‘ಯಾರಿಗೂ ಪ್ರವೇಶ ನಿರಾಕರಿಸಿಲ್ಲ’; ಐಫೆಲ್ ಟವರ್‌ನಲ್ಲಿ ಮಹಿಳಾ ಸಿಬ್ಬಂದಿಗೆ ನಿಷೇಧದ ವಿವಾದಕ್ಕೆ ಬಿಎಪಿಎಸ್ ಸ್ಪಷ್ಟನೆ
ನೌಕರರ ಪ್ರತಿಭಟನೆಯಿಂದಾಗಿ ಫ್ರಾನ್ಸ್‌ನ ಪ್ರಸಿದ್ಧ ಐಫೆಲ್ ಟವರ್ ಅನ್ನು ಸೋಮವಾರ ಮುಚ್ಚಲಾಗಿತ್ತು. ಶನಿವಾರ ಬಿಎಪಿಎಸ್ ನಿಯೋಗ (ಬೋಚಸಂವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ) ಭೇಟಿ ನೀಡಿದ ಸಂದರ್ಭದಲ್ಲಿ ಪುರುಷ ನೌಕರರು ತಮ್ಮ ಸ್ಥಾನದಲ್ಲಿ ನಿಲ್ಲುವಂತೆ ಸೂಚಿಸಿ, ಮಹಿಳಾ ಉದ್ಯೋಗಿಗಳನ್ನು ಅವರ ಕರ್ತವ್ಯದಿಂದ ದೂರ ಕಳುಹಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಆದರೆ, ಈ ಬಗ್ಗೆ ಬಿಎಪಿಎಸ್ ಸ್ಪಷ್ಟನೆ ನೀಡಿದ್ದು, ಯಾರಿಗೂ ಐಫೆಲ್ ಟವರ್ ಪ್ರವೇಶಿಸುವುದನ್ನು ನಿಷೇಧಿಸಿರಲಿಲ್ಲ ಎಂದು ಹೇಳಿದೆ. ಏನಿದು ವಿವಾದ? ಎಂಬುದರ ಪೂರ್ತಿ ಮಾಹಿತಿ ಇಲ್ಲಿದೆ.

ನವದೆಹಲಿ, ಸೆಪ್ಟೆಂಬರ್ 8: ಭಾರತ ಮೂಲದ ಬಿಎಪಿಎಸ್ ಹಿಂದೂ ಸಂಸ್ಥೆಯ ನಿಯೋಗವೊಂದು ಭೇಟಿ ನೀಡಿದ್ದ ವೇಳೆ ಮಹಿಳಾ ಸಿಬ್ಬಂದಿಯನ್ನು ನಿಯೋಜನೆಯಿಂದ ಪಕ್ಕಕ್ಕೆ ಸರಿಸಿ, ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಸಿಬ್ಬಂದಿ ಮುಷ್ಕರ ನಡೆಸಿದ್ದರಿಂದ ವಿಶ್ವಪ್ರಸಿದ್ಧ ಐಫೆಲ್ ಟವರ್ ಅನ್ನು ಸೋಮವಾರ ಸಾರ್ವಜನಿಕರಿಗೆ ಬಂದ್ ಮಾಡಲಾಗಿತ್ತು. ಆದರೆ, ನಾವು ಯಾರಿಗೂ ಪ್ರವೇಶ ನಿರಾಕರಿಸಿರಲಿಲ್ಲ ಎಂದು ಬಿಎಪಿಎಸ್ ಸ್ಪಷ್ಟನೆ ನೀಡಿದೆ.
ಸುಮಾರು 100 ಜನರಿದ್ದ ಬಿಎಪಿಎಸ್ (ಬೋಚಾಸನವಾಸಿ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥೆ) ನಿಯೋಗ ಭೇಟಿ ನೀಡಿದ್ದ ವೇಳೆ ಈ ಘಟನೆ ನಡೆದಿದೆ. ಬಿಎಪಿಎಸ್ ನಿಯೋಗ ಹಾದುಹೋಗುವಾಗ ಮಹಿಳಾ ಉದ್ಯೋಗಿಗಳನ್ನು ಅವರ ಕಾರ್ಯಸ್ಥಳದಿಂದ ದೂರ ಸರಿಸಲಾಗಿತ್ತು. ಕೆಲವು ಕಡೆ ಮಹಿಳಾ ಸಿಬ್ಬಂದಿಯ ಬದಲಿಗೆ ಪುರುಷ ನೌಕರರನ್ನು ನಿಯೋಜಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ಐಫೆಲ್ ಟವರ್ ಆಪರೇಟಿಂಗ್ ಕಂಪನಿ ಹೇಳಿದ್ದೇನು?:
ಐಫೆಲ್ ಟವರ್ ಅನ್ನು ನಿರ್ವಹಿಸುವ ಕಂಪನಿಯಾದ SETE, ಹಿಂದೂ ನಿಯೋಗವು ತಮ್ಮ ಭೇಟಿಯನ್ನು ಮಹಿಳೆಯರೊಂದಿಗೆ ಸಾಧ್ಯವಾದಷ್ಟು ಸೀಮಿತಗೊಳಿಸುವ ರೀತಿಯಲ್ಲಿ ಆಯೋಜಿಸಬೇಕೆಂದು ವಿನಂತಿಸಿತ್ತು ಎಂದು ಹೇಳಿದೆ. ಈ ಷರತ್ತುಗಳನ್ನು ನಾವು ಒಪ್ಪಿಕೊಳ್ಳಬಾರದಿತ್ತು ಎಂದು ಕೂಡ ಕಂಪನಿ ಹೇಳಿದೆ. ಇದು ತನ್ನ ನೀತಿಗಳು ಮತ್ತು ಲಿಂಗ ಸಮಾನತೆಗೆ ವಿರುದ್ಧವಾಗಿದೆ ಎಂದು ಹೇಳಿದೆ. ಐಫೆಲ್ ಟವರ್ ಲಿಂಗ ಸಮಾನತೆ ಮತ್ತು ಫ್ರೆಂಚ್ ಕಾನೂನುಗಳನ್ನು ಗೌರವಿಸುತ್ತದೆ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: Nepal Flood: ನೇಪಾಳ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ ಬಿಎಪಿಎಸ್ ಸಂಸ್ಥೆ
ಬಿಎಪಿಎಸ್ ಕ್ಷಮೆಯಾಚನೆ:
ವಿವಾದ ತೀವ್ರಗೊಳ್ಳುತ್ತಿದ್ದಂತೆ ಪ್ಯಾರಿಸ್‌ನ ಬಿಎಪಿಎಸ್ ಸಂಸ್ಥೆಯು ಘಟನೆಗೆ ಆಳವಾದ ವಿಷಾದ ವ್ಯಕ್ತಪಡಿಸಿದ್ದು, ಕ್ಷಮೆಯಾಚಿಸಿದೆ. “ಇತರ ಪ್ರವಾಸಿಗರಿಗೆ ತೊಂದರೆಯಾಗದಂತೆ ಐಫೆಲ್ ಟವರ್ ತಂಡದ ಸಹಯೋಗದೊಂದಿಗೆ ಮುಂಜಾನೆಯೇ ಭೇಟಿಯನ್ನು ಆಯೋಜಿಸಲಾಗಿತ್ತು. ನಮಗೆ ಯಾರಿಗೂ ಪ್ರವೇಶ ನಿರಾಕರಿಸುವ ಉದ್ದೇಶವಿರಲಿಲ್ಲ. ಆದರೂ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇವೆ. ನಾವು ಪರಸ್ಪರ ಗೌರವ ಹಾಗೂ ಸೇವೆಯ ಜಾಗತಿಕ ಮೌಲ್ಯಗಳಿಗೆ ಬದ್ಧರಾಗಿದ್ದೇವೆ” ಎಂದು BAPS ಸ್ಪಷ್ಟಪಡಿಸಿದೆ. ಬಿಎಪಿಎಸ್ ಜಾಗತಿಕವಾಗಿ 1,300ಕ್ಕೂ ಹೆಚ್ಚು ದೇವಾಲಯಗಳನ್ನು ಹೊಂದಿದ್ದು, ಭಾನುವಾರಷ್ಟೇ ಪ್ಯಾರಿಸ್ ಬಳಿ ಫ್ರಾನ್ಸ್‌ನ ತನ್ನ ಮೊದಲ ಬೃಹತ್ ಮಂದಿರವನ್ನು ಉದ್ಘಾಟಿಸಿತ್ತು.
Nous comprenons les préoccupations exprimées et les prenons très au sérieux.
Compte tenu de la taille de notre délégation, la visite a été organisée en coordination avec les équipes de la tour Eiffel, au début des horaires habituels d’ouverture, afin de limiter autant que… pic.twitter.com/gyiwzmh6Jv
— BAPS Mandir Swaminarayan Hindou de Paris (@BAPSParis) September 7, 2026
ಫ್ರೆಂಚ್ ರಾಜಕಾರಣಿಗಳ ಆಕ್ರೋಶ:
ಈ ಘಟನೆಗೆ ಪ್ಯಾರಿಸ್ ಮೇಯರ್ ಇಮ್ಯಾನುಯೆಲ್ ಗ್ರೆಗೋಯಿರ್ ಅಸಮಾಧಾನ ಹೊರಹಾಕಿದ್ದು, “ನೌಕರರ ಆಕ್ರೋಶ ಸಮಂಜಸವಾಗಿದೆ. ಫ್ರಾನ್ಸ್‌ನಲ್ಲಿ ಮಹಿಳೆ ಮತ್ತು ಪುರುಷರ ನಡುವಿನ ಸಮಾನತೆಗೆ ಆದ್ಯತೆಯಿದೆ. ಇಂತಹ ಷರತ್ತುಗಳನ್ನು ಸಹಿಸಲು ಸಾಧ್ಯವಿಲ್ಲ. ಈ ಘಟನೆಯ ಕುರಿತು ತಕ್ಷಣವೇ ತನಿಖೆಗೆ ಆದೇಶಿಸಲಾಗುವುದು” ಎಂದಿದ್ದಾರೆ.
ಇದನ್ನೂ ಓದಿ: ಯುದ್ಧದಲ್ಲೂ ಮಾನವೀಯತೆ ತೋರಿದ ಬಿಎಪಿಎಸ್ ಹಿಂದೂ ಮಂದಿರ; ಕಂಫರ್ಟ್ ಇನ್ ಕುವೈತ್ ಸಾಕ್ಷ್ಯಚಿತ್ರ ಇಲ್ಲಿದೆ
ನ್ಯಾಷನಲ್ ಅಸೆಂಬ್ಲಿ ಅಧ್ಯಕ್ಷೆ ಯೇಲ್ ಬ್ರೌನ್-ಪಿವೆಟ್ ಕೂಡ, “ವಿದೇಶಿ ಭೇಟಿದಾರರ ಬೇಡಿಕೆಗಾಗಿ ನಮ್ಮ ದೇಶದ ಮಹಿಳೆಯರನ್ನು ಪಕ್ಕಕ್ಕೆ ಸರಿಸುವುದನ್ನು ನಾನು ಸಂಪೂರ್ಣವಾಗಿ ನಿರಾಕರಿಸುತ್ತೇನೆ. ಫ್ರಾನ್ಸ್‌ನಲ್ಲಿ ಮಹಿಳೆಯರು ಸಾರ್ವಜನಿಕ ಪ್ರದೇಶಗಳಲ್ಲಿ ಸಂಪೂರ್ಣ ಸ್ವಾತಂತ್ರ್ಯ ಹೊಂದಿದ್ದಾರೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




