ಚಿನ್ನ ಕಳ್ಳ ಸಾಗಣೆ ಮಾಡುವವರು(Gold Smuggling) ಎಂತೆಂಥಾ ಖತರ್ನಾಕ್ ಐಡಿಯಾಗಳನ್ನು ಮಾಡುತ್ತಾರೆಂದು ನೋಡಿದ್ದೇವೆ. ಅದರಲ್ಲೂ ದುಬೈನಿಂದ ಬರುವವರೇ ಸಿಕ್ಕಿಬೀಳುವುದು ಹೆಚ್ಚು. ಒಂದಷ್ಟು ಜನ ಬ್ಯಾಗ್ನಲ್ಲಿ ಅಡಗಿಸಿಕೊಂಡು ಬಂದರೆ, ಮತ್ತೊಂದಿಷ್ಟು ಮಂದಿ ತಮ್ಮ ದೇಹದ ಗುದದ್ವಾರ ಅಥವಾ ಯಾವುದಾದರೂ ಅಂಗದಲ್ಲಿ ಇಟ್ಟು ಬರುತ್ತಾರೆ. ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಬಳಿ ಸಿಕ್ಕಿಬೀಳಬಾರದು ಎಂಬ ಕಾರಣಕ್ಕೆ ನಾನಾ ರೂಪದ ಸರ್ಕಸ್ ಮಾಡುತ್ತಾರೆ. ಹಾಗಿದ್ದಾಗ್ಯೂ ಕೂಡ ಸಿಕ್ಕಿಬೀಳುತ್ತಾರೆ. ಇಂಥ ಹಲವು ಉದಾಹರಣೆಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಇದೇ ಮಾದರಿಯ ಸುದ್ದಿಯೊಂದು ಈಗ ಹೈದರಾಬಾದ್ನ ಶಂಶಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವರದಿಯಾಗಿದೆ.
ಮಹಿಳೆಯೊಬ್ಬರು ದುಬೈನಿಂದ ಈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಇವರು ಒಂದು ಕಪ್ಪು ಬಣ್ಣದ ಬುರ್ಕಾ ಧರಿಸಿದ್ದರು. ಆ ಬುರ್ಕಾದ ಮೇಲೆ ಅತ್ಯಂತ ಚೆಂದನೆಯ ಡಿಸೈನ್ ಇತ್ತು ಮತ್ತು ಅದರಲ್ಲೇ ಅಡಗಿತ್ತು ಕದ್ದು ಸಾಗಿಸುತ್ತಿರುವ ಚಿನ್ನ. ಈ ಮಹಿಳೆಯ ಬುರ್ಕಾದಲ್ಲಿ ರೋಡಿಯಂ ಲೇಪನವಿರುವ ಚಿನ್ನದ ಮಣಿಗಳನ್ನು ಹಾಕಿ ಹೊಲಿಯಲಾಗಿತ್ತು. ಸುಲಭಕ್ಕೆ ಕಂಡು ಹಿಡಿಯಲು ಸಾಧ್ಯವಿಲ್ಲದಂತೆ ಸುಮಾರು 350 ಗ್ರಾಂ ತೂಕವುಳ್ಳ, 18 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಮಣಿಗಳನ್ನು ಬುರ್ಕಾಧಾರಿ ಮಹಿಳೆ ಸಾಗಿಸುತ್ತಿದ್ದಳು. ಮಹಿಳೆಯನ್ನು ವಶಪಡಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ತೆಲಂಗಾಣ-ಆಂಧ್ರಪ್ರದೇಶ ಚೆಕ್ಪೋಸ್ಟ್ನಲ್ಲಿ ಘಟನೆ
ಇದೇ ರೀತಿಯ ಘಟನೆ ತೆಲಂಗಾಣ-ಆಂಧ್ರಪ್ರದೇಶದ ಗಡಿಯಲ್ಲಿರುವ ಚೆಕ್ಪೋಸ್ಟ್ನಲ್ಲಿ ಇಂದು ಮುಂಜಾನೆ ವೇಳೆ ನಡೆದಿದೆ. ಗಡಿಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ಸ್ಥಳೀಯ ಪೊಲೀಸ್ ತಂಡ ಸುಮಾರು 39,28,000 ರೂಪಾಯಿ ಮೌಲ್ಯದ 840 ಗ್ರಾಂ ತೂಕದ 57 ಡೈಮಂಡ್ಗಳನ್ನು ಜಪ್ತಿ ಮಾಡಿದೆ. ನಿಧಾ ಟ್ರಾವೆಲ್ಸ್ ಎಂಬ ಖಾಸಗಿ ಬಸ್ನಲ್ಲಿ ಡೈಮಂಡ್ ಸಿಕ್ಕಿದ್ದಾಗಿ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಪಿಲ್ (23) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜಸ್ಥಾನದಿಂದ ಬರುತ್ತಿದ್ದೇನೆ ಮತ್ತು ಬೆಂಗಳೂರಿನ ಆಭರಣಗಳ ಅಂಗಡಿಯೊಂದಕ್ಕೆ ತಾನು ಡೈಮಂಡ್ ಸಾಗಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲ, ತನ್ನ ಸೋದರ ತರಲು ಹೇಳಿದ್ದ ಎಂಬ ಮಾಹಿತಿಯನ್ನೂ ನೀಡಿದ್ದಾನೆ. ಈ ಡೈಮಂಡ್ ಸಂಬಂಧ ಯಾವುದೇ ದಾಖಲೆಗಳೂ ಸಿಕ್ಕಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Published On - 2:41 pm, Mon, 28 February 22