ರಾಜಕೀಯಕ್ಕೆ ಬರಲ್ಲ ಎನ್ನುವ ಸೋನು ಸೂದ್ಗೆ ಈ ರಾಜಕಾರಣಿ ಕಂಡರೆ ಹೆಚ್ಚು ಅಭಿಮಾನ; ಯಾರದು?
Sood Charity Foundation: ಎನ್ಟಿಆರ್ ಟ್ರಸ್ಟ್ ಆಯೋಜಿಸಿದ್ದ ಝೂಮ್ ಸಂವಾದದಲ್ಲಿ ಸೋನು ಸೂದ್ ಭಾಗವಹಿಸಿದ್ದರು. ಆಗ ಅವರು ಯುವ ಜನತೆಯ ಜೊತೆ ಈ ವಿಚಾರವನ್ನು ಹಂಚಿಕೊಂಡರು.
ಬಹುಭಾಷಾ ನಟ ಸೋನು ಸೂದ್ ಅವರು ಮಾಡುವ ಕೆಲಸಗಳನ್ನು ಗಮನಿಸಿದರೆ ಅವರು ಮುಂದೊಂದು ದಿನ ರಾಜಕಾರಣಿ ಆಗುತ್ತಾರೆ ಎಂಬುದು ಹಲವರ ಭಾವನೆ. ಆದರೆ ತಾವು ರಾಜಕೀಯಕ್ಕೆ ಬರುವುದಿಲ್ಲ ಎಂದು ಸೋನು ಸೂದ್ ಈಗಾಗಲೇ ಖಡಕ್ ಆಗಿ ಹೇಳಿಬಿಟ್ಟಿದ್ದಾರೆ. ಅದೇನೇ ಇರಲಿ, ಅವರಿಗೆ ಒಬ್ಬ ರಾಜಕಾರಣಿಯನ್ನು ಕಂಡರೆ ಸಖತ್ ಅಭಿಮಾನ. ಯಾರದು? ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು. ಈ ವಿಚಾರವನ್ನು ಸೋನು ಸೂದ್ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ.
ಎನ್ಟಿಆರ್ ಟ್ರಸ್ಟ್ ಆಯೋಜಿಸಿದ್ದ ಝೂಮ್ ಸಂವಾದದಲ್ಲಿ ಸೋನು ಸೂದ್ ಭಾಗವಹಿಸಿದ್ದರು. ಆಗ ಅವರು ಯುವ ಜನತೆಯ ಜೊತೆ ಈ ವಿಚಾರವನ್ನು ಹಂಚಿಕೊಂಡರು. ‘ನಾನು ನಟನಾಗಿ ಕೆಲಸ ಆರಂಭಿಸಿದಾಗ ಹೈದರಾಬಾದ್ನಲ್ಲಿ ಶೂಟಿಂಗ್ ಇರುತ್ತಿತ್ತು. ಈ ನಗರ ಮತ್ತು ಸುತ್ತಮುತ್ತಲಿನ ಪ್ರದೇಶ ತುಂಬ ಸುಂದರವಾಗಿತ್ತು. ಇಲ್ಲಿನ ಬೆಳವಣಿಗೆ ಕಂಡು ಅಚ್ಚರಿ ಆಗಿತ್ತು. ಅದಕ್ಕೆ ಚಂದ್ರಬಾಬು ನಾಯ್ಡು ಅವರು ಕಾರಣ ಎಂಬುದು ತಿಳಿಯಿತು. ಅವರನ್ನು ಬೇರೆ ರಾಜ್ಯಗಳಿಗೂ ಕರೆದುಕೊಂಡು ಹೋಗಿ ಅಲ್ಲಿನ ನಗರಗಳನ್ನೂ ಹೈದರಾಬಾದ್ ರೀತಿ ಅಭಿವೃದ್ಧಿ ಪಡಿಸಬೇಕು ಅಂತ ನನ್ನ ಸ್ನೇಹಿತರ ಜೊತೆ ಚರ್ಚೆ ಮಾಡುತ್ತಿದ್ದೆ’ ಎಂದು ಸೋನು ಸೂದ್ ಹೇಳಿದ್ದಾರೆ.
ಈಗ ತಾವು ಮಾಡುತ್ತಿರುವ ಅನೇಕ ಕೆಲಸಗಳಿಗೆ ಚಂದ್ರಬಾಬು ನಾಯ್ಡು ಅವರು ಕೂಡ ಸ್ಫೂರ್ತಿ ಎಂದು ಸೋನು ಹೇಳಿದ್ದಾರೆ. ಇಂದಿನ ಯುವಜನತೆ ಸಹ ಅವರಿಂದ ಪ್ರೇರಣೆ ಪಡೆದುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಲಾಕ್ಡೌನ್ನ ಕಷ್ಟದ ಸಂದರ್ಭದಲ್ಲಿ ಸೋನು ಸೂದ್ ಮಾಡಿದ ಕೆಲಸಗಳನ್ನು ಚಂದ್ರಬಾಬು ನಾಯ್ಡು ಗಮನಿಸಿದ್ದಾರೆ. ನಿಸ್ವಾರ್ಥವಾಗಿ ಜನರ ಸೇವೆ ಮಾಡಿದ್ದಕ್ಕಾಗಿ ಈ ರಿಯಲ್ ಹೀರೋಗೆ ಅವರು ಪ್ರಶಂಸೆ ವ್ಯಕ್ತಪಡಿಸಿದ್ದರು.
ಆಂಧ್ರ ಪ್ರದೇಶದ ಜೊತೆ ಸೋನು ಸೂದ್ ಅವರಿಗೆ ವಿಶೇಷ ಬಾಂಧವ್ಯ ಇದೆ. ಯಾಕೆಂದರೆ ಅವರು ಮದುವೆ ಆಗಿರುವ ಹುಡುಗಿ ಸೊನಾಲಿ ಕೂಡ ಆಂಧ್ರದ ಗೋಧಾವರಿ ಜಿಲ್ಲೆಯವರು. ಇಂಜಿನಿಯರಿಂಗ್ ಓದಲು ಸೊನಾಲಿ ನಾಗ್ಪುರಕ್ಕೆ ಬಂದಿದ್ದಾರೆ ಅಲ್ಲಿ ಸೋನು ಸೂದ್ ಪರಿಚಯವಾಗಿತ್ತು. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. ಸದ್ಯ ಸೋನು ತಮ್ಮ ಸಮಾಜಮುಖಿ ಕೆಲಸಗಳನ್ನು ಮುಂದುವರಿಸಿದ್ದಾರೆ. ಐಎಎಸ್ ಮಾಡಬೇಕು ಎಂದುಕೊಂಡಿರುವ ಬಡ ವಿದ್ಯಾರ್ಥಿಗಳ ಕೋಚಿಂಗ್ಗೆ ಸ್ಕಾಲರ್ಶಿಪ್ ನೀಡುವ ಕಾರ್ಯಕ್ಕೆ ಅವರು ಇತ್ತೀಚೆಗಷ್ಟೇ ಚಾಲನೆ ನೀಡಿದರು.
ಇದನ್ನೂ ಓದಿ:
Sonu Sood: ಐಎಎಸ್ ಕನಸು ಕಂಡ ಬಡವರಿಗೆ ಸೋನು ಸೂದ್ ಕೊಡ್ತಾರೆ ಸ್ಕಾಲರ್ಶಿಪ್; ಅರ್ಜಿ ಸಲ್ಲಿಸೋದು ಹೇಗೆ?
ಸೋನು ಸೂದ್ ಭೇಟಿಯಾಗಲು 700 ಕಿ.ಮೀ. ಪಾದಯಾತ್ರೆ ಮಾಡಿದ ಯುವಕ; ರಿಯಲ್ ಹೀರೋ ಪ್ರತಿಕ್ರಿಯೆ ಏನು?