Russia- Ukraine War: ಉಕ್ರೇನ್​ನ ಹೊಸಕಿ ಹಾಕುವಷ್ಟು ಸಿಟ್ಟೇಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ಗೆ? ಇಲ್ಲಿದೆ ಮಾಹಿತಿ

ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿರುವುದೇಕೆ? ಇದರ ಹಿಂದಿನ ಕಾರಣ ಏನು ಎಂಬ ಇತಿಹಾಸವನ್ನು ಒಳಗೊಂಡ ಅಭಿಪ್ರಾಯ ಲೇಖನವನ್ನು ಜರ್ಮನಿಯಿಂದ ಎಸ್​. ಚಂದನ್ ಟಿವಿ9 ಕನ್ನಡ ಡಿಜಿಟಲ್​ಗಾಗಿ ಬರೆದಿದ್ದಾರೆ.

Russia- Ukraine War: ಉಕ್ರೇನ್​ನ ಹೊಸಕಿ ಹಾಕುವಷ್ಟು ಸಿಟ್ಟೇಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ಗೆ? ಇಲ್ಲಿದೆ ಮಾಹಿತಿ
ಲೇಖಕ ಎಸ್​. ಚಂದನ್
Follow us
TV9 Web
| Updated By: Srinivas Mata

Updated on: Feb 25, 2022 | 8:02 PM

ಉಕ್ರೇನ್​ ಮೇಲೆ ರಷ್ಯಾ ಸಾರಿರುವ ಯುದ್ಧವನ್ನು (Russia Ukraine Crisis) ಗಮನಿಸಿದವರಿಗೆ ಹಾಗೂ ಆ ಎರಡು ದೇಶಗಳ ಹಿನ್ನೆಲೆ ಬಗ್ಗೆ ತಿಳಿಯದವರಿಗೆ ಇವೆರಡು ಅದೆಂಥ ಶತ್ರು ದೇಶಗಳು ಅಂತನ್ನಿಸಿರಬಹುದು. ಆದರೆ ವಾಸ್ತವದಲ್ಲಿ ಶತಮಾನಗಳ ಕಾಲ ರಷ್ಯಾ ಮತ್ತು ಉಕ್ರೇನ್ ಒಂದೇ ದೇಶವಾಗಿದ್ದವು. ಪರಸ್ಪರ ಭಾಷೆ ಮತ್ತು ಸಂಸ್ಕೃತಿಯಲ್ಲಿ ಹೆಚ್ಚು ಭಿನ್ನತೆ ಇರಲಿಲ್ಲ. ಈ ಹಿಂದೆ ರುಸ್ ಎಂದು ಕರೆಯಲ್ಪಡುತ್ತಿದ್ದ ರಷ್ಯಾವು ಮಂಗೋಲಿಯನ್ನರ ಮೇಲೆ, ಅನಂತರ ಪೋಲೆಂಡ್​ನ ಮೇಲೆ ಯುದ್ಧ ಗೆದ್ದು, ರಷ್ಯಾ ದೇಶವಾಗಿ ಸ್ಥಾಪನೆ ಆಯಿತು. ನೂರಾರು ವರ್ಷಗಳಿಂದ ರಷ್ಯಾ ಜೊತೆಗಿದ್ದ ಉಕ್ರೇನ್ ಅನ್ನು “ಲಿಟಲ್ ರಷ್ಯಾ” ಎಂದು ಕರೆಯಲಾಗುತ್ತಿತ್ತು. ಇಷ್ಟು ಸಾಕಲ್ಲವಾ ರಷ್ಯಾ ಹಾಗೂ ಉಕ್ರೇನ್ ಹೇಗಿತ್ತು ಎಂಬುದನ್ನು ವಿವರಿಸುವುದಕ್ಕೆ. ಆದರೆ ಮೊದಲನೆ ಮಹಾಯುದ್ಧದ ಸಂದರ್ಭದಲ್ಲಿ ಯುರೋಪಿನಾದ್ಯಂತ ರಾಷ್ಟ್ರವಾದಿ ಭಾವನೆ ವ್ಯಾಪಕವಾಗಿ ಹರಡಿತು. ಇದರ ಪರಿಣಾಮವಾಗಿ ರಷ್ಯಾದೊಳಗೆ ತೀವ್ರ ಅಂತಃಕಲಹಗಳು ಶುರುವಾಗಿ, ರಷ್ಯಾದ ಕ್ರಾಂತಿಯ (Russian Revolution) ಮೂಲಕ ಶತಮಾನಗಳ ಝಾರ್ ನಿರಂಕುಶ ಪ್ರಭುತ್ವದ ಆಡಳಿತವನ್ನು ಕೊನೆಗೊಳಿಸಿ, ಸೋವಿಯತ್ ಒಕ್ಕೂಟದ ರಚನೆಗೆ ಕಾರಣವಾಯಿತು.

ಈ ಸಂದರ್ಭದಲ್ಲೇ ಪ್ರತ್ಯೇಕ ರಾಷ್ಟ್ರ ಆಗಬೇಕು ಎಂಬ ಉಕ್ರೇನ್​ನ ಪ್ರಯತ್ನವು ಬಲಿಷ್ಠ ಸೋವಿಯತ್ ಎದುರು ಪರಾಜಯ ಕಂಡಿತು. ಆದರೂ ಸೋವಿಯತ್ ಒಕ್ಕೂಟ ಉಕ್ರೇನ್​ಗೆ ಗಣರಾಜ್ಯ ದೊರಕಿಸಿ, ಆ ಒಕ್ಕೂಟದ ಸದಸ್ಯ ರಾಷ್ಟ್ರವನ್ನಾಗಿ ಮಾಡಿಕೊಂಡಿತು. ಈ ಸಂದರ್ಭದಲ್ಲಿ ಸೋವಿಯತ್ ಒಕ್ಕೂಟದ ಐರೋಪ್ಯ ಭಾಗದಲ್ಲಿ ತೀರ ದಕ್ಷಿಣಕ್ಕಿರುವ ಕ್ರಿಮಿಯ ಎಂಬ ಪರ್ಯಾಯ ದ್ವೀಪವು ರಷ್ಯಾದಿಂದ ಉಕ್ರೇನ್​ಗೆ ಸೇರ್ಪಡೆಯಾಯಿತು. ಇದಾದ ಎರಡು ದಶಕದ ಬಳಿಕ ಸೋವಿಯತ್ ಒಕ್ಕೂಟವು ಕುಸಿದುಬಿದ್ದು, ಉಕ್ರೇನ್ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು. ಆದರೆ ಇಲ್ಲಿ ಒಂದು ಸಮಸ್ಯೆ ಎದುರಾಯಿತು. ಸೋವಿಯತ್​ ತನ್ನ ಅರು ಪರಮಾಣು ಶಸ್ತ್ರಾಸ್ತ್ರಗಳನ್ನು ಉಕ್ರೇನ್​ನಲ್ಲಿ ಇರಿಸಿತ್ತು. ಜಗತ್ತಿನ ಮೂರನೇ ಅತಿ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳು ಉಕ್ರೇನ್​ನ ಬಳಿ ಇದ್ದವು.

ಈ ಸಂಗತಿಯು ಜಾಗತಿಕ ಮಟ್ಟದಲ್ಲಿ ಪ್ರಭಾವಿ ರಾಷ್ಟ್ರಗಳಿಗೆ ಆತಂಕ ಉಂಟುಮಾಡಿತು. ಅಮೆರಿಕ, ರಷ್ಯಾ ಮೊದಲಾದ ರಾಷ್ಟ್ರಗಳು ಈ ಪರಮಾಣು ಶಸ್ತ್ರಾಸ್ತ್ರಗಳನ್ನು ನಾಶಪಡಿಸಬೇಕು ಎಂದು ಉಕ್ರೇನ್​ನ ಮೇಲೆ ಒತ್ತಡ ಹೇರಿದವು. ಉಕ್ರೇನ್​ನ ಆರ್ಥಿಕ ಸ್ಥಿತಿಯು ದುರ್ಬಲವಾಗಿದ್ದ ಕಾರಣ ಪಶ್ಚಿಮ ದೇಶಗಳಾದ ಅಮೆರಿಕ, ಯುನೈಟೆಡ್ ಕಿಂಗ್​ಡಮ್​ ಮೊದಲಾದ ದೇಶಗಳ ಆರ್ಥಿಕ ನೆರವನ್ನು ಅವಲಂಬಿಸಿತ್ತು. ಆರ್ಥಿಕ ನೆರವಿನ ಸಲುವಾಗಿ ಉಕ್ರೇನ್ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ನಾಶಪಡಿಸಲು ಅಮೆರಿಕ, ಯು.ಕೆ., ರಷ್ಯಾಳ ಜೊತೆ ಒಪ್ಪಂದ ಮಾಡಿಕೊಂಡಿತು. ಉಕ್ರೇನ್​ನ ಪ್ರಾದೇಶಿಕ ಸಮಗ್ರತೆಗೆ ಮತ್ತು ರಾಜಕೀಯ ಅಧಿಕಾರಕ್ಕೆ ಅಮೆರಿಕ, ಯುಕೆ ಅಥವಾ ರಷ್ಯಾ ಯಾವುದೇ ತೊಂದರೆ ಕೊಡುವುದಿಲ್ಲ. ಹಾಗೊಂದು ವೇಳೆ ಆದಲ್ಲಿ ಇತರ ರಾಷ್ಟ್ರಗಳು ಉಕ್ರೇನ್​ನ ರಕ್ಷಣೆಗೆ ನಿಲ್ಲುತ್ತವೆ ಎಂಬುದು ಆ ಒಪ್ಪಂದದ ತಿರುಳಾಗಿತ್ತು.

ಆದರೆ, ಉಕ್ರೇನ್ ಏನೇ ಸ್ವತಂತ್ರವಾಗಿದ್ದರೂ ದೇಶೀ ಮತ್ತು ವಿದೇಶೀ ರಾಜನೀತಿಗಳ ವಿಚಾರವಾಗಿ ರಷ್ಯಾದ ಮೇಲೆ ಅವಲಂಬಿತವಾಗಿತ್ತು. ಇದರ ಪರಿಣಾಮವಾಗಿ ರಷ್ಯಾದ ಪ್ರಭಾವ ಉಕ್ರೇನ್​ನ ರಾಜಕೀಯದ ಮೇಲೆ ಸದಾ ಇದ್ದಿದ್ದರಿಂದ ಆ ದೇಶದಲ್ಲಿ ಭ್ರಷ್ಟಾಚಾರ ವ್ಯಾಪಕವಾಯಿತು. ಇದರಿಂದ ಬೇಸತ್ತ ಅಲ್ಲಿನ ಪ್ರಜೆಗಳು 2014ರಲ್ಲಿ ದಂಗೆ ಎದ್ದರು. ಅದರ ಪರಿಣಾಮವಾಗಿ ರಷ್ಯಾ ಪರ ಇದ್ದ ಸರ್ಕಾರವನ್ನು ಪದಚ್ಯುತಗೊಳಿಸಿ, ಪಶ್ಚಿಮ ದೇಶಗಳ ರಾಜನೀತಿಯನ್ನು ಅನುಸರಿಸುವ ಸರ್ಕಾರವನ್ನು ಚುನಾಯಿಸಿದರು. ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಸಮಯದಿಂದಲೂ ಮತ್ತು ಸೋವಿಯತ್ ಒಕ್ಕೂಟವು ಕುಸಿದು ಉಕ್ರೇನ್ ಸ್ವತಂತ್ರವಾದ ಬಳಿಕವೂ ಬಹಳಷ್ಟು ರಷ್ಯನ್ನರು ಉಕ್ರೇನ್​ನ ಪೂರ್ವ ಗಡಿಗಳಲ್ಲಿ ನೆಲೆಸಿದ್ದರು. ಉಕ್ರೇನ್ ಸರ್ಕಾರದ ರಷ್ಯಾ ವಿರೋಧಿ ಪಶ್ಚಿಮ ದೇಶಗಳ ಪರ ನೀತಿಯನ್ನು ಈ ಜನರು ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ಗೆ ಸಹಿಸಲು ಸಾಧ್ಯವಾಗಲಿಲ್ಲ. ಪುಟಿನ್​ರ ಕುಮ್ಮಕ್ಕಿನಿಂದ ಈ ಭಾಗದ ಜನರು ಉಕ್ರೇನ್​ನ ಹೊಸ ಸರ್ಕಾರದ ವಿರುದ್ಧ ದಂಗೆ ಎದ್ದರು. ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ಅಧಿಕಾರದಲ್ಲಿದ್ದ ಪುಟಿನ್​ಗೆ ರಷ್ಯಾವನ್ನು ಬಲಿಷ್ಠಗೊಳಿಸಬೇಕೆಂಬುದು ಉದ್ದೇಶ. ಇದನ್ನು ಸಾಧಿಸಲು ಉಕ್ರೇನ್​ ಪೂರ್ವ ಗಡಿಗಳಲ್ಲಿ ದಂಗೆ ಏಳುತ್ತಿರುವ ರಷ್ಯನ್ನರಿಗೆ ಬೆಂಬಲ ನೀಡುವುದು ಒಂದು ಮಾರ್ಗವಾದರೆ, ಮತ್ತೊಂದು ಉದ್ದೇಶ ಕ್ರಿಮಿಯ ಪರ್ಯಾಯ ದ್ವೀಪವನ್ನು ಆಕ್ರಮಿಸಿಕೊಳ್ಳುವುದು.

ಕ್ರಿಮಿಯ ಪರ್ಯಾಯ ದ್ವೀಪವು ಮಿಲಿಟರಿ ದೃಷ್ಟಿಯಿಂದ ಬಹು ಮುಖ್ಯ ಪ್ರದೇಶ. ರಷ್ಯಾ ನೌಕಾಪಡೆಯ ಬಳಿ ಹೆಚ್ಚು ಬೆಚ್ಚಗಿನ ನೀರಿನ ರೇವು ಇರದ ಕಾರಣ ಕಪ್ಪು ಸಮುದ್ರ ಹೊಂದಿರುವ ಈ ಪ್ರದೇಶ ರಷ್ಯಾದ ನೌಕಾಪಡೆಗೆ ಬಲು ಉಪಯೋಗಕರ. ಉಕ್ರೇನ್​ನ ದಂಗೆಯ ನೆಪವನ್ನು ಬಳಸಿ, ಕ್ರಿಮಿಯವನ್ನು ಆಕ್ರಮಿಸಿಕೊಳ್ಳುವಲ್ಲಿ ರಷ್ಯಾ ಯಶಸ್ವಿಯಾಯಿತು. ಉಕ್ರೇನ್​ನ ಪೂರ್ವ ಗಡಿಗಳಲ್ಲಿ ನೆಲೆಸಿರುವ ರಷ್ಯನ್ ಪ್ರತ್ಯೇಕತಾವಾದಿಗಳ ಮೂಲಕ ಆ ದೇಶವನ್ನು ಬಲಹೀನಗೊಳಿಸುವುದು ಪುಟಿನ್​ನ ತಂತ್ರ. ಉಕ್ರೇನ್​ನ ಬಳಿ ಪರಮಾಣು ಶಸ್ತ್ರಾಸ್ತ್ರಗಳು ಇಲ್ಲದಿರುವುದು ರಷ್ಯಾ ಅಧ್ಯಕ್ಷರಿಗೆ ವರವಾಗಿದೆ. ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ, 1993ರಲ್ಲಿ ಅಂತರರಾಷ್ಟ್ರೀಯ ಸಂಬಂಧಗಳ ತಜ್ಞರಾದ ಯೂನಿವರ್ಸಿಟಿ ಆಫ್ ಶಿಕಾಗೊದ ಪ್ರೊಫೆಸರ್ ಜಾನ್ ಮರ್ಶೀಮೆರ್ (John Mearsheimer) ಪ್ರಸ್ತುತ ಪರಿಸ್ಥಿತಿಯ ಸಾಧ್ಯತೆ ಬಗ್ಗೆ ಆಗಲೇ ಭವಿಷಷ್ಯ ನುಡಿದಿದ್ದರು. ಪರಮಾಣು ನಿರೋಧಕವಿಲ್ಲದ ಉಕ್ರೇನ್​ನ ಮೇಲೆ ರಷ್ಯಾ ಆಕ್ರಮಣಶೀಲ ಮನೋಭಾವವನ್ನು ತೋರಬಹುದು ಎಂದು ಆ ಪ್ರೊಫೆಸರ್ ಬರೆದಿದ್ದರು. ಆದರೆ ಆ ಸಮಯದಲ್ಲಿ ಅವರ ಅಭಿಪ್ರಾಯವನ್ನು ಇತರೆ ದೇಶಗಳು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.

ರಷ್ಯಾವನ್ನು ಬಲಿಷ್ಠಗೊಳಿಸಲು ಪುಟಿನ್​ ಮತ್ತೊಂದು ತಂತ್ರ ಮಾಡಿದರು. ನ್ಯಾಟೋ(North Atlantic Treaty Organization)ವನ್ನು ರಷ್ಯಾದಿಂದ ದೂರವಿಟ್ಟರು. ಸೋವಿಯತ್​ ಆಗಿದ್ದ ಕಾಲದಲ್ಲಿ Iron Curtain ಎಂಬ ರಾಜಕೀಯ ಗಡಿಯು ಸೋವಿಯತ್ ಒಕ್ಕೂಟ ಸೇರಿ ಪೂರ್ವ ಯೂರೋಪ್ ಮತ್ತು ಪಶ್ಚಿಮ ಯುರೋಪ್​ನ ಹಲವು ದೇಶಗಳು ಬೇರ್ಪಟ್ಟಿದವು. ಇದು ನ್ಯಾಟೋ ದೇಶಗಳನ್ನು ಎದುರಿಸಲು ಸೋವಿಯತ್ ಮಾಡಿಕೊಂಡಿದ್ದ ವ್ಯವಸ್ಥೆ. ಸೋವಿಯತ್ ಒಕ್ಕೂಟ ಕುಸಿತದ ನಂತರ ಕ್ರಮೇಣ ಯುರೋಪಿನ ಇತರೆ ದೇಶಗಳು ನ್ಯಾಟೋ ಸೇರಿದವು. ನ್ಯಾಟೋವಿನ ಪ್ರಭಾವ ಕ್ರಮೇಣ ಪೂರ್ವಕ್ಕೆ ಹರಡಿ, ರಷ್ಯಾವನ್ನು ಸಮೀಪಿಸುತ್ತಿತ್ತು. ಉಕ್ರೇನ್​ನಲ್ಲಿ ನಡೆದ 2014ರ ರಾಜಕೀಯ ಕ್ರಾಂತಿಯಿಂದಾಗಿ ಅದೂ ನ್ಯಾಟೋವನ್ನು ಸೇರುವ ಸಂಭವ ಹೆಚ್ಚಿತು. ಇದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ರಷ್ಯಾದ ಪ್ರಭಾವ ಕ್ಷೀಣಿಸುವುದು ಎಂದು ಅರಿತ ಪುಟಿನ್, ಹೇಗಾದರೂ ಇದನ್ನು ತಪ್ಪಿಸಬೇಕು ಎಂದು ಛಲ ತೊಟ್ಟಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಉಕ್ರೇನ್​ ಅನ್ನು ಬಲಹೀನಗೊಳಿಸಿ, ತನ್ನ ಹಿಡಿತದಲ್ಲಿ ಇಟ್ಟುಕೊಂಡು ರಷ್ಯಾದ ದಕ್ಷಿಣ ಗಡಿಯನ್ನು ರಕ್ಷಿಸಿಕೊಳ್ಳುವುದು, ಇದರ ಜೊತೆಗೆ ತನ್ನ ದೇಶದ ಸಾಮರ್ಥ್ಯವನ್ನು ಹೆಚ್ಚಿಸುವುದು ವ್ಲಾಡಿಮಿರ್ ಪುಟಿನ್ ಉದ್ದೇಶ ಹಾಗೂ ಗುರಿ ಎರಡೂ ಹೌದು.

(ಲೇಖಕರು – ಚಂದನ್ ಎಸ್., ಪ್ರಸ್ತುತ ಜರ್ಮನಿಯ ಡಾರ್ಮ್‌ಸ್ಟಾಡ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಇನ್ಫರ್ಮ್ಯಾಟಿಕ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದು, ಪ್ರಯಾಣ, ಇತಿಹಾಸ, ಸಾಹಿತ್ಯ ಇವರ ಹವ್ಯಾಸ ಆಗಿದೆ)

ಇದನ್ನೂ ಓದಿ: Breaking: ಉಕ್ರೇನ್ ಶಸ್ತ್ರಾಸ್ತ್ರ ತ್ಯಜಿಸಿದರೆ ಮಾತುಕತೆಗೆ ಸಿದ್ಧ: ರಷ್ಯಾ ವಿದೇಶಾಂಗ ಸಚಿವರ ಮಹತ್ವದ ಹೇಳಿಕೆ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್