BATTLEGROUNDS MOBILE INDIA: ಹೊಸ ಅವತಾರದಲ್ಲಿ ಪಬ್ಜಿ ಗೇಮ್; ಪ್ರೀರಿಜಿಸ್ಟ್ರೇಷನ್ ಮೇ 18ರಿಂದ ಶುರು
ಪಬ್ಜಿ ಗೇಮ್ ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾ ಹೆಸರಲ್ಲಿ ಮತ್ತೆ ಭಾರತಕ್ಕೆ ಬರುತ್ತಿದೆ. ಮೇ 18ನೇ ತಾರೀಕಿನಂದು ಪ್ರೀ ರಿಜಿಸ್ಟ್ರೇಷನ್ ಶುರುವಾಗುತ್ತದೆ.
ದಕ್ಷಿಣ ಕೊರಿಯಾದ ಗೇಮ್ ಡೆವಲಪರ್ ಕ್ರಾಫ್ಟನ್ ಶನಿವಾರದಂದು (ಮೇ 16, 2021) BATTLEGROUNDS MOBILE INDIA ಪ್ರೀ ರಿಜಿಸ್ಟ್ರೇಷನ್ ದಿನಾಂಕದ ಬಗ್ಗೆ ಘೋಷಣೆ ಮಾಡಿದೆ. ಅಂದಹಾಗೆ ಈ ಹೊಸ ಗೇಮ್ ಅನ್ನು PUBG ಮೊಬೈಲ್ ಬದಲಿಯಾಗಿ ನೋಡಲಾಗುತ್ತಿದೆ. ಕಳೆದ ಸೆಪ್ಟೆಂಬರ್ನಲ್ಲಿ ಚೀನಾದ ಇತರ ಆ್ಯಪ್ಗಳ ಜತೆಯಲ್ಲಿ ಒರಿಜಿನಲ್ ಗೇಮ್ ಅನ್ನು ಸಹ ಭಾರತದಲ್ಲಿ ನಿಷೇಧಿಸಲಾಗಿತ್ತು. ಇದೀಗ ಮೇ 18ನೇ ತಾರೀಕಿನಂದು ಗೂಗಲ್ ಪ್ಲೇ ಸ್ಟೋರ್ನಲ್ಲಿ ಈ ಹೊಸ ಗೇಮ್ನ ಪ್ರೀ ರಿಜಿಸ್ಟ್ರೇಷನ್ ಲಿಂಕ್ ದೊರೆಯುವುದಕ್ಕೆ ಶುರುವಾಗುತ್ತದೆ. iOSನಲ್ಲಿ ಈ ಗೇಮ್ ಯಾವಾಗ ಬಿಡುಗಡೆ ಆಗುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಪತ್ರಿಕಾ ಹೇಳಿಕೆಯಲ್ಲಿ ಕಂಪೆನಿ ಹೇಳಿರುವ ಪ್ರಕಾರ, ಕ್ಲೇಮ್ ಮಾಡುವುದಕ್ಕೆ ಈ ಗೇಮ್ನ ಅಭಿಮಾನಿಗಳಿಗೆ ನಿರ್ದಿಷ್ಟ ರಿವಾರ್ಡ್ಸ್ ದೊರೆಯಲಿದೆ. ಈ ರಿವಾರ್ಡ್ಸ್ ನಿರ್ದಿಷ್ಟವಾಗಿ ಭಾರತೀಯ ಆಟಗಾರರಿಗೆ ಮಾತ್ರ ಸಿಗುತ್ತದೆ.
ಪ್ರೀ ರಿಜಿಸ್ಟರ್ ಮಾಡಬೇಕು ಅಂದರೆ ಗೂಗಲ್ ಪ್ಲೇ ಸ್ಟೋರ್ಗೆ ಹೋಗಬೇಕು. ಅಲ್ಲಿ ಪ್ರೀ ರಿಜಿಸ್ಟರ್ ಬಟನ್ ಕ್ಲಿಕ್ ಮಾಡಬೇಕು. ಗೇಮ್ ಶುರುವಾಗುವಾಗ ರಿವಾರ್ಡ್ಸ್ ಕ್ಲೇಮ್ ಮಾಡುವಾಗ ತಾನಾಗಿಯೇ ದೊರೆಯುತ್ತದೆ. ಇನ್-ಆ್ಯಪ್ ಖರೀದಿಯೊಂದಿಗೆ ಎಲ್ಲ ಬಳಕೆದಾರರಿಗೆ ಉಚಿತವಾಗಿ ಆಡಲು ದೊರೆಯುತ್ತದೆ. ಇದು ಈ ಹಿಂದೆ PUBG ಮೊಬೈಲ್ ಎಂದು ಚಾಲ್ತಿಯಲ್ಲಿತ್ತು. ಯುವಜನರಲ್ಲಿ ಈ ಗೇಮ್ ವ್ಯಸನವಾಗಿ ಮಾರ್ಪಡದಂತೆ ಆಗಲು ಬೇಕಾದಂಥ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಕ್ರಾಫ್ಟನ್ ಮುಂದಾಗಿದೆ. ಈಗಿನ ಹೊಸ ಗೇಮ್ನಲ್ಲಿ 18 ವರ್ಷದೊಳಗಿನವರಿಗೆ ಹೊಸ ನಿರ್ಬಂಧಗಳನ್ನು ಹೇರಲಾಗಿದೆ. ತಮ್ಮ ಪೋಷಕರು ಅಥವಾ ಪಾಲಕರ ಫೋನ್ ನಂಬರ್ನೊಂದಿಗೆ ನೋಂದಣಿ ಆಗಬೇಕು. ಆದರೆ ಈ ಪ್ರಕ್ರಿಯೆ ಬಳಸಿಕೊಂಡು ವಯಸ್ಸಿನ ದೃಢೀಕರಣ ಹೇಗೆ ಮಾಡುತ್ತಾರೆ ಕಾದು ನೋಡಬೇಕಾಗಿದೆ.
ಇನ್ನೂ ಮುಂದುವರಿದು, 18 ವರ್ಷದೊಳಗಿನವರಿಗೆ ಈ ಗೇಮ್ ಆಡುವುದಕ್ಕೆ ಸಮಯದ ಮಿತಿ ಇದೆ. ದಿನಕ್ಕೆ ಗರಿಷ್ಠ 3 ಗಂಟೆ ಮಾತ್ರ ಆಟವಾಡಬಹುದು. ಇನ್ನು ಖರ್ಚಿಗೂ ಮಿತಿ ಹಾಕಲಾಗಿದೆ. ಇನ್- ಆ್ಯಪ್ ಖರೀದಿಗೆ ಯುವಜನರು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ ಎಂಬ ಆರೋಪ ಇತ್ತು. ಆದರೆ ಈಗ ಹೊಸ ಆಟಕ್ಕೆ ದಿನಕ್ಕೆ ಗರಿಷ್ಠ 7000 ರೂಪಾಯಿಯನ್ನು 18 ವರ್ಷದೊಳಗಿನವರು ಖರ್ಚು ಮಾಡಬಹುದು. ಅದು ಇನ್-ಆ್ಯಪ್ ಖರೀದಿಗೆ ಸಂಬಂಧಿಸಿದಂತೆ ತಂದಿರುವ ನಿಯಮಾವಳಿ ಆಗಿದೆ.
ಖಾಸಗಿತನ ನಿಯಮದ ಬಗ್ಗೆ ಇರುವ ತಕರಾರುಗಳನ್ನು ಸಹ ಬಗೆಹರಿಸುವುದಕ್ಕೆ ಕ್ರಾಫ್ಟನ್ ಪ್ರಯತ್ನಿಸುತ್ತಿದೆ. ಈ ಹಿಂದೆ ಪಬ್ಜಿ ನಿಷೇಧಕ್ಕೆ ಅದೇ ಕಾರಣ ಆಗಿತ್ತು. ಎಲ್ಲ ವೈಯಕ್ತಿಕ ಮಾಹಿತಿಯನ್ನು ಭಾರತ, ಸಿಂಗಾಪೂರ್ ಸರ್ವರ್ನಲ್ಲಿ ಸಂಗ್ರಹಿಸಿ, ಪ್ರೊಸೆಸ್ ಮಾಡಲಾಗುವುದು ಎಂದು ಕಂಪೆನಿ ಹೇಳಿದೆ. ಕಾನೂನು ಅಗತ್ಯಗಳನ್ನು ಪೂರೈಸಲು ಡೇಟಾವನ್ನು ಬೇರೆ ದೇಶಗಳಿಗೆ ವರ್ಗಾವಣೆ ಮಾಡಬೇಕಿದ್ದರೂ ಹೀಗೆ ನಿರ್ಧಾರ ಮಾಡಲಾಗಿದೆ. ಅಂದಹಾಗೆ ಹೊಸ ಗೇಮ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಪಬ್ಜಿಗಿಂತ ಇದು ಸಂಪೂರ್ಣ ಭಿನ್ನವಾಗಿರುತ್ತದೆಯೇ ಗೊತ್ತಿಲ್ಲ. ಆದರೆ ಈಗ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಸ್ವಲ್ಪ ಬದಲಾವಣೆಯೊಂದಿಗೆ ಒರಿಜಿನಲ್ ಪಬ್ಜಿ ಅದೇ ಆಟದ ಮಜಾದೊಂದಿಗೆ ಬರಲಿದೆ.
ಇದನ್ನೂ ಓದಿ: ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾ ಆಗಿ ಬರುತ್ತಿದೆ PUBG; ಅಧಿಕೃತ ಪೋಸ್ಟರ್ ಬಿಡುಗಡೆ
(New version of PUBG game Battlegrounds Mobile India pre registration start in India from May 18, 2021)
Published On - 4:46 pm, Sat, 15 May 21