ಡಿಗ್ರಿ ಮುಗಿದು 2ವರ್ಷಗಳಾದರೂ ಸಿಗದ ಉದ್ಯೋಗ; ಕಾಲೇಜು ಸಮೀಪವೇ ಚಹಾ ಮಾರುತ್ತಿರುವ ಯುವತಿ
ಪ್ರಿಯಾಂಕಾ ಗುಪ್ತಾರ ಈ ಕ್ರಮಕ್ಕೆ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಫೋಟೋ ಸಖತ್ ವೈರಲ್ ಆಗುತ್ತಿದೆ. ಆದರೆ ಕೆಲವರು ಇದನ್ನೇ ಇಟ್ಟುಕೊಂಡು ಸರ್ಕಾರಗಳನ್ನು ದೂಷಿಸುತ್ತಿದ್ದಾರೆ.
ಪಾಟ್ನಾ: ಚಾಯ್ವಾಲಾಗಳು ತುಂಬ ಜನರಿದ್ದಾರೆ. ಆದರೆ ಚಾಯ್ವಾಲಿಗಳ ಸಂಖ್ಯೆ ತುಸು ಕಡಿಮೆ. ಅದರಲ್ಲೂ ಪದವೀಧರರಾಗಿ ಟೀ ಅಂಗಡಿ ಇಡುವ ಹುಡುಗಿಯರ ಸಂಖ್ಯೆಯಂತೂ ಖಂಡಿತ ವಿರಳ. ಆದರೆ ಪ್ರಿಯಾಂಕಾ ಗುಪ್ತಾ ವಿಭಿನ್ನ ಮತ್ತು ಸದ್ಯದ ಮಟ್ಟಿಗೆ ಸುದ್ದಿಯಲ್ಲಿದ್ದಾರೆ. ಇವರು ಅರ್ಥಶಾಸ್ತ್ರದಲ್ಲಿ ಪದವೀಧರರು. 2019ರಲ್ಲಿ ತಮ್ಮ ಪದವಿ ಮುಗಿಸಿದ್ದಾರೆ. ಆದರೆ ಎರಡು ವರ್ಷಗಳಾದರೂ ಎಲ್ಲಿಯೂ ಉದ್ಯೋಗ ಸಿಗದೆ ಇದ್ದಾಗ, ಸ್ವಲ್ಪವೂ ಧೃತಿಗೆಡದೆ ಪಾಟ್ನಾದ ಮಹಿಳಾ ಕಾಲೇಜೊಂದರ ಸಮೀಪವೇ ಚಹಾ ಅಂಗಡಿ ತೆರೆದಿದ್ದಾರೆ. ಈ ಬಗ್ಗೆ ಎಎನ್ಐ ಮಾಧ್ಯಮದ ಜತೆ ಮಾತನಾಡಿದ ಅವರು, ಎಂಬಿಎ ಚಾಯ್ವಾಲಾ ಎಂದೇ ಖ್ಯಾತರಾದ ಪ್ರಫುಲ್ ಬಿಲ್ಲೋರೆ ಕತೆಯಿಂದ ಸ್ಫೂರ್ತಿಗೊಂಡು ನಾನೂ ಈ ಕೆಲಸಕ್ಕೆ ಕೈ ಹಾಕಿದೆ ಎಂದಿದ್ದಾರೆ. ((ಪ್ರಫುಲ್ ಬಿಲ್ಲೋರೆ ಎಂಬುವರು ಅಹ್ಮದಾಬಾದ್ನವರು. ಇವರು ತಮ್ಮ ಎಂಬಿಎ ಕೋರ್ಸ್ಬಿಟ್ಟು 2017ರಲ್ಲಿ ಚಹಾ ವ್ಯಾಪಾರ ಶುರು ಮಾಡಿಕೊಂಡಿದ್ದರು. ಅವರೀಗ ವಾರ್ಷಿಕ 4 ಕೋಟಿ ರೂಪಾಯಿ ವಹಿವಾಟು ನಡೆಸುತ್ತಾರೆ).
ಪ್ರಿಯಾಂಕಾ ಗುಪ್ತಾಗೆ ಇನ್ನೂ 24ವರ್ಷ. ಆಕೆ ಮಹಿಳಾ ಕಾಲೇಜು ಬಳಿ ಚಹಾ ಮಾರಾಟ ಮಾಡುತ್ತಿರುವ ಹಲವು ಫೋಟೋಗಳೂ ವೈರಲ್ ಆಗಿವೆ. ಅದೆಷ್ಟೋ ಜನರು ಚಾಯ್ವಾಲಾಗಳಿದ್ದಾರೆ. ಹಾಗೇ, ಚಾಯ್ವಾಲಿ ಯಾಕೆ ಇರಬಾರದು ಎಂದು ಪ್ರಶ್ನಿಸುವ ಪ್ರಿಯಾಂಕಾ ಗುಪ್ತಾ ತಮ್ಮ ಅಂಗಡಿಯಲ್ಲಿ ಕುಲ್ಹಾದ್ ಟೀಯಿಂದ ಹಿಡಿದು ಪಾನ್ ಚಾಯ್ವರೆಗೆ ವಿವಿಧ ರೀತಿಯ ಟೀ ತಯಾರಿಸುತ್ತಿದ್ದಾರೆ. ಹಾಗೇ, ಕೆಲವು ರೀತಿಯ ಬಿಸ್ಕಟ್, ಕುಕ್ಕೀಸ್ಗಳನ್ನೂ ಇಟ್ಟುಕೊಂಡಿದ್ದು, ಚಹಾ ಪ್ರಿಯರಿಗೆ ಇನ್ನಷ್ಟು ಅನುಕೂಲವಾಗಿದೆ. ಇಲ್ಲಿ ಸಾಮಾನ್ಯ ಚಹಾ ಒಂದು ಕಪ್ಗೆ 15ರೂಪಾಯಿ ಆಗಿದ್ದರೆ, ಉಳಿದ ಟೀಗಳೆಲ್ಲ 20ರೂಪಾಯಿ. ಹಾಗೇ, ತನ್ನದು ಆತ್ಮ ನಿರ್ಭರ ಭಾರತ್ ಅಭಿಯಾನದೆಡೆಗಿನ ಉಪಕ್ರಮ ಎಂದೂ ರೇಟ್ ಕಾರ್ಡ್ನಲ್ಲಿ ಬರೆದುಕೊಂಡಿದ್ದಾರೆ.
Bihar: Priyanka Gupta, an economics graduate sets up a tea stall near Women’s College in Patna
I did my UG in 2019 but was unable to get a job in the last 2 yrs. I took inspiration from Prafull Billore. There are many chaiwallas, why can’t there be a chaiwali?, she says pic.twitter.com/8jfgwX4vSK
— ANI (@ANI) April 19, 2022
ಪ್ರಿಯಾಂಕಾ ಗುಪ್ತಾರ ಈ ಕ್ರಮಕ್ಕೆ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಫೋಟೋ ಸಖತ್ ವೈರಲ್ ಆಗುತ್ತಿದೆ. ಆದರೆ ಕೆಲವರು ಇದನ್ನೇ ಇಟ್ಟುಕೊಂಡು ಸರ್ಕಾರಗಳನ್ನು ದೂಷಿಸುತ್ತಿದ್ದಾರೆ. ಬಿಹಾರದಲ್ಲಿ ವಿದ್ಯಾವಂತರಿಗೆ ಉದ್ಯೋಗ ಸಿಗುತ್ತಿಲ್ಲ, ನಿರುದ್ಯೋಗ ಸಮಸ್ಯೆ ಇದೆ ಎಂಬುದಕ್ಕೆ ಇದೇ ಸಾಕ್ಷಿ ಎಂದೂ ಹೇಳುತ್ತಿದ್ದಾರೆ. ಇನ್ನೂ ಕೆಲವರು, ಒಂದು ಚಹಾಕ್ಕೆ 15ರೂಪಾಯಿಯಾ ಎಂದು ಉದ್ಘಾರ ತೆಗೆದಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರ ತಡೆಯುವ ಪ್ರಯತ್ನ ಪ್ರಧಾನಿ ಮೋದಿ ಯಾಕೆ ಮಾಡುತ್ತಿಲ್ಲ? ದಿಂಗಾಲೇಶ್ವರ ಸ್ವಾಮೀಜಿ
Published On - 7:44 pm, Tue, 19 April 22