92 ದಿನಗಳಲ್ಲಿ 12.2 ಕೋಟಿ ಜನರಿಗೆ ಕೊವಿಡ್ ಲಸಿಕೆ ನೀಡಿದ ಮೊದಲ ದೇಶ ಭಾರತ

Corona Vaccine : ಅತೀ ಹೆಚ್ಚು ಕೊವಿಡ್ ಪ್ರಕರಣಗಳಿರುವ ಮತ್ತು ಕೊವಿಡ್ ಮರಣ ಸಂಖ್ಯೆ ಜಾಸ್ತಿಯಿರುವ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ವಿತರಣೆ ಆಗಿದೆ. ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶದಲ್ಲಿ ಶೇ 36ರಷ್ಟು ಡೋಸ್ ಲಸಿಕೆ ವಿತರಣೆ ಆಗಿದೆ.

92 ದಿನಗಳಲ್ಲಿ 12.2 ಕೋಟಿ ಜನರಿಗೆ ಕೊವಿಡ್ ಲಸಿಕೆ ನೀಡಿದ ಮೊದಲ ದೇಶ ಭಾರತ
ಕೊವಿಡ್ ಲಸಿಕೆ
Follow us
ರಶ್ಮಿ ಕಲ್ಲಕಟ್ಟ
|

Updated on: Apr 18, 2021 | 6:31 PM

ದೆಹಲಿ: 92 ದಿನಗಳಲ್ಲಿ 12.2 ಕೋಟಿ ಜನರಿಗೆ ಕೊವಿಡ್ ಲಸಿಕೆ ವಿತರಣೆ ಮಾಡುವ ಮೂಲಕ ಅತೀ ಹೆಚ್ಚು ಲಸಿಕೆ ವಿತರಣೆ ಮಾಡಿದ ದೇಶ ಎಂಬ ಹೆಗ್ಗಳಿಕೆಯನ್ನು ಭಾರತ ಗಳಿಸಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಅಮೆರಿಕ 12.2 ಕೋಟಿ ಜನರಿಗೆ 97 ದಿನಗಳಲ್ಲಿ ಮತ್ತು ಚೀನಾ 108 ದಿನಗಳಲ್ಲಿ ಲಸಿಕೆ ವಿತರಣೆ ಮಾಡಿತ್ತು. ಕಳೆದ 24 ಗಂಟೆಗಳಲ್ಲಿ ಭಾರತ 26 ಲಕ್ಷ ಜನರಿಗೆ ಲಸಿಕೆ ವಿತರಣೆ ಮಾಡಿದ್ದು ಈವರೆಗೆ 122,622,590 (12.2 ಕೋಟಿ) ಜನರಿಗೆ ಕೊರೊನಾವೈರಸ್ ಲಸಿಕೆ ನೀಡಿದೆ ಎಂದಿದೆ.

ಅತೀ ಹೆಚ್ಚು ಕೊವಿಡ್ ಪ್ರಕರಣಗಳಿರುವ ಮತ್ತು ಕೊವಿಡ್ ಮರಣ ಸಂಖ್ಯೆ ಜಾಸ್ತಿಯಿರುವ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ವಿತರಣೆ ಆಗಿದೆ. ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶದಲ್ಲಿ ಶೇ 36ರಷ್ಟು ಡೋಸ್ ಲಸಿಕೆ ವಿತರಣೆ ಆಗಿದೆ. ಈ ರಾಜ್ಯಗಳಲ್ಲಿ ಕಳೆದ ಒಂದು ವಾರದಲ್ಲಿ ಗರಿಷ್ಠ ಕೊವಿಡ್ ಪ್ರಕರಣಗಳು ವರದಿಯಾಗಿತ್ತು. ಈ ನಾಲ್ಕು ರಾಜ್ಯಗಳೊಂದಿಗೆ ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಕೇರಳದಲ್ಲಿ ಒಟ್ಟು ಶೇ 59.5ಡೋಸ್ ವಿತರಣೆ ಆಗಿದೆ ಎಂದು ಸರ್ಕಾರ ಹೇಳಿದೆ.

ಜನವರಿ 16ರಂದು ಆರೋಗ್ಯ ಕಾರ್ಯಕರ್ತರು, ಮುುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಮೂಲಕ ಭಾರತ ಲಸಿಕೆ ವಿತರಣೆ ಆರಂಭಿಸಿತ್ತು. ಸ್ವಚ್ಛತಾ ಕಾರ್ಮಿಕರು, ಭದ್ರತಾ ಸಿಬ್ಬಂದಿಗಳು, ಪೊಲೀಸ್ ಮತ್ತು ಅರೆ ಸೇನಾಪಡೆ ಸಿಬ್ಬಂದಿಗಳಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗಿತ್ತು. ಮಾರ್ಚ್ 1ರಂದು ಎರಡನೇ ಹಂತದ ಲಸಿಕೆ ವಿತರಣೆ ಆರಂಭವಾದಾಗ 60ಕ್ಕಿಂತ ಹೆಚ್ಚು ವರ್ಷದ ಮತ್ತು 45 ವರ್ಷಕ್ಕಿಂತ ಹೆಚ್ಚು ವಯಸ್ಸಿನ ರೋಗ ಸಂಭಾವ್ಯವಿರುವ ವ್ಯಕ್ತಿಗಳಿಗೆ ಲಸಿಕೆ ನೀಡಲಾಗಿತ್ತು. ಏಪ್ರಿಲ್ 1ರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರಿಗೂ ಲಸಿಕೆ ನೀಡಲು ಭಾರತ ಅನುಮತಿ ನೀಡಿತ್ತು.

ಮಹಾರಾಷ್ಟ್ರ, ದೆಹಲಿ, ಛತ್ತೀಸಗಡದಲ್ಲಿ ಕಳೆದ 24 ಗಂಟೆಗಳಲ್ಲಿ ಅತೀ ಹೆಚ್ಚು ಮಂದಿ ಕೊವಿಡ್​ನಿಂದ ಮೃತಪಟ್ಟಿದ್ದಾರೆ. ಭಾನುವಾರ ಭಾರತದಲ್ಲಿ 1, 501 ಮಂದಿ ಸಾವಿಗೀಡಾಗಿದ್ದಾರೆ. ಇನ್ನುಳಿದಂತೆ ಉತ್ತರ ಪ್ರದೇಶ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಪಂಜಾಬ್, ತಮಿಳುನಾಡು ಮತ್ತು ರಾಜಸ್ಥಾನದಲ್ಲಿ ಸಾವಿನ ಸಂಖ್ಯೆ ಏರಿಕೆ ಆಗಿದೆ . ಈ ಹತ್ತು ರಾಜ್ಯಗಳಲ್ಲಿ ಕಳೆದ 24 ಗಂಟೆಗಳಲ್ಲಿ ಶೇ 82.94 ಸಾವು ಪ್ರಕರಣ ವರದಿ ಆಗಿದೆ.

ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಛತ್ತೀಸಗಡ, ಕರ್ನಾಟಕ, ಮಧ್ಯಪ್ರದೇಶ, ಕೇರಳ, ಗುಜರಾತ್, ತಮಿಳುನಾಡು ಮತ್ತು ರಾಜಸ್ಥಾನದಲ್ಲಿ ಕಳೆದ 24 ಗಂಟೆಗಳಲ್ಲಿ ವರದಿಯಾದ ಹೊಸ ಪ್ರಕರಣಗಳಲ್ಲಿ ಸಂಖ್ಯೆ ಶೇ 79ರಷ್ಟಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಛತ್ತೀಸಗಡ, ಕರ್ನಾಟಕ, ಮಧ್ಯಪ್ರದೇಶ, ಕೇರಳ, ಗುಜರಾತ್, ಹರಿಯಾಣ, ಪಂಜಾಬ್, ತೆಲಂಗಾಣ, ಉತ್ತರಾಖಂಡ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ರಾಜಸ್ಥಾನದಲ್ಲಿ ಪ್ರತಿ ದಿನ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ದೇಶದಲ್ಲಿ ಪ್ರತಿದಿನ ಪಾಸಿಟಿವಿಟಿ ದರ ಶೇ 8.00ರಿಂದ 16.69ಕ್ಕೆ ದುಪಟ್ಟು ಆಗಿದ್ದು, ವಾರದಲ್ಲಿ ವರದಿಯಾದ ಪಾಸಿಟಿವಿಟಿ ದರವು ಕಳೆದ ತಿಂಗಳಲ್ಲಿದ್ದ ಶೇ 3.05 ರಿಂದ ಶೇ 13.54 ಕ್ಕೆ ಏರಿದೆ.

ವಾರದಲ್ಲಿ ಅತೀ ಹೆಚ್ಚು ಪಾಸಿಟಿವಿಟಿ ದರ ವರದಿ ಆಗಿರುವ ಛತ್ತೀಸಗಡದಲ್ಲಿ ಪಾಸಿಟಿವಿಟಿ ದರ ಶೇ 30.38 ಆಗಿದೆ . ಭಾರತದಲ್ಲಿ ಪ್ರಸ್ತುತ 18 ಲಕ್ಷ ಸಕ್ರಿಯ ಪ್ರಕರಣಗಳಿವೆ. ಇದು ದೇಶದಲ್ಲಿ ವರದಿಯಾದ ಒಟ್ಟು ಪಾಸಿಟಿವಿಟಿ ಪ್ರಕರಣಗಳ ಸಂಖ್ಯೆ  ಶೇ 12ರಷ್ಟಿದೆ. ಮಹಾರಾಷ್ಟ್ರ, ಛತ್ತೀಸಗಡ, ಉತ್ತರ ಪ್ರದೇಶ, ಕರ್ನಾಟಕ ಮತ್ತು ಕೇರಳದಲ್ಲಿ ಒಟ್ಟು ಪಾಸಿಟಿವಿಟಿ ದರ ಶೇ 65.02ರಷ್ಟಿದ್ದು , ಮಹಾರಾಷ್ಟ್ರದಲ್ಲಿ ದೇಶದ ಒಟ್ಟು ಪ್ರಕರಣದ ಶೇ 38.09ದಷ್ಟಿದೆ.

ಭಾರತದ ಚೇತರಿಕೆ ದರವು ಶೇ 86.62ಕ್ಕೆ ಇಳಿದಿದ್ದು 138,423 ಮಂದಿ ಚೇತರಿಕೆಯಾಗಿದ್ದಾರೆ. ಚೇತರಿಸಿಕೊಂಡ ಜಟ್ಟು ಜನರ ಸಂಖ್ಯೆ ಭಾನುವಾರ 12,809,643 ಕ್ಕೆ ತಲುಪಿದೆ.

ಕೇೆಂದ್ರ ಆರೋಗ್ಯ ಸಚಿವರ ಟ್ವೀಟ್

ಕೊರೊನಾ ವಿರುದ್ಧದ ಹೋರಾಟಕ್ಕೆ ಸಂಘಟಿತರಾಗುವುದೇ ಮುಂದೆ ಸಾಗುವ ದಾರಿ.  ರೆಮ್​ಡಿಸಿವಿರ್  ಉತ್ಪಾದನೆ ಮತ್ತು ಪೂರೈಕೆ ದುಪ್ಪಟ್ಟು, ಆಮ್ಲಜನಕದ ಪೂರೈಕೆ, ಕೊವಿಡ್ ಲಸಿಕೆ ನಿರಂತರ ಪೂರೈಕೆ,   ಆರೋಗ್ಯ ವ್ಯವಸ್ಥೆಗೆ ಉತ್ತೇಜನ ನೀಡುವ ಮೂಲಕ ಕೊವಿಡ್ ವಿರುದ್ಧ ಹೋರಾಟಕ್ಕಾಗಿ ಎಲ್ಲ ರೀತಿಯ ಸಹಕಾರಗಳನ್ನು ರಾಜ್ಯಗಳಿಗೆ  ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಟ್ವೀಟ್ ಮಾಡಿದ್ದಾರೆ.

ಮೇ ತಿಂಗಳಾಗುವಾಗ  ರೆಮ್​ಡಿಸಿವಿರ್ ಉತ್ಪನ್ನ ದುಪಟ್ಟಾಗಿ ತಿಂಗಳಿಗೆ 74.1 ಲೀಟರ್ ಆಗಲಿದೆ. ಹೆಚ್ಚಿನ ಉತ್ಪಾದನೆಗಾಗಿ 20 ಉತ್ಪಾದನಾ ಘಟಕಗಳಿಗೆ ಅನುಮತಿ. ರಫ್ತು ನಿಷೇಧ, ಬೆಲೆ ಇಳಿಕೆ. ಮಾರಾಟ ದಂಧೆ,  ಅಕ್ರಮವಾಗಿ ಕೈವಶವಿರಿಸಿಕೊಳ್ಳುವುದು ಮೊದಲಾದವುಗಳನ್ನು ನಿಯಂತ್ರಿಸಲು  ಕಠಿಣ  ಕ್ರಮ ಕೈಗೊಳ್ಳಲಾಗಿದೆ.

ಕೇೆಂದ್ರ ಆರೋಗ್ಯ ಸಚಿವರ  ಇನ್ನೊಂದು ಟ್ವೀಟ್ ನಲ್ಲಿ  ಆಕ್ಸಿಜನ್ ಬಗ್ಗೆ ಬರೆದಿದ್ದು , ರಾಜ್ಯಗಳಲ್ಲಿ ಆಮ್ಲಜನಕದ ಕೊರತೆಯ ಹೊರೆಯನ್ನು ಕಡಿಮೆ ಮಾಡಲು ಆಮ್ಲಜನಕ ಉತ್ಪಾದನೆ ಹೆಚ್ಚಿಸಲಾಗಿದೆ. ಕೈಗಾರಿಕೆಗಾಗಿ ಬಳಸುವ ಆಮ್ಲಜನಕವನ್ನು ವೈದ್ಯಕೀಯ ಬಳಕೆಗಾಗಿ ವಿನಿಯೋಗಿಸುವಂತೆ ಮಾಡಲಾಗಿದೆ.  ದೇಶದಾದ್ಯಂತ 162 Pressure Swing Adsorption (PSA ) ಘಟಕ ಸ್ಥಾಪಿಸಲು ನಿರ್ಧಾರ.ರಾಜ್ಯಗಳಿಗೆ 24ಗಂಟೆಯೂ  ಸಹಕಾರ ನೀಡಲು ಸಹಕಾರ ಘಟಕ ಸ್ಥಾಪಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಇಂದು 2 ಲಕ್ಷದ 60 ಸಾವಿರ ಮಂದಿಗೆ ಸೋಂಕು, 1,495 ಮಂದಿ ಬಲಿ

(India Achieved the milestone of Vaccinating close to 122 million people in a span of 92 days says Government)