AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್‌ಐಆರ್‌ನಲ್ಲಿ ಹೆಸರಿಲ್ಲದ ಮತದಾರರಿಗೆ ಮತ್ತೊಂದು ಅವಕಾಶ; ಚುನಾವಣಾ ಆಯೋಗ ಮಹತ್ವದ ಆದೇಶ

ಎಸ್​ಐಆರ್​​ನಿಂದ ಕೈಬಿಟ್ಟ ಮತದಾರರಿಗೆ ಕೇಂದ್ರ ಚುನಾವಣಾ ಆಯೋಗ ಮತ್ತೊಂದು ಅವಕಾಶ ನೀಡಿದೆ. ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದ ಮತದಾರರಿಗೆ ಅಂತಿಮ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ನೀಡಲಾಗಿದೆ. ಗೈರು, ಸ್ಥಳಾಂತರ, ಮೃತಪಟ್ಟವರು ಹಾಗೂ ನಕಲಿ ಮತದಾರರು ಎಂದು ಗುರುತಿಸಲ್ಪಟ್ಟವರ ಬೂತ್‌ವಾರು ಪಟ್ಟಿಯನ್ನು ಮತ್ತೊಮ್ಮೆ ಪ್ರಕಟಿಸಲು ಸೂಚನೆ ನೀಡಲಾಗಿದೆ. ಮತಗಟ್ಟೆ, ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಮತದಾರರ ಪಟ್ಟಿ ಪ್ರದರ್ಶನ ಮಾಡಲಾಗುವುದು. ಮುಖ್ಯ ಚುನಾವಣಾಧಿಕಾರಿಗಳ ವೆಬ್‌ಸೈಟ್‌ನಲ್ಲೂ ಓದಲು ಸಾಧ್ಯವಾಗುವ ಪಿಡಿಎಫ್ ರೂಪದಲ್ಲಿ ಪಟ್ಟಿ ಪ್ರಕಟಿಸಲು ಸೂಚನೆ ನೀಡಲಾಗಿದೆ.

ಎಸ್‌ಐಆರ್‌ನಲ್ಲಿ ಹೆಸರಿಲ್ಲದ ಮತದಾರರಿಗೆ ಮತ್ತೊಂದು ಅವಕಾಶ; ಚುನಾವಣಾ ಆಯೋಗ ಮಹತ್ವದ ಆದೇಶ
ಚುನಾವಣಾ ಆಯೋಗImage Credit source: PTI
ಸುಷ್ಮಾ ಚಕ್ರೆ
|

Updated on: Nov 06, 2026 | 6:13 PM

Share

ನವದೆಹಲಿ, ನವೆಂಬರ್ 6: ಭಾರತದಲ್ಲಿ ನಡೆಯುತ್ತಿರುವ ಎಸ್​ಐಆರ್​ ಪ್ರಕ್ರಿಯೆಯ ಕರಡು ಮತದಾರರ ಪಟ್ಟಿಯಿಂದ ಹೆಸರು ಹೊರಗುಳಿದಿರುವ ಮತದಾರರಿಗೆ ಮತ್ತೊಂದು ಅವಕಾಶ ನೀಡುವಂತೆ ಭಾರತೀಯ ಚುನಾವಣಾ ಆಯೋಗವು 6 ರಾಜ್ಯಗಳು ಹಾಗೂ ದೆಹಲಿ ಕೇಂದ್ರಾಡಳಿತ ಪ್ರದೇಶದ ಮುಖ್ಯ ಚುನಾವಣಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಚುನಾವಣಾ ಆಯೋಗವು ಇಂದು ಬರೆದಿರುವ ಪತ್ರದಲ್ಲಿ, ಮಹಾರಾಷ್ಟ್ರ, ಹರಿಯಾಣ, ಆಂಧ್ರಪ್ರದೇಶ, ಜಾರ್ಖಂಡ್, ತೆಲಂಗಾಣ, ನಾಗಾಲ್ಯಾಂಡ್ ಹಾಗೂ ದೆಹಲಿಯಲ್ಲಿ ಹಂಚಿಕೆಯಾಗಿದ್ದ ‘ಎನ್ಯುಮರೇಷನ್ ಫಾರ್ಮ್’ ಪಡೆದು, ನಂತರ ASDD (ಗೈರುಹಾಜರಿ, ಸ್ಥಳಾಂತರ, ಮೃತ ಅಥವಾ ನಕಲಿ) ಎಂದು ಗುರುತಿಸಲ್ಪಟ್ಟು ಹೆಸರು ಕಳೆದುಕೊಂಡ ಮತದಾರರ ಹೆಸರನ್ನು ಅಂತಿಮ ಪಟ್ಟಿಯಲ್ಲಿ ಸೇರಿಸಲು ಮರು ಫಾರ್ಮ್ ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿದೆ.

ಸಂಬಂಧಪಟ್ಟ ಮತದಾರರಿಗೆ ಹೊಸದಾಗಿ ಗಣತಿ ನಮೂನೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಬಿಎಲ್‌ಒಗಳ ಮೂಲಕ ಮನೆಮನೆಗೆ ತೆರಳಿ ಮತದಾರರನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಹಾಗೇ, ವಾಟ್ಸ್‌ಆ್ಯಪ್, ಇ-ಮೇಲ್, ಎಸ್‌ಎಂಎಸ್ ಮೂಲಕವೂ ಗಣತಿ ನಮೂನೆ ತಲುಪಿಸಲು ಅವಕಾಶ ನೀಡಲಾಗಿದೆ. ಇಸಿಐನೆಟ್ ಆ್ಯಪ್ ಹಾಗೂ ಚುನಾವಣಾ ಆಯೋಗದ ವೆಬ್‌ಸೈಟ್‌ನಿಂದಲೂ ನಮೂನೆ ಡೌನ್‌ಲೋಡ್ ಮಾಡಿ ಸಲ್ಲಿಸಬಹುದು. ಈ ಹಿಂದೆ ವಾಸವಿದ್ದ ಸ್ಥಳದಲ್ಲೇ ಇರುವವರು ನಮೂನೆಯೊಂದಿಗೆ ಹೆಸರು ಸೇರ್ಪಡೆಯಾಗದಿರುವ ಕಾರಣ ತಿಳಿಸುವ ಹೇಳಿಕೆ ಸಲ್ಲಿಸಬೇಕು. ರಾಜ್ಯದೊಳಗೆ ಸ್ಥಳಾಂತರಗೊಂಡವರು ಹೊಸ ವಿಳಾಸದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಸ್ಥಳಾಂತರಗೊಂಡವರಿಗೆ ಫಾರ್ಮ್-8 ಸಲ್ಲಿಸುವ ಅಗತ್ಯವಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಕರಡು ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದರೆ ಹಳೆಯ ಮತದಾರರೂ ಫಾರ್ಮ್-6 ಸಲ್ಲಿಸಬಹುದು; ಚುನಾವಣಾ ಆಯೋಗ ಸ್ಪಷ್ಟನೆ

ಯಾವುದೇ ದಾಖಲೆ ಇಲ್ಲದ ನಿರಾಶ್ರಿತ ಮತದಾರರು ಬೂತ್ ಮಟ್ಟದ ಅಧಿಕಾರಿಯ (ಬಿಎಲ್​ಒ) ಕ್ಷೇತ್ರ ಪರಿಶೀಲನಾ ವರದಿಯನ್ನೇ ವಿಳಾಸದ ಪುರಾವೆಯಾಗಿ ಬಳಸಬಹುದು. ಈಗಾಗಲೇ ಎಸ್‌ಐಆರ್‌ನಲ್ಲಿ ಹೊಸ ನೋಂದಣಿಗಾಗಿ ಫಾರ್ಮ್-6 ಸಲ್ಲಿಸಿದವರು ಮತ್ತೆ ಗಣತಿ ನಮೂನೆ ಸಲ್ಲಿಸುವ ಅಗತ್ಯವಿಲ್ಲ. ಅರ್ಹತೆ ಮತ್ತು ವಿಳಾಸ ಪರಿಶೀಲನೆ ಬಳಿಕ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲಾಗುವುದು. ಈ ಹಿಂದೆ ನೀಡಲಾಗಿದ್ದ ಅದೇ ಮತದಾರರ ಗುರುತಿನ ಚೀಟಿಯ ಸಂಖ್ಯೆಯನ್ನು ಮತ್ತೆ ನೀಡಲು ಸೂಚನೆ ನೀಡಲಾಗಿದೆ. ದೆಹಲಿ, ಮಹಾರಾಷ್ಟ್ರ, ಹರಿಯಾಣ, ಆಂಧ್ರಪ್ರದೇಶ, ಜಾರ್ಖಂಡ್, ತೆಲಂಗಾಣ ಮತ್ತು ನಾಗಾಲ್ಯಾಂಡ್ ಈ 7 ರಾಜ್ಯಗಳಿಗೆ ಅನ್ವಯವಾಗುವಂತೆ ಚುನಾವಣಾ ಆಯೋಗದ ಆದೇಶ ನೀಡಿದೆ.

ಇದನ್ನೂ ಓದಿ: ಎಸ್​ಐಆರ್ ಗಡುವು ವಿಸ್ತರಣೆ: ದೆಹಲಿ ಸೇರಿ 6 ರಾಜ್ಯಗಳಿಗೆ ಚುನಾವಣಾ ಆಯೋಗದಿಂದ ಹೊಸ ಡೆಡ್‌ಲೈನ್

ASDD ವರ್ಗದಡಿ ಗುರುತಿಸಲಾದ ಮತದಾರರ ಬೂತ್‌ವಾರ ಪಟ್ಟಿಯನ್ನು ಆಯಾ ಮತದಾನ ಕೇಂದ್ರಗಳು, ಪಂಚಾಯತ್ ಭವನಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳ ನೋಟಿಸ್ ಬೋರ್ಡ್‌ಗಳಲ್ಲಿ ಮತ್ತೆ ಪ್ರದರ್ಶಿಸಲಾಗುತ್ತದೆ. ಜೊತೆಗೆ, ಮುಖ್ಯ ಚುನಾವಣಾಧಿಕಾರಿಗಳ ವೆಬ್‌ಸೈಟ್‌ಗಳಲ್ಲಿ ಪಿಡಿಎಫ್ ರೂಪದಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.

ಯಾವುದೇ ಅರ್ಹ ಮತದಾರರು ಅಂತಿಮ ಮತದಾರರ ಪಟ್ಟಿಯಿಂದ ವಂಚಿತರಾಗಬಾರದು ಹಾಗೂ ಅದೇ ಸಮಯದಲ್ಲಿ ನಕಲಿ ಹೆಸರುಗಳು ಸೇರ್ಪಡೆಯಾಗದಂತೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಲು ಚುನಾವಣಾ ಆಯೋಗವು ಅಧಿಕಾರಿಗಳಿಗೆ ಆದೇಶಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More