NEET: 18 ವರ್ಷದ ಮಗಳೊಂದಿಗೆ ನೀಟ್ ಪರೀಕ್ಷೆ ಬರೆದು ಎಂಬಿಬಿಎಸ್ ಸೀಟು ಗಿಟ್ಟಿಸಿಕೊಂಡ ಅಪ್ಪ

| Updated By: ರಶ್ಮಿ ಕಲ್ಲಕಟ್ಟ

Updated on: Feb 04, 2022 | 7:40 AM

ಅಪ್ಪ ಮಗಳು ಜತೆಯಾಗಿಯೇ ಓದುತ್ತಿದ್ದರು. ಅಪ್ಪನಿಗೆ ಓದಿದ್ದು ಬೇಗ ಅರ್ಥವಾಗುತ್ತಿತ್ತು. ಅಪ್ಪ ಪರೀಕ್ಷೆ ಬರೆದು ಪಾಸಾಗಿ  ಸೀಟು ಸಿಕ್ಕಿ ನನಗೆ ಸೀಟು ಸಿಗದಿದ್ದರೇ ಎಂಬ ಚಿಂತೆ ಮಗಳಿಗೆ ಇತ್ತು. ಈಗ ಇಬ್ಬರಿಗೂ ಸೀಟು ಸಿಕ್ಕಿರುವುದು ಖುಷಿ ಕೊಟ್ಟಿದೆ ಎಂದ ಅಮ್ಮ

NEET: 18 ವರ್ಷದ ಮಗಳೊಂದಿಗೆ ನೀಟ್ ಪರೀಕ್ಷೆ ಬರೆದು ಎಂಬಿಬಿಎಸ್ ಸೀಟು ಗಿಟ್ಟಿಸಿಕೊಂಡ ಅಪ್ಪ
ಮುರುಗಯ್ಯನ್ ಮತ್ತು ಮಗಳು ಶೀತಲ್
Follow us on

ಕೊಚ್ಚಿ: ಕೇರಳದ (Kerala) ಎರ್ನಾಕುಳಂ ಜಿಲ್ಲೆಯ ತ್ರಿಪ್ಪೂಣಿತುರಲ್ಲಿ ಆರ್. ಮುರುಗಯ್ಯನ್ ಎಂಬ 54ರ ಹರೆಯದ ವ್ಯಕ್ತಿ 18 ವರ್ಷದ ಮಗಳೊಂದಿಗೆ ನೀಟ್ ಪರೀಕ್ಷೆ (NEET Exam) ಬರೆದು ಎಂಬಿಬಿಎಸ್ ಸೀಟು ಗಿಟ್ಟಿಸಿಕೊಂಡಿದ್ದಾರೆ. ಬಿಪಿಸಿಎಲ್ ಕೊಚ್ಚಿ ರಿಫೈನರಿ ಮುಖ್ಯ ವ್ಯವಸ್ಥಾಪಕರಾಗಿರುವ ಲೆಫ್ಟಿನೆಂಟ್ ಕರ್ನಲ್ ಮುರುಗಯ್ಯನ್, ಮಗಳು ಶೀತಲ್ ಜತೆ ಓದಿ ನೀಟ್ ಪರೀಕ್ಷೆಗೆ ಹಾಜರಾಗಿದ್ದರು. ಮುರುಗಯ್ಯನ್ ಅವರಿಗೆ ಚೆನ್ನೈನ ಶ್ರೀಲಲಿತಾಂಬಿಕಾ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಲಭಿಸಿದ್ದು, ಪುತ್ರಿ ಶೀತಲ್ ಅವರಿಗೆ ಪಾಂಡಿಚೇರಿಯ ವಿನಾಯಕ ಮಿಷನ್ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಕ್ಕಿದೆ. ಮುರುಗಯ್ಯನ್ ಅವರು ಎಂಜಿನಿಯರಿಂಗ್, ಕಾನೂನು ಮತ್ತು ವ್ಯವಹಾರ ಆಡಳಿತದಲ್ಲಿ ಪದವಿಗಳನ್ನು ಹೊಂದಿದ್ದಾರೆ. ಚಿಕ್ಕವಯಸ್ಸಿನಲ್ಲೇ ವೈದ್ಯನಾಗಬೇಕು ಎಂದು ನಾನು ಬಯಸಿದ್ದೆ. ಆದರೆ ಮನೆಯವರ ಒತ್ತಾಯಕ್ಕೆ ಮಣಿದು ಇಂಜಿನಿಯರ್ ಆದೆ. ಗರಿಷ್ಠ ವಯೋಮಿತಿ ಇಲ್ಲದೆ ಯಾರು ಬೇಕಾದರೂ ನೀಟ್ ಪರೀಕ್ಷೆಗೆ ಹಾಜರಾಗಬಹುದು ಎಂಬ ಸುಪ್ರೀಂಕೋರ್ಟ್ (Supreme Court) ತೀರ್ಪಿನೊಂದಿಗೆ ಮುರುಗಯ್ಯನವರ ಡಾಕ್ಟರ್ ಆಗುವ ಆಸೆ ಮತ್ತೆ ಚಿಗುರಿತ್ತು. ರಿಫೈನರಿಯಲ್ಲಿ ಕೆಲಸ ಮುಗಿಸಿ ಬಂದು ಮುರುಗಯ್ಯನವರು ಮಗಳ ಜೊತೆ ನೀಟ್ ಪರೀಕ್ಷೆಗೆ ತಯಾರಿಮಾಡುತ್ತಿದ್ದರು. ಪತ್ನಿ ಮಾಲತಿ ಅವರಿಗೆ ಸಂಪೂರ್ಣ ಬೆಂಬಲ ನೀಡಿದರು.

ತಮಿಳುನಾಡಿನ ತಂಜಾವೂರು ಮೂಲದ ಮುರುಗಯ್ಯನವರು 21 ವರ್ಷಗಳಿಂದ ತ್ರಿಪ್ಪೂಣಿತುರದ ಮಾಲತಿ ನಿಲಯದಲ್ಲಿ ವಾಸಿಸುತ್ತಿದ್ದಾರೆ. ಮುಂದಿನ ಸೀಟು ಹಂಚಿಕೆ ಆದ ನಂತರವೇ ಯಾವ ಕಾಲೇಜಿಗೆ ಸೇರಬೇಕೆಂದು ನಿರ್ಧರಿಸಲಾಗುವುದು ಎಂದು ಮುರುಗಯ್ಯ ಹೇಳಿದ್ದಾರೆ.

ಅಪ್ಪ ಮಗಳು ಜತೆಯಾಗಿಯೇ ಓದುತ್ತಿದ್ದರು. ಅಪ್ಪನಿಗೆ ಓದಿದ್ದು ಬೇಗ ಅರ್ಥವಾಗುತ್ತಿತ್ತು. ಅಪ್ಪ ಪರೀಕ್ಷೆ ಬರೆದು ಪಾಸಾಗಿ  ಸೀಟು ಸಿಕ್ಕಿ ನನಗೆ ಸೀಟು ಸಿಗದಿದ್ದರೇ ಎಂಬ ಚಿಂತೆ ಮಗಳಿಗೆ ಇತ್ತು. ಈಗ ಇಬ್ಬರಿಗೂ ಸೀಟು ಸಿಕ್ಕಿರುವುದು ಖುಷಿ ಕೊಟ್ಟಿದೆ. ಮುಂದಿನ ಸೀಟು ಹಂಚಿಕೆಗೆ ಕಾಯುತ್ತಿದ್ದೇವೆ, ಒಂದೇ ಕಾಲೇಜು ಸಿಕ್ಕರೂ ಸಿಗಬಹುದು ಎಂದು ಮಾತೃಭೂಮಿ ನ್ಯೂಸ್ ಜತೆ ಮಾತನಾಡಿದ ಮುರುಗಯ್ಯನವರ ಪತ್ನಿ ಮಾಲತಿ ಹೇಳಿದ್ದಾರೆ.

ಇದನ್ನೂ ಓದಿ: ತಮಿಳುನಾಡು: ನೀಟ್ ವೈದ್ಯಕೀಯ ಪರೀಕ್ಷೆಯಿಂದ ರಾಜ್ಯಕ್ಕೆ ವಿನಾಯಿತಿ ನೀಡುವ ಮಸೂದೆ ಹಿಂದಿರುಗಿಸಿದ ರಾಜ್ಯಪಾಲ

Published On - 7:40 am, Fri, 4 February 22