ದೆಹಲಿ: ದೇಶದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಹವಾಲಾ ದಂಧೆ ನಡೆಸುತ್ತಿದ್ದ ಬಂಧಿತ ಚೀನಾ ಸಂಜಾತನಿಗೆ ಇದೀಗ ಜಾರಿ ನಿರ್ದೇಶನಾಲಯ ಮತ್ತೊಂದು ಶಾಕ್ ನೀಡಿದೆ.
ಕಳೆದ ಕೆಲವು ದಿನಗಳ ಹಿಂದೆ ಚೀನಾ ಮೂಲದ ಚಾರ್ಲಿ ಪೆಂಗ್ ಮೇಲೆ ಐಟಿ ಇಲಾಖೆ ಹಾಗೂ ದೆಹಲಿ ಪೊಲೀಸರು ಹವಾಲಾ ದಂಧೆ ನಡೆಸುತ್ತಿರುವ ಆರೋಪದಡಿ ದಾಳಿ ನಡೆಸಿ ಪೆಂಗ್ನನ್ನು ಬಂಧಿಸಿದ್ದರು. ಇದೀಗ, ಎರಡೂ ಇಲಾಖೆಯಿಂದ ಮಾಹಿತಿ ಪಡೆದ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆಯ ಕೇಸ್ ದಾಖಲಿಸಿಕೊಂಡಿದೆ.
ಸದ್ಯ 42 ವರ್ಷದ ಚಾರ್ಲಿ ಪೆಂಗ್ನನ್ನು ಐಟಿ ಇಲಾಖೆಯು ದೇಶದೊಳಗೆ ಹವಾಲಾ ಜಾಲದ ಮೂಲಕ ಕೋಟ್ಯಂತರ ರೂಪಾಯಿ ಮೊತ್ತವನ್ನ ದೇಶದೊಳಕ್ಕೆ ತರಲು ವ್ಯವಸ್ಥೆ ಮಾಡಿದ್ದನಂತೆ. ಈತನ ಕೃತ್ಯದಲ್ಲಿ ಕೆಲವು ಖಾಸಗಿ ಬ್ಯಾಂಕ್ಗಳ ಸಿಬ್ಬಂದಿ ಸಹ ಶಾಮೀಲಾಗಿದ್ದಾರಂತೆ.
ಯಾರು ಈ ಚಾರ್ಲಿ ಪೆಂಗ್ ?
ಚೀನಾ ದೇಶದ ಪ್ರಜೆಯಾದ ಚಾರ್ಲಿ ಪೆಂಗ್ ಮೂಲ ಹೆಸರು ಲೂ ಸಾಂಗ್. ಈ ಆಸಾಮಿ ಭಾರತಕ್ಕೆ ಬಂದ ಕೂಡಲೇ ತನ್ನ ಹೆಸರು ಬದಲಿಸುವುದರ ಜೊತೆಗೆ ಇಲ್ಲಿನ ಮಹಿಳೆಯೊಟ್ಟಿಗೆ ಮದುವೆ ಸಹ ಆಗಿದ್ದಾನೆ. ಅಚ್ಚರಿಯೆಂದರೆ, ಈ ಆಸಾಮಿ ಪಾಸ್ಪೋರ್ಟ್ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಸಹ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಜೊತೆಗೆ, ನಕಲಿ ಪಾಸ್ಪೋರ್ಟ್ ಹೊಂದಿದ್ದ ಆರೋಪದಡಿ 2018ರಲ್ಲಿ ಈತನನ್ನು ಬಂಧಿಸಲಾಗಿತ್ತು. ಆದರೆ, ಸೂಕ್ತ ಸಾಕ್ಷ್ಯಾಧಾರವಿಲ್ಲದೆ ಬಿಡುಗಡೆ ಮಾಡಬೇಕಾಗಿತ್ತು. ಪ್ರತಿ ಬಾರಿ ತನ್ನ ನಿವಾಸ ಬದಲಾಯಿಸುತ್ತಿದ್ದ ಪೆಂಗ್ ಈವರೆಗೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಯಶಸ್ವಿಯಾಗಿದ್ದ.