Fact Check: ಮಹಾಕುಂಭ ಮೇಳಕ್ಕೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಬಂದಿದ್ದು ನಿಜವೇ?, ಇಲ್ಲಿದೆ ಸತ್ಯಾಂಶ
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಈ ವಿಡಿಯೋದಲ್ಲಿ ಕಾಣಿಸುವ ವ್ಯಕ್ತಿ ಬಿಲ್ ಗೇಟ್ಸ್ ಅಲ್ಲ. ಈ ವಿಡಿಯೋವನ್ನು ನವೆಂಬರ್ 2024 ರಲ್ಲಿ ವಾರಣಾಸಿಯಲ್ಲಿ ಯೂಟ್ಯೂಬರ್ ಒಬ್ಬರು ರೆಕಾರ್ಡ್ ಮಾಡಿದ್ದಾರೆ.
ಆ್ಯಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಅವರಂತಹ ಅನೇಕ ಪ್ರಸಿದ್ಧ ವ್ಯಕ್ತಿಗಳು ಕೂಡ ಈ ಬಾರಿಯ ಮಹಾಕುಂಭವನ್ನು ವೀಕ್ಷಿಸಲು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಜಮಾಯಿಸಿದ್ದಾರೆ. ಹೀಗಿರುವಾಗ ಇದೀಗ ವ್ಯಕ್ತಿಯೊಬ್ಬ ಬಾಲ್ಕನಿಯಲ್ಲಿ ನಿಂತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಹಾಕುಂಭದಲ್ಲಿ ಪಾಲ್ಗೊಳ್ಳಲು ಕೈಗಾರಿಕೋದ್ಯಮಿ ಬಿಲ್ ಗೇಟ್ಸ್ ಬಂದಿದ್ದಾರೆ ಎಂದು ಹೇಳುವ ವಿಡಿಯೋ ಶೇರ್ ಆಗುತ್ತಿದೆ. ಕೆಲ ಪ್ರಸಿದ್ಧ ಸುದ್ದಿ ಮಾಧ್ಯಮ ಕೂಡ ಈ ವಿಡಿಯೋವನ್ನು ಅಪ್ಲೋಡ್ ಮಾಡಿಕೊಂಡಿದೆ.
ಮನರಂಜನಾ ಸುದ್ದಿ ಸೈಟ್ ಪಿಂಕ್ವಿಲ್ಲಾ ಈ ವಿಡಿಯೋವನ್ನು ಹಂಚಿಕೊಂಡು, ‘‘ಆಧ್ಯಾತ್ಮಿಕ ಹೆಗ್ಗುರುತಿನಲ್ಲಿ ಜಾಗತಿಕ ಐಕಾನ್! ಮಹಾ ಕುಂಭದ ಸಮಯದಲ್ಲಿ ಬಿಲ್ ಗೇಟ್ಸ್ ಕಾಶಿ ವಿಶ್ವನಾಥ ಮಂದಿರದಲ್ಲಿ ಕಾಣಿಸಿಕೊಂಡರು, ಈ ಪವಿತ್ರ ಸಂದರ್ಭಕ್ಕೆ ಅಂತರರಾಷ್ಟ್ರೀಯ ಮೆರುಗು ನೀಡಿದರು’’ ಎಂದು ಬರೆದುಕೊಂಡಿದೆ. ಹಾಗೆಯೆ ವೈರಲ್ ಭಯಾನಿ, ಮಹಾ ಕುಂಭ ಮೇಳದಲ್ಲಿ ಬಿಲ್ ಗೇಟ್ಸ್ ಎಂದು ಹೇಳಿಕೊಂಡಿದೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಈ ವಿಡಿಯೋದಲ್ಲಿ ಕಾಣಿಸುವ ವ್ಯಕ್ತಿ ಬಿಲ್ ಗೇಟ್ಸ್ ಅಲ್ಲ. ಈ ವಿಡಿಯೋವನ್ನು ನವೆಂಬರ್ 2024 ರಲ್ಲಿ ವಾರಣಾಸಿಯಲ್ಲಿ ಯೂಟ್ಯೂಬರ್ ಒಬ್ಬರು ರೆಕಾರ್ಡ್ ಮಾಡಿದ್ದಾರೆ.
ವೈರಲ್ ಕ್ಲೈಮ್ ಅನ್ನು ಪರಿಶೀಲಿಸಲು ನಾವು ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್ನಲ್ಲಿ ಹುಡುಕಿದ್ದೇವೆ. ಆದರೆ ಬಿಲ್ ಗೇಟ್ಸ್ ಇತ್ತೀಚೆಗೆ ಭಾರತಕ್ಕೆ ಆಗಮನಕ್ಕೆ ಸಂಬಂಧಿಸಿದ ಯಾವುದೇ ಮಾಧ್ಯಮ ವರದಿಗಳು ನಮಗೆ ಕಂಡುಬಂದಿಲ್ಲ. ಇದರ ನಂತರ ನಾವು ವೈರಲ್ ವಿಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ಮಾಡಿದ್ದೇವೆ. ಆಗ ಗುಲಕ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಇದೇ ವಿಡಿಯೋವನ್ನು ಕಂಡುಕೊಂಡಿದ್ದೇವೆ. ಇದನ್ನು 24 ಡಿಸೆಂಬರ್ 2024 ರಂದು ಅಪ್‌ಲೋಡ್ ಮಾಡಲಾಗಿದೆ. ಬಿಲ್ ಗೇಟ್ಸ್ ನಂತೆ ಕಾಣುವ ವ್ಯಕ್ತಿಯೊಬ್ಬ ಕಾಶಿ ವಿಶ್ವನಾಥದಲ್ಲಿ ಕಾಣಿಸಿಕೊಂಡರು ಎಂದು ಈ ವಿಡಿಯೋದಲ್ಲಿ ಹೇಳಲಾಗಿದೆ.
ಇದೇ ಗುಲಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ಮತ್ತೊಂದು ವಿಡಿಯೋದಲ್ಲಿ, ಈ ವ್ಯಕ್ತಿಯನ್ನು ನಕಲಿ ಬಿಲ್ ಗೇಟ್ಸ್ ಎಂದು ವಿವರಿಸಲಾಗಿದೆ. ಬಿಲ್ ಗೇಟ್ಸ್‌ನಂತೆ ಕಾಣುವ ವ್ಯಕ್ತಿಯ ಹಿಂಭಾಗದಿಂದ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ.
ಇನ್ನಷ್ಟು ಖಚಿತ ಮಾಹಿತಿಗಾಗಿ ನಾವು ಬಿಲ್ ಗೇಟ್ಸ್ ಅವರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ಪರಿಶೀಲಿಸಿದ್ದೇವೆ. ಆದರೆ ಅವರ ಇತ್ತೀಚಿನ ಭಾರತ ಭೇಟಿಗೆ ಸಂಬಂಧಿಸಿದ ಯಾವುದೇ ಮಾಹಿತಿ ನಮಗೆ ಕಂಡುಬಂದಿಲ್ಲ. ಹೀಗಾಗಿ ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಬಿಲ್ ಗೇಟ್ಸ್ ಅಲ್ಲ.. ಬದಲಾಗಿ ಆತನಂತೆ ಕಾಣುವ ವ್ಯಕ್ತಿ ಎಂಬುದು ಟಿವಿ9 ಕನ್ನಡ ಫ್ಯಾಕ್ಟ್ ಚೆಕ್ ನಿಂದ ಸ್ಪಷ್ಟವಾಗಿದೆ.
ಅತ್ಯಂತ ಪವಿತ್ರವಾದ ಉತ್ಸವಗಳಲ್ಲಿ ಪ್ರಮುಖವಾದ ಮಹಾ ಕುಂಭಮೇಳಕ್ಕೆ ಜನವರಿ 13ರಿಂದ ಚಾಲನೆ ಸಿಕ್ಕಿದ್ದು, ನಾಲ್ಕು ದಿನಗಳನ್ನು ಯಶಸ್ವಿಯಾಗಿ ಮುಗಿಸಿ ಇಂದು ಐದನೇ ದಿನಕ್ಕೆ ಕಾಲಿಟ್ಟಿದೆ. ಬರೋಬ್ಬರಿ ಹನ್ನೆರಡು ವರ್ಷಗಳ ಬಳಿಕ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಈ ಮಹಾ ಕುಂಭಮೇಳಕ್ಕೆ ಜಗತ್ತಿನಾದ್ಯಂತದಿಂದ ಭಕ್ತ ಸಾಗರವೇ ಹರಿದು ಬರುತ್ತಿದೆ. ಮಹಾಕುಂಭ ಜನವರಿ 13 ರಿಂದ ಫೆಬ್ರವರಿ 26 ರವರೆಗೆ ನಡೆಯಲಿದೆ. ಸುಮಾರು 10,000 ಎಕರೆ ಪ್ರದೇಶದಲ್ಲಿ ಇದನ್ನು ಆಯೋಜಿಸಲಾಗಿದೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ