WhatsApp Privacy Policy: ವಾಟ್ಸಾಪ್ ಖಾಸಗಿತನ ನೀತಿ 2021 ಒಪ್ಪಿಕೊಳ್ಳಲು ಮೇ 15 ಕೊನೆ ದಿನ; ಸಮ್ಮತಿಸದವರ ಖಾತೆ ಏನಾಗುತ್ತೆ?

WhatsApp Privacy Policy: ವಾಟ್ಸಾಪ್ ಖಾಸಗಿತನದ ನೀತಿ 2021 ಒಪ್ಪಿಕೊಳ್ಳುವುದಕ್ಕೆ ಮೇ 15, ಅಂದರೆ ಇಂದು ಕೊನೆಯ ದಿನ. ಒಂದು ವೇಳೆ ಸಮ್ಮತಿ ಸೂಚಿಸದಿದ್ದರೆ ಏನಾಗುತ್ತದೆ ಎಂಬ ವಿವರ ಇಲ್ಲಿದೆ.

WhatsApp Privacy Policy: ವಾಟ್ಸಾಪ್ ಖಾಸಗಿತನ ನೀತಿ 2021 ಒಪ್ಪಿಕೊಳ್ಳಲು ಮೇ 15 ಕೊನೆ ದಿನ; ಸಮ್ಮತಿಸದವರ ಖಾತೆ ಏನಾಗುತ್ತೆ?
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: May 15, 2021 | 8:09 PM

ವಾಟ್ಸಾಪ್ 2021 ಖಾಸಗಿ ನೀತಿ ಅಪ್​ಡೇಟ್​ ಗಡುವು ಮೇ 15ನೇ ತಾರೀಕು, 2021 ಆಗಿತ್ತು. ಇನ್ನು ಬಳಕೆದಾರರು ಒಂದೋ ಅದನ್ನು ಒಪ್ಪಿಕೊಳ್ಳಬೇಕು ಅಥವಾ ಒಂದೊಂದೇ ಫೀಚರ್​ಗಳನ್ನು ಬಳಸುವುದಕ್ಕೆ ಸಾಧ್ಯವಾಗಲ್ಲ ಮತ್ತು ಮುಂಬರುವ ವಾರಗಳಲ್ಲಿ ಚಾಟ್​ಲಿಸ್ಟ್ ಕೂಡ ಬಳಕೆಗೆ ಲಭ್ಯ ಇರಲ್ಲ. ಇದಕ್ಕೆ ಪರಿಹಾರ ಏನಪ್ಪಾ ಅಂದರೆ, ಒಂದೋ ನಿಯಮವನ್ನು ಒಪ್ಪಬೇಕು ಅಥವಾ ಬೇರೆ ಮೆಸೇಜಿಂಗ್ ಅಪ್ಲಿಕೇಷನ್ ಬಳಕೆ ಮಾಡಬೇಕು. ಖಾಸಗಿತನದ ನೀತಿಯನ್ನು ಒಪ್ಪಲಿಲ್ಲ ಅಂದಾಕ್ಷಣ ವಾಟ್ಸಾಪ್​ನಿಂದ ಖಾತೆ ಏನೂ ಡಿಲೀಟ್ ಆಗಲ್ಲ. ಆದರೆ ಕ್ರಮೇಣವಾಗಿ ಫೀಚರ್​ಗಳು ಮಿತಿಯಾಗುತ್ತಾ ಸಾಗುತ್ತವೆ. ಈಚೆಗಷ್ಟೇ ವಾಟ್ಸಾಪ್​ನಿಂದ ದೆಹಲಿ ಹೈಕೋರ್ಟ್​ನಲ್ಲಿ ಹೇಳಿರುವಂತೆ, ಹೊಸ ಖಾಸಗಿತನದ ನೀತಿಯನ್ನು ಬಳಕೆದಾರರು ಒಪ್ಪಿಕೊಳ್ಳಲಿಲ್ಲ ಅಂದರೆ ವಾಟ್ಸಾಪ್ ಬಳಸುವುದನ್ನು ನಿಲ್ಲಿಸಬಹುದು. ಇದನ್ನು ಒಪ್ಪಿಕೊಳ್ಳಿ ಅಂತ ಯಾರಿಗೂ ಬಲವಂತ ಮಾಡುತ್ತಿಲ್ಲ ಎಂದು ಹೇಳಲಾಗಿತ್ತು. ಆದರೆ ಆ ನೀತಿಯನ್ನು ಒಪ್ಪಿಕೊಳ್ಳಲೂ ಇಲ್ಲ, ಆ್ಯಪ್ ಬಳಕೆಯನ್ನು ಮುಂದುವರಿಸುತ್ತೇವೆ ಅಂದರೆ ಏನಾಗುತ್ತದೆ? ಅದನ್ನು ತಿಳಿಯಬೇಕು ಅಂದರೆ ಮುಂದೆ ಓದಿ.

ವಾಟ್ಸಾಪ್ ಖಾಸಗಿ ನೀತಿಗಳನ್ನು ಒಪ್ಪಿಕೊಳ್ಳದಿದ್ದಲ್ಲಿ ಕ್ರಮೇಣ ಬಳಕೆದಾರರಿಗೆ ಫೀಚರ್​ಗಳು ಸಿಗುವುದು ಕಡಿಮೆ ಆಗುತ್ತಾ ಹೋಗುತ್ತದೆ. ಇನ್ನು ನಾಳೆಯಿಂದ (ಮೇ 16, 2021) ವಾಟ್ಸಾಪ್​ನಿಂದ ನೆನಪಿಸುವುದಕ್ಕೆ ಶುರು ಮಾಡಲಾಗುತ್ತದೆ. ಹೊಸ ಖಾಸಗಿತನ ನೀತಿ ಒಪ್ಪಿಕೊಳ್ಳಿ ಎಂದು ನೆನಪಿಸುವುದಕ್ಕೆ ಆರಂಭವಾಗುತ್ತದೆ. ಕೆಲವು ವಾರಗಳು ಕಳೆದ ನಂತರ, ಯಾರು ಅಪ್​ಡೇಟ್​ ಒಪ್ಪಿಕೊಂಡಿರುವುದಿಲ್ಲವೋ ಅಂಥವರಿಗೆ ಕೆಲವು ಫೀಚರ್​ಗಳನ್ನು ದೊರೆಯದಂತೆ ಮಾಡಲಾಗುತ್ತದೆ. ಆಮೇಲೆ ವಾಟ್ಸಾಪ್​ನಿಂದ ನಿರಂತರವಾಗಿ ನೆನಪಿಸಲಾಗುತ್ತದೆ. ಇದು ಶುರುವಾದ ಮೇಲೆ ಬಳಕೆದಾರರಿಗೆ ಚಾಟ್​ಲಿಸ್ಟ್​ ಸಿಗುವುದಿಲ್ಲ. ಏನಿದ್ದರೂ ಒಳಬರುವ ಹಾಗೂ ಹೊರಹೋಗುವ ಧ್ವನಿ ಅಥವಾ ವಿಡಿಯೋ ಕಾಲ್​ಗಳಿಗೆ ಉತ್ತರಿಸಬಹುದು. ಫೋನ್​ಗೆ ನೋಟಿಫಿಕೇಷನ್ ಬಂದಾಗ ಸಂದೇಶ ಓದುವ ಅಥವಾ ಪ್ರತಿಕ್ರಿಯಿಸುವ ಅವಕಾಶ ಇರುತ್ತದೆ.

ಕೆಲವು ವಾರಗಳ ಸೀಮಿತ ಫಂಕ್ಷನಾಲಿಟಿ ಬಂದ ಮೇಲೆ ಆ ನಂತರವೂ ಖಾಸಗಿತನದ ನೀತಿಯನ್ನು ಒಪ್ಪಿಕೊಳ್ಳದಿದ್ದಲ್ಲಿ ಆಗ ಒಳಬರುವ ಹಾಗೂ ಹೊರಹೋಗುವ ಕರೆಗಳು ಸಹ ನಿಲ್ಲುತ್ತವೆ. ಸಂದೇಶಗಳು ಬರುವುದು ಹಾಗೂ ಹೋಗುವುದು ಸಹ ನಿಲ್ಲುತ್ತದೆ. ಈ ಹಂತದಲ್ಲಿ ವಾಟ್ಸಾಪ್ ಬಳಸಬೇಕಾ ಅಥವಾ ಬೇರೆಯದಕ್ಕೆ ಬದಲಾಗಬೇಕಾ ಎಂದು ತೀರ್ಮಾನ ಮಾಡಿಕೊಳ್ಳಬೇಕು. ಒಂದು ವೇಳೆ ವಾಟ್ಸಾಪ್ ಡಿಲೀಟ್​ ಮಾಡಬೇಕು ಹಾಗೂ ಡೇಟಾ ಡೌನ್​ಲೋಡ್ ಮಾಡಬೇಕು ಅಂದುಕೊಂಡಿದ್ದೀರಾ? ಅದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ಅಂದಹಾಗೆ ವಾಟ್ಸಾಪ್​ ಖಾತೆಯಲ್ಲಿನ ಮಾಹಿತಿಯನ್ನು ಡಿಲೀಟ್ ಮಾಡುವುದಕ್ಕೆ 90 ದಿನಗಳ ಕಾಲ ಸಮಯ ತೆಗೆದುಕೊಳ್ಳಲಾಗುತ್ತದೆ.

ಹಂತ 1: ವಾಟ್ಸಾಪ್ ತೆರೆಯಿರಿ ಮತ್ತು ಬಲಗಡೆಯ ತುದಿಯಲ್ಲಿ ಕಾಣುವ ಮೂರು ಚುಕ್ಕಿಗಳ ಮೇಲೆ ಕ್ಲಿಕ್ ಮಾಡಿ.

ಹಂತ 2: ಸೆಟ್ಟಿಂಗ್ಸ್​ ಮೇಲೆ ಒತ್ತಿ, ಅಕೌಂಟ್ ವಿಭಾಗಕ್ಕೆ ತೆರಳಿ ಮತ್ತು ಅಲ್ಲಿ ಡಿಲೀಟ್ ಮೈ ಅಕೌಂಟ್ ಆಯ್ಕೆಯನ್ನು ಒತ್ತಿ.

ಹಂತ 3: ಆ ನಂತರ ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು ಹಾಗೂ ಡಿಲೀಟ್ ಮೈ ಅಕೌಂಟ್ ಒತ್ತಿ.

ಹಂತ 4: ಡ್ರಾಪ್​ ಡೌನ್​ನಲ್ಲಿ ಯಾವ ಕಾರಣಕ್ಕಾಗಿ ನೀವು ಖಾತೆಯನ್ನು ಡಿಲೀಟ್ ಮಾಡಲು ಬಯಸುತ್ತೀರಿ ಎಂದು ಕೇಳಲಾಗುತ್ತದೆ.

ಹಂತ 5: ಡಿಲೀಟ್ ಮೈ ಅಕೌಂಟ್ ಒತ್ತಿ.

ನಿಮ್ಮ ವೈಯಕ್ತಿಕ ಡೇಟಾವನ್ನು ಯಾವುದೇ ಥರ್ಡ್ ಪಾರ್ಟಿ ಆ್ಯಪ್​ಗೆ ಬಸಿದುಕೊಳ್ಳಬಹುದು. ಚಾಟ್​ ಅನ್ನು ತೆರೆದು, ಮೂರು ಚುಕ್ಕೆ ಇರುವ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆ ಮೇಲೆ ಅದನ್ನು More ಎಂಬುದರ ಮೇಲೆ ಒತ್ತಿ, ಎಕ್ಸ್​ಪೋರ್ಟ್ ಚಾಟ್ ಆರಿಸಿಕೊಳ್ಳಬೇಕು. ಫೋಟೋ, ವಿಡಿಯೋ ಮತ್ತು ಇತರ ಮೀಡಿಯಾ ಹೀಗೆ ಎಲ್ಲ ಫೈಲ್​ಗಳನ್ನು ಸೇರಿಸಿಕೊಳ್ಳಬೇಕಾ ಎಂದು ಕೇಳಲಾಗುತ್ತದೆ. ಒಂದು ಸಲ Include Media ಎಂದು ಒತ್ತಿದರೆ ಗೂಗಲ್ ಡ್ರೈವ್, ಜಿಮೇಲ್ ಅಥವಾ ಬೇರೆ ಇತರ ಆ್ಯಪ್​ಗೆ ಎಕ್ಸ್​ಪೋರ್ಟ್ ಮಾಡಬೇಕಾ ಎಂಬ ಆಯ್ಕೆ ಬರುತ್ತದೆ.

ವಾಟ್ಸಾಪ್​ಗೆ ಪರ್ಯಾಯಗಳಿವೆಯಾ? ಹಲವಾರು ಮಂದಿ ಈಗಾಗಲೇ ವಾಟ್ಸಾಪ್ ಬಿಟ್ಟು ಬೇರೆ ಬೇರೆ ಮೆಸೇಜಿಂಗ್ ಆ್ಯಪ್​ಗೆ ಬದಲಾಗಿದ್ದಾರೆ. ಅದರಲ್ಲಿ ಟೆಲಿಗ್ರಾಮ್ ಮತ್ತು ಸಿಗ್ನಲ್ ಕೂಡ ಇವೆ. ಸದ್ಯಕ್ಕೆ ಇವೆರಡು ನಂಬಿಕಸ್ತ ಮೆಸೇಜಿಂಗ್ ಆ್ಯಪ್​ಗಳಾಗಿವೆ. ಟೆಲಿಗ್ರಾಮ್​ನಲ್ಲಿ ಎಂಡ್ ಟು ಎಂಡ್ ಎನ್​ಕ್ರಿಪ್ಷನ್ ಸೀಕ್ರೆಟ್ ಚಾಟ್​ಗೆ, ಒನ್-ಆನ್-ಒನ್ ವಿಡಿಯೋ ಅಥವಾ ವಾಯ್ಸ್ ವಾಯ್ಸ್​ ಕಾಲ್​ಗಳಿಗೆ ಮಾತ್ರ ಇದೆ. ಯಾರಿಗೆ ಭದ್ರತೆ ಬಗ್ಗೆ ಆತಂಕ ಇದೆಯೋ ಅಂಥವರು ಸೀಕ್ರೆಟ್ ಚಾಟ್​ ಮೋಡ್ ಎನೇಬಲ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: WhatsApp: ವಾಟ್ಸಾಪ್ ಖಾಸಗಿತನದ ನೀತಿ ಒಪ್ಪಿಕೊಳ್ಳುವುದು ಅನಿವಾರ್ಯ ಆಗಲಿದೆ ಏಕೆ ಗೊತ್ತಾ?

(If WhatsApp privacy policy 2021 not accepted by May 15, what will happen to account? Here is an explainer)