ಬಿಎಪಿಎಸ್ ಭೇಟಿ ವೇಳೆ ಮಹಿಳಾ ಸಿಬ್ಬಂದಿಗೆ ತಾರತಮ್ಯ; ಐಫೆಲ್ ಟವರ್ ಮುಖ್ಯಸ್ಥ ರಾಜೀನಾಮೆಗೆ ನಿರ್ಧಾರ
ಫ್ರಾನ್ಸ್ ದೇಶದ ಪ್ರಸಿದ್ಧ ‘ಐಫೆಲ್ ಟವರ್’ ನಿರ್ವಹಣಾ ಸಂಸ್ಥೆಯ ಮುಖ್ಯಸ್ಥರು ಈ ವರ್ಷದ ಅಂತ್ಯದಲ್ಲಿ ತಮ್ಮ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎಂದು ಸಂಸ್ಥೆ ಪ್ರಕಟಿಸಿದೆ. ಈ ತಿಂಗಳ ಆರಂಭದಲ್ಲಿ ಹಿಂದೂ ಧಾರ್ಮಿಕ ಸಂಘಟನೆಯಾದ ‘ಬೋಚಾಸನವಾಸಿ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥೆ’ (ಬಿಎಪಿಎಸ್)ಯ ನಿಯೋಗದ ಭೇಟಿಯ ಸಂದರ್ಭದಲ್ಲಿ ಮಹಿಳಾ ಸಿಬ್ಬಂದಿಯನ್ನು ಸ್ಥಳದಿಂದ ತೆರವುಗೊಳಿಸಲಾಗಿತ್ತು ಎಂಬ ಆರೋಪ ಭಾರಿ ವಿವಾದಕ್ಕೆ ಕಾರಣವಾಗಿತ್ತು.

ಪ್ಯಾರಿಸ್, ಸೆಪ್ಟೆಂಬರ್ 29: ಹಿಂದೂ ಸಂಘಟನೆ ಬಿಎಪಿಎಸ್ ನಿಯೋಗದ ಭೇಟಿಯ ಸಂದರ್ಭದಲ್ಲಿ ಮಹಿಳಾ ಸಿಬ್ಬಂದಿಯನ್ನು ಭದ್ರತಾ ಮತ್ತು ಸೇವಾ ಕರ್ತವ್ಯಗಳಿಂದ ಹೊರಗಿಡಲಾಗಿತ್ತು ಎಂಬ ಆರೋಪದ ಕುರಿತು ಆಂತರಿಕ ತನಿಖೆ ನಡೆದ ಬೆನ್ನಲ್ಲೇ, ಪ್ಯಾರಿಸ್‌ನ ಜಾಗತಿಕ ಪ್ರಸಿದ್ಧ ಐಫೆಲ್ ಟವರ್‌ನ ಕಾರ್ಯಾಚರಣಾ ಸಂಸ್ಥೆಯ ಮುಖ್ಯಸ್ಥರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ತನಿಖಾ ವರದಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಲಿಂಗ ಆಧಾರಿತ ತಾರತಮ್ಯ ಎಸಗಿರುವುದು ಮತ್ತು ಸಂಸ್ಥೆಯ ನೀತಿ-ನಿಯಮಗಳನ್ನು ಉಲ್ಲಂಘಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಬಿಎಪಿಎಸ್ ಧಾರ್ಮಿಕ ಸಂಘಟನೆಯ ಪ್ರತಿನಿಧಿಗಳು ಐಫೆಲ್ ಟವರ್‌ಗೆ ಭೇಟಿ ನೀಡಿದ್ದ ಸಮಯದಲ್ಲಿ, ಅವರ ವಿನಂತಿಯ ಮೇರೆಗೆ ಅಥವಾ ನಿರ್ದಿಷ್ಟ ಸೂಚನೆಯಂತೆ ಮಹಿಳಾ ಸಿಬ್ಬಂದಿಯನ್ನು ಆ ಭಾಗದ ಕರ್ತವ್ಯದಿಂದ ಸಂಪೂರ್ಣವಾಗಿ ದೂರವಿಡಲಾಗಿತ್ತು. ಈ ಕ್ರಮವನ್ನು ಖಂಡಿಸಿ ಐಫೆಲ್ ಟವರ್‌ನ ಮಹಿಳಾ ನೌಕರರು ಹಾಗೂ ಕಾರ್ಮಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಸರ್ಕಾರಿ ಹಾಗೂ ಸಾರ್ವಜನಿಕ ಸಂಸ್ಥೆಯೊಂದರಲ್ಲಿ ಇಂತಹ ತಾರತಮ್ಯ ಎಸಗಿರುವುದು ಫ್ರಾನ್ಸ್‌ನ ಜಾತ್ಯತೀತ ಮತ್ತು ಸಮಾನತೆಯ ತತ್ವಗಳಿಗೆ ವಿರುದ್ಧವಾಗಿದೆ ಎಂದು ಆಕ್ರೋಶ ಹೊರಹಾಕಿದ್ದವು. ಈ ಘಟನೆಯ ಕುರಿತು ಉನ್ನತ ಮಟ್ಟದ ಆಂತರಿಕ ತನಿಖೆ ನಡೆಸಲಾಗಿದ್ದು, ತನಿಖಾ ವರದಿಯಲ್ಲಿ ಮಹಿಳಾ ಸಿಬ್ಬಂದಿಯನ್ನು ಹೊರಗಿಟ್ಟಿದ್ದು ನಿಜ ಎಂದು ದೃಢಪಟ್ಟಿದೆ. ತನಿಖಾ ವರದಿ ಬಹಿರಂಗಗೊಳ್ಳುತ್ತಿದ್ದಂತೆ, ಘಟನೆಯ ನೈತಿಕ ಹೊಣೆ ಹೊತ್ತು ಐಫೆಲ್ ಟವರ್ ನಿರ್ವಹಣಾ ಸಂಸ್ಥೆಯ ಮುಖ್ಯಸ್ಥರು ಹುದ್ದೆ ತೊರೆಯಲು ನಿರ್ಧರಿಸಿದ್ದಾರೆ.
ಪ್ರಕರಣದ ಹಿನ್ನೆಲೆಯೇನು?:
ಸೆಪ್ಟೆಂಬರ್ 7ರಂದು ಬಿಎಪಿಎಸ್ ನಿಯೋಗದ ಭೇಟಿಯ ಸಮಯದಲ್ಲಿ ಮಹಿಳಾ ಸಿಬ್ಬಂದಿಯನ್ನು ಆ ಭಾಗದಿಂದ ತೆರವುಗೊಳಿಸಿದ್ದನ್ನು ಖಂಡಿಸಿ ಐಫೆಲ್ ಟವರ್ ಉದ್ಯೋಗಿಗಳು ಮುಷ್ಕರ ನಡೆಸಿ ಹೊರನಡೆದಿದ್ದರು. ಇದರಿಂದಾಗಿ ಐಫೆಲ್ ಟವರ್ ಇಡೀ ದಿನ ಬಂದ್ ಆಗಿತ್ತು. ಯೂನಿಯನ್ ಪ್ರತಿನಿಧಿ ಡಯೇನ್ ಡಾವೊಯಿನ್ ಮಾತನಾಡಿ, “ಭೇಟಿಯ ವೇಳೆ ಮಹಿಳೆಯರಿಗೆ ತಮ್ಮ ಕರ್ತವ್ಯದ ಸ್ಥಳ ಬಿಟ್ಟು ತೆರಳುವಂತೆ ಸೂಚಿಸಿ, ಅವರ ಜಾಗದಲ್ಲಿ ಪುರುಷರನ್ನು ನಿಯೋಜಿಸಲಾಯಿತು. ಜೊತೆಗೆ ನಿಯೋಗ ಇರುವ ಸ್ಥಳಗಳಲ್ಲಿ ಮಹಿಳಾ ಸಿಬ್ಬಂದಿ ಸಂಚರಿಸದಂತೆ ನಿರ್ಬಂಧಿಸಲಾಯಿತು. ಇದು ನಮಗೆ ತೀವ್ರ ಅವಮಾನ ಉಂಟುಮಾಡಿದೆ” ಎಂದು ಆರೋಪಿಸಿದ್ದರು.
ಇದನ್ನೂ ಓದಿ: 10 ವರ್ಷಗಳ ನಂಬಿಕೆ, ಪಾರದರ್ಶಕತೆಗೆ ಬಿಎಪಿಎಸ್ ಸಂಸ್ಥೆಗೆ ಫ್ರೆಂಚ್ ಮೇಯರ್ ಶ್ಲಾಘನೆ
ಬಿಎಪಿಎಸ್ ನಿಯೋಗವು “ಮಹಿಳೆಯರೊಂದಿಗಿನ ಸಂವಹನವನ್ನು ಸೀಮಿತಗೊಳಿಸಲು” ವಿನಂತಿಸಿತ್ತು. ಆದರೆ ಇಂತಹ ವಿನಂತಿಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಬಾರದಿತ್ತು ಎಂದು SETE ಅಧ್ಯಕ್ಷ ಏರಿಯಲ್ ವೈಲ್ ವಿಷಾದ ವ್ಯಕ್ತಪಡಿಸಿದ್ದರು. ಬಳಿಕ, ಪ್ಯಾರಿಸ್ ಮೇಯರ್ ಆನ್ನೆ ಹಿಡಾಲ್ಗೊ ಅವರು ಮಹಿಳಾ ಉದ್ಯೋಗಿಗಳನ್ನು ತೆರವುಗೊಳಿಸಿದ ಸಂದರ್ಭದ ಕುರಿತು ಪ್ರತ್ಯೇಕ ತನಿಖೆಗೆ ಆದೇಶಿಸಿದ್ದರು.
ಬಿಎಪಿಎಸ್ ಸಂಘಟನೆಯ ಸ್ಪಷ್ಟನೆ:
ಈ ವಿವಾದದ ಕುರಿತು ಸ್ಪಷ್ಟನೆ ನೀಡಿರುವ ಬಿಎಪಿಎಸ್, “ಸುಮಾರು 100 ಜನರಿದ್ದ ನಿಯೋಗದ ಭೇಟಿಗೆ ಸಾರ್ವಜನಿಕರಿಗೆ ಮತ್ತು ಸಿಬ್ಬಂದಿಗೆ ತೊಂದರೆಯಾಗದಂತೆ ಆಡಳಿತ ಮಂಡಳಿಯೊಂದಿಗೆ ಸಮನ್ವಯ ಸಾಧಿಸಲಾಗಿತ್ತು. ನಾವು ನಡೆಸಿದ ಸಮನ್ವಯದ ಮಾತುಕತೆಯು ಯಾವುದೇ ಕಾರಣಕ್ಕೂ ಲಿಂಗಾಧಾರಿತ ವಿನಂತಿಯಾಗಿರಲಿಲ್ಲ. ನಾವು ಲಿಂಗ, ಹಿನ್ನೆಲೆ ಅಥವಾ ನಂಬಿಕೆಯ ಭೇದವಿಲ್ಲದೆ ಸಮಾನತೆ ಮತ್ತು ಪರಸ್ಪರ ಗೌರವಕ್ಕೆ ಬದ್ಧರಾಗಿದ್ದೇವೆ” ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




