ಬಿಜೆಪಿ (BJP) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಮೇ 26 ರಂದು ಎಂಟು ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಲಿದೆ. ಈ ಅಧಿಕಾರಾವಧಿಯನ್ನು ದೇಶದ ಸಮತೋಲಿತ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಭದ್ರತೆಗೆ ಮೀಸಲಿಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಕಳೆದ ವಾರ ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, “ಈ ತಿಂಗಳು ಎನ್‌ಡಿಎ ಸರ್ಕಾರ ಎಂಟು ವರ್ಷಗಳನ್ನು ಪೂರೈಸಲಿದೆ. ಈ ಎಂಟು ವರ್ಷಗಳ ಸಂಕಲ್ಪಗಳು ಮತ್ತು ಸಾಧನೆಗಳದ್ದಾಗಿದೆ. ಈ ಎಂಟು ವರ್ಷಗಳು ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕಾಗಿ ಬದ್ಧವಾಗಿದೆ ಎಂದಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ, ನರೇಂದ್ರ ಮೋದಿ ಸರ್ಕಾರವು ಆರ್ಥಿಕ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆಯ ವಿಷಯದಲ್ಲಿ ಸಮಾಜದ ವಿವಿಧ ಸ್ತರಗಳಿಗೆ ನೇರವಾಗಿ ಪ್ರಯೋಜನವಾಗುವಂತೆ ಹಲವಾರು ಯೋಜನೆಗಳನ್ನು ತಂದಿದೆ. ಅವುಗಳಲ್ಲಿ ಪ್ರಮುಖ ಯೋಜನೆಗಳು ಈ ಕೆಳಗಿನಂತಿವೆ.
ಆಯುಷ್ಮಾನ್ ಭಾರತ್
ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PM-JAY) ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ 2018 ಸೆಪ್ಟೆಂಬರ್ ನಲ್ಲಿ ಪ್ರಾರಂಭಿಸಿದರು. ಇದು ವಿಶ್ವದ ಅತಿದೊಡ್ಡ ಸರ್ಕಾರಿ ಪ್ರಾಯೋಜಿತ ಆರೋಗ್ಯ ರಕ್ಷಣೆ ಯೋಜನೆಯಾಗಿದೆ. ಈ ಯೋಜನೆಯು 10.74 ಕೋಟಿಗೂ ಹೆಚ್ಚು ಬಡ ಮತ್ತು ದುರ್ಬಲ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳ ಆರೋಗ್ಯ ರಕ್ಷಣೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. PM-JAY ನ ಫಲಾನುಭವಿಗಳು ಭಾರತೀಯ ಜನಸಂಖ್ಯೆಯ ಅತ್ಯಂತ ವಂಚಿತರಾದ ಶೇ 40 ಜನಸಮುದಾಯಕ್ಕೆ ಸೇರಿದ್ದಾರೆ. ಏತನ್ಮಧ್ಯೆ, ಕೇಂದ್ರ ಸರ್ಕಾರವು ಯೋಜನೆಗೆ ಸಂಪೂರ್ಣ ಹಣವನ್ನು ನೀಡುತ್ತಿದ್ದು ಅನುಷ್ಠಾನ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಂಚಿಕೊಳ್ಳಲಾಗುತ್ತದೆ. ನಗದು ರಹಿತ ಆಸ್ಪತ್ರೆಗೆ ಸೇರಿಸುವುದರ ಹೊರತಾಗಿ, ಈ ಯೋಜನೆಯು ಮೂರು ದಿನಗಳ ಪ್ರಿ ಹಾಸ್ಪಿಟಲೈಸೇಷನ್ ಮತ್ತು 15 ದಿನಗಳ ನಂತರದ ಆಸ್ಪತ್ರೆಯ ವೆಚ್ಚಗಳನ್ನು ಒಳಗೊಂಡಿರುತ್ತದೆ, ಇದರಲ್ಲಿ ವೈದ್ಯಕೀಯ ಪರೀಕ್ಷೆ ಮತ್ತು ಔಷಧಿಗಳ ವೆಚ್ಚಗಳು ಸೇರಿವೆ. PM-JAY ಸೇವೆಗಳು ಸುಮಾರು 1,393 ಕಾರ್ಯವಿಧಾನಗಳನ್ನು ಒಳಗೊಂಡಿವೆ.
ಕಳೆದ ವರ್ಷ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಮೂರನೇ ವಾರ್ಷಿಕೋತ್ಸವದಂದು, ಪಿಎಂ ಮೋದಿ ಅವರು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಪ್ರಾರಂಭಿಸಿದ್ದರು. ಇದರಡಿಯಲ್ಲಿ ಆರೋಗ್ಯ ದಾಖಲೆಗಳನ್ನು ಹೊಂದಿರುವ ಜನರಿಗೆ ಡಿಜಿಟಲ್ ಹೆಲ್ತ್ ಐಡಿಯನ್ನು ಒದಗಿಸಲಾಗುತ್ತದೆ.
ಈ ವರ್ಷದ ಮಾರ್ಚ್‌ನಲ್ಲಿ ಸರ್ಕಾರದ ಯಾವುದೇ ಫಲಾನುಭವಿಗೆ ಹಣದ ಕೊರತೆಯಿಂದಾಗಿ ಚಿಕಿತ್ಸೆಯನ್ನು ನಿರಾಕರಿಸಲಾಗಿಲ್ಲ ಮತ್ತು ರಾಜ್ಯಗಳಿಂದ ಕಡಿಮೆ ಅಗತ್ಯತೆಯಿಂದಾಗಿ ಯೋಜನೆಯ ಪರಿಷ್ಕೃತ ಬಜೆಟ್ ಅನ್ನು ಕಡಿತಗೊಳಿಸಲಾಗಿದೆ ಎಂದು ಸರ್ಕಾರವು ಸಂಸತ್ತಿಗೆ ತಿಳಿಸಿದೆ. 2019-20, 2020-21 ಮತ್ತು 2021-22 ರ ಯೋಜನೆಯ ಬಜೆಟ್ ಅಂದಾಜುಗಳು ಪ್ರತಿ ವರ್ಷ 6,400 ಕೋಟಿ ರೂ.ಗಳಾಗಿದ್ದು, ಪರಿಷ್ಕೃತ ಅಂದಾಜು ಕ್ರಮವಾಗಿ 3,200 ಕೋಟಿ ರೂ., ರೂ. 3,100 ಕೋಟಿ ಮತ್ತು ರೂ. 3,199 ಕೋಟಿ ಆಗಿದೆ.
ಉಜ್ವಲ್ ಯೋಜನೆ
2016 ರಲ್ಲಿ ಪ್ರಾರಂಭವಾದ ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಹೆಸರಿನ ಉಚಿತ ಎಲ್‌ಪಿಜಿ ಸಂಪರ್ಕ ಯೋಜನೆಯು ಲಕ್ಷಾಂತರ ಕುಟುಂಬಗಳಿಗೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಪಡೆಯುವಂತೆ ಮಾಡಿದೆ. ಗ್ರಾಹಕರು ಇಂಧನ ಚಿಲ್ಲರೆ ವ್ಯಾಪಾರಿಗಳಿಗೆ ಠೇವಣಿ ಪಾವತಿಸಬೇಕಾಗಿಲ್ಲ. ಅತ್ಯಂತ ಯಶಸ್ವಿ ಉಪಕ್ರಮವಾದ ಇದು 80 ಮಿಲಿಯನ್ ಭಾರತೀಯ ಮಹಿಳೆಯರಿಗೆ ಆರೋಗ್ಯಕರ ಜೀವನವನ್ನು ನಡೆಸಲು ಅವಕಾಶ ಮಾಡಿಕೊಟ್ಟಿದೆ. 2016 ರಲ್ಲಿ ಯೋಜನೆಯ ಪ್ರಾರಂಭದ ಸಮಯದಲ್ಲಿ, ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳ 5 ಕೋಟಿ ಮಹಿಳೆಯರಿಗೆ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಸರ್ಕಾರ ಹೊಂದಿತ್ತು. ಎಸ್ಸಿ ಮತ್ತು ಎಸ್ಟಿ ಸಮುದಾಯಗಳು ಮತ್ತು ಅರಣ್ಯವಾಸಿಗಳಂತಹ ಇನ್ನೂ ಏಳು ವರ್ಗಗಳ ಮಹಿಳಾ ಫಲಾನುಭವಿಗಳನ್ನು ಸೇರಿಸಲು ಏಪ್ರಿಲ್ 2018 ರಲ್ಲಿ ಯೋಜನೆಯನ್ನು ವಿಸ್ತರಿಸಲಾಯಿತು.
ಆನಂತರ ಗುರಿಯನ್ನು ಎಂಟು ಕೋಟಿ ಎಲ್‌ಪಿಜಿ ಸಂಪರ್ಕಗಳಿಗೆ ಪರಿಷ್ಕರಿಸಲಾಗಿದ್ದು. ಆಗಸ್ಟ್ 2019 ರಲ್ಲಿ ನಿಗದಿತ ಸಮಯಕ್ಕಿಂತ ಏಳು ತಿಂಗಳ ಮುಂಚಿತವಾಗಿ ಗುರಿ ಸಾಧಿಸಲಾಗಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಪ್ರಧಾನಿಯವರು ಉಜ್ವಲ್ 2.0 ಅನ್ನು ಚುನಾವಣೆಗೆ ಸಿದ್ಧವಾಗಿದ್ದಉತ್ತರ ಪ್ರದೇಶದಲ್ಲಿ ಪ್ರಾರಂಭಿಸಿದರು. ಯೋಜನೆಯ ಎರಡನೇ ಹಂತವನ್ನು ಗುರುತಿಸಲು ವರ್ಚುವಲ್ ಆಗಿ 10 ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕಗಳನ್ನು ವಿತರಿಸಿದರು. 2.0 ಆವೃತ್ತಿಯು PMUY ಯ ಹಿಂದಿನ ಹಂತದಲ್ಲಿ ಒಳಪಡದೇ ಇರುವ ಕಡಿಮೆ ಆದಾಯದ ಕುಟುಂಬಗಳಿಗೆ 1 ಕೋಟಿ ಹೆಚ್ಚುವರಿ ಸಂಪರ್ಕಗಳನ್ನು ಖಾತರಿಪಡಿಸುತ್ತದೆ.
ಠೇವಣಿ-ಮುಕ್ತ ಎಲ್ ಪಿಜಿ ಸಂಪರ್ಕದ ಜೊತೆಗೆ, ಉಜ್ವಲ್ 2.0 ಫಲಾನುಭವಿಗಳಿಗೆ ಮೊದಲ ಮರುಪೂರಣ ಮತ್ತು ಹಾಟ್‌ಪ್ಲೇಟ್ ಅನ್ನು ಉಚಿತವಾಗಿ ನೀಡುತ್ತದೆ. ದಾಖಲಾತಿ ಪ್ರಕ್ರಿಯೆಗೆ ಕನಿಷ್ಠ ದಾಖಲೆಗಳ ಅಗತ್ಯವಿರುತ್ತದೆ. ಉಜ್ವಲ್ 2.0 ರಲ್ಲಿ, ವಲಸಿಗರು ಪಡಿತರ ಚೀಟಿಗಳು ಅಥವಾ ವಿಳಾಸ ಪುರಾವೆಗಳನ್ನು ಸಲ್ಲಿಸುವ ಅಗತ್ಯವಿಲ್ಲ.
ಜನ್ ಧನ್ ಯೋಜನೆ
ಆಗಸ್ಟ್ 15, 2014 ರಂದು ಕೆಂಪು ಕೋಟೆಯಿಂದ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆರ್ಥಿಕ ಸೇರ್ಪಡೆಗಾಗಿ ರಾಷ್ಟ್ರೀಯ ಮಿಷನ್ ಆಗಿರುವ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY) ಘೋಷಿಸಿದರು. ಸರ್ಕಾರದ ಪ್ರಮುಖ ಯೋಜನೆಯ ಪ್ರಾಥಮಿಕ ಉದ್ದೇಶವು ಕೈಗೆಟುಕುವ ವೆಚ್ಚದಲ್ಲಿ ಹಣಕಾಸಿನ ಉತ್ಪನ್ನಗಳು ಮತ್ತು ಸೇವೆಗಳಿಗೆ ಪ್ರವೇಶವನ್ನು ಖಾತರಿ ಪಡಿಸುವುದಾಗಿದೆ.
ವಿದ್ಯಾರ್ಥಿವೇತನ, ಸಬ್ಸಿಡಿಗಳು, ಪಿಂಚಣಿಗಳು ಮತ್ತು ಕೊವಿಡ್ ಪರಿಹಾರ ನಿಧಿಗಳಂತಹ ಪ್ರಯೋಜನಗಳನ್ನು ಜನ್ ಧನ್ ಖಾತೆಗಳು ಸೇರಿದಂತೆ ಬ್ಯಾಂಕ್ ಖಾತೆಗಳಿಗೆ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಜಮಾ ಮಾಡಲಾಗುತ್ತದೆ.
ಈ ವರ್ಷದ ಜನವರಿ 9 ರ ಹೊತ್ತಿಗೆ, ಜನ್ ಧನ್ ಯೋಜನೆಯಡಿ ತೆರೆಯಲಾದ ಬ್ಯಾಂಕ್ ಖಾತೆಗಳಲ್ಲಿನ ಠೇವಣಿಯು 1.5 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಹಣಕಾಸು ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2021 ರ ಡಿಸೆಂಬರ್ ಅಂತ್ಯದ ವೇಳೆಗೆ 44.23 ಕೋಟಿ ಪಿಎಂಜೆಡಿವೈ ಖಾತೆಗಳಲ್ಲಿನ ಒಟ್ಟು ಹಣ 1,50,939.36 ಕೋಟಿ ರೂ. ಆಗಿದೆ. ಅಂಕಿಅಂಶಗಳ ಪ್ರಕಾರ ಒಟ್ಟು 44.23 ಕೋಟಿ ಖಾತೆಗಳಲ್ಲಿ 34.9 ಕೋಟಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ, 8.05 ಕೋಟಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಮತ್ತು ಉಳಿದ 1.28 ಕೋಟಿ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿವೆ. ಅಂಕಿಅಂಶಗಳ ಪ್ರಕಾರ, ಗ್ರಾಮೀಣ ಮತ್ತು ಸೆಮಿ ಅರ್ಬನ್ ಬ್ಯಾಂಕ್ ಶಾಖೆಗಳಲ್ಲಿ 29.54 ಕೋಟಿ ಜನ್ ಧನ್ ಖಾತೆಗಳನ್ನು ಇರಿಸಲಾಗಿದೆ. ಡಿಸೆಂಬರ್ 29, 2021 ರ ಹೊತ್ತಿಗೆ ಸುಮಾರು 24.61 ಕೋಟಿ ಖಾತೆದಾರರು ಮಹಿಳೆಯರಿದ್ದಾರೆ. ಯೋಜನೆಯ ಮೊದಲ ವರ್ಷದಲ್ಲಿ 17.90 ಕೋಟಿ ಎಂಜೆಡಿವೈ ಖಾತೆಗಳನ್ನು ತೆರೆಯಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾರ್ಗಸೂಚಿಯ ಪ್ರಕಾರ, ಜನ್ ಧನ್ ಖಾತೆಗಳು ಸೇರಿದಂತೆ ಮೂಲ ಉಳಿತಾಯ ಬ್ಯಾಂಕ್ ಠೇವಣಿ (BSBD) ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸುವ ಅಗತ್ಯವಿಲ್ಲ. ಜನ್ ಧನ್ ಖಾತೆದಾರರು ನಡೆಸುವ ವಹಿವಾಟುಗಳನ್ನು ಅವಲಂಬಿಸಿ, ಯಾವುದೇ ಜನ್ ಧನ್ ಖಾತೆಗಳಲ್ಲಿನ ಬ್ಯಾಲೆನ್ಸ್ ದಿನದಿಂದ ದಿನಕ್ಕೆ ಬದಲಾಗಬಹುದು ಮತ್ತು ನಿರ್ದಿಷ್ಟ ದಿನದಲ್ಲಿ ಶೂನ್ಯವಾಗಬಹುದು. ಡಿಸೆಂಬರ್ 8, 2021 ರ ಹೊತ್ತಿಗೆ, ಶೂನ್ಯ ಬ್ಯಾಲೆನ್ಸ್ ಖಾತೆಗಳ ಒಟ್ಟು ಸಂಖ್ಯೆ 3.65 ಕೋಟಿ ಆಗಿತ್ತು, ಇದು ಒಟ್ಟು ಜನ್ ಧನ್ ಖಾತೆಗಳ ಶೇ 8.3 ರಷ್ಟಿದೆ ಎಂದು ಸರ್ಕಾರವು ಡಿಸೆಂಬರ್, 2021 ರಲ್ಲಿ ಸಂಸತ್ತಿಗೆ ತಿಳಿಸಿತ್ತು.
ಕಿಸಾನ್ ಸಮ್ಮಾನ್ ನಿಧಿ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿಯಲ್ಲಿ ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ 6,000 ರೂಪಾಯಿಗಳ ಆರ್ಥಿಕ ಪ್ರಯೋಜನವನ್ನು ಒದಗಿಸಲಾಗುತ್ತದೆ. ಅಂದರೆ 2,000 ರೂಪಾಯಿಗಳ ಮೂರು ಸಮಾನ ಕಂತುಗಳಲ್ಲಿ ಪಾವತಿಸಲಾಗುತ್ತದೆ. ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಈ ವರ್ಷದ ಜನವರಿ 1 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಾದ್ಯಂತ 10.09 ಕೋಟಿಗೂ ಹೆಚ್ಚು ರೈತರಿಗೆ ಈ ಯೋಜನೆಯಡಿಯಲ್ಲಿ 10 ನೇ ಕಂತು ಆರ್ಥಿಕ ಸಹಾಯವಾಗಿ 20,900 ಕೋಟಿ ರೂ. ನೀಡಿದ್ದಾರೆ. ಬಿಡುಗಡೆಯಾದ ಇತ್ತೀಚಿನ ಕಂತು ಸೇರಿಸಿಯೋಜನೆಯಡಿ ಒದಗಿಸಲಾದ ಒಟ್ಟು ಮೊತ್ತವು ಸುಮಾರು 1.8 ಲಕ್ಷ ಕೋಟಿ ರೂಪಾಯಿಗಳಾಗಿದೆ. PM-KISAN ಯೋಜನೆಯನ್ನು ಫೆಬ್ರವರಿ 2019 ರ ಬಜೆಟ್‌ನಲ್ಲಿ ಘೋಷಿಸಲಾಯಿತು. ಮೊದಲ ಕಂತು ಡಿಸೆಂಬರ್ 2018 ರಿಂದ ಮಾರ್ಚ್ 2019 ರವರೆಗೆ ಇತ್ತು.
ವಿಮೆ ಮತ್ತು ಪಿಂಚಣಿ ಯೋಜನೆ
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಗಳನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ದೇಶದಲ್ಲಿ ವಿಮೆ ಪ್ರವೇಶದ ಮಟ್ಟವನ್ನು ಹೆಚ್ಚಿಸುವ ಮತ್ತು ಸಾಮಾನ್ಯ ಜನರಿಗೆ, ವಿಶೇಷವಾಗಿ ಬಡವರು ಮತ್ತು ಕೆಳಗಿರುವವರಿಗೆ ವಿಮಾ ರಕ್ಷಣೆಯನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಗೆ ಚಾಲನೆ ನೀಡಲಾಗಿದೆ.
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ರೂ 2 ಲಕ್ಷದ ಜೀವ ವಿಮಾ ರಕ್ಷಣೆಯನ್ನು ನೀಡುತ್ತದೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ರೂ 2 ಲಕ್ಷಗಳ ಅಪಘಾತ ಅಥವಾ ಸಂಪೂರ್ಣ ಶಾಶ್ವತ ಅಂಗವೈಕಲ್ಯ ರಕ್ಷಣೆ ಮತ್ತು ರೂ 1 ಲಕ್ಷದ ಶಾಶ್ವತ ಭಾಗಶಃ ಅಂಗವೈಕಲ್ಯ ರಕ್ಷಣೆಯನ್ನು ನೀಡುತ್ತದೆ.
ಅಟಲ್ ಪಿಂಚಣಿ ಯೋಜನೆ (APY) ಆಯ್ಕೆಮಾಡಿದ ಪಿಂಚಣಿ ಮೊತ್ತದ ಆಧಾರದ ಮೇಲೆ 60 ವರ್ಷಗಳ ವಯಸ್ಸಿನಲ್ಲಿ ಕನಿಷ್ಠ ರೂ 1,000/ ರೂ 2,000/ ರೂ 3,000/ ರೂ 4,000/ ರೂ 5,000 ರ ಖಾತರಿಯ ಕನಿಷ್ಠ ಮಾಸಿಕ ಪಿಂಚಣಿಯನ್ನು ಒದಗಿಸುತ್ತದೆ.
ಈ ಯೋಜನೆಯು 18 ರಿಂದ 40 ವರ್ಷದೊಳಗಿನ ಖಾತೆದಾರರಿಗೆ ಲಭ್ಯವಿರುತ್ತದೆ ಮತ್ತು ತಿಂಗಳಿಗೆ 42 ರೂ.ಗಳಿಂದ ಪ್ರಾರಂಭವಾಗುವ ಗ್ರಾಹಕರ ಕೊಡುಗೆಯನ್ನು ಅವಲಂಬಿಸಿ, ರೂ 1,000 ಮತ್ತು ರೂ 5,000 ರ ನಡುವಿನ ಕನಿಷ್ಟ ಖಾತರಿಯ ಮಾಸಿಕ ಪಿಂಚಣಿಯನ್ನು ನೀಡುತ್ತದೆ.
ಚಂದಾದಾರರ ಮರಣದ ನಂತರ ಸಂಗಾತಿಯು ಮಾಸಿಕ ಪಿಂಚಣಿಯನ್ನು ಪಡೆಯುತ್ತಾರೆ ಮತ್ತು ಚಂದಾದಾರರು ಮತ್ತು ಸಂಗಾತಿಯ ಮರಣದ ಸಂದರ್ಭದಲ್ಲಿ ನಾಮಿನಿಯು 8.5 ಲಕ್ಷದವರೆಗೆ ಕಾರ್ಪಸ್ ಮೊತ್ತವನ್ನು ಪಡೆಯುತ್ತಾರೆ.
ಎಪಿವೈ ನಿಯಮಗಳ ಪ್ರಕಾರ, 60 ವರ್ಷ ವಯಸ್ಸಿನಿಂದ ಚಂದಾದಾರರು ಅವರ ಕೊಡುಗೆಯನ್ನು ಅವಲಂಬಿಸಿ ತಿಂಗಳಿಗೆ ರೂ 1,000- ರೂ 5,000 ರ ಕನಿಷ್ಠ ಖಾತರಿ ಪಿಂಚಣಿ ಪಡೆಯುತ್ತಾರೆ. ಅದೇ ಪಿಂಚಣಿಯನ್ನು ಚಂದಾದಾರರ ಸಂಗಾತಿಗೆ ಪಾವತಿಸಲಾಗುವುದು. ಚಂದಾದಾರರು ಮತ್ತು ಸಂಗಾತಿಯ ಮರಣದ ನಂತರ ಒಟ್ಟು ಪಿಂಚಣಿ ಮೊತ್ತವನ್ನು ನಾಮಿನಿಗೆ ಹಿಂತಿರುಗಿಸಲಾಗುತ್ತದೆ.
ಎಲ್ಲರಿಗೂ ಮನೆ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜೂನ್ 2015 ರಲ್ಲಿ ಪ್ರಾರಂಭಿಸಿದ ಪ್ರಧಾನ ಮಂತ್ರಿ ಆವಾಸ್ ಯೋಜನೆಯು “2022 ರ ವೇಳೆಗೆ ಎಲ್ಲರಿಗೂ ಸೂರು” ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ. 2022 ರ ತಮ್ಮ ಬಜೆಟ್ ಭಾಷಣದಲ್ಲಿ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಮುಂದಿನ ಹಣಕಾಸು ವರ್ಷದಲ್ಲಿ ಗ್ರಾಮೀಣ ಮತ್ತು ನಗರಗಳೆರಡರಲ್ಲೂ PMAY ಅಡಿಯಲ್ಲಿ 80 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು 48,000 ಕೋಟಿ ರೂ.ಅನುದಾನ ನೀಡುವುದಾಗಿ ಹೇಳಿದ್ದರು. ಪ್ರಧಾನ ಮಂತ್ರಿ ಆವಾಸ್ ಯೋಜನೆ – ಗ್ರಾಮೀಣ (PMAY-G) ಕಾರ್ಯಕ್ರಮದ ಅಡಿಯಲ್ಲಿ 2020-21 ರಲ್ಲಿ 33.99 ಲಕ್ಷ ಮನೆಗಳು ಮತ್ತು ನವೆಂಬರ್ 25, 2021 ರಂತೆ 26.20 ಲಕ್ಷ ಯೂನಿಟ್‌ಗಳು ಪೂರ್ಣಗೊಂಡಿವೆ ಎಂದು ಆರ್ಥಿಕ ಸಮೀಕ್ಷೆ 2022 ಹೇಳಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ – ಅರ್ಬನ್ (PMAY-U) ಗಾಗಿ, ಆರ್ಥಿಕ ವರ್ಷ 2021 ರಲ್ಲಿ 14.56 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗಿದೆ. 2021-22ರಲ್ಲಿ 4.49 ಲಕ್ಷ ಮನೆಗಳು 2021ರ ಡಿಸೆಂಬರ್‌ವರೆಗೆ ಪೂರ್ಣಗೊಂಡಿವೆ ಎಂದು ಸಮೀಕ್ಷೆ ಹೇಳಿದೆ.
ಸ್ವಚ್ಛ ಭಾರತ್
ಪ್ರಧಾನಿ ನರೇಂದ್ರ ಮೋದಿ ಅವರು 2014 ರಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಘೋಷಿಸಿದರು. ದೇಶಾದ್ಯಂತ ಬಯಲು ಶೌಚವನ್ನು ತೊಡೆದುಹಾಕಲು ಸರ್ಕಾರವು 11.5 ಕೋಟಿ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿದೆ. 2022-23 ರ ಬಜೆಟ್‌ನಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಗಾಗಿ ರೂ 7,192 ಕೋಟಿಗಳನ್ನು ನಿಗದಿಪಡಿಸಲಾಗಿದೆ. 2021-2026 ರ ಅವಧಿಯಲ್ಲಿ ರೂ 1,41,678 ಕೋಟಿಗಳನ್ನು ಸ್ವಚ್ಛ ಭಾರತ್ ಮಿಷನ್ (ನಗರ) ಗಾಗಿ ಖರ್ಚು ಮಾಡಲಾಗುವುದು. ಪ್ರಧಾನಮಂತ್ರಿಯವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸ್ವಚ್ಛ ಭಾರತ್ ಮಿಷನ್‌ನ ಎರಡನೇ ಹಂತವನ್ನು ಪ್ರಾರಂಭಿಸಿದರು. ಇದು ಎಲ್ಲಾ ನಗರಗಳನ್ನು ‘ಕಸ ಮುಕ್ತ’ ಮಾಡಲು, ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳನ್ನು ಬಯಲು ಶೌಚ ಮುಕ್ತಗೊಳಿಸಲು ಮತ್ತು 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವವುಗಳನ್ನು ಬಯಲು ಶೌಚ ಮುಕ್ತ ಮಾಡಲು ಯೋಜಿಸಿದೆ. ಈ ಅಭಿಯಾನವು ಘನತ್ಯಾಜ್ಯದ ಮೂಲ ವಿಂಗಡಣೆ, 3Rಗಳ ತತ್ವಗಳನ್ನು (reduce, reuse, recycle), ಎಲ್ಲಾ ರೀತಿಯ ಘನತ್ಯಾಜ್ಯಗಳ ವೈಜ್ಞಾನಿಕ ಸಂಸ್ಕರಣೆ ಮತ್ತು ಪರಿಣಾಮಕಾರಿ ಘನತ್ಯಾಜ್ಯ ನಿರ್ವಹಣೆಗಾಗಿ ಡಂಪ್‌ಸೈಟ್‌ಗಳ ಪರಿಹಾರದ ಮೇಲೆ ಕೇಂದ್ರೀಕರಿಸುತ್ತದೆ.
ಮುದ್ರಾ ಯೋಜನೆ
ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಸಣ್ಣ ಉದ್ಯಮಿಗಳಿಗೆ ರೂ 10 ಲಕ್ಷದವರೆಗೆ ಸಾಲವನ್ನು ಒದಗಿಸುವ ಸರ್ಕಾರದ ಪ್ರಮುಖ ಯೋಜನೆಯಾಗಿದೆ. ಬ್ಯಾಂಕ್‌ಗಳು, ಸಣ್ಣ ಹಣಕಾಸು ಬ್ಯಾಂಕ್‌ಗಳು, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ಮತ್ತು ಮೈಕ್ರೋಫೈನಾನ್ಸ್ ಸಂಸ್ಥೆಗಳಿಂದ ಸಾಲವನ್ನು ನೀಡಲಾಗುತ್ತಿದೆ. ಕಾರ್ಪೊರೇಟ್ ಹೊರತಾಗಿ, ಕೃಷಿ ವಲಯಕ್ಕೆ ಅಲ್ಲದೆ ಸಣ್ಣ/ಕಿರು ಸಂಸ್ಥೆಗಳಿಗೆ 10 ಲಕ್ಷ ರೂಪಾಯಿ ತನಕ ಸಾಲ ನೀಡುವಂಥ ಯೋಜನೆ ಇದು. ಇವುಗಳನ್ನು ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಮುದ್ರಾ ಸಾಲಗಳು ಎಂದು ವರ್ಗೀಕರಿಸಲಾಗುತ್ತದೆ. ಈ ಸಾಲಗಳನ್ನು ವಾಣಿಜ್ಯ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ಸಣ್ಣ ಹಣಕಾಸು ಬ್ಯಾಂಕ್, ಕೋ ಆಪರೇಟಿವ್ ಬ್ಯಾಂಕ್, ಕಿರು ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಮೂಲಕವಾಗಿ ವಿತರಿಸಲಾಗುತ್ತದೆ. ಈ ಮೇಲ್ಕಂಡ ಯಾವ ಸಂಸ್ಥೆಯನ್ನಾದರೂ ಸಾಲಕ್ಕಾಗಿ ಮನವಿ ಮಾಡಿಕೊಳ್ಳಬಹುದು, ಇಲ್ಲದಿದ್ದರೆ ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಅಪ್ಲೈ ಮಾಡಬಹುದು.
ಈ ವರ್ಷದ ಏಪ್ರಿಲ್ 8 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯೋಜನೆಯಡಿ 34.42 ಕೋಟಿಗೂ ಹೆಚ್ಚು ಫಲಾನುಭವಿಗಳು 18.60 ಲಕ್ಷ ಕೋಟಿ ರೂಪಾಯಿ ಸಾಲವನ್ನು ಪಡೆದಿದ್ದಾರೆ ಎಂದು ಹೇಳಿದರು. 68 ಕ್ಕಿಂತ ಹೆಚ್ಚು ಸಾಲ ಖಾತೆಗಳನ್ನು ಮಹಿಳೆಯರಿಗೆ ಮಂಜೂರು ಮಾಡಲಾಗಿದೆ. 22 ರಷ್ಟು ಸಾಲವನ್ನು ಯೋಜನೆ ಪ್ರಾರಂಭದಿಂದಲೂ ಯಾವುದೇ ಸಾಲವನ್ನು ಪಡೆಯದ ಹೊಸ ಉದ್ಯಮಿಗಳಿಗೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
Published On - 8:30 am, Wed, 25 May 22