ನವದೆಹಲಿ: ‘2014ರ ಉದ್ಯೋಗಿಗಳ ಭವಿಷ್ಯನಿಧಿ ತಿದ್ದುಪಡಿ ಯೋಜನೆ’ಯನ್ನು (Employee’s Pension Amendment Scheme, 2014) ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ಎತ್ತಿಹಿಡಿದೆ. ಈ ಯೋಜನೆಯನ್ನು ರದ್ದುಪಡಿಸಿ 2018ರಲ್ಲಿ ಕೇರಳ ಹೈಕೋರ್ಟ್ ಆದೇಶ ನೀಡಿತ್ತು. ಇದೀಗ ಸರ್ವೋಚ್ಚ ನ್ಯಾಯಾಲಯವು ಕೇರಳ ಹೈಕೋರ್ಟ್ (Kerala High Court) ತೀರ್ಪನ್ನು ರದ್ದುಗೊಳಿಸಿದೆ. 2014ರಲ್ಲಿ ಮಾಡಲಾಗಿದ್ದ ತಿದ್ದುಪಡಿಯಲ್ಲಿ ತಿಂಗಳಿಗೆ ಗರಿಷ್ಠ 15,000 ರೂ. ವೇತನಕ್ಕೆ ಪಿಂಚಣಿ ನೀಡುವ ಬಗ್ಗೆ ಉಲ್ಲೇಖಿಸಲಾಗಿತ್ತು. ಅದನ್ನು ತಳ್ಳಿಹಾಕಿದ್ದ ಕೇರಳ ಹೈಕೋರ್ಟ್, ಗರಿಷ್ಠ ಮಿತಿಗಿಂತಲೂ ಹೆಚ್ಚಿನ, ಅಂದರೆ ಉದ್ಯೋಗಿಗಳು ಹೊಂದಿರುವ ವಾಸ್ತವ ವೇತನಕ್ಕನುಗುಣವಾಗಿ ಪಿಂಚಣಿ ಲೆಕ್ಕಾಚಾರ ಹಾಕುವ ಬಗ್ಗೆ ನಿರ್ದೇಶನ ನೀಡಿತ್ತು. ಪಿಂಚಣಿ ಯೋಜನೆಗೆ ಸೇರಲು ಯಾವುದೇ ಕಟ್-ಆಫ್ ದಿನಾಂಕ ಇರಬಾರದು ಎಂದೂ ಹೈಕೋರ್ಟ್ ಹೇಳಿತ್ತು. ರಾಜಸ್ಥಾನ ಮತ್ತು ದೆಹಲಿ ಹೈಕೋರ್ಟ್ಗಳೂ ಇಪಿಎಫ್ಒ ತಿದ್ದುಪಡಿಯ ವಿರುದ್ಧ ತೀರ್ಪು ನೀಡಿದ್ದವು. ಈ ತೀರ್ಪುಗಳನ್ನು ಈ ಹಿಂದೆ ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಆದರೆ, ಇಪಿಎಫ್ಒ ಹಾಗೂ ಕೇಂದ್ರ ಸರ್ಕಾರ ಮರು ಪರಿಶೀಲನೆ ಅರ್ಜಿ ಸಲ್ಲಿಸಿದ್ದವು.
ಮರು ಪರಿಶೀಲನೆ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ದ್ವಿಸದಸ್ಯ ನ್ಯಾಯಪೀಠ 2021ರ ಆಗಸ್ಟ್ನಲ್ಲಿ ಅದನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಿತ್ತು. ಅದರಂತೆ, ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಹಾಗೂ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್, ಸುಧಾಂಶು ಧುಲಿಯಾ ಅವರಿದ್ದ ನ್ಯಾಯಪೀಠವು ಮರು ಪರಿಶೀಲನೆ ಅರ್ಜಿಯ ವಿಚಾರಣೆ ನಡೆಸಿತು. ಇಪಿಎಫ್ಒ ತಿದ್ದುಪಡಿ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲದಿರುವುದರಿಂದ ಯೋಜನೆಗೆ ಸೇರದೇ ಇರುವ ಉದ್ಯೋಗಿಗಳಿಗೆ ಅದನ್ನು ಆಯ್ಕೆ ಮಾಡಿಕೊಳ್ಳಲು ನಾಲ್ಕು ತಿಂಗಳ ಕಾಲಾವಕಾಶ ನೀಡುವಂತೆಯೂ ನ್ಯಾಯಪೀಠ ಸೂಚಿಸಿದೆ.
ಇದನ್ನೂ ಓದಿ: EPFO Clarification: ವೇತನ ರಹಿತ ರಜೆಯಲ್ಲಿದ್ದಾಗ ಮೃತಪಟ್ಟರೂ ಡೆತ್ ಬೆನಿಫಿಟ್ ಪಡೆಯಬಹುದು; ಇಪಿಎಫ್ಒ
ಭವಿಷ್ಯನಿಧಿ ವಿಚಾರದಲ್ಲಿ ವಿನಾಯಿತಿ ಪಡೆದ ಮತ್ತು ವಿನಾಯಿತಿ ಹೊಂದಿರದ ಸಂಸ್ಥೆಗಳನ್ನು ಸಮಾನವಾಗಿ ಪರಿಗಣಿಸಬೇಕು ಎಂದೂ ನ್ಯಾಯಾಲಯವು ಹೇಳಿದೆ. ಯೋಜನೆ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಯಾವುದೇ ಕಟ್-ಆಫ್ ದಿನಾಂಕ ನಿಗದಿಪಡಿಸಬಾರದು ಎಂದು 2016ರಲ್ಲಿ ನೀಡಲಾಗಿದ್ದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿಹಿಡಿದಿದೆ.
ಹೆಚ್ಚು ಪಿಂಚಣಿ ಬಯಸಿದ್ದವರಿಗೆ ನಿರಾಸೆ
ವಾಸ್ತವ ವೇತನಕ್ಕೆ ಅನುಗುಣವಾಗಿ ಹೆಚ್ಚು ಪಿಂಚಣಿ ಪಡೆಯಬಹುದು ಎಂದು ಬಯಸಿದ್ದವರಿಗೆ ಸುಪ್ರೀಂ ಕೋರ್ಟ್ ತೀರ್ಪಿನಿಂದ ನಿರಾಸೆಯಾಗಿದೆ. ಯಾಕೆಂದರೆ, 2014ರ ಇಪಿಎಫ್ಇ ತಿದ್ದುಪಡಿ ಯೋಜನೆಯಲ್ಲಿ ಗರಿಷ್ಠ ಮಾಸಿಕ 15,000 ರೂ. ವೇತನಕ್ಕೆ ಮಿತಗೊಳಿಸಿ ಉದ್ಯೋಗಿ ದೇಣಿಗೆಯನ್ನು ಲೆಕ್ಕಾಚಾರ ಹಾಕಲಷ್ಟೇ ಅವಕಾಶವಿದೆ. ಇದನ್ನು ತಳ್ಳಿಹಾಕಿದ್ದ ಕೇರಳ ಹೈಕೋರ್ಟ್, ಎಲ್ಲ ನಿವೃತ್ತ ಉದ್ಯೋಗಿಗಳಿಗೆ ಅವರ ಪೂರ್ಣ (15,000 ರೂ. ಮೇಲ್ಪಟ್ಟು ಇದ್ದರೂ) ವೇತನದ ಆಧಾರದಲ್ಲಿ ಪಿಂಚಣಿ ನೀಡಬೇಕು ಎಂದು ತೀರ್ಪು ನೀಡಿತ್ತು. ಪೂರ್ಣ ವೇತನದ ಆಧಾರದಲ್ಲಿ ಲೆಕ್ಕಾಚಾರ ಹಾಕಿದರೆ ಸಹಜವಾಗಿಯೇ ಹೆಚ್ಚು ಪಿಂಚಣಿ ಸಿಗಲಿದೆ. ಆದರೆ, ಇದೀಗ 2014ರ ಇಪಿಎಫ್ಇ ತಿದ್ದುಪಡಿ ಯೋಜನೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವುದರಿಂದ ಗರಿಷ್ಠ ಮಾಸಿಕ 15,000 ರೂ. ವೇತನಕ್ಕೆ ಮಿತಗೊಳಿಸಿ ಉದ್ಯೋಗಿ ದೇಣಿಗೆಯನ್ನು ಲೆಕ್ಕಾಚಾರ ಹಾಕಿ ಪಿಂಚಣಿ ನೀಡಬೇಕಾಗುತ್ತದೆ. ಇದು ಹೆಚ್ಚು ಪಿಂಚಣಿ ಬಯಸಿದ್ದವರ ನಿರಾಸೆಗೆ ಕಾರಣವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:44 am, Fri, 4 November 22