ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್(Aryan Khan)ರನ್ನು ಬಂಧಿಸಿ, ಅವರಿಗೆ ಜಾಮೀನು ಕೂಡ ನೀಡದೆ ನಿರಂತರವಾಗಿ ವಿಚಾರಣೆ ನಡೆಸುತ್ತಿರುವ ಬಗ್ಗೆ ಮಹಾರಾಷ್ಟ್ರ ಸಚಿವ, ಎನ್ಸಿಪಿ ಮುಖಂಡ ಛಗನ್ ಭುಜ್ಬಲ್ ಟೀಕಿಸಿದ್ದಾರೆ. ಈಗ ಏನಾದರೂ ಶಾರುಖ್ ಖಾನ್ ಬಿಜೆಪಿಗೆ ಸೇರ್ಪಡೆಯಾದರೆ ಡ್ರಗ್ಸ್ ಎನ್ನುವುದು ಸಕ್ಕರೆಯ ಪುಡಿಯಾಗಿ ಬದಲಾಗಬಹುದು ಎಂದು ವ್ಯಂಗ್ಯವಾಡಿದ್ದಾರೆ.
ಗುಜರಾತ್ನ ಮುಂದ್ರಾ ಬಂದರಿನಲ್ಲಿ ಭಾರೀ ಪ್ರಮಾಣದ ಮಾದಕದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಪದೇಪದೆ ಹೆರಾಯಿನ್ಗಳು ಸಿಕ್ಕಿವೆ. ಈ ಪ್ರಕರಣವನ್ನು ವ್ಯಾಪಕವಾಗಿ ತನಿಖೆ ನಡೆಸುವುದು ಬಿಟ್ಟು, ಎನ್ಸಿಬಿ ಶಾರುಖ್ ಖಾನ್ ಪುತ್ರನನ್ನು ಹಿಡಿದುಕೊಂಡಿದೆ ಎಂದು ಹೇಳಿದ್ದಾರೆ. ಹಾಗೇ, ಶಾರುಖ್ ಖಾನ್ ಬಿಜೆಪಿ ಸೇರ್ಪಡೆಯಾದರೆ ಡ್ರಗ್ಸ್ನ್ನು ಸಕ್ಕರೆ ಪೌಡರ್ ಎಂದು ನಿರೂಪಿಸಿ, ಆರ್ಯನ್ ಬಿಡುಗಡೆಯಾಗುತ್ತದೆ ಎಂದು ಹೇಳಿದ್ದಾರೆ.
ಡ್ರಗ್ಸ್ ಕೇಸ್ನಲ್ಲಿ ಆರ್ಯನ್ ಖಾನ್ಗೆ ಜಾಮೀನು ಕೂಡ ಸಿಗುತ್ತಿಲ್ಲ. ಇದೀಗ ಅವರ ಪರ ವಕೀಲರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಇತ್ತೀಚೆಗೆ ಜಮ್ಮು-ಕಾಶ್ಮಿರದ ಮೆಹಬೂಬಾ ಮುಫ್ತಿ ಕೂಡ ಆರ್ಯನ್ ಬಂಧನದ ಬಗ್ಗೆ ಕಿಡಿಕಾರಿದ್ದರು. ಅವರು ಖಾನ್ ಎಂಬ ಒಂದೇ ಕಾರಣಕ್ಕೆ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಆರ್ಯನ್ ಖಾನ್ ಜೊತೆ ಸ್ನೇಹ ಹೊಂದಿರುವ ಅನನ್ಯಾ ಪಾಂಡೆ ಅವರಿಗೂ ಈಗ ಸಂಕಷ್ಟ ಎದುರಾಗಿದೆ. ಅವರ ಮನೆ ಮೇಲೆ ಎನ್ಸಿಬಿ ಅಧಿಕಾರಿಗಳು ಇತ್ತೀಚೆಗೆ ದಾಳಿ ಮಾಡಿದ್ದರು. ಬಳಿಕ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಸದ್ಯ ಅವರ ಮೊಬೈಲ್ ಮತ್ತು ಲ್ಯಾಪ್ಟಾಪ್ ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿನ ವಾಟ್ಸಪ್ ಚಾಟ್ಗಳನ್ನು ಪರಿಶೀಲಿಸಲಾಗುತ್ತಿದೆ.
ಇದನ್ನೂ ಓದಿ: ಕಾಂಗ್ರೆಸ್ನವರು ಮತ ಹಾಕಿಸಿಕೊಂಡು ಐದು ವರ್ಷ ನಿಮ್ಮನ್ನು ಅಂಧಕಾರದಲ್ಲಿ ಇಡುತ್ತಾರೆ -ಸಿಎಂ ಬಸವರಾಜ ಬೊಮ್ಮಾಯಿ
Published On - 1:29 pm, Sun, 24 October 21