ದೆಹಲಿ: ಭಾರತ ಸರ್ಕಾರವು ಇ-ಶ್ರಮ್ ಹೆಸರಿನ ಪೋರ್ಟಲ್ (eSHRAM Portal) ಒಂದನ್ನು ಗುರುವಾರ (ಆಗಸ್ಟ್ 26) ಮಧ್ಯಾಹ್ನ 3.30ಕ್ಕೆ ಆರಂಭಿಸಲಿದೆ. ಇದು ಭಾರತದ ಅಸಂಘಟಿತ ವಲಯದಲ್ಲಿ ಮಹತ್ವದ ಬದಲಾವಣೆ ತರಲಿದೆ. ಕೋಟ್ಯಂತರ ಕಾರ್ಮಿಕರನ್ನು ಈ ಪೋರ್ಟಲ್ ಮೂಲಕ ಸರ್ಕಾರವು ಗುರುತಿಸಲಿದ್ದು, ಸಾಮಾಜಿಕ ಭದ್ರತೆ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯ ಒದಗಿಸಲು ನೆರವಾಗಲಿದೆ.
ಇದು ದೊಡ್ಡ ಸವಾಲು ಎಂಬುದು ನಿಜ. ಆದರೆ ಪ್ರತಿಸಲದಂತೆ ಈ ಬಾರಿಯೂ ಇಡೀ ದೇಶವು ಇಂಥ ಸವಾಲು ಎದುರಿಸಲು ಸಜ್ಜಾಗಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಭೂಪೇಂದ್ರ ಯಾದವ್ ಈ ಪೋರ್ಟಲ್ ಅನ್ನು ವಿವಿಧ ರಾಜ್ಯಗಳು ಮತ್ತು ಕೇಂದ್ರಡಳಿತ ಪ್ರದೇಶಗಳಿಗೆ ಹಸ್ತಾಂತರಿಸಲಿದ್ದಾರೆ.
ಪೋರ್ಟಲ್ಗೆ ಚಾಲನೆ ನೀಡುವ ಸಮಾರಂಭ ಲೈವ್ ಸ್ಟ್ರೀಮಿಂಗ್ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಲಭ್ಯವಿರಲಿದೆ. #ShramevJayate ಹ್ಯಾಷ್ಟ್ಯಾಗ್ ಬಳಸಿ ಪೋರ್ಟಲ್ ಚಾಲನೆ ಸಮಾರಂಭ ಮತ್ತು ಸಂಬಂಧಿಸಿತರ ಇತರ ಕಾರ್ಯಕ್ರಮಗಳನ್ನು ಸರ್ಕಾರ ಹಲವು ಸಂಸ್ಥೆಗಳು ಹಂಚಿಕೊಳ್ಳಲಿವೆ. ಮುಂದಿನ ದಿನಗಳಲ್ಲಿ ಈ ಯೋಜನೆಯಿಂದ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಕೇಂದ್ರ ಸಚಿವ ಭೂಪೇಂದ್ರ ಯಾದವ್ ಈಚೆಗೆ ಪೋರ್ಟಲ್ನ ಲೊಗೊ ಬಿಡುಗಡೆ ಮಾಡಿದ್ದರು. ಈ ಪೋರ್ಟಲ್ ಮೂಲಕ ಸರ್ಕಾರವು ಅಸಂಘಟಿತ ವಲಯದಲ್ಲಿರುವ 38 ಕೋಟಿ ಕಾರ್ಮಿಕರನ್ನು ನೋಂದಾಯಿಸುವ ಗುರಿ ಹೊಂದಿದೆ. ಕಟ್ಟಡ ನಿರ್ಮಾಣ ಕಾರ್ಮಿಕರು, ವಲಸೆ ಕಾರ್ಮಿಕರು, ರಸ್ತೆ ಬದಿ ವ್ಯಾಪಾರಿಗಳು ಮತ್ತು ಮನೆಕೆಲಸದವರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕು ಎನ್ನುವ ಗುರಿಯನ್ನು ಈ ಯೋಜನೆ ಹೊಂದಿದೆ.
ಈ ಪೋರ್ಟಲ್ ಸಾರ್ವಜನಿಕ ಬಳಕೆಗೆ ಲಭ್ಯವಾಗುವ ದಿನವೇ ಅಸಂಘಟಿತ ವಲಯದ ಕಾರ್ಮಿಕರು ನೋಂದಣಿ ಮಾಡಿಕೊಳ್ಳಬಹುದು. ಕಾರ್ಮಿಕರಿಗೆ ನೆರವಾಗಲೆಂದು ಸಹಾಯವಾಣಿಯನ್ನೂ ಕಾರ್ಮಿಕ ಇಲಾಖೆ ಆರಂಭಿಸಲಿದೆ. 14434 ಸಂಖ್ಯೆಯ ಮೂಲಕ ಕಾರ್ಮಿಕರು ನೋಂದಣಿಗೆ ನೆರವು ಪಡೆದುಕೊಳ್ಳಬಹುದು.
ಈ ಯೋಜನೆಯ ಭಾಗವಾಗಿ ನೋಂದಾಯಿಸಿಕೊಳ್ಳುವ ಕಾರ್ಮಿಕರಿಗೆ ಇ-ಶ್ರಮ್ ಕಾರ್ಡ್ಗಳನ್ನು ನೀಡಲಾಗುತ್ತದೆ. ಈ ಕಾರ್ಡ್ನಲ್ಲಿರುವ 12 ಅಂಕಿಗಳ ವಿಶಿಷ್ಟ ಸಂಖ್ಯೆ ಇರುತ್ತದೆ.
ಸರ್ಕಾರದ ವಿವಿಧ ಯೋಜನೆಗಳನ್ನು ಫಲಾನುಭವಿಗಳಿಗೆ ಒದಗಿಸಲು ಸಂಯೋಜಿತ ಪದ್ಧತಿಯೊಂದು ರೂಪುಗೊಳ್ಳಬೇಕು ಎಂಬ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಕಾರ್ಮಿಕರ ಮಾಹಿತಿಯನ್ನು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಒದಗಿಸಲಿವೆ. ಅಸಂಘಟಿತ ಕಾರ್ಮಿಕರು ತಮ್ಮ ಆಧಾರ್ ಕಾರ್ಡ್ ಸಂಖ್ಯೆ, ಬ್ಯಾಂಕ್ ಖಾತೆಯ ವಿವರ, ಜನ್ಮದಿನಾಂಕ, ಸ್ವಂತ ಊರು, ಮೊಬೈಲ್ ಸಂಖ್ಯೆ ಒದಗಿಸುವ ಒದಗಿಸುವ ಮೂಲಕ ಪೋರ್ಟಲ್ಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
(e-Shram portal helps to create database for unorganised sector workers to get government schemes)
ಇದನ್ನೂ ಓದಿ: BJP: ನಾಗರಿಕರ ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ಯೋಜನೆ ಮೂಲಕ ಪಕ್ಷ ಸಂಘಟನೆಗೆ ಹೊರಟ ಬಿಜೆಪಿ