Covid India Update: ಭಾರತದಲ್ಲಿ ಒಂದೇ ದಿನ 1027 ಮಂದಿ ಸಾವು; 1.84 ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ
Covid 19 in India: ಕಳೆದ 24ಗಂಟೆಗಳಲ್ಲಿ ದೇಶದಲ್ಲಿ ಕೊವಿಡ್ನಿಂದ ಸಾವಿಗೀಡಾದವರ ಸಂಖ್ಯೆ 1,027 ಆಗಿದ್ದು, ಒಟ್ಟು ಸಾವಿನ ಸಂಖ್ಯೆ 1,72,085ಕ್ಕೆ ತಲುಪಿದೆ. ಅದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ 13,65,704 ಆಗಿದ್ದು 1,23,36,036 ಮಂದಿ ಚೇತರಿಸಿಕೊಂಡಿದ್ದಾರೆ.
ದೆಹಲಿ: ಭಾರತದಲ್ಲಿ ಮಂಗಳವಾರ 1,84,372 (1.84 ಲಕ್ಷ) ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,38,73,825 (1.38 ಕೋಟಿ)ಗೆ ಏರಿಕೆ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೊವಿಡ್ನಿಂದ ಸಾವಿಗೀಡಾದವರ ಸಂಖ್ಯೆ 1,027 ಆಗಿದ್ದು, ಒಟ್ಟು ಸಾವಿನ ಸಂಖ್ಯೆ 1,72,085ಕ್ಕೆ ತಲುಪಿದೆ. ಅದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ 13,65,704 ಆಗಿದ್ದು 1,23,36,036 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ 11,11,79,578 ಮಂದಿ ಕೊವಿಡ್ ಲಸಿಕೆ ಪಡೆದಿದ್ದಾರೆ.
ಮಹಾರಾಷ್ಟ್ರದಲ್ಲಿ ಜನತಾ ಕರ್ಫ್ಯೂ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಸೋಂಕು ನಿಯಂತ್ರಣಕ್ಕಾಗಿ ಜನತಾ ಕರ್ಫ್ಯೂ ಜಾರಿಯಾಗಿದೆ. ಈ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ‘ರಾಜ್ಯದಲ್ಲಿ ನಾಳೆ ರಾತ್ರಿ 8 ಗಂಟೆಯಿಂದ ಬ್ರೇಕ್ ದಿ ಚೈನ್ ಅಭಿಯಾನ’ ಅರಂಭವಾಗಲಿದೆ ಎಂದು ಘೋಷಿಸಿದರು.
‘ಬುಧವಾರದಿಂದ 15 ದಿನಗಳವರೆಗೆ ಸಿಆರ್ಪಿಸಿ 144ರ ಕಲಂ ಅನ್ವಯ ಜನರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗುವುದು. ಅನಗತ್ಯವಾಗಿ ಯಾರೂ ಸಹ ಮನೆಯಿಂದ ಹೊರಬರುವಂತಿಲ್ಲ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇತರೆಲ್ಲ ಸೇವೆಗಳು ಬಂದ್ ಆಗಲಿವೆ. ಮಹಾರಾಷ್ಟ್ರದಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ ಜಾರಿಯಾಗಲಿದೆ. ಸಾರಿಗೆ ಸೇವೆಗಳು ಎಂದಿನಂತೆ ಇರಲಿವೆ. ಇ ಕಾಮರ್ಸ್ ಸೇವೆ, ಪೆಟ್ರೋಲ್ ಬಂಕ್‌ಗಳು ತೆರೆದಿರುತ್ತವೆ’
‘ಹೋಟೆಲ್, ರೆಸ್ಟೋರೆಂಟ್ಗಳನ್ನು ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ. ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಪಾರ್ಸೆಲ್ಗೆ ಮಾತ್ರ ಅವಕಾಶ ಇರಲಿದೆ. ಮಹಾರಾಷ್ಟ್ರದಲ್ಲಿ ಪಡಿತರ ಚೀಟಿ ಇರುವವರಿಗೆ ಉಚಿತ ರೇಷನ್ ನೀಡಲು ಸರ್ಕಾರ ನಿರ್ಧರಿಸಲಿದೆ. ಮುಂದಿನ 3 ತಿಂಗಳವರೆಗೆ ಉಚಿತ ರೇಷನ್ ನೀಡುತ್ತೇವೆ. ಆದಿವಾಸಿಗಳಿಗೆ ₹ 2 ಸಾವಿರ, ಕಾರ್ಮಿಕರಿಗೆ ₹ 1500 ಧನಸಹಾಯ ನೀಡಲಾಗುವುದು’
‘ಮಹಾರಾಷ್ಟ್ರದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಪರಿಸ್ಥಿತಿ ಬಹಳ ಗಂಭೀರವಾಗಿದ್ದು ಪರೀಕ್ಷೆ ಮುಂದೂಡಲಾಗಿದೆ. ರಾಜ್ಯ ಸರ್ಕಾರ ಮಾಡಿಕೊಂಡಿರುವ ಸಿದ್ಧತೆ, ರೂಪಿಸಿರುವ ವ್ಯವಸ್ಥೆಗಳು ಸಾಲುತ್ತಿಲ್ಲ. ಕೊರೊನಾ ಸೋಂಕಿತರ ಚಿಕಿತ್ಸೆಗೆ ಅತ್ಯಗತ್ಯವಾಗಿ ಬೇಕಾದ ರೆಮ್‌ಡಿಸಿವಿರ್ ಔಷಧ ಈಗ ರಾಜ್ಯದಲ್ಲಿ ಮತ್ತೆ ಸಿಗಲು ಆರಂಭವಾಗಿದೆ. ಕೇಂದ್ರ ಸರ್ಕಾರದ ಬಳಿ ಆಕ್ಸಿಜನ್‌ಗೆ ಮನವಿ ಮಾಡಿದ್ದೇವೆ. ಇತರ ರಾಜ್ಯಗಳಿಂದಲೂ ಆಕ್ಸಿಜನ್ ತರಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ. ಕೊವಿಡ್ 19 ವಿರುದ್ಧದ ಯುದ್ಧ ಮತ್ತೆ ಆರಂಭವಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಹಾಗಾಗಿಯೇ ಲಾಕ್ ಡೌನ್ ರೀತಿಯ ನಿರ್ಬಂಧಗಳನ್ನು ನಾವು ಹೇರುತ್ತಿದ್ದೇವೆ. ಇದನ್ನು ಜನತಾ ಕರ್ಫ್ಯೂನಂತೆ ಪಾಲಿಸಿ ಎಂದು ನಾನು ರಾಜ್ಯದ ಜನರಲ್ಲಿ ವಿನಂತಿಸುತ್ತಿದ್ದೇನೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ
7.8 ಕೋಟಿ ಬಡವರಿಗೆ 5.5 ಕೋಟಿ ಪ್ಯಾಕೇಜ್ ಘೋಷಣೆ
ಮಹಾರಾಷ್ಟ್ರದಲ್ಲಿರುವ ದಿನಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬುಡಕಟ್ಟು ಜನಾಂಗದವರು, ರಸ್ತೆ ಬದಿ ವ್ಯಾಪಾರಿಗಳು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬ, ಹಿರಿಯ ನಾಗರಿಕರು ಮತ್ತು ವಿಧವೆಯರು ಸೇರಿದಂತೆ 7.8 ಕೋಟಿ ಬಡವರಿಗೆ 5,476 ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ ಠಾಕ್ರೆ.
ಏತನ್ಮಧ್ಯೆ ಮಹಾರಾಷ್ಟ್ರದಲ್ಲಿ 15 ದಿನಗಳ ಕರ್ಫ್ಯೂ ಘೋಷಿಸಿದ್ದೇ ತಡ ಮುಂಬೈನಲ್ಲಿದ್ದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ಸಿದ್ಧತೆ ನಡೆಸಿದ್ದಾರೆ. ಮಂಗಳವಾರ ಕರ್ಫ್ಯೂ ಘೋಷಣೆಯಾದ ಕೆಲವೇ ಹೊತ್ತಿನಲ್ಲಿ ಛತ್ರಪತಿ ಶಿವಾಜಿ ಟರ್ಮಿನಸ್ (CSMT) ರೈಲುದಾಣದಲ್ಲಿ ವಲಸೆ ಕಾರ್ಮಿಕರ ದಂಡೇ ಕಂಡು ಬಂದಿತ್ತು.
India reports 1,84,372 new #COVID19 cases, 82,339 discharges and 1,027 deaths in the last 24 hours, as per Union Health Ministry
Total cases: 1,38,73,825 Total recoveries: 1,23,36,036 Active cases: 13,65,704 Death toll: 1,72,085
Total vaccination: 11,11,79,578 pic.twitter.com/8fiNUNDp6W
— ANI (@ANI) April 14, 2021
ಶೇಕಡಾ 61 ಮಾದರಿಗಳಲ್ಲಿ ಡಬಲ್ ಮ್ಯೂಟೆಂಟ್ ಮಹಾರಾಷ್ಟ್ರಗಳಲ್ಲಿ ಜನವರಿ- ಮಾರ್ಚ್ ಅವಧಿಯಲ್ಲಿ ಕೊವಿಡ್ ಪರೀಕ್ಷೆಗಾಗಿ ಸಂಗ್ರಹಿಸಿದ ಮಾದರಿಗಳ ಪೈಕಿ ಶೇ 61 ಮಾದರಿಗಳಲ್ಲಿ ಡಬಲ್ ಮ್ಯೂಟೆಂಟ್ (ಡಬಲ್ ರೂಪಾಂತರಿ) ವೈರಾಣು ಪತ್ತೆಯಾಗಿರುವುದಾಗಿ ಪುಣೆಯ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ವೈರಾಲಜಿ (NIV) ಹೇಳಿದೆ. ಈ ಅವಧಿಯಲ್ಲಿ 361 ಕೊವಿಡ್ ಮಾದರಿಗಳನ್ನು ಸಂಗ್ರಹಿಸಿದ್ದು ಇದರಲ್ಲಿ 220 ಮಾದರಿಗಳಲ್ಲಿ E484Q ಮತ್ತು L452R ಎಂಬ ಡಬಲ್ ಮ್ಯೂಟೆಂಟ್ ಕಂಡು ಬಂದಿದೆ. ಈ ವೈರಾಣುಗಳು B.1.617 ಎಂಬ ವರ್ಗಕ್ಕೆ ಸೇರಿದವುಗಳಾಗಿವೆ.
ಮಹಾರಾಷ್ಟ್ರದಲ್ಲಿ ಶೇ 15-20 ಮಾದರಿಗಳಲ್ಲಿ ಡಬಲ್ ಮ್ಯೂಟೆಂಟ್ ಪತ್ತೆಯಾಗಿದೆ ಎಂದು ಕೇಂದ್ರ ಸರ್ಕಾರ ಮಾರ್ಚ್ 24ರಂದು ಹೇಳಿತ್ತು. ಆದರೆ ರಾಜ್ಯದಲ್ಲಿ ಕೊವಿಡ್ ಪ್ರಕರಣ ಏರಿಕೆಗೆ ರೂಪಾಂತರಿ ವೈರಸ್ ಕಾರಣ ಎಂದು ಹೇಳಿರಲಿಲ್ಲ. ಮಹಾರಾಷ್ಟ್ರದಲ್ಲಿ ಪ್ರತಿದಿನ 50,000ಕ್ಕಿಂತಲೂ ಹೆಚ್ಚು ಹೊಸ ಕೊವಿಡ್ ಪ್ರಕರಣಗಳು ವರದಿ ಯಗುತ್ತಿದ್ದು 5.64 ಸಕ್ರಿಯ ಪ್ರಕರಣಗಳಿವೆ.
ದೆಹಲಿಯಲ್ಲಿ ಗರಿಷ್ಠ ಪ್ರಕರಣ ಪತ್ತೆ ದೆಹಲಿಯಲ್ಲಿ ಮಂಗಳವಾರ ಅತೀ ಹೆಚ್ಚು ಕೊರೊನಾ ಪ್ರಕರಣ ಪತ್ತೆಯಾಗಿದೆ. ಒಂದೇ ದಿನ 13,468 ಪ್ರಕರಣಗಳು ಪತ್ತೆಯಾಗಿದ್ದು 81ಮಂದಿ ಸಾವಿಗೀಡಾಗಿದ್ದಾರೆ.
ಮುಂಬೈನಲ್ಲಿ ಒಂದೇ ದಿನ 9,986 ಮಂದಿ ಸೋಂಕಿತರು ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ 6,387 ಪ್ರಕರಣಗಳು ವರದಿ ಆಗಿವೆ. ಚೆನ್ನೈನಲ್ಲಿ 2,105, ಕೊಲ್ಕತ್ತದಲ್ಲಿ1,271 ಪ್ರಕರಣಗಳು ಪತ್ತೆಯಾಗಿದೆ. ಮಂಗಳವಾರ ಪಾಸಿಟಿವಿಟಿ ದರ ಶೇ 13.14ಕ್ಕೇರಿದೆ. ಸೋಮವಾರ ಇದು 12.44 ಆಗಿತ್ತು.
ದೆಹಲಿಯಲ್ಲಿ ಡಿಸೆಂಬರ್ 3ರ ನಂತರ ಮಂಗಳವಾರ ಅತೀ ಹೆಚ್ಚು ಮರಣ ಸಂಭವಿಸಿದೆ. ಮಂಗಳವಾರ ದೆಹಲಿಯಲ್ಲಿ ಮೃತಪಟ್ಟವರ ಸಂಖ್ಯೆ 82. ನವೆಂಬರ್ 19ರಂದು ಇಲ್ಲಿ 131 ಮಂದಿ ಸಾವಿಗೀಡಾಗಿದ್ದರು. ಏಪ್ರಿಲ್ 4ರಿಂದ ಏಪ್ರಿಲ್ 13ರ ಅವಧಿಯಲ್ಲಿ ದೆಹಲಿಯಲ್ಲಿ 77,775 ಕೊವಿಡ್ ಪ್ರಕರಣಗಳು ವರದಿ ಆಗಿದ್ದು 376 ಮಂದಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಇಂಡೊನೇಷ್ಯಾದ ಮಸೀದಿಗಳಲ್ಲಿ ಕೊವಿಡ್ ಮಾರ್ಗಸೂಚಿ ಪಾಲನೆ, ರಂಜಾನ್ ಪ್ರಾರ್ಥನೆಯಲ್ಲೂ ಸಾಮಾಜಿಕ ಅಂತರ
(Coronavirus 1.84 lakh new Covid 19 cases reported in India 1027 deaths in last 24 hours)
Published On - 10:34 am, Wed, 14 April 21