Mann Ki Baat: 91ನೇ ಮನ್ ಕಿ ಬಾತ್; ಇಂದು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ
ಹಿಂದಿ ಭಾಷಣದ ಲೈವ್ ಪ್ರಸಾರದ ನಂತರ ಪ್ರಾದೇಶಿಕ ಭಾಷೆಗಳಲ್ಲಿಯೂ ಭಾಷಣ ಮರು ಪ್ರಸಾರವಾಗಲಿದೆ. ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಲೆಂದು ದೇಶದ ವಿವಿಧೆಡೆಯಿಂದ ಜನರು ಪ್ರಧಾನಿಗೆ ಮಾಹಿತಿ ಕಳಿಸಿಕೊಡುತ್ತಾರೆ.
ದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು (ಜುಲೈ 31) ಬೆಳಿಗ್ಗೆ 11 ಗಂಟೆಗೆ ಪ್ರತಿ ತಿಂಗಳ ಜನಪ್ರಿಯ ಕಾರ್ಯಕ್ರಮ ‘ಮನ್ ಕಿ ಬಾತ್’ (Mann Ki Baat) ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ಮನ್ ಕಿ ಬಾತ್ ಕಾರ್ಯಕ್ರಮದ 91ನೇ ಆವೃತ್ತಿಯಾಗಿದೆ. ಕಾರ್ಯಕ್ರಮವು ಆಕಾಶವಾಣಿ ಮತ್ತು ದೂರದರ್ಶನದ ಎಲ್ಲ ಕೇಂದ್ರಗಳಿಂದ ಏಕಕಾಲಕ್ಕೆ ಮರು ಪ್ರಸಾರಗೊಳ್ಳಲಿದೆ. ಆಕಾಶವಾಣಿಯ ನ್ಯೂಸ್ ವೆಬ್ಸೈಟ್ ಮತ್ತು ನ್ಯೂಸ್ ಆನ್ ಏರ್ ಮೊಬೈಲ್ ಆ್ಯಪ್ಗಳಲ್ಲಿಯೂ ಈ ಭಾಷಣವನ್ನು ಲೈವ್ ಆಗಿ ಕೇಳಬಹುದು. ಆಕಾಶವಾಣಿ, ದೂರದರ್ಶನ ಮತ್ತು ಪ್ರಧಾನಿ ಕಚೇರಿಯ ಯುಟ್ಯೂಬ್ ಚಾನೆಲ್ಗಳ ಮೂಲಕವೂ ಭಾಷಣವನ್ನು ಆಲಿಸಬಹುದಾಗಿದೆ. ಹಿಂದಿ ಭಾಷಣದ ಲೈವ್ ಪ್ರಸಾರದ ನಂತರ ಪ್ರಾದೇಶಿಕ ಭಾಷೆಗಳಲ್ಲಿಯೂ ಭಾಷಣ ಮರು ಪ್ರಸಾರವಾಗಲಿದೆ.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಲೆಂದು ದೇಶದ ವಿವಿಧೆಡೆಯಿಂದ ಸಾಕಷ್ಟು ಜನರು ಪ್ರಧಾನಿಗೆ ಪ್ರತಿ ತಿಂಗಳೂ ಮಾಹಿತಿ ಕಳಿಸಿಕೊಡುತ್ತಾರೆ. ಮೇ ತಿಂಗಳ ತಿಂಗಳು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದ ಅಂಶಗಳ ಬಗ್ಗೆ ಮೋದಿ ಅವರು ಸಣ್ಣ ಪುಸ್ತಿಕೆಯೊಂದನ್ನು ಬಿಡುಗಡೆ ಮಾಡಿದ್ದರು. ದೊಡ್ಡ ಸಂಖ್ಯೆಯಲ್ಲಿ ಯುವಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಬಗ್ಗೆ ಪುಸ್ತಿಕೆಯಲ್ಲಿ ಅವರು ಶ್ಲಾಘಿಸಿದ್ದರು. ಮನ್ ಕಿ ಬಾತ್ನಲ್ಲಿ ಕಳೆದ ತಿಂಗಳು ಪ್ರಸ್ತಾಪಿಸಿದ್ದ ಮುಖ್ಯ ವಿಷಯಗಳ ಬಗ್ಗೆ ಇ-ಪುಸ್ತಕ ಪ್ರಕಟಿಸಲಾಗಿದೆ. ಇದರಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಬರೆದಿರುವ ಲೇಖನಗಳು ಇರುತ್ತವೆ ಎಂದು ಮೋದಿ ಹೇಳಿದ್ದರು.
I invite you all to tune-in to this month’s #MannKiBaat tomorrow, 31st July at 11 AM.
Also sharing a booklet covering the interesting topics from last month such as India’s strides in space, glory on the sports field, Rath Yatra and more. https://t.co/1fJG1vbjnJ
— Narendra Modi (@narendramodi) July 30, 2022
ಪ್ರತಿ ತಿಂಗಳ ಕಾರ್ಯಕ್ರಮ
ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದ ಮೊದಲ ಭಾಷಣವು ಅಕ್ಟೋಬರ್ 3, 2014ರಲ್ಲಿ ಪ್ರಸಾರವಾಗಿತ್ತು. ಪ್ರತಿ ತಿಂಗಳ ಕೊನೆಯ ಭಾನುವಾರ ಮೋದಿ ರೇಡಿಯೊ ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡುವುದನ್ನು ರೂಢಿಸಿಕೊಂಡಿದ್ದಾರೆ. ದೇಶದ ಜನರಿಗೆ ಆಡಳಿತದ ಬಗ್ಗೆ ಮಾಹಿತಿ ಕೊಡುವುದು, ವಿವಿಧ ವಿಷಯಗಳ ಬಗ್ಗೆ ಪ್ರಧಾನಿಯು ತಮ್ಮ ದೃಷ್ಟಿಕೋನ ತಿಳಿಸಿಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಮೋದಿಗೆ ಮನ್ ಕಿ ಬಾತ್ ವಿಚಾರ ಹೊಳೆದದ್ದು 1998ರಲ್ಲಿ
ಮೋದಿ ಅವರು ಪ್ರಧಾನಿ ಅಲ್ಲ, ಗುಜರಾತಿನ ಮುಖ್ಯಮಂತ್ರಿಗಳಾಗುವ ಮೊದಲೇ ರೇಡಿಯೋ ಮೂಲಕ ದೇಶದ ಎಲ್ಲಾ ಮೂಲೆಗಳ ಜನರನ್ನು ತಲುಪಬಹುದೆಂಬ ಮನವರಿಕೆಯಾಗಿತ್ತು. ಅದು 1998ರ ಸಮಯ ಮತ್ತು ಮೋದಿಯವರು ಬಿಜೆಪಿಯ ಕಾರ್ಯಕರ್ತನಾಗಿ ಹಿಮಾಚಲ ಪ್ರದೇಶದಲ್ಲಿ ಸಂಘಟನಾ ಕೆಲಸಗಳಲ್ಲಿ ತೊಡಗಿದ್ದರು. ಅದೊಂದು ದಿನ ಅವರು ರಾಜ್ಯದ ಕುಗ್ರಾಮದಂಥ ಪ್ರದೇಶದಲ್ಲಿ ಕೆಲಸ ಮಾಡುವಾಗ ಟೀ ಕುಡಿಯಲು ಅವರು ಒಂದು ಚಿಕ್ಕ ಧಾಬಾಗೆ ಹೋಗಿದ್ದರು. ಖುಷಿಯಿಂದ ಬೀಗುತ್ತಿದ್ದ ಧಾಬಾದ ಮಾಲೀಕ ಮೋದಿಯವರ ಮುಂದೆ ಚಹಾದ ಬದಲು ಲಾಡು ತಂದಿಟ್ಟ. ಮೋದಿಯವರು, ‘ಭಯ್ಯಾ, ನಾನು ಕೇಳಿದ್ದು ಚಾಯ್, ಲಡ್ಡು ಅಲ್ಲ,’ ಎಂದರು. ಅದಕ್ಕೆ ಧಾಬಾದವನು, ‘ಭಯ್ಯಾ, ನೀವದನ್ನು ಅದನ್ನು ತಿನ್ನಲೇಬೇಕು, ಇಂದು ಇಡೀ ದೇಶದಲ್ಲಿ ಸಂತೋಷದ ಅಲೆಯಲ್ಲಿ ತೇಲುತ್ತಿದೆ. ಎಲ್ಲರೂ ಕುಣಿದು ಕುಪ್ಪಳಿಸುತ್ತಿದ್ದಾರೆ, ಬಂದ ಗ್ರಾಹಕರಿಗೆಲ್ಲ ನಾನು ಲಡ್ಡು ಹಂಚುತ್ತಿದ್ದೇನೆ,’ ಎಂದು ಹೇಳಿದ.
‘ಅಂಥದ್ದೇನಾಗಿದೆ,’ ಅಂತ ಮೋದಿಯವರು ಕೇಳಿದಾಗ ಅವನು, ‘ನಿಮಗೆ ಗೊತ್ತಿಲ್ವಾ? ಭಾರತ ಇಂದು ಅಣ್ವಸ್ತ್ರ ಪರೀಕ್ಷೆ ನಡೆಸಿದೆ,’ ಎಂದು ಹೇಳಿದ. ಮೋದಿಯವರು, ‘ನಿಮಗೆ ಹೇಗೆ ಗೊತ್ತಾಯಿತು ಭಯ್ಯಾ?’ ಅಂತ ಕೇಳಿದಾಗ, ಅವನು ರೇಡಿಯೋವನ್ನು ಅವರ ಮುಂದೆ ತಂದಿಟ್ಟ. ಆಗಿನ ಪ್ರಧಾನ ಮಂತ್ರಿ ಅಟಲ ಬಿಹಾರಿ ವಾಜಪೇಯಿ ಅವರು ಪೋಖ್ರಾನ್ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಸುದ್ದಿಯ ಬಾನುಲಿ ಪ್ರಸಾರ ಜಾರಿಯಲ್ಲಿತ್ತು. ಅಂದು ಮೋದಿ ಅವರಿಗೆ ರೇಡಿಯೋದ ಶಕ್ತಿ ಮನವರಿಕೆಯಾಯಿತು. ಮುಂದೆ ಪ್ರಧಾನಿಯಾದ ನಂತರ ಅವರು ಮನ್ ಕಿ ಬಾತ್ ಮೂಲಕ ದೇಶದ ಜನರನ್ನು ತಲುಪುವ ಮಾರ್ಗವನ್ನು ರೂಪಿಸಿದರು.
ಅಂಥ ರಿಮೋಟ್ ಜಾಗದಲ್ಲಿದ್ದ ವ್ಯಕ್ತಿಗೆ ದೇಶದಲ್ಲಿ ಏನು ನಡೆಯುತ್ತಿದೆ ಅನ್ನೋದು ರೇಡಿಯೊ ಮೂಲಕ ಗೊತ್ತಾಗಿದೆ. ರೇಡಿಯೊವನ್ನು ದೇಶದಲ್ಲಿ ಯಾವ ಮೂಲೆಯಲ್ಲೂ ಆಲಿಸಬಹುದು, ಇದಕ್ಕಿಂತ ಪವರ್ ಫುಲ್ ಮಾಧ್ಯಮ ಮತ್ತೊಂದಿಲ್ಲ ಅಂತ ಮೋದಿಯವರಿಗೆ ಅವತ್ತು ಮನದಟ್ಟಾಯಿತು. ಆಗಲೇ ಜನರನ್ನು ತಲುಪಲು ರೇಡಿಯೊವನ್ನು ಬಳಸುವ ನಿರ್ಧಾರ ಅವರಲ್ಲಿ ರೂಪ ತಳೆಯಲಾರಂಭಿಸಿತ್ತು. 2014ರಲ್ಲಿ ಅವರು ಪ್ರಧಾನ ಮಂತ್ರಿಯಾದಾಗ ‘ಮನ್ ಕಿ ಬಾತ್’ ಬಾನುಲಿ ಕಾರ್ಯಕ್ರಮ ಅಸ್ತಿತ್ವಕ್ಕೆ ಬಂತು. ಅಗಲೇ ಹೇಳಿದ ಹಾಗೆ ಮೊದಲ ಕಂತು ಅಕ್ಟೋಬರ್ 3, 2014 ವಿಜಯದಶಮಿ ದಿನದಂದು ಪ್ರಸಾರವಾಯಿತು.
ಮನ್ ಕಿ ಬಾತ್ಗೆ ನೀವು ಮಾಹಿತಿ ಕಳಿಸಿ
ಮನ್ ಕೀ ಬಾತ್ ನಲ್ಲಿ ಪ್ರಧಾನಿಗಳು ಹಲವು ಬಾರಿ ಕನ್ನಡಿಗರನ್ನೂ ಉಲ್ಲೇಖಿಸಿದ್ದಾರೆ. ಶೌಚಾಲಯಕ್ಕಾಗಿ ಉಪವಾಸ ಧರಣಿ ನಡೆಸಿದ ರಾಯಚೂರು ಜಿಲ್ಲೆ ಗಂಗಾವತಿ ತಾಲ್ಲೂಕಿನ ಮಲ್ಲಮ್ಮ ಹೆಸರಿನ ವಿದ್ಯಾರ್ಥಿನಿ, ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್, ಶ್ರೀರಂಗಪಟ್ಟಣದ ವೀರಭದ್ರ ದೇವಸ್ಥಾನ ಹಾಗೂ ದಂಪತಿಗಳಾದ ಅನುದೀಪ್ ಹಾಗೂ ಮಿನೀಷಾ ನಡೆಸುತ್ತಿರುವ ಕಾರ್ಯವನ್ನು ಪ್ರಧಾನಿಗಳು ಹೊಗಳಿದ್ದಾರೆ.
‘ಮನ್ ಕಿ ಬಾತ್’ ಕಾರ್ಯಕ್ರಮಕ್ಕೆ ಐಡಿಯಾಗಳನ್ನು ಕಳಿಸುವ ಇಚ್ಛೆ ನಿಮಗಿದ್ದರೆ MyGov, NaMo ಌಪ್ ಬಳಸಬಹುದು ಇಲ್ಲವೇ 1800-11-7800 ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ ನಿಮ್ಮ ಸಂದೇಶವನ್ನು ರೆಕಾರ್ಡ್ ಮಾಡಬಹುದು. ಪ್ಯಾಕ್ಸ್ ಕಳುಹಿಸುವ ಹಾಗಿದ್ದರೆ, +91-11-23019545, 23016857 ನಂಬರ್ ಗಳಿಗೆ ಕಳಿಸಬಹುದು. ನಿಮ್ಮ ಪ್ರಶ್ನೆಗೆ ಫ್ಯಾಕ್ಸ್ ಇಲ್ಲವೇ ಯಾವುದಾದರೂ ಮಾಧ್ಯಮದ ಮೂಲಕ ಉತ್ತರ ಸಿಗುತ್ತದೆ.