ಹಿಂದೂ ಧಾರ್ಮಿಕ ನಿಯೋಗದ ಭೇಟಿ ವೇಳೆ ಮಹಿಳಾ ಸಿಬ್ಬಂದಿಗೆ ನಿರ್ಬಂಧ: ಐಫೆಲ್ ಟವರ್‌ನಲ್ಲಿ ಭುಗಿಲೆದ್ದ ನೌಕರರ ಆಕ್ರೋಶ, ಗೋಪುರ ಬಂದ್
ಐಫೆಲ್ ಟವರ್‌ನಲ್ಲಿ ಹಿಂದೂ ಧಾರ್ಮಿಕ ನಿಯೋಗದ ಭೇಟಿ ವೇಳೆ ಮಹಿಳಾ ಸಿಬ್ಬಂದಿಗೆ ನಿರ್ಬಂಧ ವಿಧಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಇದನ್ನು ಲಿಂಗ ತಾರತಮ್ಯವೆಂದು ಖಂಡಿಸಿ ನೌಕರರು ಮುಷ್ಕರ ನಡೆಸಿದ ಕಾರಣ ಐಫೆಲ್ ಟವರ್ ಬಂದ್ ಆಗಿತ್ತು. ಫ್ರಾನ್ಸ್ ಸರ್ಕಾರ ಈ ನಡೆಯನ್ನು ತೀವ್ರವಾಗಿ ಖಂಡಿಸಿದ್ದು, ಮಹಿಳಾ ಸಮಾನತೆಗೆ ಧಕ್ಕೆ ಬಂದಿದೆ ಎಂದು ತಿಳಿಸಿದೆ. ಈ ಘಟನೆ ಅಂತಾರಾಷ್ಟ್ರೀಯ ಚರ್ಚೆಗೆ ಗ್ರಾಸವಾಗಿದೆ.

ಪ್ಯಾರಿಸ್, ಸೆಪ್ಟೆಂಬರ್ 08: ವಿಶ್ವವಿಖ್ಯಾತ ಐಫೆಲ್ ಟವರ್‌ಗೆ ಭಾರತೀಯ ಹಿಂದೂ ಧಾರ್ಮಿಕ ನಿಯೋಗವೊಂದು ಭೇಟಿ ನೀಡಿದ್ದ ವೇಳೆ, ಅಲ್ಲಿನ ಮಹಿಳಾ ಉದ್ಯೋಗಿಗಳಿಗೆ ಕೆಲಸದ ಸ್ಥಳದಿಂದ ದೂರವಿರುವಂತೆ ಸೂಚಿಸಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ. ಇದನ್ನು ಲಿಂಗ ತಾರತಮ್ಯವೆಂದು ಖಂಡಿಸಿ ನೌಕರರು ದಿಢೀರ್ ಮುಷ್ಕರ ನಡೆಸಿದ್ದರಿಂದ ಪ್ರವಾಸಿಗರಿಗೆ ಐಫೆಲ್ ಟವರ್ ಪ್ರವೇಶವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ಕಡೆಗಣಿಸಿದ್ದಕ್ಕೆ ಫ್ರಾನ್ಸ್ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಮಗ್ರ ತನಿಖೆಗೆ ಆದೇಶಿಸಿದೆ.
ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿರುವ ವಿಶ್ವಪ್ರಸಿದ್ಧ ಐಫೆಲ್ ಟವರ್‌ಗೆ ಭಾರತೀಯ ಹಿಂದೂ ಧಾರ್ಮಿಕ ಸಂಸ್ಥೆಯಾದ ಬಿಎಪಿಎಸ್ (BAPS) ನಿಯೋಗವು ಭೇಟಿ ನೀಡಿದ್ದ ವೇಳೆ ತೀವ್ರ ವಿವಾದವೊಂದು ಭುಗಿಲೆದ್ದಿದೆ. ಸುಮಾರು 100 ಜನರಿದ್ದ ಈ ನಿಯೋಗದ ಭೇಟಿಯ ಸಂದರ್ಭದಲ್ಲಿ, ಮಹಿಳಾ ಉದ್ಯೋಗಿಗಳಿಗೆ ಕೆಲಸದ ಸ್ಥಳದಿಂದ ದೂರವಿರಲು, ಕಣ್ಣಿಗೆ ಕಾಣಿಸದಂತೆ ಇರಲು ಹಾಗೂ ಕೆಲವೆಡೆ ಅವರ ಜಾಗದಲ್ಲಿ ಪುರುಷ ಸಿಬ್ಬಂದಿಯನ್ನು ನಿಯೋಜಿಸಲು ಸೂಚಿಸಲಾಗಿತ್ತು.
ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ಹೀಗೆ ಬದಿಗಿಟ್ಟಿದ್ದನ್ನು ಲಿಂಗ ತಾರತಮ್ಯವೆಂದು ಕರೆದ ಐಫೆಲ್ ಟವರ್‌ನ ನೌಕರರ ಒಕ್ಕೂಟವು ದಿಢೀರ್ ಮುಷ್ಕರ ಆರಂಭಿಸಿತು. ಇದರ ಪರಿಣಾಮವಾಗಿ, ದಿನವೂ ಸಾವಿರಾರು ಪ್ರವಾಸಿಗರಿಂದ ತುಂಬಿರುತ್ತಿದ್ದ ಐಫೆಲ್ ಟವರ್ ಅನ್ನು ಸೋಮವಾರ ಪೂರ್ತಿ ಸಾರ್ವಜನಿಕರ ಭೇಟಿಗೆ ಸಂಪೂರ್ಣವಾಗಿ ಮುಚ್ಚಲಾಯಿತು.
ಮತ್ತಷ್ಟು ಓದಿ: ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಹಿಂದೂ ದೇವಾಲಯದ ಧ್ವಂಸಕ್ಕೆ ಭಾರತ ಆಕ್ರೋಶ
ಈ ಬೆಳವಣಿಗೆಯು ಫ್ರಾನ್ಸ್‌ನಾದ್ಯಂತ ಭಾರಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ, ಐಫೆಲ್ ಟವರ್ ನಿರ್ವಹಣಾ ಸಂಸ್ಥೆಯಾದ SETE ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದೆ. “ನಿಯೋಗದ ಕೋರಿಕೆಯ ಮೇರೆಗೆ ಇಂತಹ ನಿಯಮ ರೂಪಿಸಿದ್ದು ತಪ್ಪು. ಮಹಿಳೆಯರನ್ನು ಅಲ್ಲಿಂದ ತೆರಳುವಂತೆ ಹೇಳಿದ್ದು ಫ್ರಾನ್ಸ್‌ನ ಲಿಂಗ ಸಮಾನತೆಯ ತತ್ವಕ್ಕೆ ಸಂಪೂರ್ಣ ವಿರುದ್ಧವಾಗಿದೆ” ಎಂದು ಸಂಸ್ಥೆಯ ಅಧ್ಯಕ್ಷರು ತಿಳಿಸಿದ್ದಾರೆ.
ಬಿಎಪಿಎಸ್ ಸ್ಪಷ್ಟನೆ ಏನು?
ಇತ್ತ ಪ್ಯಾರಿಸ್ ಮೇಯರ್ ಎಮ್ಯಾನುಯೆಲ್ ಗ್ರೆಗೋಯಿರ್ ಈ ಕ್ರಮವನ್ನು ಖಂಡಿಸಿ ಆಡಳಿತ ಮಂಡಳಿಯ ವಿರುದ್ಧ ತಕ್ಷಣದ ತನಿಖೆಗೆ ಆದೇಶಿಸಿದ್ದಾರೆ. ಮತ್ತೊಂದೆಡೆ, ದೇವಾಲಯದ ಉದ್ಘಾಟನೆಗೆ ಬಂದಿದ್ದ ಬಿಎಪಿಎಸ್ ಸಂಸ್ಥೆಯು ಸ್ಪಷ್ಟನೆ ನೀಡಿ, “ನಿಯೋಗ ದೊಡ್ಡದಾಗಿದ್ದರಿಂದ ಇತರ ಪ್ರವಾಸಿಗರಿಗೆ ತೊಂದರೆಯಾಗಬಾರದೆಂದು ಬೆಳಗ್ಗೆಯೇ ಭೇಟಿ ನೀಡಲಾಗಿತ್ತು. ಯಾರನ್ನೂ ದೂರವಿಡುವ ಉದ್ದೇಶವಿರಲಿಲ್ಲ, ಈ ಘಟನೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇವೆ ಎಂದು ಹೇಳಿದೆ.
ಪೋಸ್ಟ್
Watch: France’s first traditional Hindu mandir was inaugurated in Paris/Bussy-Saint-Georges on September 6, 2026, with His Holiness Mahant Swami Maharaj consecrating the sacred murtis and offering prayers for mutual love, religious harmony and global peace.
A historic Nagar… pic.twitter.com/DE5HICf6Os
— IANS (@ians_india) September 6, 2026
ಈ ಘಟನೆಯು ಫ್ರಾನ್ಸ್ ರಾಜಕೀಯ ವಲಯದಲ್ಲೂ ಭಾರಿ ಸಂಚಲನ ಮೂಡಿಸಿದ್ದು, ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರು ಒಕ್ಕೊರಲ ಧ್ವನಿಯಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಫ್ರಾನ್ಸ್‌ನ ಸಚಿವೆ ಅರೋರೆ ಬರ್ಜ್ ಪ್ರತಿಕ್ರಿಯಿಸಿ, ಫ್ರಾನ್ಸ್‌ನಲ್ಲಿ ಯಾವುದೇ ಧರ್ಮ, ನಂಬಿಕೆ ಅಥವಾ ಸಂಸ್ಕೃತಿಯು ದೇಶದ ಕಾನೂನು ಮತ್ತು ಮಹಿಳೆಯರ ಸಮಾನತೆಯ ಹಕ್ಕಿಗಿಂತ ಮೇಲಲ್ಲ.
ನಮ್ಮ ನೆಲದಲ್ಲಿ ಮಹಿಳೆಯರು ತಮ್ಮ ಅಸ್ತಿತ್ವವನ್ನು ಅಳಿಸಿಕೊಳ್ಳುವ ಪರಿಸ್ಥಿತಿ ಎಂದಿಗೂ ಬರಬಾರದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಅತಿಥಿಗಳನ್ನು ಗೌರವಿಸುವುದು ಎಂದರೆ ಮಹಿಳೆಯರ ಘನತೆ ಮತ್ತು ಗಣರಾಜ್ಯದ ಸಂವಿಧಾನಬದ್ಧ ತತ್ವಗಳನ್ನು ಬಲಿಕೊಡುವುದಲ್ಲ ಎಂದು ಹಲವು ಸಂಸದರು ಪ್ರತಿಪಾದಿಸಿದ್ದು, ಪ್ರಸ್ತುತ ಪರಿಸ್ಥಿತಿ ತಿಳಿಗೊಂಡ ಬಳಿಕ ಮಂಗಳವಾರದಿಂದ ಗೋಪುರವನ್ನು ಮತ್ತೆ ತೆರೆಯಲು ನಿರ್ಧರಿಸಲಾಗಿದೆ.
ಫ್ರಾನ್ಸ್‌ನಂತಹ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಧಾರ್ಮಿಕ ನಿಯಮಗಳು ಸಾರ್ವಜನಿಕ ಸೇವಾ ಸ್ಥಳಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ಎಂದಿಗೂ ಸಹಿಸುವುದಿಲ್ಲ ಎಂಬ ಸಂದೇಶವನ್ನು ಈ ವಿವಾದ ಸ್ಪಷ್ಟವಾಗಿ ರವಾನಿಸಿದೆ. ಕೆಲಸದ ಸ್ಥಳದಲ್ಲಿ ಲಿಂಗ ತಾರತಮ್ಯವನ್ನು ಕಟ್ಟುನಿಟ್ಟಾಗಿ ನಿಷೇಧಿಸುವ ಫ್ರೆಂಚ್ ಕಾರ್ಮಿಕ ಕಾನೂನುಗಳ ಪ್ರಕಾರ, ಸಿಬ್ಬಂದಿಯ ಹಕ್ಕುಗಳಿಗೆ ಧಕ್ಕೆ ತಂದಿರುವ ಆಡಳಿತ ಮಂಡಳಿಯ ನಿರ್ಧಾರವನ್ನು ಕಾರ್ಮಿಕ ಸಂಘಟನೆಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ.
ಈ ಹಿನ್ನೆಲೆಯಲ್ಲಿ, ಭವಿಷ್ಯದಲ್ಲಿ ಯಾವುದೇ ವಿಐಪಿ ಅಥವಾ ಧಾರ್ಮಿಕ ನಿಯೋಗಗಳು ಭೇಟಿ ನೀಡಿದಾಗ ಸಿಬ್ಬಂದಿಯ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಲು ಹೊಸ ಮಾರ್ಗಸೂಚಿಗಳನ್ನು ರೂಪಿಸಲು ನಗರ ಆಡಳಿತ ಮುಂದಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ಘಟನೆ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸಂಪ್ರದಾಯ ಮತ್ತು ಆಧುನಿಕ ಸಮಾನತೆಯ ಮೌಲ್ಯಗಳ ನಡುವಿನ ಸಂಘರ್ಷವನ್ನು ಮತ್ತೆ ಮುನ್ನೆಲೆಗೆ ತಂದಿದೆ. ವಿಶ್ವದ ಅತ್ಯಂತ ಪ್ರಸಿದ್ಧ ಸ್ಮಾರಕಗಳಲ್ಲಿ ಒಂದಾದ ಐಫೆಲ್ ಟವರ್ ಕೇವಲ ಪ್ರವಾಸಿ ತಾಣ ಮಾತ್ರವಲ್ಲದೆ, ಸ್ವಾತಂತ್ರ್ಯ ಮತ್ತು ಸಮಾನತೆಯ ಜಾಗತಿಕ ಸಂಕೇತವೂ ಆಗಿದೆ ಎಂದು ಸ್ಥಳೀಯ ಸಂಘಟನೆಗಳು ಪ್ರತಿಪಾದಿಸಿವೆ. ಸಿಬ್ಬಂದಿ ನಡೆಸಿದ ಒಂದು ದಿನದ ಸಾಂಕೇತಿಕ ಮುಷ್ಕರವು ಮುಕ್ತಾಯಗೊಂಡಿದ್ದು, ಪ್ರವಾಸಿಗರಿಗೆ ಉಂಟಾದ ಅನಾನುಕೂಲತೆಯ ನಡುವೆಯೂ ಮಹಿಳಾ ಹಕ್ಕುಗಳ ರಕ್ಷಣೆಯ ವಿಷಯದಲ್ಲಿ ಫ್ರಾನ್ಸ್ ಸಮಾಜ ತೋರಿದ ದೃಢ ನಿಲುವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




