ಭುವನೇಶ್ವರ, ಆಗಸ್ಟ್ 24: ಒಡಿಶಾದಲ್ಲಿ (Odisha) ಮಹಿಳಾ ಹೋಮ್ ಗಾರ್ಡ್ಗೆ (Woman Home Guard) ‘ಚಿತ್ರಹಿಂಸೆ’ ನೀಡಿದ ಘಟನೆ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ತನಿಖೆ ನಡೆಸಲಿದೆ. ಮಹಿಳಾ ಹೋಮ್ ಗಾರ್ಡ್ಗೆ ಡಿಐಜಿ ಮತ್ತು ಅವರ ಪತ್ನಿ ಚಿತ್ರಹಿಂಸೆ ನೀಡಿದ ಪ್ರಕರಣದ ತನಿಖೆ ನಡೆಸುವಂತೆ ಬಿಜೆಪಿಯ ರಾಜ್ಯ ಘಟಕದ ಉಪಾಧ್ಯಕ್ಷರಾದ ಲೇಖಾಶ್ರೀ ಸಮಂತಸಿಂಗರ್ ನೇತೃತ್ವದ ನಿಯೋಗ ದೆಹಲಿಯ ಎನ್‌ಎಚ್‌ಆರ್‌ಸಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿತ್ತು. ಬಿಜೆಪಿ ನಾಯಕರು ಲಿಖಿತ ದೂರನ್ನೂ ಸಲ್ಲಿಸಿದ್ದರು. ಆಯೋಗವು ತನಿಖೆಯ ಭರವಸೆ ನೀಡಿದೆ ಎಂದು ಸಮಂತಸಿಂಗರ್ ಹೇಳಿದ್ದಾರೆ.
ಏತನ್ಮಧ್ಯೆ, ಒಡಿಶಾ ರಾಜ್ಯ ಮಹಿಳಾ ಆಯೋಗವು ಈಗಾಗಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದೆ. ಅಲ್ಲದೆ, ಇಡೀ ಪ್ರಕರಣಕ್ಕೆ ಸಂಬಂಧಿಸಿ ಅಪರಾಧ ವಿಭಾಗದ ಪೊಲೀಸರಿಂದ ಈಗಾಗಲೇ ವರದಿ ಕೇಳಿದೆ. 15 ದಿನಗಳೊಳಗೆ ವರದಿ ಸಲ್ಲಿಸುವಂತೆ ರಾಜ್ಯ ಮಹಿಳಾ ಆಯೋಗ ಅಪರಾಧ ವಿಭಾಗದ ಎಡಿಜಿಗೆ ಸೂಚಿಸಿದೆ. ‘ಮಹಿಳಾ ಹೋಮ್ ಗಾರ್ಡ್ ಚೇತರಿಸಿಕೊಂಡ ನಂತರ ಆಕೆಯನ್ನು ಭೇಟಿಯಾಗಿ ವಿವರ ಪಡೆಯುವುದಾಗಿ ಆಯೋಗದ ಅಧ್ಯಕ್ಷೆ ಮಿನಾತಿ ಬೆಹೆರಾ ತಿಳಿಸಿದ್ದಾರೆ.
ಒಡಿಶಾ ಮಾನವ ಹಕ್ಕುಗಳ ಆಯೋಗವು ಈಗಾಗಲೇ ಈ ಪ್ರಕರಣದಲ್ಲಿ ಪೊಲೀಸರಿಂದ ವರದಿಯನ್ನು ಕೇಳಿದೆ. ಮಹಿಳಾ ಹೋಮ್ ಗಾರ್ಡ್ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಯತ್ನದಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದರು. ಸದ್ಯ ಅವರಿಗೆ ಕಟಕ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯು ರಾಜ್ಯದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಉತ್ತರ ಕೇಂದ್ರ ವಿಭಾಗದ ಪ್ರಭಾರ ಡಿಐಜಿ ಬ್ರಿಜೇಶ್ ರೈ ಅವರನ್ನು ರಾಜ್ಯ ಪೊಲೀಸ್ ಪ್ರಧಾನ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.
ಡಿಐಜಿ ಪತ್ನಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ ಎಂದು ಸಂತ್ರಸ್ತೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಡಿಐಜಿ ಪತ್ನಿಯ ಬಟ್ಟೆ ಒಗೆಯುವಂತೆ ಕೇಳಿದ್ದು, ಒಪ್ಪದಿದ್ದಾಗ ಥಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಇಷ್ಟೇ ಅಲ್ಲದೆ, ಸೇವೆಯಿಂದ ವಜಾಗೊಳಿಸುವ ಬೆದರಿಕೆಯನ್ನೂ ಒಡ್ಡಲಾಗಿತ್ತು ಎನ್ನಲಾಗಿದೆ. ಆಗಸ್ಟ್ 4 ರಂದು ಕೃತ್ಯ ಎಸಗಲಾಗಿತ್ತು.
ಇದನ್ನೂ ಓದಿ: ಬಡತನದಲ್ಲಿ ಬೆಳೆದ ಬಾಲಕ ಈಗ ಚಂದ್ರಯಾನ-3 ತಂಡದಲ್ಲಿರುವ ಯುವ ವಿಜ್ಞಾನಿ; ಜಾರ್ಖಂಡ್ನ ಯುವಕನ ಸಾಧನೆಗೆ ಚಪ್ಪಾಳೆ
ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ನಾನು ಹತ್ತಿರದ ರೈಲು ಹಳಿಗಳಿಗೆ ಹೋಗಿ ಅಲ್ಲಿ ಆತ್ಮಹತ್ಯೆಗೆ ಯತ್ನಿಸಿದೆ. ಹಳಿಗಳ ಮೇಲೆ ನಿಂತಿದ್ದಾಗ ರೈಲು ಬರುತ್ತಿದ್ದುದರಿಂದ ಉಂಟಾದ ಕಂಪನದಿಂದಾಗಿ ನಾನು ಹೊರಗೆ ಬಿದ್ದೆ. ಆದರೆ, ಕಾಲುಗಳು ರೈಲಿನಡಿ ಸಿಲುಕಿ ನಜ್ಜುಗುಜ್ಜಾಗಿದ್ದವು. ಪ್ರಜ್ಞೆ ಮರಳಿ ಬರುವಾಗ, ನಾನು ಕಟಕ್‌ನ ಖಾಸಗಿ ಆಸ್ಪತ್ರೆಯಲ್ಲಿದ್ದೆ ಎಂದು ಸಂತ್ರಸ್ತೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ