ಕೊಲ್ಕತ್ತ: ಪಶ್ಚಿಮ ಬಂಗಾಳದ ಬರ್ಧಮಾನ್ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಭದ್ರತಾ ಪಡೆಯ ವಿರುದ್ಧ ಮಮತಾ ಬ್ಯಾನರ್ಜಿ ಜನರನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಶನಿವಾರ ಕೂಚ್ ಬೆಹಾರ್ನ ಸೀತಾಲ್ಗುಚಿ ಕ್ಷೇತ್ರದ 126ನೇ ಮತಗಟ್ಟೆಯಲ್ಲಿ ಕರ್ತವ್ಯದ ಮೇಲಿದ್ದ ಸಿಐಎಸ್ಎಫ್ ಸಿಬ್ಬಂದಿ ಗುಂಡು ಹಾರಿಸಿದ್ದು, ಈ ವೇಳೆ 4 ಮಂದಿ ಮೃತಪಟ್ಟಿದ್ದರು. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಮೋದಿ, ಮಮತಾ ಬ್ಯಾನರ್ಜಿಯವರೇ, ನಿಮ್ಮ ನೀತಿಗಳು ಅನೇಕ ಅಮ್ಮಂದಿರಿಂದ ಅವರ ಮಕ್ಕಳನ್ನು ಕಿತ್ತುಕೊಂಡಿದೆ ಎಂದು ಹೇಳಿದ್ದಾರೆ. ಕೂಚ್ ಬೆಹಾರ್ನಲ್ಲಿ ನಡೆದಿದ್ದು ಹತ್ಯಾಕಾಂಡ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ ಬೆನ್ನಲ್ಲೇ ಮೋದಿ, ಮಮತಾ ವಿರುದ್ಧ ಈ ರೀತಿ ವಾಗ್ದಾಳಿ ಮಾಡಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆಯ ನಾಲ್ಕನೇ ಹಂತದ ಮತದಾನದಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಿತ್ತು. ಮಮತಾ ಬ್ಯಾನರ್ಜಿ ಕ್ಲೀನ್ ಬೌಲ್ಡ್ ಆಗಿದ್ದು ಅವರ ಇಡೀ ತಂಡ ಅಲ್ಲಿಂದ ಹೊರ ಹೋಗಬೇಕಾಗಿ ಬಂದಿತ್ತು ಎಂದು ಹೇಳಿದ ಮೋದಿ, ದೀದಿ ಓ ದೀದಿ ಎಂದು ಎಂದಿನ ಧಾಟಿಯಲ್ಲಿ ಮಮತಾ ಬ್ಯಾನರ್ಜಿಯವರನ್ನು ಕೂಗಿದ್ದಾರೆ. ಬಂಗಾಳದ ಪ್ರತಿಷ್ಠೆ ಮತ್ತು ಸಂಪ್ರದಾಯವನ್ನು ಅವಮಾನಿಸಬೇಡಿ. ಬಂಗಾಳ ನಿಮ್ಮ ದಾರ್ಷ್ಟ್ಯವನ್ನು , ಸುಲಿಗೆಯನ್ನು, ಕಟ್ ಮನಿ ವ್ಯವಸ್ಥೆಯನ್ನು ಸಹಿಸಿಕೊಳ್ಳುವುದಿಲ್ಲ. ಜನರು ಅಸೋಲ್ ಪರಿಬೊರ್ತನ್ ( ನಿಜವಾದ ಬದಲಾವಣೆ)ಯನ್ನು ಬಯಸುತ್ತಾರೆ ಎಂದು ಹೇಳಿದ್ದಾರೆ.
ಈಗಾಗಲೇ ನಾಲ್ಕು ಹಂತಗಳ ಮತದಾನ ಮುಗಿದಿದ್ದು ಬಂಗಾಳದಲ್ಲಿ ಇನ್ನೂ ನಾಲ್ಕು ಹಂತದ ಮತದಾನ ಬಾಕಿ ಇದೆ. ಐದನೇ ಹಂತದ ಚುನಾವಣೆ ಏಪ್ರಿಲ್ 17ರಂದು ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಸ್ಟಾರ್ ಪ್ರಚಾರಕರಾಗಿರುವ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಸೋಮವಾರ ಉತ್ತರ ಮತ್ತು ದಕ್ಷಿಣ ಬಂಗಾಳದಲ್ಲಿ ಪ್ರಚಾರ ಮಾಡಿದ್ದಾರೆ.
ಮಮತಾ ಬ್ಯಾನರ್ಜಿ ಮೇಲೆ ವಾಗ್ದಾಳಿ ನಡೆಸಲು ಟಿಎಂಸಿಯ ‘ಮಾ ಮಾಟಿ ಮನುಷ್’ ಘೋಷಣೆಯನ್ನು ಬಳಸಿದ ಮೋದಿ, ಅಮ್ಮನಿಗೆ ಹಿಂಸೆ ನೀಡುವುದು, ಮಾಟಿ (ಜಮೀನು) ಲೂಟಿ ಮಾಡುವುದು ಮತ್ತು ಮಾನುಷ್ (ಮನುಷ್ಯನ) ನೆತ್ತರು ಹರಿಸುವುದು. ಮಮತಾ ಬ್ಯಾನರ್ಜಿ ಅವರ ನೇತೃತ್ವದ ಬಂಗಾಳದ ನಿಜ ಸ್ಥಿತಿ ಇದು ಎಂದು ಮೋದಿ ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ನಾಯಕಿ ಸುಜಾತಾ ಮೊಂಡಲ್ ಖಾನ್ ಅವರು ಪರಿಶಿಷ್ಟ ಜಾತಿ ಅವರನ್ನು ಭಿಕ್ಷುಕರಿಗೆ ಹೋಲಿಸಿದನ್ನು ಖಂಡಿಸಿದ ಮೋದಿ, ದೀದಿ ತಮ್ಮನ್ನು ತಾವು ರಾಯಲ್ ಬಂಗಾಳದ ಹುಲಿ ಎಂದು ಹೇಳಿಕೊ ಳ್ಳುತ್ತಾರೆ. ಆಕೆಯ ಅನುಮತಿ ಇಲ್ಲದೆ ಯಾರಾದರೂ ಹೀಗೆ ಹೇಳಬಹುದೇ? ಈ ರೀತಿಯ ಹೇಳಿಕೆಗಳು ಬಾಬಾ ಸಾಹೀಬ್ ಭೀಮರಾವ್ ಅಂಬೇಡ್ಕರ್ ಅವರ ಆತ್ಮಕ್ಕೆ ನೋವುಂಟು ಮಾಡುತ್ತದೆ ಎಂದಿದ್ದಾರೆ.
Speaking at a massive rally in Bardhaman. https://t.co/PF05LCuYww
— Narendra Modi (@narendramodi) April 12, 2021
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳು ನಡೆಸಿದ ಹತ್ಯಾಕಾಂಡ ಎಂದಿದ್ದರು ಮಮತಾ
ಪಶ್ಚಿಮ ಬಂಗಾಳ ವಿಧಾನಸಭೆಯ 4ನೇ ಹಂತದ ಚುನಾವಣೆಯ ವೇಳೆ ಭದ್ರತಾಪಡೆಗಳು ಹಾರಿಸಿದ ಗುಂಡಿಗೆ ನಾಲ್ವರು ಬಲಿಯಾಗಿರುವುದನ್ನು ಮುಖ್ಯಮಂತ್ರಿ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಖಂಡಿಸಿದ್ದು, ಕೂಚ್ ಬೆಹಾರ್ ಜಿಲ್ಲೆಯಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳು (Central Industrial Security Force – CISF) ನಡೆಸಿದ ಹತ್ಯಾಕಾಂಡವಿದು ಎಂದು ಆರೋಪ ಮಾಡಿದ್ದಾರೆ. ಇದು ಹತ್ಯಾಕಾಂಡವಲ್ಲದೆ ಮತ್ತೇನೂ ಅಲ್ಲ. ಜನರ ಎದೆಯ ಮೇಲೆ ಗುಂಡು ಹಾರಿಸಲಾಗಿದೆ. ಅವರ ಉದ್ದೇಶವು ಗುಂಪು ಚೆದುರಿಸುವುದೇ ಆಗಿದ್ದರೆ ಜನರ ಕಾಲಿಗೆ ಗುಂಡು ಹಾರಿಸಬಹುದಿತ್ತು ಎಂದಿದ್ದಾರೆ ಮಮತಾ.
Published On - 6:18 pm, Mon, 12 April 21