, ಇದರ ಒಟ್ಟು ಮೌಲ್ಯ ಸುಮಾರು 5 ಕೋಟಿ ರೂಪಾಯಿ ಎಂದು ಸಿಬಿಐ ತಿಳಿಸಿತ್ತು.