ಕೋಲ್ಕತ್ತ: ನಾಳೆ (ಮೇ 2) ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ. ದೇಶಾದ್ಯಂತ ಕೊರೊನಾ ಎರಡನೇ ಅಲೆ ಅಪ್ಪಳಿಸುತ್ತಿರುವ ಈ ಹೊತ್ತಲ್ಲಿ ಮತಎಣಿಕೆ ನಡೆಯಲಿದ್ದು, ಯಾವುದೇ ಪಕ್ಷಗಳು ಗೆದ್ದರೂ ವಿಜಯೋತ್ಸವಕ್ಕೆ ಅವಕಾಶ ಇಲ್ಲ ಎಂದು ಈಗಾಗಲೇ ಚುನಾವಣಾ ಆಯೋಗ ಹೇಳಿದೆ. ಅಲ್ಲದೆ, ಅಭ್ಯರ್ಥಿಯೊಂದಿಗೆ ಇಬ್ಬರು ಮಾತ್ರ ಮತ ಎಣಿಕೆ ಸ್ಥಳಕ್ಕೆ ಆಗಮಿಸಲು ಅವಕಾಶ ನೀಡಲಾಗಿದೆ. ಹಾಗೇ ಅದಕ್ಕೂ ಮೊದಲು ಮತಗಟ್ಟೆ ಏಜೆಂಟ್ಗಳು ಸೇರಿ, ಅಲ್ಲಿಗೆ ಬರುವ ಪ್ರತಿಯೊಬ್ಬರೂ ಕೊವಿಡ್ 19 ಟೆಸ್ಟ್ ಮಾಡಿಸಿಕೊಂಡು, ನೆಗೆಟಿವ್ ವರದಿ ತರುವುದು ಕಡ್ಡಾಯ ಎಂದೂ ಚುನಾವಣಾ ಆಯೋಗ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಇಂದು ಕೊರೊನಾ ತಪಾಸಣಾ ಕೇಂದ್ರದ ಬಳಿ ಹಲವು ಅಭ್ಯರ್ಥಿಗಳು, ಅವರ ಸಹಾಯಕರು ಕೊವಿಡ್ ತಪಾಸಣೆಗಾಗಿ ಗುಂಪುಗೂಡಿದ್ದಾರೆ. ಅದರಲ್ಲೂ ಜಿಲ್ಲಾ ಚುನಾವಣಾ ಅಧಿಕಾರಿಗಳು, ಕೊವಿಡ್ ರ್ಯಾಪಿಡ್ ಆ್ಯಂಟಿಜನ್ ತಪಾಸಣೆಗಾಗಿ ಪಶ್ಚಿಮಬಂಗಾಳದ ನೇತಾಜಿ ಒಳಾಂಗಣ ಕ್ರಿಡಾಂಗಣ ಮತ್ತು ಬ್ಯಾಲಿಗಂಜ್ ಸರ್ಕಾರಿ ಶಾಲೆಗಳಲ್ಲಿ ವ್ಯವಸ್ಥೆ ಮಾಡಿದ್ದು, ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಪುಗೂಡುತ್ತಿದ್ದಾರೆ. ನಾಳೆ ಮತ ಎಣಿಕೆಗೂ ಮುನ್ನ ಕೊವಿಡ್ ಟೆಸ್ಟ್ ಮಾಡಿಸಿ, ರಿಪೋರ್ಟ್ ಪಡೆಯುವ ಅವಸರದಲ್ಲಿ ಇರುವುದರಿಂದ ಇದೆರಡೂ ಸ್ಥಳಗಳಲ್ಲಿ ಜನಸಂದಣಿ ನಿರ್ಮಾಣ ಆಗಿದೆ.
ನಮಗೆ ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರಿಗೂ RT-PCR ಟೆಸ್ಟ್ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡಿಸಿಕೊಂಡು, ಅರ್ಧಗಂಟೆಯಲ್ಲಿ ರಿಪೋರ್ಟ್ ಪಡೆಯಬೇಕಾಗಿದೆ. ಆ ರಿಪೋರ್ಟ್ನ್ನು ನಾಳೆ ಚುನಾವಣಾ ಅಧಿಕಾರಿಗಳಿಗೆ ನೀಡಿದರೆ ಮಾತ್ರ ಮತ ಎಣಿಕೆ ಕೇಂದ್ರಗಳಿಗೆ ಪ್ರವೇಶ ಸಿಗುತ್ತದೆ ಎಂದು ಜೋರಬಗನ್ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಏಜೆಂಟ್ ಮಣಿಕ್ ಸಿಂಗ್ ತಿಳಿಸಿದ್ದಾರೆ.
ಈಗಾಗಲೇ ಸುಮಾರು ಜನ ಚುನಾವಣಾ ಏಜೆಂಟ್ಗಳು, ಅವರ ಕುಟುಂಬಸ್ಥರಿಗೆ ಕೊರೊನಾ ಸೋಂಕು ತಗುಲಿದೆ. ಹಾಗಾಗಿ ಏಜೆಂಟ್ಗಳನ್ನು ಆಯಾ ಮತಎಣಿಕೆ ಕೇಂದ್ರಗಳಿಗೆ ಕಳಿಸುವುದಕ್ಕೂ ಮೊದಲು ಅವರ ಕೊವಿಡ್ 19ತಪಾಸಣೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಜೋರಸಂಕೊದ ಸಂಜುಕ್ತ ಮೋರ್ಚಾ ಅಭ್ಯರ್ಥಿ ಅಜ್ಮಲ್ ಖಾನ್ ತಿಳಿಸಿದ್ದಾರೆ. ಯಾವುದೇ ಏಜೆಂಟ್ಗೆ ಕೊರೊನಾ ಪಾಸಿಟಿವ್ ಬಂದರೆ ಅವರ ಬದಲಿಗೆ ಇನ್ನೊಬ್ಬರನ್ನು ಕಳಿಸುತ್ತೇವೆ ಎಂದೂ ತಿಳಿಸಿದ್ದಾರೆ. ಇದೇ ನಿರ್ಧಾರವನ್ನು ಬಹುತೇಕ ಎಲ್ಲ ಪಕ್ಷಗಳೂ ಕೈಗೊಂಡಿವೆ. ಈ ಮಧ್ಯೆ ತೃಣಮೂಲ ಕಾಂಗ್ರೆಸ್ನಿಂದ ಸಾಧ್ಯವಾದಷ್ಟು ಎರಡೂ ಡೋಸ್ ಲಸಿಕೆ ಪಡೆದವರನ್ನೇ ಏಜೆಂಟ್ ಆಗಿ ಕಳಿಸಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಕೊವಿಡ್ ವ್ಯಾಕ್ಸಿನ್ ಬಗ್ಗೆ ತಪ್ಪು ಮಾಹಿತಿ ಹರಡಿದ ನಟನಿಗೆ 2 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್
Covid India Update: ದೇಶದಲ್ಲಿ ಕೊವಿಡ್ ಎರಡನೇಯ ಅಲೆ ಹೆಚ್ಚಳ; ಸೋಂಕಿತರ ಸಂಖ್ಯೆ ದ್ವಿಗುಣ