ಭಾರತೀಯ ಮಹಿಳೆಯರ ಮೇಲೆ ಹೊರೆ ಹಾಕಬೇಡಿ; ಮೋಹನ್ ಭಾಗವತ್ 3 ಮಕ್ಕಳ ಸಲಹೆ ಕುರಿತು ಓವೈಸಿ ಪ್ರತಿಕ್ರಿಯೆ
ಭಾರತದಲ್ಲಿ ಕುಸಿಯುತ್ತಿರುವ ಜನಸಂಖ್ಯೆಯನ್ನು ಹೆಚ್ಚಿಸಲು ಭಾರತೀಯರು 3 ಮಕ್ಕಳನ್ನು ಹೊಂದಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಲಹೆ ನೀಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಅಸಾದುದ್ದೀನ್ ಓವೈಸಿ, 2011ರ ಜನಗಣತಿಯ ಪ್ರಕಾರ ಮುಸ್ಲಿಂ ಜನಸಂಖ್ಯಾ ಬೆಳವಣಿಗೆಯ ದರ ಕಡಿಮೆಯಾಗುತ್ತಿದೆ. ಇದು ಸುಮಾರು ಶೇ. 80ರಷ್ಟು ಹಿಂದೂಗಳಿಗೆ ಹೋಲಿಸಿದರೆ ಶೇ. 14.23ರಷ್ಟಿದೆ ಎಂದು ಹೇಳಿದ್ದಾರೆ.

ನವದೆಹಲಿ, ಆಗಸ್ಟ್ 29: ಭಾರತೀಯರು ಅದರಲ್ಲೂ ಹಿಂದೂಗಳು 3 ಮಕ್ಕಳನ್ನು ಹೊಂದಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ನಿನ್ನೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಹೇಳಿಕೆಯನ್ನು ಟೀಕಿಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ನಿಮ್ಮ ಈ ರೀತಿಯ ಸಲಹೆಗಳಿಂದ ಭಾರತೀಯ ಮಹಿಳೆಯರ ಮೇಲೆ ಹೊರೆ ಹಾಕಬೇಡಿ ಎಂದು ಸಲಹೆ ನೀಡಿದ್ದಾರೆ. “ತಮ್ಮದೇ ಆದ ಆದ್ಯತೆಗಳನ್ನು ಹೊಂದಿರುವ ಭಾರತೀಯ ಮಹಿಳೆಯರ ಮೇಲೆ ನೀವು ಏಕೆ ಹೊರೆ ಹಾಕಲು ಪ್ರಯತ್ನಿಸುತ್ತಿದ್ದೀರಿ?” ಎಂದು ಅವರು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಓವೈಸಿ ಆರ್‌ಎಸ್‌ಎಸ್ ಅಥವಾ ಅದರ ಬೆಂಬಲಿತ ಸಂಸ್ಥೆಗಳು “ಮುಸ್ಲಿಂ ವಿರೋಧಿ ದ್ವೇಷವನ್ನು ಹರಡಲು” ಕಾರಣವಾಗಿವೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಭಿನ್ನಾಭಿಪ್ರಾಯ, ಜಗಳವಿಲ್ಲ; ಬಿಜೆಪಿ ಜೊತೆಗಿನ ಸಂಬಂಧದ ಬಗ್ಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸ್ಪಷ್ಟನೆ
“ಮುಸ್ಲಿಂ ಜನಸಂಖ್ಯಾ ಬೆಳವಣಿಗೆ ದರವೂ ಕಡಿಮೆಯಾಗುತ್ತಿದೆ. 2011ರ ಜನಗಣತಿಯ ಪ್ರಕಾರ ಮುಸ್ಲಿಂ ಜನಸಂಖ್ಯಾ ಬೆಳವಣಿಗೆ ದರ ಕಡಿಮೆಯಾಗುತ್ತಿದೆ. ಸುಮಾರು ಶೇ. 80ರಷ್ಟು ಹಿಂದೂಗಳಿಗೆ ಹೋಲಿಸಿದರೆ ಮುಸ್ಲಿಮರ ಸಂಖ್ಯೆ ಶೇ. 14.23ರಷ್ಟಿದೆ ಎಂದು ಅವರು ಹೇಳಿದ್ದಾರೆ. ಈಗ ನೀವು 3 ಮಕ್ಕಳಿಗೆ ಜನ್ಮ ನೀಡಿ ಎಂದು ಹೇಳುತ್ತಿದ್ದೀರಿ. ಆದರೆ, ಜನರ ಕುಟುಂಬ ಜೀವನದಲ್ಲಿ ಪ್ರವೇಶಿಸಲು ನೀವು ಯಾರು? ನೀವು ಭಾರತೀಯ ಮಹಿಳೆಯರ ಮೇಲೆ ಹೊರೆ ಹಾಕಲು ಏಕೆ ಪ್ರಯತ್ನಿಸುತ್ತಿದ್ದೀರಿ? ಅವರು ತಮ್ಮ ಜೀವನದಲ್ಲಿ ತಮ್ಮದೇ ಆದ ವಿಭಿನ್ನ ಆದ್ಯತೆಗಳನ್ನು ಹೊಂದಿರುತ್ತಾರೆ. ಅದರಲ್ಲಿ ಮೂಗು ತೂರಿಸಲು ಅಥವಾ ಸಲಹೆ ನೀಡಲು ನಮಗೆ ಹಕ್ಕಿಲ್ಲ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: 3 ಮಕ್ಕಳನ್ನು ಮಾಡಿಕೊಳ್ಳಿ; ಭಾರತೀಯರಿಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಲಹೆ
ಅಕ್ರಮ ನುಸುಳುಕೋರರ ಬಗ್ಗೆ ಮೋಹನ್ ಭಾಗವತ್ ಹೇಳಿಕೆಗೆ ಪ್ರತಿಕ್ರಿಯಿಸಿದ ಓವೈಸಿ, “ಬಾಂಗ್ಲಾದೇಶಿಗಳು ಭಾರೀ ಪ್ರತಿಭಟನೆ ನಡೆಸಿ ಅವರ ನಾಯಕಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದಾಗ ಭಾರತದೊಳಗೆ ನುಸುಳಿ ಆಶ್ರಯ ಪಡೆದಿದ್ದಾರೆ. ನರೇಂದ್ರ ಮೋದಿ ಒಮ್ಮೆಯಾದರೂ ಇದನ್ನು ಪ್ರಸ್ತಾಪಿಸಿದ್ದಾರೆಯೇ? ಈ ಬಾಂಗ್ಲಾದೇಶಿಗಳು ಭಾರತಕ್ಕೆ ಏಕೆ ಪ್ರವೇಶಿಸುತ್ತಿದ್ದಾರೆ ಎಂದು ನರೇಂದ್ರ ಮೋದಿ ಅವರನ್ನು ಕೇಳಿದ್ದಾರೆಯೇ? ಬಾಂಗ್ಲಾದೇಶಿಗಳಿಗೆ ಭಾರತಕ್ಕೆ ಪ್ರವೇಶಿಸಲು ಅವಕಾಶ ನೀಡಿದ್ದಕ್ಕಾಗಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಯಾವುದಾದರೂ ಬಿಎಸ್‌ಎಫ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆಯೇ? ಇದು ನಿಮ್ಮ ವೈಫಲ್ಯ. 2014ರಿಂದ 2024ರವರೆಗೆ ಎಷ್ಟು ಶೇಕಡಾ ಬಾಂಗ್ಲಾದೇಶಿಗಳು ಭಾರತಕ್ಕೆ ಪ್ರವೇಶಿಸಿದ್ದಾರೆಂದು ದೇಶಕ್ಕೆ ತಿಳಿಸಿ” ಎಂದು ಸವಾಲು ಹಾಕಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




