Russia- Ukraine War: ರಷ್ಯನ್ನರು ರಸ್ತೆಯಲ್ಲಿ ಎಸೆದಿದ್ದ ನೆಲಬಾಂಬ್ ಎತ್ತಿ ಪಕ್ಕಕ್ಕೆ ಹಾಕಿ ನಡೆದ ಉಕ್ರೇನ್ ಪ್ರಜೆ; ವಿಡಿಯೋ ವೈರಲ್

ಉಕ್ರೇನ್​ನ ವ್ಯಕ್ತಿಯೊಬ್ಬರು ರಷ್ಯಾದವರು ಬಿಸಾಡಿದ್ದ ನೆಲಬಾಂಬ್ ಅನ್ನು ರಸ್ತೆಯಿಂದ ತೆಗೆದು ಅದನ್ನು ಪಕ್ಕದಲ್ಲಿದ್ದ ಗದ್ದೆಯೊಂದಕ್ಕೆ ಎಸೆದು ಏನೂ ಆಗೇ ಇಲ್ಲವೇನೋ ಎಂಬಂತೆ ನಡೆದುಕೊಂಡು ಹೋಗುವ ವಿಡಿಯೋವೊಂದು ವೈರಲ್ ಆಗಿದೆ.

Russia- Ukraine War: ರಷ್ಯನ್ನರು ರಸ್ತೆಯಲ್ಲಿ ಎಸೆದಿದ್ದ ನೆಲಬಾಂಬ್ ಎತ್ತಿ ಪಕ್ಕಕ್ಕೆ ಹಾಕಿ ನಡೆದ ಉಕ್ರೇನ್ ಪ್ರಜೆ; ವಿಡಿಯೋ ವೈರಲ್
ರಸ್ತೆಯಲ್ಲಿ ರಷ್ಯನ್ನರು ಎಸೆದ ನೆಲಬಾಂಬ್ ಎತ್ತಿ ಹಾಕಿದ ಉಕ್ರೇನ್ ಪ್ರಜೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Feb 28, 2022 | 3:34 PM

ಉಕ್ರೇನಿಯಾದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಮ್ಮ ದೇಶದ ರಕ್ಷಣೆ ಮಾಡಲು ಹಿಂದೆ ಉಳಿಯಲಿ ಅಥವಾ ಅದರಲ್ಲಿ ಯಶಸ್ವಿಯಾಗಲಿ ಅದು ನಂತರದ ಮಾತು. ಗೋಸ್ಟ್​ ಆಫ್ ಕೀವ್ ಎಂದು ಕರೆಯಲ್ಪಡುವ ಏಸ್ ಪೈಲಟ್ ಏಕಾಂಗಿಯಾಗಿ ರಷ್ಯಾದ 6 ಸೈನಿಕರನ್ನು ಹೊಡೆದುರುಳಿಸಿದರು. ಇನ್ನೋರ್ವ ಉಕ್ರೇನಿಯನ್ ಮಹಿಳೆ ರಷ್ಯಾದ (Russia) ಸೈನಿಕರ ಎದುರು ನಿಂತು, ಅವರಿಗೆ ಸೂರ್ಯಕಾಂತಿ ಬೀಜಗಳನ್ನು ನೀಡಿ, ಈ ಬೀಜಗಳನ್ನು ನಿನ್ನ ಜೇಬಿನಲ್ಲಿಟ್ಟುಕೋ. ನೀನು ಸತ್ತಾಗ ಈ ಬೀಜಗಳು ಉಕ್ರೇನ್ ನೆಲದಲ್ಲಿಯೇ ಗಿಡವಾಗಿ ಬೆಳೆಯುತ್ತವೆ ಎಂದು ಧೈರ್ಯದಿಂದ ಹೇಳಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಇದೀಗ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಬಿರುಸು ಕೊಂಚ ಕಡಿಮೆಯಾಗಿದೆ. ಆದರೆ, ಉಕ್ರೇನ್ (Ukraine) ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕೈಯಲ್ಲಿ ಸಿಲುಕಿ ನಲುಗಿ ಹೋಗಿದೆ. ಇದು ಉಕ್ರೇನ್‌ನ ಮುಗ್ಧ ಜನರಿಗೆ ವಿನಾಶಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ ಮತ್ತು ಇದೇ ಪರಿಸ್ಥಿತಿ ಇನ್ನೂ ಕೆಲಕಾಲ ಮುಂದುವರಿಯುತ್ತದೆ. ಆದರೆ, ವಿಪತ್ತು ಬಂದಾಗ ಶ್ರೇಷ್ಠ ನಾಯಕನ ಸಾರಥ್ಯದಲ್ಲಿ ಒಂದು ಗುಂಪಿನ ಜನರು ಮನಸು ಮಾಡಿದರೆ ಏನು ಮಾಡಬಹುದು ಎಂಬುದನ್ನು ಇದು ನಿಮಗೆ ಸಾಬೀತುಪಡಿಸುತ್ತದೆ.

ಉಕ್ರೇನ್‌ನಲ್ಲಿರುವ ಈ ಜನರು ದೊಡ್ಡ ಸಂಕಷ್ಟದಲ್ಲಿದ್ದಾರೆ ಎಂದು ಹೊಸತಾಗೇನೂ ಹೇಳಬೇಕಾಗಿಲ್ಲ. ಇದರ ನಡುವೆ ಉಕ್ರೇನ್​ನ ವ್ಯಕ್ತಿಯೊಬ್ಬರು ರಷ್ಯಾದವರು ಬಿಸಾಡಿದ್ದ ನೆಲಬಾಂಬ್ ಅನ್ನು ರಸ್ತೆಯಿಂದ ತೆಗೆದು ಅದನ್ನು ಪಕ್ಕದಲ್ಲಿದ್ದ ಗದ್ದೆಯೊಂದಕ್ಕೆ ಎಸೆದು ಏನೂ ಆಗೇ ಇಲ್ಲವೇನೋ ಎಂಬಂತೆ ನಡೆದುಕೊಂಡು ಹೋಗುವ ವಿಡಿಯೋವೊಂದು ವೈರಲ್ ಆಗಿದೆ. ಹಾಗೇ ನೆಲಬಾಂಬ್ ಅನ್ನು ರಸ್ತೆಯಿಂದ ಪಕ್ಕಕ್ಕೆ ಎತ್ತಿ ಹಾಕಿ, ಸಿಗರೇಟ್ ಸೇದುತ್ತಾ ಹೋಗುವ ಅವರು ಅದೆಷ್ಟು ಸಹಜವಾಗಿ ಉಕ್ರೇನ್ ಮೇಲಿನ ಯುದ್ಧವನ್ನು ಪರಿಗಣಿಸಿದ್ದಾರೆ ಎಂಬ ಚರ್ಚೆಗಳು ಕೂಡ ಶುರುವಾಗಿವೆ.

ಈ ನೆಲಬಾಂಬ್ ಸ್ಫೋಟಗೊಂಡರೆ ಸಾಕಷ್ಟು ದೊಡ್ಡ ಶಬ್ದ ಮಾಡಬಹುದು, ಅನೇಕ ಹಾನಿಯನ್ನು ಕೂಡ ಮಾಡಬಹುದು. ಆದರೂ ಆ ವ್ಯಕ್ತಿಯ ವರ್ತನೆ ಕುತೂಹಲ ಮೂಡಿಸಿದ್ದು, ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಇದರ ನಡುವೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾದ ಮತದಾನದ ಹಕ್ಕನ್ನು ರದ್ದುಗೊಳಿಸುವಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಒತ್ತಾಯಿಸಿದ್ದರು. ಈ ಕುರಿತು ಕಿರು ವಿಡಿಯೊವೊಂದನ್ನು ಹಂಚಿಕೊಂಡಿದ್ದ ಅವರು, ಉಕ್ರೇನ್‌ ವಿರುದ್ಧದ ರಷ್ಯಾದ ನಡೆಗಳು ‘ನರಮೇಧ’ದ ಲಕ್ಷಣಗಳನ್ನು ಹೊಂದಿವೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದರು. ರಷ್ಯನ್ನರು ಉಕ್ರೇನ್‌ ನಗರಗಳಲ್ಲಿ ಬಾಂಬ್‌ಗಳನ್ನು ಸ್ಫೋಟಿಸಲು ಹೊರಟಿದ್ದಾರೆ. ಅವರು ನಮ್ಮ ಮಕ್ಕಳನ್ನು ಕೊಲ್ಲಲು ಬಯಸಿದ್ದಾರೆ. ನಮ್ಮ ನೆಲದೊಳಗೆ ನುಗ್ಗಿರುವ ದುಷ್ಟ ಸಂತಾನ ನಾಶವಾಗಬೇಕಿದೆ ಎಂದು ಅವರು ಹೇಳಿದ್ದರು. ಉಕ್ರೇನ್ ಮೇಲೆ ರಷ್ಯಾ ಆಕ್ರಮಣವನ್ನು ಅನೇಕ ಪಾಶ್ಚಿಮಾತ್ಯ ನಾಯಕರು ವಿರೋಧಿಸಿದ ಬೆನ್ನಲ್ಲೇ ಇಂದು ರಷ್ಯಾದೊಂದಿಗೆ ಸಂಧಾನದ ಮಾತುಕತೆಗೆ ಉಕ್ರೇನಿಯನ್ ನಿಯೋಗ ಬೆಲಾರಸ್​ಗೆ ತೆರಳಿದೆ. ಬೆಲಾರಸ್‌ನಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವಿನ ಮಾತುಕತೆಗೆ ವೇದಿಕೆಯನ್ನು ಸಿದ್ಧಪಡಿಸಲಾಗಿದೆ. ಉಕ್ರೇನ್ ನಲ್ಲಿ ರಷ್ಯಾ ಸೇನೆ ದಾಳಿಯ ತೀವ್ರತೆಯನ್ನು ಕಡಿಮೆ ಮಾಡಿದ್ದು ಉಕ್ರೇನ್ ನಿಂದ ತೆರಳಲು ಸಾರ್ವಜನಿಕರಿಗೆ ರಷ್ಯಾ ಸೇನೆ ಮುಕ್ತ ಅವಕಾಶ ನೀಡಿದೆ ಎನ್ನಲಾಗಿದೆ.

ಇದನ್ನೂ ಓದಿ: Russia-Ukraine War: ರಷ್ಯಾದ 3500ಕ್ಕೂ ಹೆಚ್ಚು ಸೈನಿಕರನ್ನು ಕೊಂದಿದ್ದಾಗಿ ಹೇಳಿದ ಉಕ್ರೇನ್​; ಇಲ್ಲಿದೆ ಪ್ರಮುಖ ಬೆಳವಣಿಗೆಗಳ ವಿವರ

Russia Ukraine War Live: ಕಾರ್ಗೋ ಶಿಪ್ ಮೇಲೆ ರಷ್ಯಾ ಮಿಸೈಲ್ ದಾಳಿ

Published On - 2:30 pm, Mon, 28 February 22