ಮುಂಬೈ ಪೊಲೀಸರಿಂದ ರೆಮ್​ಡಿಸಿವರ್ ಪೂರೈಕೆ ಮಾಡುವ ಬ್ರಕ್ ಫಾರ್ಮಾ ಅಧಿಕಾರಿಗಳ ವಿಚಾರಣೆ : ಬಿಜೆಪಿ ಆಕ್ಷೇಪ

ಮುಂಬೈ ಪೊಲೀಸರಿಂದ ರೆಮ್​ಡಿಸಿವರ್ ಪೂರೈಕೆ ಮಾಡುವ ಬ್ರಕ್ ಫಾರ್ಮಾ ಅಧಿಕಾರಿಗಳ ವಿಚಾರಣೆ : ಬಿಜೆಪಿ ಆಕ್ಷೇಪ
ದೇವೇಂದ್ರ ಫಡಣವಿಸ್

Bruck Pharma: ದಮನ್ ಮೂಲದ ಬ್ರಕ್ ಫಾರ್ಮಾ ಪ್ರೈವೇಟ್ ಲಿಮಿಟೆಡ್ ಔಷಧ ಪೂರೈಕೆ ಕಂಪನಿ ಅಧಿಕ ಪ್ರಮಾಣದಲ್ಲಿ ರೆಮ್​ಡಿಸಿವರ್ ಸಂಗ್ರಹ ಮಾಡಿದೆ ಎಂಬ ಆರೋಪದ ಮೇರೆಗೆ ಮುಂಬೈಯ ವಿಲೆ ಪಾರ್ಲೆ ಪೊಲೀಸರು ಕಂಪನಿಯ ಅಧಿಕಾರಿಗಳನ್ನು ಶನಿವಾರ ವಶಕ್ಕೆ ಪಡೆದುಕೊಂಡಿದ್ದರು.

Rashmi Kallakatta

|

Apr 18, 2021 | 4:53 PM

ಮುಂಬೈ: ಕೊವಿಡ್ ಚಿಕಿತ್ಸೆಗಾಗಿ ಬಳಸುವ ರೆಮ್​ಡಿಸಿವರ್ ಪೂರೈಕೆ ಮಾಡುವ ದಮನ್ ಮೂಲದ ಬ್ರಕ್ ಫಾರ್ಮಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕರನ್ನು ಶನಿವಾರ ಮುಂಬೈ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಸ್ತುತ  ಕಂಪನಿ ಅಧಿಕ ಪ್ರಮಾಣದಲ್ಲಿ ರೆಮ್​ಡಿಸಿವರ್ ಸಂಗ್ರಹ ಮಾಡಿದೆ ಎಂಬ ಆರೋಪದ ಮೇರೆಗೆ ಮುಂಬೈಯ ವಿಲೆ ಪಾರ್ಲೆ ಪೊಲೀಸರು ಕಂಪನಿಯ ಅಧಿಕಾರಿಗಳನ್ನು ಶನಿವಾರ ವಶಕ್ಕೆ ಪಡೆದುಕೊಂಡಿದ್ದರು.

ಕೊರೊನಾವೈರಸ್ ಚಿಕಿತ್ಸೆಗೆ ಬಳಸುವ ಔಷಧಿಯ ಕೊರತೆ ಇದೆ ಎಂದು ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ಹೇಳುತ್ತಲೇ ಇದೆ. ದೇಶದಲ್ಲಿ ಔಷಧಿಯ ಕೊರತೆ ಇರುವಾಗ ವಿದೇಶಕ್ಕೆ ಔಷಧಿ ರಫ್ತು ಮಾಡುವುದನ್ನು ಸರ್ಕಾರ ನಿಷೇಧಿಸಿರುವ ಹೊತ್ತಲ್ಲಿ ಬ್ರಕ್ ಫಾರ್ಮಾ, ಅಧಿಕ ಪ್ರಮಾಣದಲ್ಲಿ ಔಷಧಿಯನ್ನು ವಿದೇಶಕ್ಕೆ ರಫ್ತು ಮಾಡುವುದಕ್ಕಾಗಿ ಸಂಗ್ರಹಿಸಿತ್ತು ಎಂದು ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

ಬ್ರಕ್ ಫಾರ್ಮಾ ನಿರ್ದೇಶಕರನ್ನು ಮುಂಬೈ ಪೊಲೀಸರು ವಶ ಪಡಿಸಿಕೊಂಡಿರುವ ಸುದ್ದಿ ತಿಳಿದ ಕೂಡಲೇ ಬಿಜೆಪಿ ನಾಯಕ ದೇವೇಂದ್ರ ಫಡಣವಿಸ್ ಮತ್ತು ಪ್ರವೇಣ್ ದಾರೇಕರ್ ವಿಲೆ ಪಾರ್ಲೆ ಪೊಲೀಸ್ ಠಾಣೆಗೆ ಧಾವಿಸಿದ್ದು 45 ನಿಮಿಷದಲ್ಲೇ  ಅಧಿಕಾರಿಗಳಿಗೆ ಪೊಲೀಸ್ ಠಾಣೆಯಿಂದ ಹೋಗಲು ಪೊಲೀಸರು ಅನುಮತಿ ನೀಡಿದ್ದಾರೆ. ನಾಲ್ಕು ದಿನಗಳ ಹಿಂದೆ ದರೇಕರ್ ಮತ್ತು ಇನ್ನೊಬ್ಬ ಬಿಜೆಪಿ ನಾಯಕ ಪ್ರಸಾದ್ ಲಾಲ್ ಅವರು ದಮನ್​ಗೆ ತೆರಳಿ ಮಹಾರಾಷ್ಟ್ರಕ್ಕೆ ರೆಮ್​ಡಿಸಿವರ್​ ಪೂರೈಸುವಂತೆ ಕೇಳಿಕೊಂಡಿದ್ದರು. ಸರ್ಕಾರದ ಅನುಮತಿ ಇಲ್ಲದೆ ಅವರು ಔಷಧಿ ಪೂರೈಕೆ ಮಾಡುವುದಿಲ್ಲ. ಹಾಗಾಗಿ ನಾನು ಕೇಂದ್ರ ಸಚಿವ ಮನಸುಖ್ ಮಾಂಡವ್ಯ ಅವರಲ್ಲಿ ಮಾತನಾಡಿ ಅನುಮತಿಗೆ ಬೇಕಾದ ಎಲ್ಲ ಸಿದ್ಧತೆಯನ್ನು ಮಾಡಿದೆ ಎಂದು ಫಡಣವಿಸ್ ಹೇಳಿದ್ದಾರೆ.

ರಾಜ್ಯ ಸರ್ಕಾರದ ಮೂಲಕವೇ ಔಷಧಿಯನ್ನು ವಿತರಣೆ ಮಾಡಬೇಕು ಎಂದ ಬಿಜೆಪಿ ಬಯಸಿತ್ತು ಎಂದು ದರೇಕರ್ ಹೇಳಿರುವುದಾಗಿ ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ. ಇದರ ಪೂರ್ತಿ ವೆಚ್ಚ ₹4.75 ಕೋಟಿಯನ್ನು ನಾವೇ ಭರಿಸಲು ನಿರ್ಧರಿಸಿದ್ದೆವು. ಫಡಣವಿಸ್ ಅವರು ರೆಮ್​ಡಿಸಿವರ್ ಸಂಗ್ರಹವನ್ನು ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರಿಗೆ ಹಸ್ತಾಂತರಿಸಲಿದ್ದರು.ಈ ಬಗ್ಗೆ ಬಿಜೆಪಿ ಮಹಾರಾಷ್ಟ್ರದ ಆರೋಗ್ಯ ಮತ್ತು ಔಷಧಿ ಆಡಳಿತ ಸಚಿವ ರಾಜೇಂದ್ರ ಶಿಂಗ್ಣೆ ಅವರಿಗೂ ತಿಳಿಸಿದ್ದೆವು ಎಂದು ದರೇಕರ್ ಹೇಳಿದ್ದಾರೆ.

ತುರ್ತು ಬಳಕೆ ಔಷಧಿಯನ್ನು ಕೈವಶವಿರಿಸಿಕೊಂಡಿದ್ದಕ್ಕೆ ಫಡಣವಿಸ್ ವಿರುದ್ಧ  ಶಿವ ಸೇನೆಯ ಸಂಸದೆ ಪ್ರಿಯಾಂಕಾ ಚತುರ್ವೇದಿ, ಮಹಾರಾಷ್ಟ್ರ ಸರ್ಕಾರದ ಮೈತ್ರಿ ಪಕ್ಷಗಳಾದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಟೀಕಾ ಪ್ರಹಾರ ಮಾಡಿದೆ. ತಮ್ಮ ಕೀಳು ಮಟ್ಟದ ರಾಜಕೀಯಕ್ಕಾಗಿ ಮಹಾರಾಷ್ಟ್ರದ ಜನರ ಬೆನ್ನಿಗೆ ಚೂರಿ ಹಾಕುತ್ತಿರುವುದಲ್ಲದೆ ಮತ್ತೇನು?. ವಿಪಕ್ಷ ನೇತಾರರು ರಹಸ್ಯವಾಗಿ ತುರ್ತು ಔಷಧಿಯನ್ನು ಸಂಗ್ರಹಿಸಿಟ್ಟಿದ್ದಾರೆ. ಇದನ್ನು ಪೊಲೀಸರು ಮುಟ್ಟುಗೋಲು ಹಾಕಿದಾಗ ಜಗಳಕ್ಕೆ ನಿಂತಿದ್ದಾರೆ. ಮಿ. ಫಡಣವಿಸ್ ನಾಚಿಕೆಗೇಡು ಇದು. ನಿಮ್ಮ ಮಧ್ಯರಾತ್ರಿಯ ಹಗರಣ ಈ ಹಿಂದೆಯೂ ಬಯಲಾಗಿತ್ತು. ಈಗ ಮತ್ತೊಮ್ಮೆ ಬಯಲಾಗಿದೆ ಎಂದು ಚತುರ್ವೇದಿ ಟ್ವೀಟ್ ಮಾಡಿದ್ದಾರೆ.

10 ಪೊಲೀಸ್ ಅಧಿಕಾರಿಗಳು ಬ್ರಕ್ ಫಾರ್ಮಾದ ಅಧಿಕಾರಿಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ನಾವು ಅನುಮತಿ ಪತ್ರವನ್ನು ಪೊಲೀಸರಿಗೆ ತೋರಿಸಿದೆವು ಎಂದು ಫಡಣವಿಸ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ. ನಮಗೆ ಈ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಪೊಲೀಸ್ ಉಪ ಆಯುಕ್ತ ಮಂಜುನಾಥ್ ಸಿಂಗೆ ಹೇಳಿದ್ದಾರೆ.

ಬ್ರಕ್ ಫಾರ್ಮಾ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂಬುದನ್ನು ಪೊಲೀಸ್ ಅಧಿಕಾರಿ ನಿರಾಕರಿಸಿದ್ದಾರೆ. ಔಷಧಿ ಕಳ್ಳ ದಂಧೆ ವ್ಯಾಪಕವಾಗಿರುವ ಹೊತ್ತಲ್ಲಿ ವಿಚಾರಣೆಗಾಗಿ ಅಧಿಕಾರಿಗಳನ್ನು ಕರೆಸಿಕೊಂಡಿದ್ದೆವು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಕಳೆದ ವಾರ ದೇಶದಲ್ಲಿ ಕೊರೊನಾವೈರಸ್ ಪ್ರಕರಣಗಳ ಉಲ್ಬಣದ ಮಧ್ಯೆ ರೆಮ್​ಡಿಸಿವರ್ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಅದರ ಬೆಲೆಯನ್ನು ಕಡಿಮೆ ಮಾಡಲು ಕೇಂದ್ರವು ನಿರ್ಧರಿಸಿತ್ತು.

ಇದನ್ನೂ ಓದಿ: ರೈಲುಗಳ ಮೂಲಕ ವೈದ್ಯಕೀಯ ಆಕ್ಸಿಜನ್​ ಸಾಗಣೆಗೆ ಅವಕಾಶ ಕೊಡಿ; ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರ ಸರ್ಕಾರದ ಮನವಿ

Explainer: ಭಾರತದಲ್ಲಿ ಕೊವಿಡ್​ ಲಸಿಕೆ ಕೊರತೆ: ನಮ್ಮ ಸರ್ಕಾರ ಎಡವಿದ್ದು ಎಲ್ಲಿ? ಏನು ಪರಿಹಾರ?

(Political Battle broke out in Maharashtra over Devendra Fadnavis intervention as Mumbai Police query Bruck Pharma Executive)

Follow us on

Related Stories

Most Read Stories

Click on your DTH Provider to Add TV9 Kannada