ರೈಲುಗಳ ಮೂಲಕ ವೈದ್ಯಕೀಯ ಆಕ್ಸಿಜನ್ ಸಾಗಣೆಗೆ ಅವಕಾಶ ಕೊಡಿ; ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರ ಸರ್ಕಾರದ ಮನವಿ
ನಿನ್ನೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಎಲ್ಲ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಕೊರೊನಾ ನಿಯಂತ್ರಣದ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಅದರಲ್ಲಿ ಭಾಗವಹಿಸಿದ್ದ ಮಹಾರಾಷ್ಟ್ರ ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೋಪೆ ಈ ಬೇಡಿಕೆ ಮುಂದಿಟ್ಟಿದ್ದಾರೆ.
ಮುಂಬೈ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಹಲವು ರಾಜ್ಯಗಳ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ ಎಂಬ ಕೂಗು ಕೇಳಿಬರುತ್ತಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹ ಇದೇ ಸಮಸ್ಯೆಯನ್ನು ಹೇಳಿದ್ದಾರೆ. ಈ ಮಧ್ಯೆ, ಆಕ್ಸಿಜನ್ ಸಿಲಿಂಡರ್ಗಳನ್ನು ರೈಲುಗಳ ಮೂಲಕ ಸಾಗಿಸಲು ಅವಕಾಶ ನೀಡುವಂತೆ ಮಹಾರಾಷ್ಟ್ರ ಸರ್ಕಾರ, ಕೇಂದ್ರ ಸರ್ಕಾರದ ಅನುಮತಿ ಕೇಳಿದೆ.
ನಿನ್ನೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಎಲ್ಲ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಕೊರೊನಾ ನಿಯಂತ್ರಣದ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಅದರಲ್ಲಿ ಭಾಗವಹಿಸಿದ್ದ ಮಹಾರಾಷ್ಟ್ರ ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೋಪೆ ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ರೈಲುಗಳ ಮೂಲಕ ವೈದ್ಯಕೀಯ ಆಮ್ಲಜನಕ ಸಿಲಿಂಡರ್ಗಳ ಸಾಗಣೆಗೆ ಅವಕಾಶ ನೀಡಿದರೆ ಖರ್ಚು ಮತ್ತು ಸಮಯ ಎರಡನ್ನೂ ಉಳಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜೇಶ್ ಟೋಪೆ ಈ ವಿಚಾರವನ್ನು ತಿಳಿಸಿದ್ದಾರೆ.
ಕೊವಿಡ್ 19 ರೋಗಿಗಳ ಚಿಕಿತ್ಸೆಗೆ ಅಗತ್ಯ ಇರುವ ದ್ರವರೂಪದ ಆಕ್ಸಿಜನ್ ಸಿಲಿಂಡರ್ಗಳನ್ನು ರೈಲುಗಳ ಮೂಲಕ ಸಾಗಿಸಿದರೆ ಸಾಗಣೆಯ ವೆಚ್ಚ ಕಡಿಮೆ ಇರುತ್ತದೆ. ಇದಕ್ಕೆ ಅವಕಾಶ ಮಾಡಿಕೊಡುವ ಜತೆ, ಆಕ್ಸಿಜನ್ ಸಾಗಣೆ ಸಂಬಂಧ ಸೂಕ್ತ ನಿಯಮಗಳನ್ನು, ನಿರ್ದೇಶನಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು ಎಂದು ತಾವು ಹರ್ಷವರ್ಧನ್ ಅವರಿಗೆ ಮನವಿ ಮಾಡಿದ್ದಾಗಿ ಮಹಾ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.
ಗಾಳಿಯಿಂದಲೇ ಆಮ್ಲಜನಕ ಹೀರುವ ಸಾಮರ್ಥ್ಯವುಳ್ಳ 113 ಸ್ಥಾವರಗಳನ್ನು ಅಳವಡಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಅದರಲ್ಲಿ ಗರಿಷ್ಠ ಮಟ್ಟದ ಸ್ಥಾವರಗಳನ್ನು ಪಡೆಯಲು ಮಹಾರಾಷ್ಟ್ರ ಸರ್ಕಾರ ಪ್ರಯತ್ನಿಸುತ್ತಿದೆ. ಹೀಗೆ ಗಾಳಿಯಿಂದ ಹೀರಲ್ಪಡುವ ಆಕ್ಸಿಜನ್ನ್ನು ಸಂಸ್ಕರಿಸುವ ಮೂಲಕ ವೈದ್ಯಕೀಯ ಆಕ್ಸಿಜನ್ ಆಗಿ ಪರಿವರ್ತಿಸಲಾಗುತ್ತದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: Coronavirus News Live Updates: ಬೆಂಗಳೂರಿನಲ್ಲಿ ನೋ ಲಾಕ್ಡೌನ್ ಎಂದ ಆರ್.ಅಶೋಕ್
ಸಾವಿನ ದವಡೆಗೆ ನೂಕುವ ಕ್ರಿಮಿ ಬದುಕಿನ ಮಹತ್ವ ತಿಳಿಸುತ್ತದೆ; ಚೈತ್ರಾ ಕೋಟೂರ್ ಕಂಬ್ಯಾಕ್!