ಇಂಡೊನೇಷ್ಯಾದ ಮಸೀದಿಗಳಲ್ಲಿ ಕೊವಿಡ್ ಮಾರ್ಗಸೂಚಿ ಪಾಲನೆ, ರಂಜಾನ್ ಪ್ರಾರ್ಥನೆಯಲ್ಲೂ ಸಾಮಾಜಿಕ ಅಂತರ
Ramadan Prayer: ಅತೀ ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ ಇಂಡೋನೇಷ್ಯಾದಲ್ಲಿ ಕೊವಿಡ್ 19 ರೋಗ ಏರಿಕೆಯಾಗುತ್ತಿದ್ದು ಕೊವಿಡ್ ಮಾರ್ಗಸೂಚಿಗಳೊಂದಿಗೆ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಇಂಡೊನೇಷ್ಯಾ: ಮುಸ್ಲಿಮರ ಪವಿತ್ರ ಮಾಸ ರಂಜಾನ್ ಪ್ರಯುಕ್ತ ವಿಶ್ವದ ವಿವಿಧ ಭಾಗಗಳಲ್ಲಿ ಮಸೀದಿಗಳು ತೆರೆದಿವೆ. ಅತೀ ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ ಇಂಡೋನೇಷ್ಯಾದಲ್ಲಿ ಕೊವಿಡ್ 19 ರೋಗ ಏರಿಕೆಯಾಗುತ್ತಿದ್ದು ಕೊವಿಡ್ ಮಾರ್ಗಸೂಚಿಗಳೊಂದಿಗೆ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಮಸೀದಿ, ಮಾಲ್, ಕೆಫೆಗಳಲ್ಲಿ ಕೊವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದ್ದು, ಕೊವಿಡ್ ನಿರ್ಬಂಧವನ್ನು ಅಲ್ಲಿನ ಸರ್ಕಾರ ಸಡಿಲಿಸಿದೆ. ಮುಸ್ಲಿಂ ಜನಸಂಖ್ಯೆ ಅಧಿಕವಿರುವ ಇನ್ನೊಂದು ರಾಷ್ಟ್ರ ಮಲೇಷ್ಯಾದಲ್ಲಿಯೂ ಕೊವಿಡ್ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಕಳೆದ ವರ್ಷ ಮಸೀದಿಗಳಲ್ಲಿ ರಾತ್ರಿ ಹೊತ್ತಿನ ಪ್ರಾರ್ಥನೆ ತರವೀಹ್ ನಿಷೇಧಿಸಲಾಗಿತ್ತು. ಆದರೆ ಈ ಬಾರಿ ಸಾಮಾಜಿಕ ಅಂತರ ಪಾಲಿಸಿ ಪ್ರಾರ್ಥನೆಗೆ ಅನುಮತಿ ನೀಡಲಾಗಿದೆ. ಮಾರುಕಟ್ಟೆಯಲ್ಲಿ ಆಹಾರ, ಪಾನೀಯ ಮತ್ತು ಬಟ್ಟೆ ಮಾರಾಟಕ್ಕೂ ಅವಕಾಶ ನೀಡಲಾಗಿದೆ.
ಇಂಡೊನೇಷ್ಯಾದ ಧಾರ್ಮಿಕ ವ್ಯವಹಾರಗಳ ಸಚಿವ ಯಾಕತ್ ಚೊಲಿಲ್ ಖೌಮಸ್ ಸೋಮವಾರ ಸಂಜೆ ಚಂದ್ರ ದರ್ಶನವಾದಾಗ ಟಿವಿಯಲ್ಲಿ ಸಂದೇಶ ನೀಡಿದ್ದಾರೆ.ರಂಜಾನ್ ಪವಿತ್ರ ಮಾಸದಲ್ಲಿ ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತವರೆಗೆ ಉಪವಾಸವಿದ್ದು, ರಾತ್ರಿ ಆಹಾರ ಸೇವಿಸುತ್ತಾರೆ.
ಕಳೆದ ವರ್ಷ ಇಲ್ಲಿ ಎಲ್ಲ ಮಸೀದಿಗಳು ಬಂದ್ ಮಾಡಲು ಫತ್ವಾ ಹೊರಡಿಸಿದ್ದು, ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಲು ಹೇಳಲಾಗಿತ್ತು. ಈ ಬಾರಿ ಕೊರೊನಾವೈರಸ್ ವ್ಯಾಪಿಸುತ್ತಿದ್ದರೂ ಮಸೀದಿಗಳಲ್ಲಿ ಗುಂಪು ಸೇರದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನಿರ್ದೇಶಿಸಿದ್ದೇವೆ ಎಂದು ಜಕಾರ್ತದ ಇಸ್ತಿಕ್ ಲಾಲ್ ಮಸೀದಿಯ ಇಮಾಮ್ ನಸ್ರುದ್ದೀನ್ ಉಮರ್ ಹೇಳಿದ್ದಾರೆ.
ಜಕಾರ್ತದಲ್ಲಿ ಭಾನುವಾರ ರಂಜಾನ್ ಪ್ರಾರ್ಥನೆಗಾಗಿ 317 ಮಸೀದಿಗಳನ್ನು ರೋಗಾಣು ಮುಕ್ತ ಮಾಡಲಾಗಿತ್ತು. ಸಾಮಾಜಿಕ ಅಂತರ ಕಾಪಾಡಲು ಗುರುತು ಹಾಕಿದ್ದು, ಸೋಪ್ ಮತ್ತು ಸ್ಯಾನಿಟೈಜರ್ಗಳನ್ನಿಡಲಾಗಿತ್ತು ಎಂದು ಜಕಾರ್ತದ ಗವರ್ನರ್ ಅನಿಸ್ ಬಸ್ವೇಡನ್ ಹೇಳಿದ್ದಾರೆ. ರೆಸ್ಟೊರೆಂಟ್, ಮಾಲ್ ಮತ್ತು ಕೆಫೆಗಳಲ್ಲಿ ಇಫ್ತಾರ್ ಕೂಟಗಳನ್ನು ಆಯೋಜಿಸಲು ಅನುಮತಿ ನೀಡಲಾಗಿದೆ. ರೆಸ್ಟೊರೆಂಟ್ ಗಳಲ್ಲಿ ಕೊವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದರ ಜತೆೆ ಶೇ 50ರಷ್ಟು ಜನರಿಗೆ ಮಾತ್ರ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.
ಮಲೇಷ್ಯಾದಲ್ಲಿ ಜನವರಿಯಿಂದ ಪ್ರಕರಣ ಮೂರು ಪಟ್ಟು ಹೆಚ್ಚಿದ್ದು ಒಟ್ಟು ಸೋಂಕಿತರ ಸಂಖ್ಯೆ 3,62,000 ಆಗಿದೆ. ಇಲ್ಲಿ ಪ್ರತಿದಿನ 1000ಕ್ಕಿಂತಲೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಆಗ್ನೇಯ ಏಷ್ಯಾದ ರಾಷ್ಟ್ರಗಳ ಪೈಕಿ ಅತೀ ಹೆಚ್ಚು ಸೋಂಕಿತರಿರುವ ದೇಶವಾಗಿದೆ ಇಂಡೋನೇಷ್ಯಾ. ಸೋಮವಾರ ಇಲ್ಲಿ ಸೋಂಕಿತರ ಸಂಖ್ಯೆ 15 ಲಕ್ಷಕ್ಕೆ ತಲುಪಿದ್ದು ಈವರೆಗೆ 42,600ಮಂದಿ ಸಾವಿಗೀಡಾಗಿದ್ದಾರೆ.
ರಂಜಾನ್ ತಿಂಗಳಲ್ಲಿಯೂ ಇಂಡೊನೇಷ್ಯಾದಲ್ಲಿ ಕೊವಿಡ್ ಲಸಿಕೆ ವಿತರಣೆ ನಡೆಯಲಿದೆ. ಈ ಮಾಸದಲ್ಲಿ ಮುಸ್ಲಿಮರ ದೇಹಕ್ಕೆ ಯಾವುದೇ ಬಾಹ್ಯ ವಸ್ತುಗಳನ್ನು ಚುಚ್ಚಿಸುವುದಾಗಲೀ ಮಾಡಬಾರದು. ಆದರೆ ಕೊವಿಡ್ ನಿಯಂತ್ರಣಕ್ಕಾಗಿ ಲಸಿಕೆ ಸ್ವೀಕರಿಸಬಹುದು ಎಂದು ಇಂಡೋನೇಷ್ಯಾದ ಮುಸ್ಲಿಂ ನಾಯಕರು ಹೇಳಿದ್ದಾರೆ. ಪವಿತ್ರ ಮಾಸದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತವರೆಗೆ ಆಹಾರ ಸೇವನೆ ನಿಷಿದ್ಧ. ಆದರೆ ಲಸಿಕೆಯು ಮಾಂಸಖಂಡಕ್ಕೆ ಪ್ರವೇಶಿಸುತ್ತದೆ, ರಕ್ತಕ್ಕೆ ಅಲ್ಲ. ಅದು ಪೌಷ್ಟಿಕಾಂಶ ವಸ್ತುವೂ ಅಲ್ಲ. ಹಾಗಾಗಿ ಉಪವಾಸದ ವೇಳೆ ಲಸಿಕೆ ಸ್ವೀಕರಿಸುವುದರಿಂದ ಉಪವಾಸ ಅಮಾನ್ಯವಾಗುವುದಿಲ್ಲ ಎಂದು ಇಂಡೊನೇಷ್ಯಾದ ಉಲೇಮಾ ಕೌನ್ಸಿಲ್ನ ಫತ್ವಾಗಳ ನಾಯಕ ಅಸ್ರೋರಂ ನಿಯಾಂ ಶೊಲೇ ಹೇಳಿದ್ದಾರೆ. ನಾವು ಈಗ ಲಸಿಕೆ ತೆಗೆದುಕೊಂಡರೆ ಮುಂದಿನ ರಂಜಾನ್ ಹೊತ್ತಿಗೆ ಪರಿಸ್ಥಿತಿ ಸುಧಾರಣೆ ಕಾಣಬಹುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಥರ್ಮಲ್ ಸ್ಕ್ರೀನಿಂಗ್ ಇಲ್ಲ, ಮಾಸ್ಕ್ ಇಲ್ಲ; ಹರಿದ್ವಾರದ ಕುಂಭ ಮೇಳದಲ್ಲಿ ಭಾಗವಹಿಸಿದ 102 ಮಂದಿಗೆ ಕೊವಿಡ್
(Muslims open Islams holiest month Ramadan with social distanced prayers in Indonesia)
Published On - 7:11 pm, Tue, 13 April 21