ಪ್ರಧಾನಿಯಾಗಲು ಬಯಸಿದ್ದರಾ ಪ್ರಣಬ್ ಮುಖರ್ಜಿ?; ಸೋನಿಯಾ ಗಾಂಧಿ ಆತ್ಮಕತೆಯಲ್ಲಿ ಸ್ಫೋಟಕ ಸಂಗತಿ ಬಯಲು

ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಯುಪಿಎ ಆಡಳಿತಾವಧಿಯಲ್ಲಿ ಪ್ರಧಾನಿ ಹುದ್ದೆಯ ಆಕಾಂಕ್ಷೆಯನ್ನು ವ್ಯಕ್ತಪಡಿಸಿ ತಮಗೆ ಆಘಾತ ಉಂಟುಮಾಡಿದ್ದ ಅಪರೂಪದ ಘಟನೆಯನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮ ಆತ್ಮಕತೆಯಲ್ಲಿ ಬಹಿರಂಗಪಡಿಸಿದ್ದಾರೆ. ತಮ್ಮ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಆತ್ಮಕತೆಯಲ್ಲಿ 2010ರಲ್ಲಿ ನಡೆದ ಈ ಕುತೂಹಲಕಾರಿ ರಾಜಕೀಯ ಸನ್ನಿವೇಶವನ್ನು ಸೋನಿಯಾ ಗಾಂಧಿ ಬರೆದುಕೊಂಡಿದ್ದಾರೆ.

ಪ್ರಧಾನಿಯಾಗಲು ಬಯಸಿದ್ದರಾ ಪ್ರಣಬ್ ಮುಖರ್ಜಿ?; ಸೋನಿಯಾ ಗಾಂಧಿ ಆತ್ಮಕತೆಯಲ್ಲಿ ಸ್ಫೋಟಕ ಸಂಗತಿ ಬಯಲು
Pranab Mukherjee With Sonia Gandhi And Manmohan Singh

Updated on: Nov 10, 2026 | 1:38 PM

ನವದೆಹಲಿ, ನವೆಂಬರ್ 10: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ಪ್ರಣಬ್ ಮುಖರ್ಜಿ ಅವರು ಪ್ರಧಾನಿಯಾಗುವ ತಮ್ಮ ದೀರ್ಘಕಾಲದ ಆಕಾಂಕ್ಷೆಯ ಸುಳಿವನ್ನು 2010ರಲ್ಲೇ ನೀಡಿದ್ದರು ಎಂಬ ವಿಷಯವನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮ ಆತ್ಮಕತೆಯಲ್ಲಿ ಬಹಿರಂಗಪಡಿಸಿದ್ದಾರೆ. ತಮ್ಮ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಆತ್ಮಕತೆಯಲ್ಲಿ ಯುಪಿಎ ಆಡಳಿತಾವಧಿಯ ಪಕ್ಷ ಮತ್ತು ಸರ್ಕಾರದ ನಡುವಿನ ಸಂಬಂಧ ಹಾಗೂ ಪ್ರಣಬ್ ಮುಖರ್ಜಿ ಅವರೊಂದಿಗಿನ ಮಾತುಕತೆಗಳನ್ನು ಸೋನಿಯಾ ಗಾಂಧಿ ವಿವರವಾಗಿ ಹಂಚಿಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದ ನಡುವೆ ಸಮನ್ವಯ ಸಾಧಿಸಲು ಪ್ರಧಾನಿಯವರೊಂದಿಗೆ ವಾರಕ್ಕೊಮ್ಮೆ ‘ಕೋರ್ ಗ್ರೂಪ್’ ಸಭೆ ನಡೆಯುತ್ತಿತ್ತು. ಇದರಲ್ಲಿ ಸೋನಿಯಾ ಗಾಂಧಿ, 70ರ ದಶಕದಲ್ಲೇ ಇಂದಿರಾ ಗಾಂಧಿ ಸಂಪುಟದಲ್ಲಿದ್ದ ಪ್ರಣಬ್ ಮುಖರ್ಜಿ, ಅರ್ಜುನ್ ಸಿಂಗ್, ಎ.ಕೆ. ಆಂಟೋನಿ ಹಾಗೂ ಅಹ್ಮದ್ ಪಟೇಲ್ ಭಾಗವಹಿಸುತ್ತಿದ್ದರು.

Loading...

ಇದನ್ನೂ ಓದಿ: ‘ನಿನ್ನನ್ನೂ ಕೊಂದುಬಿಡುತ್ತಾರೆ!’; ಪ್ರಧಾನಿಯಾಗದಂತೆ ರಾಜೀವ್ ಗಾಂಧಿ ಬಳಿ ಬೇಡಿಕೊಂಡಿದ್ದ ಸೋನಿಯಾ ಗಾಂಧಿ

ಈ ಸಭೆಯ ನಂತರ ಪ್ರಣಬ್ ಮುಖರ್ಜಿ ಆಗಾಗ ಸೋನಿಯಾ ಗಾಂಧಿ ಅವರೊಂದಿಗೆ ಖಾಸಗಿಯಾಗಿ ಮಾತನಾಡಲು ತಂಗುತ್ತಿದ್ದರು. ಅಂದಿನ ಹಣಕಾಸು ಸಚಿವ ಪಿ. ಚಿದಂಬರಂ ಅವರೊಂದಿಗೆ ಉಂಟಾಗಿದ್ದ ಭಿನ್ನಾಭಿಪ್ರಾಯ ಮತ್ತು ಸರ್ಕಾರದ ಆಂತರಿಕ ಅಸಮಾಧಾನದಿಂದ ಅವರು ತೀವ್ರ ನಿರಾಶೆಗೊಂಡಿದ್ದರು. “2010ರಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕುವಾಗ ಪ್ರಣಬ್ ಮುಖರ್ಜಿ ಅವರು ‘ಈಗ ನಾಯಕತ್ವದಲ್ಲಿ ಬದಲಾವಣೆ ಮಾಡುವ ಸಮಯ ಬಂದಿದೆ ಎಂದು ನನಗನಿಸುತ್ತದೆ’ ಎಂದು ಸಲಹೆ ನೀಡುವ ಮೂಲಕ ನನಗೆ ಭಾರಿ ಆಘಾತ ನೀಡಿದ್ದರು. ಪ್ರಧಾನಿಯಾಗಬೇಕೆಂಬ ಅವರ ದೀರ್ಘಕಾಲದ ಆಕಾಂಕ್ಷೆಯ ಸುಳಿವು ಅದಾಗಿತ್ತು ಎಂಬುದು ನನಗೆ ತಕ್ಷಣವೇ ಸ್ಪಷ್ಟವಾಯಿತು” ಎಂದು ಸೋನಿಯಾ ಗಾಂಧಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಸೋನಿಯಾ ಆತ್ಮಕತೆ ಬಿಡುಗಡೆ ವೇಳೆಯೇ ಇಂದಿರಾ ಗಾಂಧಿ ಕುಟುಂಬದ 1981ರ ವಿಡಿಯೋ ವೈರಲ್

ಆದರೆ, ಪ್ರಣಬ್ ಮುಖರ್ಜಿ ಅವರ ಮಾತನ್ನು ಕೇಳಿ ಅಚ್ಚರಿಗೊಂಡ ಸೋನಿಯಾ ಗಾಂಧಿ, ಆ ಕ್ಷಣದಲ್ಲಿ ಯಾವುದೇ ಪ್ರತಿಕ್ರಿಯೆ ನೀಡದೆ ಜಾಣತನದಿಂದ ಆ ಚರ್ಚೆಯ ವಿಷಯವನ್ನೇ ಬದಲಾಯಿಸಿದ್ದರಂತೆ. “ನನ್ನ ಪ್ರತಿಕ್ರಿಯೆಯಿಂದ ಅವರಿಗೆ ಸಣ್ಣ ಮಟ್ಟದ ನಿರಾಶೆಯಾಗಿದ್ದರೂ ಸಹ, ಆ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡು ನನ್ನ ವಿರುದ್ಧ ಎಂದಿಗೂ ಅಸಮಾಧಾನ ತೋರಿಸಲಿಲ್ಲ” ಎಂದು ಸೋನಿಯಾ ಗಾಂಧಿ ನೆನಪಿಸಿಕೊಂಡಿದ್ದಾರೆ.

ರಾಷ್ಟ್ರಪತಿಯಾಗಿ ನಾಮನಿರ್ದೇಶನ:

ಇದಾಗಿ 2 ವರ್ಷಗಳ ನಂತರ, ಅಂದರೆ 2012ರಲ್ಲಿ ಕಾಂಗ್ರೆಸ್ ಹಾಗೂ ಯುಪಿಎ ಮೈತ್ರಿಕೂಟವು ಪ್ರಣಬ್ ಮುಖರ್ಜಿ ಅವರನ್ನು ದೇಶದ ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯನ್ನಾಗಿ ನಾಮನಿರ್ದೇಶನ ಮಾಡಿತು. ಅವರು ದೇಶದ 13ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ನಂತರವೂ ಸೋನಿಯಾ ಗಾಂಧಿ ಅವರು ಪ್ರಣಬ್ ಮುಖರ್ಜಿ ಅವರ ಅಪಾರ ರಾಜಕೀಯ ಅನುಭವ ಮತ್ತು ಜ್ಞಾನವನ್ನು ಗೌರವಿಸಿ ಸದಾ ಮೌಲ್ಯಯುತ ಚರ್ಚೆಗಳನ್ನು ನಡೆಸುತ್ತಿದ್ದರೆಂದು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:38 pm, Tue, 10 November 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us