‘ಮೋದಿ ಸರ್ನೇಮ್’ (Modi Surname) ಟೀಕೆಗೆ ಸಂಬಂಧಿಸಿದಂತೆ ಸೂರತ್ ನ್ಯಾಯಾಲಯದ ತೀರ್ಪು ವಿಚಾರದಲ್ಲಿ ಪ್ರಶ್ನೆಯನ್ನು ಕೇಳಿದ್ದ ಪತ್ರಕರ್ತರನ್ನು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ತರಾಟೆಗೆ ತೆಗೆದುಕೊಂಡಿದ್ದಾರೆ. ಮಾರ್ಚ್ 24 ರಂದು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡ ನಂತರ ರಾಹುಲ್ ಗಾಂಧಿ ಶನಿವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಮೋದಿ ಉಪನಾಮದ ವಿರುದ್ಧ ರಾಹುಲ್ ಗಾಂಧಿಯವರ ಹೇಳಿಕೆಯು ‘ಒಬಿಸಿ (ಇತರ ಹಿಂದುಳಿದ ವರ್ಗಗಳು) ಸಮುದಾಯಕ್ಕೆ ಮಾಡಿದ ಅವಮಾನ’ ಎಂದು ಬಿಜೆಪಿ ಹೇಳುತ್ತಿದೆ. ಇದಕ್ಕೆ ಏನಂತೀರಿ ಎಂದು ಪತ್ರಕರ್ತರೊಬ್ಬರು ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ರಾಹುಲ್, ನೀವು ನೇರವಾಗಿ ಬಿಜೆಪಿಯವರಿಗೆ ಕೆಲಸ ಮಾಡುತ್ತಿದ್ದೀರಿ, ‘ಸ್ವಲ್ಪ ವಿವೇಚನೆ ತೋರಿ’ ಎಂದಿದ್ದಾರೆ.
ನೀವು ಬಿಜೆಪಿಗಾಗಿ ಕೆಲಸ ಮಾಡಲು ಬಯಸಿದರೆ ನಿಮ್ಮ ಎದೆಯ ಮೇಲೆ ಬಿಜೆಪಿ ಬ್ಯಾಡ್ಜ್ ಹಾಕಿಕೊಳ್ಳಿ. ನಂತರ ನಾನು ಅವರಿಗೆ (ಇತರ ಪತ್ರಕರ್ತರಿಗೆ) ಉತ್ತರಿಸಿದ ರೀತಿಯಲ್ಲಿಯೇ ನಾನು ನಿಮಗೆ ಉತ್ತರಿಸುತ್ತೇನೆ. ಪತ್ರಕರ್ತರಂತೆ ನಟಿಸಬೇಡಿ ಎಂದಿದ್ದಾರೆ ರಾಹುಲ್.
ಭಾಷಣದ ವೇಳೆ, ಲೋಕಸಭೆಗೆ ಶಾಶ್ವತವಾಗಿ ಅನರ್ಹಗೊಂಡರೂ ನಾನು ಹೆದರುವುದಿಲ್ಲ ಎಂದು ಹೇಳಿದ ಗಾಂಧಿ ಮತ್ತು ‘ಅದಾನಿ ಕುರಿತು ನನ್ನ ಮುಂದಿನ ಭಾಷಣಕ್ಕೆ ಪ್ರಧಾನಿ ಹೆದರುತ್ತಾರೆ’ ಎಂಬ ಕಾರಣದಿಂದ ನನ್ನನ್ನು ಅನರ್ಹಗೊಳಿಸಲಾಗಿದೆ ಎಂದು ಹೇಳಿದ್ದಾರೆ.
#WATCH | “Don’t pretend to be a pressman…Kyun hawa nikal gayi?”, says Congress leader Rahul Gandhi to a journalist questioning him on his conviction in ‘Modi surname’ case pic.twitter.com/SdaaUeraoy
— ANI (@ANI) March 25, 2023
ಹಿಂದುತ್ವ ಸಿದ್ಧಾಂತವಾದಿ ವಿಡಿ ಸಾವರ್ಕರ್ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ‘ಗಾಂಧಿಗಳು ಯಾರ ಬಳಿಯೂ ಕ್ಷಮೆ ಕೇಳುವುದಿಲ್ಲ’ ಎಂದು ಹೇಳಿದ್ದಾರೆ. 2019 ರ ಲೋಕಸಭೆ ಚುನಾವಣೆಗೆ ಮುನ್ನ ಕರ್ನಾಟಕದಲ್ಲಿ ಮೋದಿ ಉಪನಾಮಗಳ ವಿರುದ್ಧ ಮಾಡಿದ ಹೇಳಿಕೆಗೆ ಗುಜರಾತ್‌ನ ಸ್ಥಳೀಯ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಕಾಂಗ್ರೆಸ್ ನಾಯಕನನ್ನು ಅನರ್ಹಗೊಳಿಸಲಾಯಿತು.
ಸಂವಿಧಾನದ 102 (1) (ಇ) ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 8 ರೊಂದಿಗೆ ಪ್ರಕಾರ ಅಪರಾಧ ಸಾಬೀತಾದ ದಿನದಿಂದ ಅವರನ್ನು ಅನರ್ಹಗೊಳಿಸಲಾಗಿದೆ ಎಂದು ಲೋಕಸಭೆಯ ಸೆಕ್ರೆಟರಿಯೇಟ್ ಅಧಿಸೂಚನೆಯಲ್ಲಿ ತಿಳಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ