ಪ್ರಯಾಗ್ರಾಜ್: ಮದುವೆ ಸಮಾರಂಭಕ್ಕೆ ಮೆರವಣಿಗೆಗಾಗಿ ಕರೆದುಕೊಂಡು ಬಂದಿದ್ದ ಆನೆ, ಪಟಾಕಿ ಶಬ್ದ ಕೇಳಿ, ಇಡೀ ಮದುವೆ ಮನೆಯಲ್ಲಿ ದಾಂಧಲೆ ನಡೆಸಿದ ಘಟನೆ ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಈ ಭಯಾನಕ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ.
ಪ್ರಯಾಗ್ರಾಜ್ನ ಅಲಾಂಪುರ ಗ್ರಾಮದಲ್ಲಿ ಮದುವೆ ನಡೆದಿತ್ತು. ವಿವಾಹದಲ್ಲಿ ವಿಶೇಷವಾಗಿರಲಿ ಎಂದು ಆನೆಯನ್ನೂ ಕರೆದುಕೊಂಡುಬರಲಾಗಿತ್ತು. ಆದರೆ ವರ ಹಾಗೂ ಅವನ ಕಡೆಯ ಅತಿಥಿಗಳನ್ನು ಸ್ವಾಗತಿಸಲು ಪಟಾಕಿ ಹೊಡೆಯುತ್ತಿದ್ದಂತೆ ಆನೆ ಕೆರಳಿದೆ. ಹೆದರಿ ಓಡಿದ ಆನೆ ಅಲ್ಲೆಲ್ಲ ದಾಂಧಲೆ ನಡೆಸಿದೆ. ಕಾರು, ಬೈಕ್ಗಳನ್ನು ಪುಡಿಪುಡಿ ಮಾಡಿದ್ದಲ್ಲದೆ, ಮದುವೆ ಮನೆಗೆ ಹಾಕಲಾಗಿದ್ದ ಪೆಂಡಾಲ್ ಕೂಡ ಧ್ವಂಸಗೊಳಿಸಿದೆ.
ಘಟನೆಯಿಂದಾಗಿ ವರ ಮತ್ತು ಅತಿಥಿಗಳೂ ಸಹ ಕಂಗಾಲಾಗಿದ್ದಾರೆ. ಮದುವೆ ಮನೆಯಿಂದ ಎಲ್ಲರೂ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ನಂತರ ಅದರ ಮಾವುತನೇ ಬಂದು ಆನೆಯನ್ನು ಸಹಜಸ್ಥಿತಿಗೆ ತಂದಿದ್ದಾನೆ. ಈ ಬಗ್ಗೆ ಸ್ಥಳೀಯ ಅರಣ್ಯ ರೇಂಜರ್ ಮತ್ತು ಪೊಲೀಸರಿಗೂ ನಂತರ ಮಾಹಿತಿ ನೀಡಲಾಗಿದೆ. ಆನೆ ಮಾವುತನನ್ನು ಕೊಂದಿದೆ ಎಂಬ ಸುಳ್ಳುಸುದ್ದಿಯೂ ವಿಡಿಯೋದೊಟ್ಟಿಗೆ ಹರಿದಾಡುತ್ತಿದೆ. ಆದರೆ ಅದು ಸುಳ್ಳು ಸುದ್ದಿ. ಮಾವುತ ಸತ್ತಿಲ್ಲ ಎಂದು ಸರೈ ಠಾಣೆಯ ಅಧಿಕಾರಿ ರಾಕೇಶ್ ಚೌರಾಸಿಯಾ ತಿಳಿಸಿದ್ದಾರೆ.
An elephant, part of a wedding procession in UP’s Prayagraj, went on a rampage damaging vehicles and pandal decoration as baratis including the groom ran for cover. pic.twitter.com/wAliKreBjb
— Piyush Rai (@Benarasiyaa) June 12, 2021
ಇದನ್ನೂ ಓದಿ:ರಾಜಕೀಯಕ್ಕೆ ಬರಲ್ಲ ಎನ್ನುವ ಸೋನು ಸೂದ್ಗೆ ಈ ರಾಜಕಾರಣಿ ಕಂಡರೆ ಹೆಚ್ಚು ಅಭಿಮಾನ; ಯಾರದು?