ಕೊಚ್ಚಿ: ‘ನೀರು ಮತ್ತು ವಿದ್ಯುತ್ ಸಂಪರ್ಕವು ಘನತೆಯ ಬದುಕಿಗೆ ಅತ್ಯವಶ್ಯಕವಾಗಿ ಬೇಕಾದ ಅಂಶ. ಸಂವಿಧಾನದ 21ನೇ ಪರಿಚ್ಛೇದದಲ್ಲಿರುವ ಜೀವಿಸುವ ಹಕ್ಕಿನ ವ್ಯಾಪ್ತಿಯಲ್ಲಿ ಇವೂ ಬರುತ್ತವೆ’ ಎಂದು ಕೇರಳ ಹೈಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ. ವ್ಯಕ್ತಿಯೊಬ್ಬರಿಗೆ ವಿದ್ಯುತ್ ಸಂಪರ್ಕ ಒದಗಿಸಲು ತಡ ಮಾಡಿದ ವಿದ್ಯುತ್ ಮಂಡಳಿಯ ಇಬ್ಬರು ನೌಕರರಿಗೆ ಗ್ರಾಹಕರ ನ್ಯಾಯಾಲಯ ವಿಧಿಸಿರುವ ದಂಡಕ್ಕೆ ಯಾವುದೇ ವಿನಾಯ್ತಿ ನೀಡಲು ನಿರಾಕರಿಸಿದೆ.
ವಿದ್ಯುತ್ ಕಾಯ್ದೆಯ 43ನೇ ವಿಧಿಯನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಮುರಳಿ ಪುರುಷೋತ್ತಮನ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, ‘ಅರ್ಜಿ ಸ್ವೀಕರಿಸಿದ ಒಂದು ತಿಂಗಳ ಒಳಗೆ ಅರ್ಜಿದಾರರ ಬಳಕೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ವಿದ್ಯುತ್ ವಿತರಣಾ ಕಂಪನಿಗಳ ಶಾಸನಬದ್ಧ ಕರ್ತವ್ಯವಾಗಿರುತ್ತದೆ’ ಎಂದು ಹೇಳಿತು.
ಸೈನುದ್ದೀನ್ ಎಂಬುವವರ ಮನೆಗೆ ವಿದ್ಯುತ್ ಸಂಪರ್ಕ ನೀಡಲು ತಡ ಮಾಡಿದ್ದಕ್ಕಾಗಿ ಕೇರಳ ವಿದ್ಯುತ್ ಮಂಡಳಿಯ ಇಬ್ಬರು ಅಧಿಕಾರಿಗಳಿಗೆ ಗ್ರಾಹಕರ ವ್ಯಾಜ್ಯ ಪರಿಹಾರ ನ್ಯಾಯಾಲಯ ಮತ್ತು ಕೇರಳ ವಿದ್ಯುತ್ ನಿಯಂತ್ರಣ ಪ್ರಾಧಿಕಾರ ದಂಡ ವಿಧಿಸಿತ್ತು. ಈ ನಿರ್ಧಾರವನ್ನು ಅಧಿಕಾರಿಗಳಿಬ್ಬರೂ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ವಿಚಾರಣೆ ವೇಳೆ ಕಾವ್ಯಾತ್ಮಕವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ, ‘ಮನೆಯೊಳಗೆ ಒಂದು ಸಣ್ಣ ಬಲ್ಬ್ ಬೆಳಕು ಹರಿಸಬೇಕೆಂದು ಸೈನುದ್ದೀನ್ ಕಂಬದಿಂದ ಕಂಬಕ್ಕೆ ಅಲೆಯಬೇಕಾಯಿತು. ಗ್ರಾಹಕರ ವೇದಿಕೆ ವಿಧಿಸಿದ ದಂಡವಾಗಲಿ, ವಿದ್ಯುತ್ ನಿಯಂತ್ರಣಾ ಪ್ರಾಧಿಕಾರ ನೀಡಿದ ಶಿಕ್ಷೆಯಾಗಲಿ ಸೈನುದ್ದೀನ್ ಮನೆಗೆ ಬೆಳಕು ತರಲಿಲ್ಲ. ಈಗ ಇದೇ ಕಾರಣಕ್ಕೆ ಇವರಿಬ್ಬರೂ ಇಲ್ಲಿದ್ದಾರೆ’ ಎಂದು ವಿಷಾದಿಸಿದರು.
ಪ್ರಕರಣದ ವಿವರ
ಲೋ ಟೆನ್ಷನ್ (ಎಲ್ಟಿ) ವಿದ್ಯುತ್ ಮಾರ್ಗದಿಂದ ಕನಿಷ್ಠ ಅಂತರವನ್ನೂ ಕಾಪಾಡಿಕೊಳ್ಳದೇ ಸೈನುದ್ದೀನ್ ಮನೆ ಕಟ್ಟಿದ್ದರು. ಈ ಮಾರ್ಗ ಬದಲಾವಣೆಯ ನಂತರವಷ್ಟೇ ಸೈನುದ್ದೀನ್ ಮನೆಗೆ ವಿದ್ಯುತ್ ಸಂಪರ್ಕ ನೀಡಲು ಸಾಧ್ಯ ಎಂದು ವಿದ್ಯುತ್ ಮಂಡಳಿಯ ನೌಕರರು ವಾದಿಸಿದ್ದರು. ಈ ಬಗ್ಗೆ ವಿದ್ಯುತ್ ನಿಯಂತ್ರಣ ಪ್ರಾಧಿಕಾರಕ್ಕೆ ದೂರು ನೀಡಿದ್ದನ್ನು ಪ್ರಸ್ತಾಪಿಸಿದ ಸೈನುದ್ದೀನ್ ಪರ ವಕೀಲರು, ಸೂಕ್ತ ಮೊತ್ತವನ್ನು ಠೇವಣಿಯಾಗಿ ಇರಿಸಿಕೊಂಡು 21 ದಿನಗಳ ಒಳಗೆ ಎಲ್ಟಿ ಮಾರ್ಗವನ್ನು ಬದಲಿಸಬೇಕು ಎಂದು ಪ್ರಾಧಿಕಾರ ಸೂಚಿಸಿತ್ತು. ಠೇವಣಿ ಇರಿಸಿದ ನಂತರವೂ ವಿದ್ಯುತ್ ಸಂಪರ್ಕ ಒದಗಿಸಲು ನೌಕರರು ಯಾವುದೇ ಕ್ರಮವಹಿಸಲಿಲ್ಲ ಎಂದು ವಿವರಿಸಿದರು.
ವಿದ್ಯುತ್ ಮಂಡಳಿಯ ನಿರಾಸಕ್ತಿಯ ಬಗ್ಗೆ ಸೈನುದ್ದೀನ್ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ಮಂಡಳಿಯ ಇಬ್ಬರು ನೌಕರರು ವಿದ್ಯುತ್ ಸಂಪರ್ಕ ಒದಗಿಸಲು ಉದ್ದೇಶಪೂರ್ವಕವಾಗಿ ತಡ ಮಾಡುತ್ತಿದ್ದಾರೆ ಎಂದು ಹೇಳಿದ ಆಯೋಗವು, ವಿದ್ಯುತ್ ಕಾಯ್ದೆಯ ಅನ್ವಯ ಮೊದಲ ತಪ್ಪಿತಸ್ಥನಿಗೆ ₹ 50,000 ಮತ್ತು 2ನೇ ತಪ್ಪಿಸ್ಥನಿಗೆ ₹ 25,000 ದಂಡವಿಧಿಸಿ ತೀರ್ಪು ನೀಡಿತ್ತು. ಕೇರಳ ಹೈಕೋರ್ಟ್ ಸಹ ಈ ತೀರ್ಪನ್ನು ಎತ್ತಿಹಿಡಿದು, ದಂಡವನ್ನು ಕಾಯಂಗೊಳಿಸಿತು.
‘ರಾಜ್ಯದಲ್ಲಿ ವಿದ್ಯುತ್ ವಿತರಣೆಯ ಪರಮಾಧಿಕಾರವು ಕೇರಳ ವಿದ್ಯುತ್ ವಿತರಣಾ ಮಂಡಳಿಗಿದೆ. ಅರ್ಜಿದಾರರಿಗೆ ಸಕಾಲದಲ್ಲಿ ವಿದ್ಯುತ್ ಸಂಪರ್ಕ ನೀಡಲು ಮಂಡಳಿ ಮತ್ತು ಅದರ ಅಧಿಕಾರಿಗಳು ಬಾಧ್ಯಸ್ಥರಾಗಿರುತ್ತಾರೆ’ ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿತು. ಸೈನುದ್ದೀನ್ ಮನೆಗೆ ವಿದ್ಯುತ್ ಸಂಪರ್ಕ ಒದಗಿಸಲು ಅಗತ್ಯ ಕ್ರಮ ಕೈಗೊಂಡಿರುವ ಬಗ್ಗೆ ಮಾಹಿತಿ ನೀಡಿದ ನಂತರ ಹೈಕೋರ್ಟ್, ಅರ್ಜಿಯನ್ನು ವಜಾ ಮಾಡಿತು.
ಇದನ್ನೂ ಓದಿ: NTPCL ಸೇರಿ ಭಾರತದ ಪ್ರಮುಖ ಸಂಸ್ಥೆಗಳ ಮೇಲೆ ಚೀನಾ ಹ್ಯಾಕರ್ಗಳ ಕಣ್ಣು
Published On - 7:53 pm, Tue, 16 March 21