AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಡತನದಲ್ಲಿ ಬೆಳೆದ ಬಾಲಕ ಈಗ ಚಂದ್ರಯಾನ-3 ತಂಡದಲ್ಲಿರುವ ಯುವ ವಿಜ್ಞಾನಿ; ಜಾರ್ಖಂಡ್​​ನ ಯುವಕನ ಸಾಧನೆಗೆ ಚಪ್ಪಾಳೆ

ಕೆ ಭರತ್ ಕುಮಾರ್ ಎಂಬ ಭರತ್, ಪ್ರಸ್ತುತ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದಾರೆ. ಬಡತನದಿಂದ ಬಂದ ಹುಡುಗ ಶಿಕ್ಷಣದಲ್ಲಿ ಉತ್ತಮ ಸಾಧನೆಗೈದು ಈಗ ಚಂದ್ರಯಾನ-3 ಮಿಷನ್ ನ ಭಾಗವಾಗಿದ್ದಾನೆ ಎಂದು ಕೇಳುವಾಗ ಹೆಮ್ಮೆ ಎನಿಸುತ್ತದೆ

ಬಡತನದಲ್ಲಿ ಬೆಳೆದ ಬಾಲಕ ಈಗ ಚಂದ್ರಯಾನ-3 ತಂಡದಲ್ಲಿರುವ ಯುವ ವಿಜ್ಞಾನಿ; ಜಾರ್ಖಂಡ್​​ನ ಯುವಕನ ಸಾಧನೆಗೆ ಚಪ್ಪಾಳೆ
ಭರತ್ ಕುಮಾರ್
ರಶ್ಮಿ ಕಲ್ಲಕಟ್ಟ
|

Updated on: Aug 24, 2023 | 9:03 PM

Share

ಛತ್ತೀಸ್‌ಗಢದಲ್ಲಿ (Chhattisgarh) ಚಾರೌಡಾ ಎಂಬ ಸಣ್ಣ ಪಟ್ಟಣವಿದೆ, ನಮ್ಮಲ್ಲಿ ಹೆಚ್ಚಿನವರಿಗೆ ಅದರ ಪರಿಚಯವಿಲ್ಲ, ಅಲ್ಲಿ ಭರತ್ ( Bharat Kumar) ಎಂಬ ಹುಡುಗ ವಾಸಿಸುತ್ತಿದ್ದ. ಆತ ಬಡ ಕುಟುಂಬದವನು. ಆತನ ಅಪ್ಪ ಬ್ಯಾಂಕಿನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಅವರ ತಾಯಿ ಟೀ ಸ್ಟಾಲ್ ನಡೆಸುತ್ತಿದ್ದರು. ಕೇಂದ್ರೀಯ ವಿದ್ಯಾಲಯ ಚಾರೌಡಾದಲ್ಲಿ ಶಾಲಾ ಶಿಕ್ಷಣ. 9 ನೇ ತರಗತಿಯಲ್ಲಿ ಆತನಿಗೆ ಶಾಲಾ ಶುಲ್ಕವನ್ನು ಪಾವತಿಸಲು ಸಾಧ್ಯವಾಗಲಿಲ್ಲ, ಆದರೆ ಶಾಲೆಯು ಅದನ್ನು ಮನ್ನಾ ಮಾಡುವ ಮೂಲಕ ಸಹಾಯ ಮಾಡಿತು. 12 ನೇ ತರಗತಿಯಲ್ಲಿ ಉತ್ತಮ ಅಂಕಗಳಿಸಿದ್ದ ಆತ ಆಮೇಲೆ IIT ಧನ್ಬಾದ್​​ಗೆ ಸೇರಿದ. ಹಣದ ಸಮಸ್ಯೆಯಾದಾಗ  ಅರುಣ್ ಬಾಗ್ ನ  ಉದ್ಯಮಿಗಳು ಮತ್ತು ರಾಯಪುರ್ ಜಿಂದಾಲ್ ಗ್ರೂಪ್ ಎಂಬ ವ್ಯಾಪಾರಸ್ಥರು ಸಹಾಯ ಮಾಡಿದರು. ಆ ಕಾಲೇಜಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು ಐಐಟಿ ಧನಬಾದ್‌ನಲ್ಲಿ ಶೇ98 ನೊಂದಿಗೆ ಚಿನ್ನದ ಪದಕವನ್ನೂ ಪಡೆದ.

ಇಂಜಿನಿಯರಿಂಗ್‌ನಲ್ಲಿ 7 ನೇ ಸೆಮಿಸ್ಟರ್‌ನಲ್ಲಿರುವಾಗಲೇ ಇಸ್ರೋದಲ್ಲಿ ಸ್ಥಾನ ಸಿಕ್ಕಿತು. ಕೇವಲ 23 ನೇ ವಯಸ್ಸಿನಲ್ಲಿ ಚಂದ್ರಯಾನ 3 ನಲ್ಲಿ ಕೆಲಸ ಮಾಡುವ ಅವಕಾಶವೂ ಸಿಕ್ಕಿತು. ‘ಫೀನಿಕ್ಸ್ ನಂತೆ ಬೂದಿಯಿಂದ ಮೇಲೆದ್ದು ಬರುತ್ತೇನೆ’ ಎಂಬ ಮಾತಿಗೆ ಆತನೇ ಸಾಕ್ಷಿ. ಅವರಂತಹ ಅನೇಕ ಭರತರು ನಮ್ಮ ಸುತ್ತಲೂ ಇದ್ದಾರೆ. ಅವರು ಸಣ್ಣ ಪಟ್ಟಣಗಳಿಂದ ಬಡತನದ ಹಿನ್ನೆಲೆಯಿಂದ ಬಂದವರು. ಅವರು ಪ್ರತಿದಿನ ಹೊಸ ಭಾರತದ ಕನಸನ್ನು ಕಾಣುತ್ತಿದ್ದಾರೆ” ಆರ್ಯಾಂಶ್ ಎಂಬ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ಭರತ್ ಎಂಬ ಯುವಕನ ಬದುಕಿನ, ಸಾಧನೆಯ ಕತೆ ಇದು.

ಕೆ ಭರತ್ ಕುಮಾರ್ ಎಂಬ ಭರತ್, ಪ್ರಸ್ತುತ  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದಾರೆ. ಬಡತನದಿಂದ ಬಂದ ಹುಡುಗ ಶಿಕ್ಷಣದಲ್ಲಿ ಉತ್ತಮ ಸಾಧನೆಗೈದು ಈಗ ಚಂದ್ರಯಾನ-3 ಮಿಷನ್ ನ ಭಾಗವಾಗಿದ್ದಾನೆ ಎಂದು ಕೇಳುವಾಗ ಹೆಮ್ಮೆ ಎನಿಸುತ್ತದೆ. ಈ ಯುವ ವಿಜ್ಞಾನಿ ಬಗ್ಗೆ ಮತ್ತಷ್ಟು ಹುಡುಕಿದಾಗ ಜಾಗರಣ್ ಡಾಟ್ ಕಾಂನಲ್ಲಿ ಈತನ ಬಗ್ಗೆ ಸ್ವಲ್ಪ ಮಾಹಿತಿ ಸಿಕ್ಕಿದೆ. ಈತನ ಅಪ್ಪ ಅಮ್ಮ ಇಬ್ಬರೂ ಹೋಟೆಲ್ ನಡೆಸುತ್ತಿದ್ದರು .ಹೋಟೆಲ್​​ನಲ್ಲಿನ ಆದಾಯ ಕಮ್ಮಿ ಆದಾಗ ಅಪ್ಪ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಲು ಶುರು ಮಾಡಿದರು. ಅಮ್ಮ ಹೋಟೆಲ್ ಮುಂದುವರಿಸಿದರು. ಭರತ್ ಶಾಲೆಯಿಂದ ಬಂದ ಮೇಲೆ ಅಮ್ಮನಿಗೆ ಸಹಾಯ ಮಾಡುತ್ತಿದ್ದ. ಭರತ್ ತಡರಾತ್ರಿಯವರೆಗೂ ಮನೆಯಲ್ಲಿಯೇ ಓದುತ್ತಿದ್ದ ಎಂದು ತಂದೆ ಕೆ ಚಂದ್ರಮೌಳೇಶ್ವರ್ ಹೇಳುತ್ತಾರೆ.

ಒಂದನೇ ತರಗತಿಯಿಂದಲೂ ಆತ ಪ್ರತಿಭಾವಂತ. 12ನೇ ತರಗತಿಯಲ್ಲಿ ಟಾಪರ್ ಆಗಿದ್ದು, ಭೌತಶಾಸ್ತ್ರದಲ್ಲಿ 99, ರಸಾಯನಶಾಸ್ತ್ರದಲ್ಲಿ 98 ಮತ್ತು ಗಣಿತದಲ್ಲಿ 99 ಅಂಕ ಗಳಿಸಿದ್ದಾರೆ. ಆ ಸಮಯದಲ್ಲಿ ಶಾಲೆಯಲ್ಲಿ ಅವರ ಗಣಿತ ಶಿಕ್ಷಕರಾಗಿದ್ದ ಬನಾನಿ ಬ್ಯಾನರ್ಜಿ, ಭರತ್ ಕುಮಾರ್ ತುಂಬಾ ಭರವಸೆಯ ಮಗು ಎಂದು ಹೇಳುತ್ತಾರೆ.

ಇದನ್ನೂ ಓದಿ: ಚಂದ್ರಯಾನ -3; ಎಲ್ಲವೂ ಅಂದುಕೊಂಡಂತೆಯೇ ಸಾಗುತ್ತಿದೆ, ಪ್ರಗ್ಯಾನ್ ರೋವರ್ ಅನ್ವೇಷಣೆ ಪ್ರಾರಂಭಿಸಿದೆ; ಇಸ್ರೋ

ಯಾವುದಾದರೂ ಪಾಠ ಅರ್ಥವಾಗದೇ ಇದ್ದರೆ ಆತ ಅದನ್ನು ಪರಿಹರಿಸುವ ವರೆಗೆ ಶಾಲೆಯಲ್ಲೇ ನಿಲ್ಲುತ್ತಿದ್ದ ಅಂತಾರೆ ಅವರು. ಕುಟುಂಬವು ಭರತ್ ಅವರ ಅಧ್ಯಯನವನ್ನು ಮುಂದುವರಿಸಲು ಯಾವುದೇ ಮಾರ್ಗವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇಂಥಾ ಪ್ರತಿಭಾವಂತ ಹುಡುಗನ ಕುಟುಂಬದ ಆರ್ಥಿಕ ಸ್ಥಿತಿಯ ಸುದ್ದಿಯೂ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.

ಇದಾದ ನಂತರವೇ ಈ ಮಗು ಮತ್ತು ಕುಟುಂಬಕ್ಕೆ ಎರಡು ಕುಟುಂಬಗಳು ದೇವತೆಗಳಂತೆ ಬಂದರು. ಅವರಲ್ಲಿ ಒಬ್ಬರು ರಾಯಪುರದ ನಿವಾಸಿ, ಮಹಾರಾಷ್ಟ್ರ ಮಂಡಲದ ಸದಸ್ಯ ರಾಮದಾಸ್ ಜೋಗ್ಲೇಕರ್, ಅವರ ಸೋದರ ಅರುಣ್ ಮತ್ತು ಅವರ ಪತ್ನಿ ವನಜಾ ಭಾವೆ. ಈ ಕುಟುಂಬವು ಭರತ್‌ನನ್ನು ಹುಡುಕುತ್ತಾ ಬಂದು ಆತನ ಮುಂದಿನ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯದ ಹಸ್ತವನ್ನು ಚಾಚಿತು.

ರಾಮದಾಸ್, ವನಜಾ ಅವರ ಪತಿ ಅರುಣ್ ಅವರು ಭರತ್ ಅವರ ಐಐಟಿ ಕೋಚಿಂಗ್ ವೆಚ್ಚವನ್ನು ನೋಡಿಕೊಂಡರು. ಅಷ್ಟೇ ಅಲ್ಲ, ಧನ್‌ಬಾದ್‌ ಐಐಟಿಗೆ ಆಯ್ಕೆಯಾದ ನಂತರವೂ ಧನಸಹಾಯ ಮಾಡಿದರು.

ಭರತ್ ಏಳು ಸೆಮಿಸ್ಟರ್‌ಗಳಿಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಅಗ್ರಸ್ಥಾನ ಪಡೆದು ಚಿನ್ನದ ಪದಕವನ್ನೂ ಗೆದ್ದರು. ಅವರು 2018 ರಲ್ಲಿ ಐಐಟಿಯಲ್ಲಿ ಉತ್ತೀರ್ಣರಾಗಿದ್ದರು. ಸೆಪ್ಟೆಂಬರ್ 2019 ರಲ್ಲಿ ಕ್ಯಾಂಪಸ್ ಸಂದರ್ಶನದಲ್ಲಿ ಇಸ್ರೋಗೆ ಆಯ್ಕೆಯಾದರು. ಭರತ್‌ಗೆ ರಾಮದಾಸ್ ಜೋಗ್ಲೇಕರ್ ಅವರಲ್ಲದೆ ರಾಯಗಢದ ಸಂತ್ರಮ್ ಕೂಡ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ ಎಂದು ತಾಯಿಯ ವನಜಾಝಿ ಹೇಳಿದ್ದಾರೆ. ಇಂದು, ಭರತ್ ರಜೆಯಲ್ಲಿ ಭಿಲಾಯ್ ಗೆ ಬಂದಾಗ ಈ ಎರಡೂ ಕುಟುಂಬಗಳನ್ನು ಭೇಟಿಯಾಗುತ್ತಾನೆ. ಈಗ ಮನೆಯೂ ಸುಧಾರಿಸಿದೆ. ಭರತ್ ಕುಮಾರ್ ಅವರ ಲಿಂಕ್ಡ್ ಇನ್ ಖಾತೆಯ ಲಿಂಕ್ ಇಲ್ಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ