ನವದೆಹಲಿ: ಫೇಸ್ಬುಕ್ ಇಂಕ್ ಮಾಲೀಕತ್ವದ ವಾಟ್ಸಾಪ್ಗೆ ಕೇಂದ್ರ ಸರ್ಕಾರವು ಮತ್ತೊಮ್ಮೆ ನಿರ್ದೇಶನ ನೀಡಿದ್ದು, ಮೇ 15, 2021ರಿಂದ ಜಾರಿಗೆ ಬಂದಿರುವ ಹೊಸ ಖಾಸಗಿ ನೀತಿಯನ್ನು ಹಿಂಪಡೆಯುವಂತೆ ತಿಳಿಸಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದಿಂದ ವಿಶ್ವದ ಅತಿ ದೊಡ್ಡ ಮೆಸೇಜಿಂಗ್ ಆ್ಯಪ್ಗೆ ಎರಡನೇ ಪತ್ರವನ್ನು ಬರೆಯಲಾಗಿದೆ. ಒಂದು ವಾರದೊಳಗೆ ಇದಕ್ಕೆ ಉತ್ತರವನ್ನು ನೀಡುವಂತೆ ಕೂಡ ತಿಳಿಸಲಾಗಿದೆ. ಒಂದು ವೇಳೆ ಸಮಾಧಾನಕರವಾದ ಉತ್ತರ ಬಾರದಿದ್ದಲ್ಲಿ ಕಾನೂನುಬದ್ಧವಾದ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ ಎಂಬುದಾಗಿ ಮೂಲಗಳು ತಿಳಿಸಿವೆ. “ಭಾರತದ ಕಾನೂನು ಅಡಿಯಲ್ಲಿ ಇರುವ ವಿವಿಧ ಆಯ್ಕೆಗಳನ್ನು ಭಾರತ ಸರ್ಕಾರವು ಗಮನಿಸುತ್ತಿದೆ,” ಎಂದು ಹೇಳಲಾಗಿದೆ. ವಾಟ್ಸಾಪ್ನಿಂದ ಹೊಸ ಖಾಸಗಿತನದ ನೀತಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಯುರೋಪ್ನಲ್ಲಿ ಅದನ್ನು ಒಪ್ಪದಿರುವುದಕ್ಕೂ ಬಳಕೆದಾರರಿಗೆ ಅವಕಾಶ ಇದೆ. ಆದರೆ ಭಾರತೀಯ ಬಳಕೆದಾರರಿಗೆ ಆ ಅವಕಾಶ ಇಲ್ಲ ಎಂಬುದನ್ನು ಪತ್ರದಲ್ಲಿ ತಿಳಿಸಲಾಗಿದೆ.
ಯಾರು ಖಾಸಗಿತನ ನಿಯಮ ಒಪ್ಪುವುದಿಲ್ಲವೋ ಅವರ ಖಾತೆಯನ್ನು ತಕ್ಷಣಕ್ಕೆ ಡಿಲೀಟ್ ಮಾಡುವುದಿಲ್ಲ. ಆದರೆ ಕ್ರಮೇಣ ವಾಟ್ಸಾಪ್ ಫೀಚರ್ಗಳ ಬಳಕೆ ಮಾಡುವುದನ್ನು ಮಿತಿಗೊಳಿಸುತ್ತಾ ಸಾಗುತ್ತದೆ. ಪತ್ರದಲ್ಲಿ ತಿಳಿಸಿರುವಂತೆ, ನಿಮಗೆ ಗೊತ್ತಿದೆ, ಭಾರತೀಯ ನಾಗರಿಕರು ದೈನಂದಿನ ಜೀವನದಲ್ಲಿ ಸಂವಹನಕ್ಕೆ ವಾಟ್ಸಾಪ್ ಮೇಲೆ ಅವಲಂಬಿಸಿದ್ದಾರೆ. ಇದು ಸಮಸ್ಯೆ ಮಾತ್ರ ಅಲ್ಲ, ಜತೆಗೆ ಬೇಜವಾಬ್ದಾರಿ ಕೂಡ ಹೌದು. ಈಗಿನ ಅವಕಾಶ ಬಳಸಿಕೊಂಡು ವಾಟ್ಸಾಪ್ ನ್ಯಾಯಸಮ್ಮತ ಅಲ್ಲದ ನಿಯಮ ಮತ್ತು ನಿಬಂಧನೆಗಳನ್ನು ಭಾರತೀಯರ ಮೇಲೆ ಹೇರಲಾಗುತ್ತಿದೆ. ಅದರಲ್ಲೂ ಭಾರತೀಯರು ಮತ್ತು ಯುರೋಪ್ ಬಳಕೆದಾರರ ಮಧ್ಯೆ ತಾರತಮ್ಯ ಮಾಡಲಾಗುತ್ತಿದೆ ಎನ್ನಲಾಗಿದೆ.
ಖಾಸಗಿತನದ ನೀತಿಯನ್ನು ಒಪ್ಪಿಕೊಳ್ಳುವುದಕ್ಕೆ ಕಾಲಾವಕಾಶ ಮುಂದೂಡುವುದರಿಂದ ಏನೂ ಪ್ರಯೋಜನ ಇಲ್ಲ. ಅದರಿಂದ ಭಾರತದ ಬಳಕೆದಾರರ ಡೇಟಾ ಭದ್ರತೆ ಮತ್ತು ಆಯ್ಕೆಯನ್ನು, ಮಾಹಿತಿ ನೀತಿಯ ಮೌಲ್ಯವನ್ನು ಗೌರವಿಸಿದಂತೆ ಆಗುವುದಿಲ್ಲ ಎಂದು ಸಚಿವಾಲಯದ ಸಂವಹನದಲ್ಲಿ ಹೇಳಲಾಗಿದೆ. ಅಂದಹಾಗೆ ಸಚಿವಾಲಯವು ಇದೇ ನಿಲವನ್ನು ದೆಹಲಿ ಹೈಕೋರ್ಟ್ನಲ್ಲಿ ಸಹ ತೆಗೆದುಕೊಂಡಿತ್ತು. ಅಂದಹಾಗೆ ಈ ವಿಚಾರ ನ್ಯಾಯಾಂಗ ವ್ಯಾಪ್ತಿಯಲ್ಲಿದೆ ಎಂದು ಮೂಲಗಳು ತಿಳಿಸಿದೆ.
ಭಾರತೀಯ ನಾಗರಿಕರ ಹಕ್ಕು ಮತ್ತು ಹಿತಾಸಕ್ತಿಯನ್ನು ರಕ್ಷಿಸುವುದು ಸಾರ್ವಭೌಮ ದೇಶವೊಂದರ ಜವಾಬ್ದಾರಿ. ವಾಟ್ಸಾಪ್ ತನ್ನ ಹೊಸ ಖಾಸಗಿ ನೀತಿಯ ಮೂಲಕ ಹೇಗೆ ನಿಯಮಗಳನ್ನು ಮೀರುತ್ತಿದೆ ಎಂಬ ಬಗ್ಗೆ ಗಮನವನ್ನು ಸೆಳೆಯಲಾಗಿದೆ. ಅಂದ ಹಾಗೆ ಈ ಪತ್ರವನ್ನು ಮೇ 18, 2021ರಂದು ಬರೆಯಲಾಗಿದೆ.
ಇದನ್ನೂ ಓದಿ: WhatsApp Privacy Policy: ವಾಟ್ಸಾಪ್ ಖಾಸಗಿತನ ನೀತಿ 2021 ಒಪ್ಪಿಕೊಳ್ಳಲು ಮೇ 15 ಕೊನೆ ದಿನ; ಸಮ್ಮತಿಸದವರ ಖಾತೆ ಏನಾಗುತ್ತೆ?
(Indian government (Electronic and IT ministry) writes letter to WhatsApp company to withdraw new privacy policy)