ರೆಮ್‌ಡೆಸಿವಿರ್ ಚುಚ್ಚುಮದ್ದಿನ ಉತ್ಪಾದನೆ ಹೆಚ್ಚಳ; ಬೆಲೆ ಇಳಿಕೆಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ
ಮುಂದಿನ ದಿನಗಳಲ್ಲಿ ರೆಮ್ಡಿಸಿವರ್ ಇಂಜೆಕ್ಷನ್ ಬೆಲೆಯನ್ನು ₹3,500ಕ್ಕಿಂತ ಕಡಿಮೆ ಬೆಲೆಗೆ ನೀಡಲು ನಿರ್ಧರಿಸಲಾಗಿದೆ. ಉತ್ಪಾದನೆಯನ್ನು ಹೆಚ್ಚಿಸಿ ಬೆಲೆ ಇಳಿಸಲು ಸರ್ಕಾರ ನಿರ್ಧರಿಸಿದೆ.
ದೆಹಲಿ: ಕೊವಿಡ್ ಸೋಂಕಿತರ ಚಿಕಿತ್ಸೆಗೆ ಬಳಸುವ ರೆಮ್‌ಡೆಸಿವಿರ್ ಇಂಜೆಕ್ಷನ್ ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸದ್ಯ ದೇಶದಲ್ಲಿ ತಿಂಗಳಿಗೆ 38.8 ಲಕ್ಷ ರೆಮ್‌ಡೆಸಿವಿರ್ ಇಂಜೆಕ್ಷನ್ ಉತ್ಪಾದನೆಯಾಗುತ್ತಿದ್ದು, ಹೊಸದಾಗಿ 6 ಲಸಿಕೆ ಉತ್ಪಾದನಾ ಕಂಪನಿಗಳಿಂದ ತಿಂಗಳಿಗೆ 10 ಲಕ್ಷ ವಯಲ್ ಲಸಿಕೆ ಉತ್ಪಾದನೆಗೆ ಅನುಮತಿ ನೀಡಲಾಗಿದೆ. ಈ ಮೂಲಕ ಭಾರತದಲ್ಲಿ ರೆಮ್‌ಡೆಸಿವಿರ್ ಇಂಜೆಕ್ಷನ್ ಉತ್ಪಾದನೆಯನ್ನು ಹೆಚ್ಚಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.
ಅಷ್ಟೇ ಅಲ್ಲದೇ ರೆಮ್‌ಡೆಸಿವಿರ್ ಇಂಜೆಕ್ಷನ್ನ ಬೆಲೆಯನ್ನು ಕಡಿಮೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ರೆಮ್‌ಡೆಸಿವಿರ್ ಇಂಜೆಕ್ಷನ್ ಬೆಲೆಯನ್ನು ₹3,500ಕ್ಕಿಂತ ಕಡಿಮೆ ಬೆಲೆಗೆ ನೀಡಲು ನಿರ್ಧರಿಸಲಾಗಿದೆ. ಉತ್ಪಾದನೆಯನ್ನು ಹೆಚ್ಚಿಸಿ ಬೆಲೆ ಇಳಿಸಲು ಸರ್ಕಾರ ನಿರ್ಧರಿಸಿದೆ. ಇಂಜಕ್ಷನ್ ಉತ್ಪಾದಿಸುವ ಕಂಪೆನಿಗಳು ಸ್ವಪ್ರೇರಣೆಯಿಂದ ಬೆಲೆ ಇಳಿಕೆಗೆ ಮುಂದಾಗಿವೆ ಎನ್ನಲಾಗಿದೆ. ಈ ವಾರಾಂತ್ಯದಿಂದಲೇ ರೆಮ್‌ಡೆಸಿವಿರ್ ಇಂಜೆಕ್ಷನ್ನ ಬೆಲೆ ಕಡಿಮೆಯಾಗುವ ಸಾಧ್ಯತೆಯಿದೆ.
ಕೊರೊನಾ ಸೋಂಕು ನಿಯಂತ್ರಣಕ್ಕೆ ಪ್ರಯತ್ನಿಸುತ್ತಿರುವ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಲಸಿಕೆ ಬಳಕೆ ಬಗ್ಗೆ ಹೆಚ್ಚು ಗಮನ ಹರಿಸುತ್ತಿವೆ. ಕೊರೊನಾ ಎರಡನೇ ಅಲೆ ಸೋಂಕಿನಿಂದ ಜನರನ್ನು ಪಾರು ಮಾಡಲು ಲಸಿಕೆಯೂ ಒಂದು ಪ್ರಮುಖ ಅಸ್ತ್ರವಾಗಿದ್ದು, ಲಸಿಕೆ ಪಡೆದವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರಲಿದೆ ಹಾಗೂ ವೈರಾಣುವಿನಿಂದ ಉಂಟಾಗಬಹುದಾದ ಅಡ್ಡಪರಿಣಾಮಗಳೂ ಕಡಿಮೆಯಾಗಲಿದೆ ಎಂಬ ಅಭಿಪ್ರಾಯಗಳನ್ನು ಅನೇಕ ತಜ್ಞರು ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ, ರೆಮ್‌ಡೆಸಿವಿರ್ ಔಷಧ ಬಳಕೆ ಬಗ್ಗೆಯೂ ಮಾತುಗಳು ಕೇಳಿಬರುತ್ತಿದ್ದು, ಇದನ್ನು ಬಳಸುವುದರಿಂದ ಸೋಂಕಿತರು ಉಸಿರಾಟದ ಸಮಸ್ಯೆಗೆ ತುತ್ತಾಗುವುದನ್ನು ತಪ್ಪಿಸಬಹುದು ಎಂಬ ಅಭಿಪ್ರಾಯವಿದೆ. ಆದರೆ, ಈ ಬಗ್ಗೆ ಎಚ್ಚರಿಕೆ ನೀಡಿರುವ ನೀತಿ ಆಯೋಗದ ಸದಸ್ಯ ಡಾಕ್ಟರ್ ವಿ.ಕೆ.ಪೌಲ್, ರೆಮ್‌ಡೆಸಿವಿರ್ ಔಷಧವನ್ನು ಮನೆಯಲ್ಲೇ ತೆಗೆದುಕೊಳ್ಳಬಾರದು ಎಂದು ಹೇಳಿದ್ದಾರೆ.
ರೆಮ್‌ಡೆಸಿವಿರ್ ಔಷಧವನ್ನು ಆಕ್ಸಿಜನ್ ಸಪೋರ್ಟ್‌ನಲ್ಲಿರುವ ಸೋಂಕಿತರಿಗೆ ಬಳಸಬೇಕು. ಅದೊಂದು ಪ್ರಯೋಗಾತ್ಮಕ ಔಷಧಿಯಾಗಿದ್ದು, ಸೋಂಕಿತರು ತಾವಾಗಿಯೇ ಖರೀದಿಸಿ ಮನೆಯಲ್ಲಿ ಬಳಕೆ ಮಾಡಲು ಮುಂದಾಗಕೂಡದು. ಕೊರೊನಾ ಸೋಂಕಿತರು ಮೆಡಿಕಲ್ ಸ್ಟೋರ್, ಔಷಧ ಉತ್ಪಾದನಾ ಕಂಪನಿಯಿಂದ ರೆಮ್‌ಡೆಸಿವಿರ್ ಕೊಂಡು ಸ್ವತಃ ಬಳಕೆ ಮಾಡಬಾರದು ಎಂದು ತಿಳಿಸಿದ್ದಾರೆ. ಅದೇನಿದ್ದರೂ ಆಸ್ಪತ್ರೆಯಲ್ಲಿ ಕೃತಕ ಉಸಿರಾಟದ ಸಹಾಯ ಪಡೆದ ರೋಗಿಗಳಿಗೆ ಬಳಸಬಹುದು. ಅದರ ಹೊರತಾಗಿ ಜನ ಸಾಮಾನ್ಯರು ಸ್ವಂತ ಉಪಯೋಗಕ್ಕಾಗಿ ಕೊಳ್ಳುವುದು ಸೂಕ್ತ ಅಲ್ಲವೇ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ 11,265 ಮಂದಿಗೆ ಕೊರೊನಾ ಸೋಂಕು, 38 ಜನರ ಸಾವು
Covid India Update: ಭಾರತದಲ್ಲಿ ಒಂದೇ ದಿನ 1027 ಮಂದಿ ಸಾವು; 1.84 ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ
(Production of Remdesivir injection will increased in India price to less than 3,500 Rs)