ನವದೆಹಲಿ: ಕೊರೊನಾ ಹಾಗೂ ಲಾಕ್ಡೌನ್ನಿಂದಾಗಿ ನಮ್ಮ ದೇಶದಲ್ಲಿ ಕಾರ್ಗಳ ಚಿಪ್ಗೆ ಕೊರತೆಯಾಗಿತ್ತು. ಇದರಿಂದಾಗಿ ಅನೇಕ ಆಟೋಮೊಬೈಲ್ ಕಂಪನಿಗಳ ಕಾರ್ ಉತ್ಪಾದನೆಯೇ ಕುಂಠಿತವಾಗಿತ್ತು. ಆದರೆ ಮತ್ತೊಂದೆಡೆ ದೇಶದ ಔಷಧ ಕ್ಷೇತ್ರದಲ್ಲಿ ಔಷಧ ಉತ್ಪಾದನಾ ವೆಚ್ಚ ಏರಿಕೆಯಾಗುತ್ತಿದೆ. ಇದರಿಂದ ತತ್ತರಿಸಿ ಹೋಗಿರುವ ಔಷಧ ಉತ್ಪಾದಕ ಕಂಪನಿಗಳು ಈಗ ನಾನ್ ಷೆಡ್ಯೂಲ್ಡ್ ಮತ್ತು ಷೆಡ್ಯೂಲ್ಡ್ ಔಷಧಗಳ ಬೆಲೆಯನ್ನು ಏರಿಕೆ ಮಾಡಲು ಅನುಮತಿ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಕೋರಿವೆ.
ದೇಶದಲ್ಲಿ ಈಗಾಗಲೇ ಎಲ್ಲ ಬೆಲೆಗಳು ಏರಿಕೆಯಾಗುತ್ತಿವೆ. ಈಗ ಔಷಧಗಳ ಬೆಲೆಯನ್ನು ಶೇ. 20ರಷ್ಟು ಹೆಚ್ಚಳ ಮಾಡಲು ಅನುಮತಿ ನೀಡಬೇಕೆಂದು ಔಷಧ ತಯಾರಕರ ಲಾಬಿ ಗುಂಪು ಕೇಂದ್ರ ಸರ್ಕಾರವನ್ನು ಕೇಳಿದೆ. ಭಾರತದ ಔಷಧ ಉದ್ಯಮವು ಹೆಚ್ಚುತ್ತಿರುವ ಇನ್ ಫುಟ್ ವೆಚ್ಚಗಳಿಂದ ತತ್ತರಿಸಿ ಹೋಗಿದೆ. ಹೀಗಾಗಿ ನಾನ್ ಷೆಡ್ಯೂಲ್ಡ್ ಔಷಧಗಳ ಬೆಲೆಯನ್ನು ವಾರ್ಷಿಕ ಶೇ. 20ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಅನುಮತಿ ನೀಡಬೇಕೆಂದು ಔಷಧ ತಯಾರಕರು ಕೋರಿದ್ದಾರೆ. ಪ್ರಸ್ತುತ ಕೇಂದ್ರ ಸರ್ಕಾರವು ನಾನ್ ಷೆಡ್ಯೂಲ್ಡ್ ಔಷಧಗಳ ಬೆಲೆಯನ್ನು ವಾರ್ಷಿಕ ಶೇ. 10ರಷ್ಟು ಹೆಚ್ಚಳ ಮಾಡಲು ಅವಕಾಶ ಕೊಟ್ಟಿದೆ.
ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ನೀತಿ ಆಯೋಗ, ಔಷಧೀಯ ಇಲಾಖೆ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರದ (ಎನ್‌ಪಿಪಿಎ) ಅಧ್ಯಕ್ಷರಿಗೆ ನೀಡಿದ ಮನವಿ ಪತ್ರದಲ್ಲಿ ಔಷಧಗಳ ಬೆಲೆಯನ್ನು ಶೇ. 20ರಷ್ಟು ಹೆಚ್ಚಳಕ್ಕೆ ಮನವಿ ಮಾಡಲಾಗಿದೆ.
ಆರಂಭಿಕ ಸಾಮಗ್ರಿಗಳು, ಪ್ಯಾಕೇಜಿಂಗ್ ವಸ್ತುಗಳು ಮತ್ತು ಸಾರಿಗೆ ವೆಚ್ಚಗಳು ಸೇರಿದಂತೆ ಎಲ್ಲಾ ವೆಚ್ಚಗಳು ಏರಿಕೆಯಾಗಿರುವುದು ಇನ್ ಫುಟ್ ವೆಚ್ಚದ ಮೇಲೆ ಪರಿಣಾಮ ಬೀರಿದೆ ಎಂದು ಇಂಡಿಯನ್ ಡ್ರಗ್ಸ್ ಮಾನ್ಯುಫ್ಯಾಕ್ಚರಿಂಗ್ ಅಸೋಸಿಯೇಷನ್( IDMA) ಹೇಳಿದೆ. ಔಷಧ ಬೆಲೆ ನಿಯಂತ್ರಣ ಆದೇಶದ (DPCO) ಪ್ಯಾರಾ 19 ರ ಅಡಿಯಲ್ಲಿ ವಿಶೇಷ ಅಧಿಕಾರವನ್ನು ಬಳಸಿ “ಒಂದು ಬಾರಿ ಬೆಲೆ ಏರಿಕೆಗೆ” ಅವಕಾಶ ಕೊಡಬೇಕೆಂದು ಡ್ರಗ್ಸ್ ಮ್ಯಾನ್ಯುಫ್ಯಾಕ್ಚರಿಂಗ್ ಕಂಪನಿಗಳು ಕೋರಿವೆ.
ಅಸಾಧಾರಣ ಸಂದರ್ಭದ ಕಾರಣಕ್ಕಾಗಿ ಕಂಪನಿಗಳು “ನಾನ್ ಷೆಡ್ಯೂಲ್ಡ್ ಔಷಧಗಳಿಗೆ ನೀಡಲಾಗಿರುವ ಶೇ.10ರ ಬೆಲೆ ಹೆಚ್ಚಳದ ಮೇಲೆ ಮತ್ತೆ ಶೇ.10ರಷ್ಟು ಬೆಲೆ ಹೆಚ್ಚಳಕ್ಕೆ ಅನುಮತಿ ನೀಡಬೇಕೆಂದು” ಒತ್ತಾಯಿಸಿವೆ. ಇನ್‌ಪುಟ್ ವೆಚ್ಚದಲ್ಲಿನ ಏರಿಕೆಯು ಇಳಿಕೆಯಾದ ನಂತರ ಶೇ.10ರಷ್ಟು ಹೆಚ್ಚುವರಿ ಹೆಚ್ಚಳವನ್ನು ಹಿಂತೆಗೆದುಕೊಳ್ಳಬಹುದು ಎಂದು ಅದು ಹೇಳಿದೆ. ಎಲ್ಲಾ ಷೆಡ್ಯೂಲ್ಡ್ ಔಷಧ ಬೆಲೆಗಳನ್ನು ತಕ್ಷಣವೇ ಜಾರಿಗೆ ಬರುವಂತೆ ಶೇ. 10ರಷ್ಟು ಹೆಚ್ಚಿಸಲು ಅನುಮತಿಸುವಂತೆ ಲಾಬಿ ಗುಂಪು ಕೇಳಿದೆ. ಷೆಡ್ಯೂಲ್ಡ್ ಔಷಧಿಗಳೆಂದರೆ, ಬೆಲೆ ನಿಯಂತ್ರಣದಲ್ಲಿರುವ ಮತ್ತು ಕಡಿಮೆ ಬೆಲೆಗೆ ಲಭ್ಯವಾಗುವ ಔಷಧಗಳು.
ಷೆಡ್ಯೂಲ್ ಔಷಧಗಳ ಚಿಲ್ಲರೆ ಬೆಲೆಯು ಗರಿಷ್ಠ ಮಿತಿಯ ಬೆಲೆಗಿಂತ ಕಡಿಮೆ ಇದ್ದು, ಗರಿಷ್ಠ ಮಿತಿಯವರೆಗೂ ಬೆಲೆ ಹೆಚ್ಚಳ ಮಾಡಲು ಮೊದಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಷೆಡ್ಯೂಲ್ ಔಷಧಗಳ ಉತ್ಪಾದಕರು ಬೆಲೆ ಕುಸಿತ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಳದಿಂದ ತೊಂದರೆಗೊಳಗಾಗಿದ್ದಾರೆ ಎಂದು ಔಷಧ ತಯಾರಕರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
IDMA ಪ್ರಕಾರ ಕೆಲವು ಪ್ರಮುಖ ಔಷಧ ಕಚ್ಚಾವಸ್ತುಗಳ ಬೆಲೆಗಳು ಶೇ. 15ರಿಂದ ಶೇ. 130ರಷ್ಟು ಹೆಚ್ಚಾಗಿವೆ. ಪ್ಯಾರಸಿಟಮಾಲ್ ಕಚ್ಚಾವಸ್ತುವಿನ ಬೆಲೆ ಶೇ. 130ರಷ್ಟು ಜಿಗಿತವಾಗಿದೆ. ಅಂತೆಯೇ, ಔಷಧಗಳ ತಯಾರಿಸುವ ಸಹಾಯಕ ಪದಾರ್ಥಗಳ ಬೆಲೆಗಳು ಶೇ. 18ರಿಂದ ಶೇ.262ರಷ್ಟು ಏರಿಕೆಯಾಗಿದೆ. ಗ್ಲಿಸರಿನ್ ಮತ್ತು ಪ್ರೊಪಿಲೀನ್ ಗ್ಲೈಕಾಲ್, ಸಿರಪ್‌ಗಳು, ಓರಲ್ ಡ್ರಾಪ್ ಮತ್ತು ಸ್ಟೆರೈಲ್ ಸಿದ್ಧತೆಗಳು ಸೇರಿದಂತೆ ಪ್ರತಿಯೊಂದು ದ್ರವ ತಯಾರಿಕೆಯಲ್ಲಿ ಬಳಸುವ ದ್ರಾವಕಗಳ ಬೆಲೆಗಳು ಕ್ರಮವಾಗಿ ಶೇ. 263 ಮತ್ತು 83ರಷ್ಟು ಏರಿಕೆಯಾಗಿದೆ.
ಹೆಚ್ಚುತ್ತಿರುವ ಬೆಲೆಗಳಿಂದಾಗಿ ಔಷಧ ದಾಸ್ತಾನು ಖಾಲಿಯಾಗಬಹುದು ಎಂದು IDMA ಹೇಳಿದೆ. ಸರ್ಕಾರ ತಕ್ಷಣ ಮಧ್ಯಪ್ರವೇಶ ಮಾಡಿ ಬೆಲೆ ಏರಿಕೆಗೆ ಅನುಮತಿ ನೀಡುವಂತೆ ಕೋರಿದೆ. ವ್ಯಾಪಾರದಲ್ಲಿ ಲಾಭಾಂಶ ಕುಸಿತದಿಂದ ದಾಸ್ತಾನು ಖಾಲಿಯಾಗಿ, ವ್ಯಾಪಾರ, ಆಸ್ಪತ್ರೆ, ಸರ್ಕಾರಿ ಸಂಸ್ಥೆಗಳಿಗೆ ಪೂರೈಸುವ ಔಷಧಿಗಳ ಕೊರೆತೆಗೆ ಕಾರಣವಾಗಬಹುದು ಎಂದು ಔಷಧ ತಯಾರಕರು ಆತಂಕ, ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Ayurveda Day 2021: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಿ; ನೀವು ತಿಳಿಯಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ
ಹೈದರಾಬಾದಿನ ಫಾರ್ಮಾಸ್ಯುಟಿಕಲ್ ಸಂಸ್ಥೆಯಲ್ಲಿ ಔಷಧಿ ಉತ್ಪಾದನೆಗಿಂತ ಅವ್ಯವಹಾರಗಳೇ ಜಾಸ್ತಿ ನಡೆದಿವೆ!
Published On - 5:36 pm, Wed, 10 November 21