ದೆಹಲಿ: ಬಲಗೈಲಿ ಕೊಟ್ಟಿದ್ದು ಎಡಗೈಗೂ ತಿಳಿಯಬಾರದು ಎನ್ನುತ್ತದೆ ಕನ್ನಡದ ನಾಣ್ಣುಡಿ. ದೆಹಲಿಯ ಕೊರೆವ ಚಳಿಯಲ್ಲೂ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ ಕೃಷಿಕರಿಗೆ ಇದೀಗ ಇತರ ರಾಜ್ಯಗಳ ಲಕ್ಷಾಂತರ ಜನರು ಸಹನಾಭೂತಿ ತೋರುತ್ತಿದ್ದಾರೆ. ಆದರೆ, ಇಲ್ಲೋರ್ವರು ಕಾಳಜಿ ವ್ಯಕ್ತಪಡಿಸುವ ಜೊತೆಗೆ, ಅವರ ಹಿತರಕ್ಷಣೆಗೂ ಮುಂದಾಗಿದ್ದಾರೆ. ಅದೂ, ಯಾವುದೇ ಪ್ರಚಾರದ ಆಸೆಯಿಲ್ಲದೆ!
ಹೌದು, ಗಾಯಕ ಮತ್ತು ಪಂಜಾಬಿ ನಟ ದಿಲ್ಜಿತ್ ದೊಸಾಂಜ್ ರೈತರ ನೆರವಿಗೆ ಮುಂದಾಗಿದ್ದಾರೆ. ದಿಲ್ಜಿತ್ ದೊಸಾಂಜ್ ರೈತರಿಗೆ ಬೆಚ್ಚನೆಯ ಉಡುಪುಗಳನ್ನು ಖರೀದಿಸಲೆಂದು 1 ಕೋಟಿ ರೂಪಾಯಿ ಹಣವನ್ನು ಮರುಯೋಚಿಸದೆ ದಾನ ಮಾಡಿದ್ದಾರೆ ಎಂದು ಪಂಜಾಬಿ ಗಾಯಕ ಸಿಂಗ್ಗಾ ತಿಳಿಸಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ದೊಸಾಂಜ್ಗೆ ಧನ್ಯವಾದ ಅರ್ಪಿಸಿ ವಿಡಿಯೋ ಪೋಸ್ಟ್ ಮಾಡಿರುವ ಸಿಂಗ್ಗಾ ಯಾವುದೇ ಪ್ರಚಾರ ಬಯಸದೆ ದೊಸಾಂಜ್ ರೈತರಿಗೆ ದಾನ ಮಾಡಿರುವುದನ್ನು ಕೊಂಡಾಡಿದ್ದಾರೆ. ನಮ್ಮಲ್ಲಿ ಕೇವಲ 10 ರೂ. ದಾನ ಮಾಡಿದರೂ ಪ್ರಚಾರ ಬಯಸುವವರ ಸಂಖ್ಯೆಯೇ ಹೆಚ್ಚು. ಅಂಥದ್ರಲ್ಲಿ, 1 ಕೋಟಿ ದಾನ ನೀಡಿದರೂ ದೊಸಾಂಜ್ ಎಲ್ಲೂ ಹೇಳಿಕೊಂಡಿಲ್ಲ ಎಂದು ನಟನ ಕಾರ್ಯವನ್ನು ಹಾಡಿಹೊಗಳಿದ್ದಾರೆ.
ಪ್ರತಿಭಟನೆಯ ಆರಂಭದಿಂದಲೂ ದಿಲ್ಜಿತ್ ದೊಸಾಂಜ್ ಪಂಜಾಬ್ ರೈತರ ಪರ ನಿಲುವು ತಳೆದಿದ್ದರು. ಟ್ವಿಟ್ಟರ್ನಲ್ಲಿ ದೆಹಲಿ ಚಲೋವನ್ನು ಟೀಕಿಸಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಮೇಲೂ ಮುಗಿಬಿದ್ದಿದ್ದ ದೊಸಾಂಜ್ ನಡೆಗೆ ಭಾರಿ ಬೆಂಬಲ ವ್ಯಕ್ತವಾಗಿತ್ತು.
ಪಂಜಾಬ್ ರೈತರನ್ನುದ್ದೇಶಿಸಿ ಪ್ರತಿಕ್ರಿಯಿಸಿರುವ ದಿಲ್ಜಿತ್ ದೆಹಲಿ ಚಲೋ ಭವಿಷ್ಯದ ಪೀಳಿಗೆಗಳಿಗೂ ಸ್ಪೂರ್ತಿದಾಯಕವಾಗಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ರೈತರನ್ನು ಅವಮಾನಿಸಿದರೂ ಸತ್ಯ ಎಂದಿಗೂ ಬದಲಾಗದು. ಕೇಂದ್ರ ಸರ್ಕಾರ ತಕ್ಷಣವೇ ರೈತರ ಅಹವಾಲುಗಳನ್ನು ಸ್ವೀಕರಿಸಬೇಕು ಎಂದು ಆಗ್ರಹಿಸಿದ್ದರು.
ಟ್ವಿಟರ್ನಲ್ಲಿ ದಿಲ್ಜಿತ್ ದೊಸಾಂಜ್-ಕಂಗನಾ ಫೈಟ್: ಪಂಜಾಬಿ ಅನುವಾದಕ್ಕೆ ಗೂಗಲ್ ಮೊರೆ ಹೋದ ನೆಟ್ಟಿಗರು