ಯಾವುದೇ ರಾಜ್ಯ, ದೇಶಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುವುದು ಸಹ್ಯವಲ್ಲ. ಅದರಲ್ಲೂ ಮುಖ್ಯಮಂತ್ರಿ ಮಹಿಳೆಯೇ ಆಗಿರುವ ಪಶ್ಚಿಮ ಬಂಗಾಳದಲ್ಲಿ ಒಂದೇ ಒಂದು ಮಹಿಳಾ ದೌರ್ಜನ್ಯದ ಕೇಸ್ ದಾಖಲಾದರೂ ಅದು ಕೆಟ್ಟ ನಾಚಿಕೆಗೇಡು ಎಂದು ತೃಣಮೂಲ ಕಾಂಗ್ರೆಸ್ ಸಂಸದ ಸುಗತ ರಾಯ್ ತಿಳಿಸಿದ್ದಾರೆ. ಆಡಳಿತ ಪಕ್ಷದಲ್ಲಿದ್ದುಕೊಂಡು, ಸರ್ಕಾರಕ್ಕೆ, ಸಿಎಂ ಮಮತಾ ಬ್ಯಾನರ್ಜಿಗೆ ಸೂಕ್ಷ್ಮವಾಗಿ ತಿರುಗೇಟು ನೀಡಿದ್ದಾರೆ. ಪಶ್ಚಿಮ ಬಂಗಾಳದ ನಾದಿಯಾದಲ್ಲಿ ಅಪ್ರಾಪ್ತೆಯ ಮೇಲೆ ಇತ್ತೀಚೆಗೆ ಅತ್ಯಾಚಾರ ನಡೆದಿದೆ. ಇದು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಸಿಎಂ ಮಮತಾ ಬ್ಯಾನರ್ಜಿ ಸರ್ಕಾರವನ್ನು ಅನೇಕರು ನಿಂದಿಸುತ್ತಿದ್ದಾರೆ. ಈ ಮಧ್ಯೆ ಸುಗತ ರಾಯ್ ಕೂಡ ಅಸಮಾಧಾನ ಹೊರಹಾಕಿದ್ದಾರೆ.
ಮಹಿಳೆಯರ ಮೇಲೆ ದೌರ್ಜನ್ಯವೆಂಬುದು ನಿರಂತರವಾಗಿಬಿಟ್ಟಿದೆ. ಇದೊಂದು ಆತಂಕದ ವಿಷಯ. ಆದರೆ ಇಂಥ ದೌರ್ಜನ್ಯದ ನಾವು ಶೂನ್ಯ ಸಹಿಷ್ಣುತೆ ತತ್ವ ಅನುಸರಿಸಬೇಕು. ಎಲ್ಲೇ ದೌರ್ಜನ್ಯ, ಕ್ರೈಂಗಳು ದಾಖಲಾದರೂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅದರಲ್ಲೂ ನಮ್ಮ ರಾಜ್ಯದಲ್ಲಿ ಮಹಿಳೆಯೇ (ಮಮತಾ ಬ್ಯಾನರ್ಜಿ) ಮುಖ್ಯಮಂತ್ರಿ ಇದ್ದಾರೆ. ಹಾಗಿದ್ದ ಮೇಲೆ ಮಹಿಳಾ ದೌರ್ಜನ್ಯದ ಕೇಸ್ಗಳು ಒಂದೂ ದಾಖಲಾಗಬಾರದು. ಹಾಗೊಮ್ಮೆ ಆದರೆ ನಾಚಿಕೆ ತರುವ ವಿಚಾರ ಆಗಿರುತ್ತದೆ. ರಾಜ್ಯದ ಪೊಲೀಸರು, ಸ್ಥಳೀಯ ಆಡಳಿತಗಳು ಇದನ್ನೆಲ್ಲ ಗಮನಿಸಿ, ಸೂಕ್ತ ಕ್ರಮ ಕೈಗೊಳ್ಳುತ್ತವೆ ಎಂಬ ಭರವಸೆ ಹೊಂದಿದ್ದೇನೆ ಎಂದು ಹೇಳಿದ್ದಾರೆ.
ನಾದಿಯಾದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರವಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ್ದ ಮಮತಾ ಬ್ಯಾನರ್ಜಿ, ಈ ಪ್ರಕರಣದಲ್ಲಿ ಹುಡುಗಿ ಮೇಲೆ ರೇಪ್ ಆಗಿತ್ತು, ಹಾಗಾಗಿ ಮೃತಪಟ್ಟಳು ಎಂದು ಹೇಳಲಾಗುತ್ತಿದೆ. ಆದರೆ ಅದನ್ನು ನಿಜಕ್ಕೂ ಅತ್ಯಾಚಾರ ಎಂದು ಕರೆಯಬೇಕಾ? ಅವಳು ಆ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಇದ್ದಳಾ? ಅತ್ಯಾಚಾರ ಎಂದು ಹೇಳುತ್ತಿರುವ ಇವರೆಲ್ಲ ಈ ಬಗ್ಗೆ ವಿಚಾರಿಸಿದ್ದರಾ? ನಾನು ಪೊಲೀಸರ ಬಳಿ ಮಾಹಿತಿ ಕೇಳಿದ್ದೆ. ಈ ಹುಡುಗಿ ಇಷ್ಟಪಟ್ಟೇ ಆ ವ್ಯಕ್ತಿಯೊಂದಿಗೆ ಇದ್ದಳು ಎಂದು ನನಗೆ ತಿಳಿಸಲಾಗಿದೆ ಎಂದಿದ್ದರು. ಅಷ್ಟೇ ಅಲ್ಲ, ಹುಡುಗಿ ಮತ್ತು ಹುಡುಗ ಲವ್ ಮಾಡುತ್ತಿದ್ದರು ಎಂಬುದನ್ನು ಬಾಲಕಿಯ ಕುಟುಂಬವೇ ಹೇಳಿದೆ. ಹೀಗಿದ್ದ ಮೇಲೆ ನಾನದನ್ನು ತಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದರು. ಅದಾದ ಬಳಿಕ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿತ್ತು.
ಇದನ್ನೂ ಓದಿ: 69 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ರಾಜಸ್ಥಾನ ಸರ್ಕಾರ; ಕರೌಲಿಗೆ ಹೊಸ ಜಿಲ್ಲಾಧಿಕಾರಿ