ಮಧ್ಯಪ್ರದೇಶದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ; 6 ಕೊವಿಡ್ ರೋಗಿಗಳು ಸಾವು

|

Updated on: Apr 18, 2021 | 2:43 PM

Madhya Pradesh: ವೈದ್ಯಕೀಯ ಕಾಲೇಜಿನ ಕೊವಿಡ್ ತುರ್ತು ನಿಗಾ ಘಟಕ (ICU) ವಾರ್ಡ್ ನಲ್ಲಿ 62 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಇದರಲ್ಲಿ 6 ರೋಗಿಗಳಿಗೆ ಲಿಕ್ವಿಡ್ ಆಕ್ಸಿಜನ್ ಸಿಗದ ಕಾರಣ ಸಾವಿಗೀಡಾಗಿದ್ದಾರೆ.ಚಿಂತಾಜನಕ ಪರಿಸ್ಥಿತಿಯಲ್ಲಿದ್ದ ಇತರ ರೋಗಿಗಳು ಸುರಕ್ಷಿತರಾಗಿದ್ದಾರೆ ಎಂದು ಅಲ್ಲಿನ ಡೀನ್ ಡಾ.ಮಿಲಿಂದ್ ಶಿರಾಲ್ಕರ್ ಹೇಳಿದ್ದಾರೆ.

ಮಧ್ಯಪ್ರದೇಶದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ; 6 ಕೊವಿಡ್ ರೋಗಿಗಳು ಸಾವು
ಪ್ರಾತಿನಿಧಿಕ ಚಿತ್ರ
Follow us on

ಭೋಪಾಲ್: ಮಧ್ಯಪ್ರದೇಶದ ಶಾಹಡೊಲ್​ನಲ್ಲಿರುವ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯಿಂದ ಆರು ಕೊವಿಡ್ ರೋಗಿಗಳು ಸಾವಿಗೀಡಾಗಿದ್ದಾರೆ. ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಶನಿವಾರ ತಡರಾತ್ರಿ, ಭಾನುವಾರ ಮುಂಜಾನೆ ವೇಳೆ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವೈದ್ಯಕೀಯ ಕಾಲೇಜಿನ ಕೊವಿಡ್ ತುರ್ತು ನಿಗಾ ಘಟಕ (ICU) ವಾರ್ಡ್ ನಲ್ಲಿ 62 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಇದರಲ್ಲಿ 6 ರೋಗಿಗಳಿಗೆ ಲಿಕ್ವಿಡ್ ಆಕ್ಸಿಜನ್ ಸಿಗದ ಕಾರಣ ಸಾವಿಗೀಡಾಗಿದ್ದಾರೆ.ಚಿಂತಾಜನಕ ಪರಿಸ್ಥಿತಿಯಲ್ಲಿದ್ದ ಇತರ ರೋಗಿಗಳು ಸುರಕ್ಷಿತರಾಗಿದ್ದಾರೆ ಎಂದು ಅಲ್ಲಿನ ಡೀನ್ ಡಾ.ಮಿಲಿಂದ್ ಶಿರಾಲ್ಕರ್ ಹೇಳಿದ್ದಾರೆ. ಈ ಬಗ್ಗೆ ತನಿಖೆಗಾಗಿ ತಜ್ಞರನ್ನು ಕರೆದಿದ್ದು, ಸಾವಿನ ಕಾರಣ ಪತ್ತೆ ಹಚ್ಚಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಶನಿವಾರ ಸಂಜೆ ಆಸ್ಪತ್ರೆಯಲ್ಲಿ ಲಿಕ್ವಿಡ್ ಆಕ್ಸಿಜನ್ ಕೊರತೆ ಕಂಡು ಬಂದಿತ್ತು. ತಕ್ಷಣವೇ ಆಕ್ಸಿಜನ್ ಸರಬರಾಜು ಮಾಡುವವರನ್ನು ಸಂಪರ್ಕಿಸಿದ್ದೆವು. ಆದರೆ ವಾಹನ ತಡರಾತ್ರಿಯಾದರೂ ತಲುಪಲಿಲ್ಲ. ಹಾಗಾಗಿ ರೋಗಿಗಳಿಗೆ ನೀಡುವ ಆಕ್ಸಿಜನ್ ಪ್ರಮಾಣವೂ ಕಡಿಮೆ ಆಯತು ಎಂದು ಶಿರಾಲ್ಕರ್ ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಇಲ್ಲಿ ಆಮ್ಲಜನಕದ ಪೂರೈಕೆ ಕೊರತೆ ಇತ್ತು. ಆಸ್ಪತ್ರೆಯ ಆವರಣದಲ್ಲಿರುವ ಆಮ್ಲಜನಕ ಘಟಕದಲ್ಲಿ ಪ್ರತಿದಿನ 10 ಕೆಜಿ ಲೀಟರ್ ಸಂಗ್ರಹ ಸಾಮರ್ಥ್ಯವಿದ್ದು, ಲಿಕ್ವಿಡ್ ಆಕ್ಸಿಜನ್​ನ್ನು ಇತರ ರಾಜ್ಯಗಳಿಂದ ತರುತ್ತಿದ್ದೇವೆ. ಆಸ್ಪತ್ರೆಯಲ್ಲಿ 62 ಐಸಿಯು ಬೆಡ್ ಗಳಿದ್ದು ಗಂಭೀರ ಪರಿಸ್ಥಿತಿಯಲ್ಲಿರುವ ಕೊವಿಡ್ ರೋಗಿಗಳನ್ನು ಇಲ್ಲಿ ದಾಖಲಿಸಲಾಗುತ್ತದೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆದಾಗ್ಯೂ, ರಾಜ್ಯದಲ್ಲಿ ಎಷ್ಟು ಕಾಲ ಜನರು ಆಕ್ಸಿಜನ್ ಸಿಗದೆ ಸಾಯುತ್ತಿರಬೇಕು ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಕಮಲ್​ ನಾಥ್ ಅವರು ಪ್ರಶ್ನಿಸಿದ್ದಾರೆ.

ಶಾಹಡೊಲ್ನಲ್ಲಿ ಆಮ್ಲಜನಕದ ಕೊರತೆಯಂದ ಜನರು ಸತ್ತಿದ್ದಾರೆ ಎಂಬ ದುಃಖದ ಸುದ್ದಿಯೊಂದು ಕೇಳಿ ಬಂತು. ಭೋಪಾಲ್, ಇಂದೋರ್, ಉಜ್ಜೈನ್, ಸಾಗರ್, ಜಬಲ್ ಪುರ್, ಖಾಂದ್ವಾ, ಖರಗೋನ್​ನಲ್ಲಿ ಆಮ್ಲಜನಕದ ಕೊರತೆಯಿಂದ ಜನರು ಸಾವಿಗೀಡಾದ ನಂತರವೂ ಸರ್ಕಾರ ಯಾಕೆ ಎಚ್ಚೆತ್ತುಗೊಂಡಿಲ್ಲ? ಎಷ್ಟು ಕಾಲ ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿಂದ ಜನರು ಸಾಯುತ್ತಿರಬೇಕು ಎಂದು ಕಮಲ್ ನಾಥ್ ಟ್ವೀಟ್ ಮಾಡಿದ್ದಾರೆ.


ಪ್ರಸ್ತುತ ಪರಿಸ್ಥಿತಿ ಭಯಾನಕ ಎಂದು ಹೇಳಿದ ಕಮಲ್ ನಾಥ್, ಕೊರೊನಾವೈರಸ್ ಚಿಕಿತ್ಸೆಗೆ ಬಳಸುವ ರೆಮ್‌ಡಿಸಿವಿರ್ ಇಂಜೆಕ್ಷನ್ ಕೊರತೆ ಇದೆ. ವೈರಸ್ ನಿಯಂತ್ರಣ ಲಸಿಕೆ ಮತ್ತು ಆಮ್ಲಜನಕ ಸರ್ಕಾರದ ಕಡತಗಳಲ್ಲಿ ಮಾತ್ರ ಇದೆ, ವಾಸ್ತವದಲ್ಲಿ ಇಲ್ಲ ಎಂದಿದ್ದಾರೆ. ಶಾಹಡೊಲ್ ಪ್ರಕರಣ ಬಗ್ಗೆ ಸರ್ಕಾರ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ರಾಜ್ಯ ಸರ್ಕಾರದ ಹೆಲ್ತ್ ಬುಲೆಟಿನ್ ಪ್ರಕಾರ ಶನಿವಾರ ಶಾಹಡೊಲ್​ನಲ್ಲಿ 142 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು ಪ್ರಕರಣಗಳ ಸಂಖ್ಯೆ 4,528ಕ್ಕೇರಿದೆ. ಶನಿವಾರದವರೆಗೆ ಪ್ರಸ್ತುತ ಜಿಲ್ಲೆಯಲ್ಲಿ 38 ರೋಗಿಗಳು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ವೈದ್ಯಕೀಯ ಆಮ್ಲಜನಕ ವ್ಯರ್ಥ ಮಾಡಬೇಡಿ: ರಾಜ್ಯ ಸರ್ಕಾರಗಳಿಗೆ ಕೇಂದ್ರದ ಸೂಚನೆ

ಆಮ್ಲಜನಕ ಕೊರತೆ ಆರೋಪ; ಕೊರೊನಾ ಸೋಂಕಿತ 7 ಜನರ ಸಾವು, ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ

(Due to low pressure in medical oxygen six Covid19 Patients died in the ICU of Government Hospital in Madhya Pradesh Shahdol)