ವಿಚಾರಣೆಗೆ ಹಾಜರಾಗದ ಶಿವಸೇನೆ ನಾಯಕ ಸಂಜಯ್ ರಾವುತ್: ಇಡಿ ಅಧಿಕಾರಿಗಳಿಂದ ಮನೆ ತಪಾಸಣೆ
ಸಂಜಯ್ ರಾವುತ್ ಅವರು ಸತತ ಎರಡು ಬಾರಿ ಸಮನ್ಸ್ ಉಲ್ಲಂಘಿಸಿದ್ದರಿಂದ ಅವರ ಮುಂಬೈ ನಿವಾಸಕ್ಕೆ ಇಡಿ ಅಧಿಕಾರಿಗಳು ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.
ದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (Enforcement Directorate – ED) ವಿಚಾರಣೆ ಎದುರಿಸುತ್ತಿರುವ ಸಂಜಯ್ ರಾವುತ್ ಅವರು ಸತತ ಎರಡು ಬಾರಿ ಸಮನ್ಸ್ ಉಲ್ಲಂಘಿಸಿದ್ದರಿಂದ ಅವರ ಮುಂಬೈ ನಿವಾಸಕ್ಕೆ ಅಧಿಕಾರಿಗಳು ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ಜುಲೈ 27ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದರು. ಆದರೆ ಸಂಸತ್ ಅಧಿವೇಶನ ನಡೆಯುತ್ತಿರುವ ಕಾರಣ ನೀಡಿದ್ದ ಸಂಜಯ್ ರಾವುತ್ ವಿಚಾರಣೆ ತಪ್ಪಿಸಿಕೊಂಡಿದ್ದರು.
ಕೇಂದ್ರೀಯ ಮೀಸಲು ಪೊಲೀಸ್ ದಳ (Central Reserve Police Force – CRPF) ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ ಇಡಿ ಅಧಿಕಾರಿಗಳು ಮುಂಬೈ ಉಪನಗರದಲ್ಲಿರುವ ಬಂದೌಪ್ನ ರಾವುತ್ ನಿವಾಸ ಪ್ರವೇಶಿಸಿದರು. ಪಾಟ್ರಾ ಚಾಲ್ ಮರು ನಿರ್ಮಾಣ ಪ್ರಕರಣದ ವಿಚಾರಣೆಗಾಗಿ ಇಡಿ ಅಧಿಕಾರಿಗಳು ರಾವುತ್ ಅವರ ವಿಚಾರಣೆ ನಡೆಸುತ್ತಿದ್ದಾರೆ. ತಾವು ಏನೂ ತಪ್ಪು ಮಾಡಿಲ್ಲ ಎಂದು ವಾದಿಸುತ್ತಿರುವ ರಾವುತ್, ಇದು ರಾಜಕೀಯಪ್ರೇರಿತ ಕ್ರಮ ಎಂದು ಹರಿಹಾಯ್ದಿದ್ದಾರೆ.
ಜುಲೈ 1ರಂದು ರಾವುತ್ ಅವರನ್ನು ಸತತ 10 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿತ್ತು. ಈ ವೇಳೆ ಅವರ ಹೇಳಿಕೆಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (Prevention of Money Laundering Act – PMLA) ಕ್ರಿಮಿನಲ್ ಸೆಕ್ಷನ್ಗಳ ಅಡಿಯಲ್ಲಿ ದಾಖಲಿಸಲಾಗಿತ್ತು.
ಕಳೆದ ಏಪ್ರಿಲ್ ತಿಂಗಳಲ್ಲಿ ಜಾರಿ ನಿರ್ದೇಶನಾಲಯವು ಸಂಜಯ್ ರಾವುತ್ ಪತ್ನಿ ವರ್ಷಾ ರಾವುತ್ ಅವರಿಗೆ ಸೇರಿದ್ದ ₹ 11.15 ಕೋಟಿ ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಇದರಲ್ಲಿ ದಾದರ್ನಲ್ಲಿರುವ ಫ್ಲಾಟ್, ಕಿಹಿಂಮ್ ಬೀಚ್ನಲ್ಲಿದ್ದ 9 ನಿವೇಶನಗಳು ಸೇರಿದ್ದವು. ವರ್ಷಾ ರಾವುತ್ ಅವರು ಪ್ರವೀಣ್ ರಾವುತ್ ಮತ್ತು ಸುಜಿತ್ ಪಟ್ಕಾರ್ ಅವರೊಂದಿಗೆ ಹೊಂದಿರುವ ವ್ಯಾಪಾರ ಮತ್ತು ಇತರ ಸಂಪರ್ಕಗಳ ಬಗ್ಗೆ ಸಂಜಯ್ ರಾವುತ್ ಅವರನ್ನು ಪ್ರಶ್ನಿಸಲು ತನಿಖಾದಳವು ಪ್ರಯತ್ನಿಸುತ್ತಿದೆ.
Published On - 8:56 am, Sun, 31 July 22