ಆಂಧ್ರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಮಹಿಳೆ! ಠಾಣೆಗೆ ಬೀಗ, ಅಸಲಿಗೆ ನಡೆದಿದ್ದೇನು?

| Updated By: ಸಾಧು ಶ್ರೀನಾಥ್​

Updated on: Oct 18, 2023 | 3:28 PM

ಗೌತಮಿ ಮನೆಯಲ್ಲಿ ಇಲ್ಲದಿದ್ದಾಗ ಮಾಲೀಕರು ಆಕೆಯ ಸಾಮಾನುಗಳನ್ನು ಹೊರಹಾಕಿ ಮನೆಗೆ ಬೀಗ ಹಾಕಿದ್ದರು. ಇದರಿಂದ ಕುಟುಂಬಸ್ಥರು ಹೊರಗಡೇ ಉಳಿಯುವಂತಾಯಿತು. ಮನೆಗೆ ಮರಳಿದ ಗೌತಮಿ ಅವರು ಮಾಲೀಕರನ್ನು ವಿಚಾರಿಸಿದರೂ ಪ್ರಯೋಜನವಾಗಲಿಲ್ಲ. ಇಬ್ಬರ ನಡುವೆ ಜಗಳ ಶುರುವಾಯಿತು. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ಪೊಲೀಸರನ್ನು ಸಂಪರ್ಕಿಸಿ, ಪ್ರಕರಣ ದಾಖಲಿಸಿದ್ದಾರೆ.

ಆಂಧ್ರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಮಹಿಳೆ! ಠಾಣೆಗೆ ಬೀಗ, ಅಸಲಿಗೆ ನಡೆದಿದ್ದೇನು?
ಆಂಧ್ರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಮಹಿಳೆ! ಠಾಣೆಗೆ ಬೀಗ, ಅಸಲಿಗೆ ನಡೆದಿದ್ದೇನು?
Follow us on

ಅನಕಾಪಲ್ಲಿ ಜಿಲ್ಲೆ, ಅಕ್ಟೋಬರ್ 18: ಆ ಮಹಿಳೆಯ ವರ್ತನೆ ಕಂಡು ಪೊಲೀಸರು ಏಕಾಏಕಿ ದಂಗಾಗಿದ್ದಾರೆ. ಕಳೆದ ಕೆಲ ದಿನಗಳಿಂದ ದೂರು ಹೊತ್ತು ಠಾಣೆಗೆ ಬರುತ್ತಿದ್ದ ಮಹಿಳೆಯೊಬ್ಬರು ಅನಿರೀಕ್ಷಿತವಾಗಿ ವರ್ತಿಸಿ ಪೊಲೀಸರಿಗೆ ಶಾಕ್ ನೀಡಿದ್ದಾರೆ. ಪೊಲೀಸರು ತಮ್ಮ ಮಾತು ಕೇಳುತ್ತಿಲ್ಲ, ತಮಗೆ ನ್ಯಾಯ ಸಿಗುತ್ತಿಲ್ಲ ಎಂದು ಆರೋಪಿಸಿ ಆ ಮಹಿಳೆಯು ಠಾಣೆಯ ಗೇಟಿಗೆ ಬೀಗ ಜಡಿದಿದ್ದಾರೆ! ಇದರಿಂದ ಬೆಚ್ಚಿಬಿದ್ದ ಪೊಲೀಸರು ಆಕೆಗೆ ಕೌನ್ಸೆಲಿಂಗ್ ನೀಡಿ ಬೀಗ ತೆಗೆಸಿದ್ದಾರೆ.

ಗೌತಮಿ ಅವರು ಪೆಂಡುರ್ತಿ ಶ್ರೀಕೃಷ್ಣರಾಯಪುರಂನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗೆ ವಾಸವಾಗಿದ್ದಾರೆ. ಪತಿ ತನ್ನಿಂದ ದೂರವಾದ್ದರಿಂದ ಮಕ್ಕಳೊಂದಿಗೆ ಒಂಟಿಯಾಗಿ ವಾಸವಾಗಿದ್ದಾರೆ. ಮಾಲೀಕರು ಮನೆಯನ್ನು ಮಾರಾಟ ಮಾಡಲು ಸಿದ್ಧರಾದಾಗ ಗೌತಮಿ ಮನೆಯನ್ನು ಕೊಳ್ಳಲು ಮುಂದಾಗಿದ್ದಾರೆ. ಐದು ಲಕ್ಷ ಮುಂಗಡವನ್ನೂ ಕೊಟ್ಟೆ ಎಂದು ಹೇಳಿದ್ದಾರೆ. ಆದರೂ.. ಗೌತಮಿಗೆ ಮನೆಯ ಯಜಮಾನನಿಂದ ಕಿರುಕುಳ ಶುರುವಾಗಿದೆ. ಕೂಡಲೇ ಮನೆ ಖಾಲಿ ಮಾಡುವಂತೆ ಒತ್ತಾಯಿಸಿದ್ದಾರೆ. ಆದರೆ ಮುಂಗಡವಾಗಿ ಕೊಟ್ಟ ಐದು ಲಕ್ಷ ವಾಪಸ್ ಕೊಟ್ಟರೆ ಖಾಲಿ ಮಾಡುತ್ತೇನೆ ಎಂದಿದ್ದಾರೆ ಗೌತಮಿ.

ಈ ನಡುವೆ ಒಂದು ದಿನ ಗೌತಮಿ ಮನೆಯಲ್ಲಿ ಇಲ್ಲದಿದ್ದಾಗ ಮಾಲೀಕರು ಆಕೆಯ ಸಾಮಾನುಗಳನ್ನು ಹೊರಹಾಕಿ ಮನೆಗೆ ಬೀಗ ಹಾಕಿದ್ದರು. ಇದರಿಂದ ಕುಟುಂಬಸ್ಥರು ಹೊರಗಡೇ ಉಳಿಯುವಂತಾಯಿತು. ಮನೆಗೆ ಮರಳಿದ ಗೌತಮಿ ಅವರು ಮಾಲೀಕರನ್ನು ವಿಚಾರಿಸಿದರೂ ಪ್ರಯೋಜನವಾಗಲಿಲ್ಲ. ಇಬ್ಬರ ನಡುವೆ ಜಗಳ ಶುರುವಾಯಿತು. ಕಳೆದ ತಿಂಗಳು 25ರಂದು ಇವರ ನಡುವೆ ಮಾರಾಮಾರಿ ನಡೆದಿತ್ತು. ಮತ್ತೆ ಈ ತಿಂಗಳ 13 ರಂದು ಮತ್ತೆ ಮಾಲೀಕರು ಬಂದು ಆಕೆಯ ಸಾಮಾನುಗಳನ್ನು ಹೊರಗೆ ಹಾಕಿದ್ದಾರೆ. ಮುಂಗಡವಾಗಿ ಪಾವತಿಸಿದ ಹಣವನ್ನು ನೀಡಲು ಮಾಲೀಕರು ನಿರಾಕರಿಸಿದಂತಿದೆ. ಗೌತಮಿ ಖಾಲಿ ಮಾಡದ ಕಾರಣ ಮಾಲೀಕರು ಆಕೆಯ ಸಾಮಾನುಗಳನ್ನು ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ಪೊಲೀಸರನ್ನು ಸಂಪರ್ಕಿಸಿ, ಪ್ರಕರಣ ದಾಖಲಿಸಿದ್ದಾರೆ.

Also Read: 10 ತಿಂಗಳಿಂದ ಬಾಡಿಗೆ ಕಟ್ಟಿಲ್ಲ ಎಂದು ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿದ ಮನೆ ಮಾಲೀಕ

ವರಾಂಡಾದಲ್ಲಿ ಮಕ್ಕಳೊಂದಿಗೆ ವಾಸ..
ಮನೆಗೆ ಬೀಗ ಹಾಕಿದ್ದರೂ ಗೌತಮಿ ಅವರು ತಮ್ಮ ಮಕ್ಕಳೊಂದಿಗೆ ವರಾಂಡಾದಲ್ಲಿ ಠಿಕಾಣಿ ಹೂಡಿದ್ದಾರೆ. ತನಗೆ ನ್ಯಾಯ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಬೀಗ ತೆಗೆದು ಮನೆ ಹಸ್ತಾಂತರಿಸಿ, ನ್ಯಾಯ ದೊರಕಿಸಿಕೊಡುವಂತೆ ಪೊಲೀಸ್ ಠಾಣೆಗೆ ಎಡತಾಕುತ್ತಿದ್ದಾರೆ. ವಿಷಯ ತಮ್ಮ ವ್ಯಾಪ್ತಿಯಲ್ಲಿಲ್ಲ ಎಂದು ಪೊಲೀಸರು ಆಕೆಯ ಮನವಿಗೆ ಕಿವಿಗೊಡಲಿಲ್ಲ. ಮತ್ತು ಅವರ ಪರಿಸ್ಥಿತಿಗೆ ಸೂಕ್ತವಾಗಿ ಸ್ಪಂದಿಸಲಿಲ್ಲ.. ಎಂದು ಬೇಸತ್ತ ಗೌತಮಿ ಠಾಣೆಯ ಮುಖ್ಯ ಗೇಟಿಗೆ ಬೀಗ ಜಡಿದಿದ್ದಾರೆ. ಮಂಗಳವಾರ ರಾತ್ರಿ ನಡೆದ ಈ ಘಟನೆ ಸಂಚಲನ ಮೂಡಿಸಿದೆ. ನಂತರ ಪೊಲೀಸರು ಆಕೆಗೆ ಕೌನ್ಸೆಲಿಂಗ್ ನೀಡಿ ಬೀಗ ತೆಗೆಸಿದ್ದಾರೆ.

ಆ ಬಳಿಕ ಪೊಲೀಸರು ಗೌತಮಿ ಅವರ ಜೊತೆಗೆ ಮನೆಗೆ ಹೋಗಿದ್ದಾರೆ. ಮಾಲೀಕರೊಂದಿಗೆ ಮಾತನಾಡಿದ ನಂತರ ಬೀಗಗಳನ್ನು ತೆಗೆದು ಸಾಮಾನುಗಳನ್ನು ಒಳಗೆ ಇಟ್ಟು ಮನೆಯನ್ನು ಹಸ್ತಾಂತರಿಸುವಂತೆ ಆದೇಶಿಸಿದ್ದಾರೆ. ಆದರೆ ಮನೆಯ ಮಾಲೀಕ ಸುಳ್ಳು ದಾಖಲೆಗಳನ್ನು ತೋರಿಸಿ ಗೌತಮಿ ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಈ ವೇಳೆ ಸ್ಥಳೀಯ ಪೊಲೀಸ್​ ಇನ್ಸ್​ಪೆಕ್ಟರ್​ ಶ್ರೀನಿವಾಸ ರಾವ್ ಅವರು ಅಸ್ವಸ್ಥಗೊಂಡರು. ಅವರಿಗೆ ಕಣ್ಣುಗಳು ತೇಲಾಡುವಂತಾಗಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಇದಾದ ಕೆಲವೇ ದಿನಗಳಲ್ಲಿ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:26 pm, Wed, 18 October 23