ಉದಯಪುರ-ಅಹಮದಾಬಾದ್ ರೈಲ್ವೆ ಹಳಿಯಲ್ಲಿ ಡಿಟೋನೇಟರ್ ಸ್ಫೋಟಗೊಂಡಿದ್ದು, ಇದೀಗ ಪ್ರಕರಣದ ತನಿಖೆಯನ್ನು ಎಸ್ಟಿಎಸ್ ಕೈಗೆತ್ತಿಕೊಂಡಿದೆ. ಅಸರ್ವಾ -ಉದಯಪುರ ಎಕ್ಸ್ಪ್ರೆಸ್ ಈ ಹಳಿಯಲ್ಲಿ ಹಾದುಹೋಗಬೇಕಿತ್ತು, ಕೆವ್ಡಾದ ನಾಲ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಘಟನೆಯನ್ನು ಖಂಡಿಸಿರುವ ಸಿಎಂ ಅಶೋಕ್ ಗೆಹ್ಲೋಟ್ , ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ.
ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿ, ಉದಯಪುರ ಅಹಮದಾಬಾದ್ ರೈಲು ಮಾರ್ಗದ ಓಡಾ ರೈಲ್ವೆ ಸೇತುವೆಯಲ್ಲಿ ರೈಲು ಹಳಿಗಳಿಗೆ ಹಾನಿಯಾಗಿರುವ ಘಟನೆ ಆತಂಕಕಾರಿಯಾಗಿದೆ ಎಂದಿದ್ದಾರೆ.
ಸ್ಪೋಟಗೊಂಡ ರಭಸಕ್ಕೆ ರೈಲ್ವೆ ಹಳಿಗಳು ಬಿರುಕುಬಿಟ್ಟಿವೆ. ಈ ಘಟನೆ ನಡೆಯುವ ನಾಲ್ಕು ಗಂಟೆಗೂ ಮೊದಲು ಇದೇ ಮಾರ್ಗದಲ್ಲಿ ರೈಲಯ ಸಾಗಿತ್ತು. ಅದಾದ ಬಳಿಕ ಅಹಮದಾಬಾದ್‌ನಿಂದ ಉದಯ್‌ಪುರಕ್ಕೆ ಬರುತ್ತಿದ್ದ ರೈಲನ್ನು ಡುಂಗರ್‌ಪುರದಲ್ಲಿಯೇ ನಿಲ್ಲಿಸಲಾಗಿತ್ತು.
ಜಿಲ್ಲಾಧಿಕಾರಿ ತಾರಾಚಂದ್ ಮೀನಾ ಈ ಕುರಿತಾಗಿ ಮಾತನಾಡಿದ್ದು, ಸೇತುವೆಯನ್ನು ಡಿಟೋನೇಟರ್ ಮೂಲಕ ಸ್ಫೋಟಿಸುವ ಸಂಚು ಬಯಲಿಗೆ ಬಂದಿದೆ. ಶೀಘ್ರದಲ್ಲೇ ಆರೋಪಿಗಳನ್ನು ಹಿಡಿಯಲಾಗುವುದು ಎಂದು ಹೇಳಿದ್ದಾರೆ.
ಗ್ರಾಮಸ್ಥರು ಎಚ್ಚರಿಕೆ ನೀಡಿದ್ದರಿಂದಾಗಿ ಹೊಸ ರೈಲ್ವೇ ಮಾರ್ಗದಲ್ಲಿ ದೊಡ್ಡ ಮಟ್ಟದ ಸಂಚು ತಪ್ಪಿದೆ. ಶನಿವಾರ ರಾತ್ರಿ 10 ಗಂಟೆಯ ವೇಳೆಗೆ ಸ್ಥಳೀಯ ಗ್ರಾಮಸ್ಥರು ಸ್ಪೋಟದ ಸದ್ದು ಕೇಳಿದ್ದರು. ಅದಾದ ಬಳಿಕ ಊರಿನ ಕೆಲ ಗ್ರಾಮಸ್ಥರು ಸ್ಫೋಟಗೊಂಡ ಸ್ಥಳಕ್ಕೆ ಆಗಮಿಸಿದ್ದರು.
ಗನ್‌ಪೌಡರ್, ಡಿಟೋನೇಟರ್ ನೋಡಿದ ಸ್ಥಳೀಯ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರೈಲು ಹಳಿ ಮೇಲೆ ಗನ್ ಪೌಡರ್ ಬಿದ್ದಿರುವುದನ್ನು ಊರಿನವರು ನೋಡಿದ್ದಾರೆ.
ಹಲವೆಡೆ ಕಬ್ಬಿಣದ ಹಳಿಗಳು ಮುರಿದು ಹೋಗಿದ್ದವು. ಸೇತುವೆಯ ಮೇಲಿನ ಸಾಲಿನಲ್ಲಿ ನಟ್-ಬೋಲ್ಟ್‌ಗಳು ಕೂಡ ಕಾಣೆಯಾಗಿವೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಹಳಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು ಇಲ್ಲದಿದ್ದರೆ ಪ್ರಾಣಾಪಾಯದ ಅಪಾಯ ಹೆಚ್ಚಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 31 ರಂದು ಅಹಮದಾಬಾದ್‌ನ ಅಸರ್ವಾ ರೈಲು ನಿಲ್ದಾಣದಿಂದ ಅಸರ್ವಾ-ಉದೈಪುರ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದ್ದರು.
ಸ್ಫೋಟದ ನಂತರ ರೈಲನ್ನು ಡುಂಗರ್‌ಪುರ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ. ವಿಧ್ವಂಸಕ ಕೃತ್ಯ ಸೇರಿದಂತೆ ಎಲ್ಲಾ ಕೋನಗಳ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಹಳಿಗಳನ್ನು ಮರುಸ್ಥಾಪಿಸುವ ಕಾರ್ಯ ನಡೆಯುತ್ತಿದೆ ಎಂದು ಉದಯಪುರ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಶರ್ಮಾ ತಿಳಿಸಿದ್ದಾರೆ.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ